ಹಾಲುಗಲ್ಲದ ಪುಟ್ಟ ಮಕ್ಕಳು ಕೈಗೆ ಸಿಕ್ಕಿದ್ದನ್ನು ಬಾಯಿಗೆ ಹಾಕಿ ಬಿಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಹಾಗೆಯೇ ಇಲ್ಲೊಂದು ಮಗು ಆಟಿಕೆಯೊಂದನ್ನು ನುಂಗಿ ಪೋಷಕರಿಗೆ ಜೀವ ಬಾಯಿಗೆ ಬರುವಂತೆ ಮಾಡಿದೆ. ವೈದ್ಯರ ಸಮಯಪ್ರಜ್ಞೆಯಿಂದ ಮಗು ಬದುಕುಳಿದಿದೆ.
ಆಟವಾಡುವಾಗ ಆಟಿಕೆ ನುಂಗಿದ ಮಗು
ಇತ್ತೀಚೆಗೆ ಮಕ್ಕಳಿಗಾಗಿ ಪುಟ್ಟ ಪುಟ್ಟ ಆಟಿಕೆಗಳು ಮಾರುಕಟ್ಟೆಗೆ ಬಂದಿದೆ. ಇವುಗಳನ್ನು ಪುಟ್ಟ ಮಕ್ಕಳಿಗೆ ನೀಡುವ ಮುನ್ನ ನೂರು ಬಾರಿ ಯೋಚಿಸಲೇಬೇಕು. ಹಾಲುಗಲ್ಲದ ಪುಟ್ಟ ಮಕ್ಕಳು ಕೈಗೆ ಸಿಕ್ಕಿದ್ದನ್ನು ಬಾಯಿಗೆ ಹಾಕಿ ಬಿಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಕಂಡಿದೆಲ್ಲವನ್ನೂ ಬಾಯಿಗೆ ಹಾಕಿ ಅವರು ಜಗಿಯುವುದಕ್ಕೆ ಆರಂಭಿಸುತ್ತಾರೆ. ಹೀಗೆ ಜಗಿಯುವ ವೇಳೆ ಕೆಲ ವಸ್ತುಗಳನ್ನು ಆಕಸ್ಮಿಕವಾಗಿ ನುಂಗಿ ಪ್ರಾಣಕ್ಕೆ ಸಂಚಾಕಾರ ತಂದುಕೊಟ್ಟಂತಹ ಹಲವು ಘಟನೆಗಳು ನಡೆದಿವೆ. ಹಾಗೆಯೇ ಇಲ್ಲೊಂದು ಮಗು ಆಟಿಕೆಯೊಂದನ್ನು ನುಂಗಿ ಪೋಷಕರಿಗೆ ಜೀವ ಬಾಯಿಗೆ ಬರುವಂತೆ ಮಾಡಿದೆ.
ಹೌದು ಆಗಷ್ಟೇ ನಡೆದಾಡುವುದಕ್ಕೆ ಆರಂಭಿಸಿದ ಪುಟ್ಟ ಮಕ್ಕಳಿರುವ ಮನೆಯಲ್ಲಿ ಪೋಷಕರು ಎಷ್ಟು ಜಾಗರೂಕರಾಗಿದ್ದರು ಸಾಲದು, ಅತ್ತಿತ್ತ ಕಣ್ಣು ತಪ್ಪುವುದರೊಳಗೆ ಮಕ್ಕಳು ಇನ್ನೇನೋ ಮಾಡಿ ಪೋಷಕರು ಪಾತರಗುಟ್ಟುವಂತೆ ಮಾಡುತ್ತಾರೆ. ಅದೇ ರೀತಿ ಇಲ್ಲೊಂದು ಪುಟ್ಟ ಮಗು ಪೋಷಕರು ನೀಡಿದ ಆಟದ ಸಾಮಾನನ್ನೇ ನುಂಗಿ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ವೈದ್ಯರ ಸಮಯ ಪ್ರಜ್ಞೆಯಿಂದಾಗಿ ಮಗು ಬದುಕುಳಿದಿದೆ. ಹೌದು ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಹೈನುಗಾರಿಕೆಯಿಂದಲೇ ತಿಂಗಳಿಗೆ 6 ಲಕ್ಷ ಗಳಿಕೆ ಮಾಡುತ್ತಿರುವ 18ರ ಯುವಕ
ಆಟವಾಡುತ್ತಿದ್ದ ಮಗು ವಂಶ್ ತನ್ನ ಬಳಿ ಇದ್ದ ಪುಟ್ಟ ಆಟದ ಸಾಮಾನನ್ನು ನುಂಗಿದೆ. ಶೀಘ್ರದಲ್ಲೇ ಮಗುವಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ವಾಂತಿ ಮಾಡುವುದಕ್ಕೆ ಆರಂಭಿಸಿದೆ. ಇತ್ತ ಮಗುವಿನ ಬಳಿ ಇದ್ದ ಆಟಿಕೆ ಕಾಣೆಯಾಗಿರುವುದನ್ನು ಗಮನಿಸಿದ ತಾಯಿ ಅದರ ಬಗ್ಗೆ ಕೇಳಿದಾಗ ಮಗು ತಾನು ನುಂಗಿರುವುದಾಗಿ ಹೇಳಿದೆ. ಕೂಡಲೇ ಮಗುವನ್ನು ತಾಯಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ನಂತರ ಅಹ್ಮದಾಬಾದ್‌ನ ಸಿವಿಲ್ ಆಸ್ಪತ್ರೆಯ ವೈದ್ಯರು ಪ್ರಕರಣದ ಗಂಭೀರತೆಯನ್ನು ಅರಿತು ಕೂಡಲೇ ಮಗುವಿಗೆ ಸ್ಕ್ಯಾನಿಂಗ್ ಮಾಡಿದಾಗ, ಹೊಟ್ಟೆಯೊಳಗಡೆ ಪ್ಲಾಸ್ಟಿಕ್ ಆಟಿಕೆ ಕಾಣಿಸಿದೆ. ಅದು ಮುರಿದ ಆಟಿಕೆ ಆಗಿರಲಿಲ್ಲ ಬದಲಾಗಿ ಅವೆಂಜರ್ಸ್ ಪಾತ್ರದ ಹಲ್ಕ್‌ನ ಆಕಾರದಲ್ಲಿರುವ ಸಂಪೂರ್ಣ ಆಟಿಕೆಯಾಗಿತ್ತು, ಅದರ ತಲೆ, ಕೈಗಳು ಮತ್ತು ಕಾಲುಗಳು ಹಾಗೇ ಇದ್ದವು.
ಇದನ್ನೂ ಓದಿ: ಜೆಫ್ರಿ ಎಪ್‌ಸ್ಟೀನ್ ಫೈಲ್ಸ್‌ನಲ್ಲಿ ಕೇಳಿ ಬಂದಿರುವ ಭಾರತೀಯ ಮೂಲದ ಧಾರ್ಮಿಕ ಗುರು ಯಾರು?
ಆಹಾರ ಕೊಳವೆ ಮತ್ತು ಹೊಟ್ಟೆಯ ನಡುವಿನ ನೈಸರ್ಗಿಕ ಕವಾಟದ ಮೂಲಕ ಇಷ್ಟು ದೊಡ್ಡ ವಸ್ತುವನ್ನು ಹೊರತೆಗೆಯುವುದು ದೊಡ್ಡ ಸವಾಲಾಗಿತ್ತು ಎಂದು ಚಿಕಿತ್ಸಾ ವೈದ್ಯಕೀಯ ತಂಡದ ಭಾಗವಾಗಿರುವ ಡಾ. ರಾಕೇಶ್ ಜೋಶಿ ವಿವರಿಸಿದರು. ವೈದ್ಯರು ಎಂಡೋಸ್ಕೋಪ್‌ನಂತಹ ಸೂಕ್ಷ್ಮ ಉಪಕರಣವನ್ನು ಬಳಸಿ ಆಟಿಕೆಯನ್ನು ಹಿಡಿದಿಡಲು ಪ್ರಯತ್ನಿಸಿದಾಗ ಹೊಟ್ಟೆಯಲ್ಲಿ ಗಾಳಿಯಿರುವುದರಿಂದ ಆಟಿಕೆ ಪದೇ ಪದೇ ಜಾರುತಿತ್ತು, ಆಟಿಕೆಯನ್ನು ಅದರ ಕೈಗಳಿಂದ ಅಥವಾ ಕಾಲುಗಳಿಂದ ಎಳೆದರೆ ಅದು ಕವಾಟದಲ್ಲಿ ಸಿಲುಕಿಕೊಳ್ಳಬಹುದು ಮತ್ತು ಶಾಶ್ವತ ಹಾನಿಗೆ ಕಾರಣವಾಗಬಹುದು ಎಂದು ಡಾ. ಜೋಶಿ ವಿವರಿಸಿದರು. ನಂತರ ಬಹಳ ತಾಳ್ಮೆ ಮತ್ತು ನಿಖರತೆಯ ನಂತರ ವೈದ್ಯರು ಆಟಿಕೆಯ ತುದಿಯನ್ನು ದೃಢವಾಗಿ ಹಿಡಿದು, ಗಾಯವಾಗದಂತೆ ಎಚ್ಚರಿಕೆಯಿಂದ ಕವಾಟದ ಆಚೆಗೆ ಎಳೆಯುವಲ್ಲಿ ಯಶಸ್ವಿಯಾದರು ಎಂದು ವೈದ್ಯರು ಹೇಳಿದ್ದು, ಈ ಆಪರೇಷನ್‌ನ ವೀಡಿಯೋವನ್ನು ಕೂಡ ಅವರು ಹಂಚಿಕೊಂಡಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಒಂದು ವೇಳೆ ಈ ಆಟಿಕೆ ಕರುಳಿನೊಳಗೆ ಮತ್ತಷ್ಟು ಹೋಗಿದ್ದರೆ, ಕರುಳು ಛಿದ್ರವಾಗುವ ಗಂಭೀರ ಅಪಾಯವಿತ್ತು, ಇದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು ಅದೃಷ್ಟವಶಾತ್, ಅಂತಹ ಯಾವುದೇ ತೊಡಕುಗಳು ಉಂಟಾಗುವುದಕ್ಕಿಂತ ಮೊದಲೇ ವೈದ್ಯಕೀಯ ತಂಡವು ಆಟಿಕೆಯನ್ನು ಯಶಸ್ವಿಯಾಗಿ ತೆಗೆದುಹಾಕಲು ಸಾಧ್ಯವಾಯಿತು ಎಂದು ಅವರು ಹೇಳಿದರು.
ಪೋಷಕರಿಗೆ ವೈದ್ಯರಿಂದ ಎಚ್ಚರಿಕೆ
ಬಾಲಕ ವಂಶ್ ಈಗ ಚೇತರಿಸಿಕೊಳ್ಳುತ್ತಿದ್ದಾನೆ ಎಂದ ವೈದ್ಯರು, ಪೋಷಕರು ಮಕ್ಕಳಿಗೆ ಈ ರೀತಿ ಆಟದ ಸಾಮಾನು ನೀಡಬಾರದು ಎಂದು ಹೇಳಿದ್ದಾರೆ.


