ಬೆಂಗಳೂರು: ಸ್ನಾನ ಮಾಡುವ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿರುವ ಸಹೋದ್ಯೋಗಿಯೊಬ್ಬ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾನೆ ಎಂದು ಆರೋಪಿ ಮಹಿಳಾ ಟೆಕ್ಕಿಯೊಬ್ಬರು ಬೇಗೂರು ಠಾಣೆಗೆ ದೂರು ನೀಡಿದ್ದಾರೆ.

ದೇವರಚಿಕ್ಕನಹಳ್ಳಿಯ 24 ವರ್ಷದ ಸಾಫ್ಟ್‌ವೇರ್‌ ಉದ್ಯೋಗಿ ನೀಡಿದ ದೂರಿನ ಮೇರೆಗೆ ಆನಂದ್‌ ಇಮ್ಯಾನ್ಯೂಯಲ್‌ ಎಂಬಾತನ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ನಗರದ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಯುವತಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದು, ಆರೋಪಿಯೂ ಅದೇ ಕಂಪನಿಯ ಉದ್ಯೋಗಿಯಾಗಿದ್ದಾನೆ. ಇಬ್ಬರು ಸ್ನೇಹಿತರಾಗಿದ್ದು, ಆರೋಪಿ ಆನಂದ್‌ ಆಗಾಗ ಯುವತಿ ಮನೆಗೆ ಬರುತ್ತಿದ್ದ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಯುವತಿ ಒಬ್ಬಳೇ ಮನೆಯಲ್ಲಿದ್ದಾಗ ಆನಂದ್‌ ಯುವತಿ ಮನೆಗೆ ಬಂದಿದ್ದ. ಈ ಸಂದರ್ಭದಲ್ಲಿ ಯುವತಿಗೆ ಗೊತ್ತಾಗದಂತೆ ಆರೋಪಿ ಮೊಬೈಲ್‌ನಲ್ಲಿ ಸ್ನಾನ ಮಾಡುವುದನ್ನು ಚಿತ್ರೀಕರಿಸಿಕೊಂಡಿದ್ದ.

ಮೂರು ತಿಂಗಳ ಹಿಂದೆ ಯುವತಿ ಮೊಬೈಲ್‌ಗೆ ವಿಡಿಯೋ ಕಳುಹಿಸಿ ಬೆದರಿಸಿದ್ದ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಬಾರದೆಂದಾದರೆ ನಾನು ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗುವುದೆಂದು ಬೆದರಿಕೆವೊಡ್ಡುತ್ತಿದ್ದ ಎಂದು ಆರೋಪಿಸಿ ಯುವತಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬೇಗೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

(ಸಾಂದರ್ಬಿಕ ಚಿತ್ರ)