ಕೆನಡಾದಲ್ಲಿ ವ್ಯಕ್ತಿಯೊಬ್ಬ ಮಕ್ಕಳ ಆಟಿಕೆ ಜೀಪನ್ನು ರಸ್ತೆಯಲ್ಲಿ ಓಡಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಈತ, ರಸ್ತೆಯಲ್ಲಿ ಪುಟ್ಟ ಮಕ್ಕಳ ಬಾರ್ಬಿ ಜೀಪ್‌ನಲ್ಲಿ ಚಾಲನೆ ಮಾಡುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ.

ವಯಸ್ಸು ಎಷ್ಟೇ ಆಗಲಿ ಜೀವನದಲ್ಲಿ ಮಕ್ಕಳಂತೆ ಉತ್ಸಾಹ ಕುತೂಹಲ ಆಸಕ್ತಿ ಇರಬೇಕು, ಜೀವನೋತ್ಸಾಹ ಕಳೆದುಕೊಳ್ಳಬಾರದು ಎಂದು ಅನೇಕರು ಹೇಳುವುದನ್ನು ನೀವು ಕೇಳಿರಬಹುದು. ಇಲ್ಲೊಬ್ಬ ಈ ಮಾತನ್ನು ನಿಜ ಮಾಡುವುದಕ್ಕೆ ಹೋಗಿ ಪೊಲೀಸರ ಅತಿಥಿಯಾಗಿದ್ದಾನೆ. ಹಾಗಿದ್ದರೆ ಆತ ಮಾಡಿದ್ದೇನು? ಹೌದು ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಪುಟ್ಟ ಮಕ್ಕಳು ಆಟವಾಡಲು ಬಳಸುವ ಆಟಿಕೆಯ ಜೀಪನ್ನು ರಸ್ತೆಯಲ್ಲಿ ಓಡಿಸಿದ್ದು, ಪೊಲೀಸರ ಅತಿಥಿಯಾಗಿದ್ದಾನೆ. ಕೆನಡಾದಲ್ಲಿ ಸೆಪ್ಟೆಂಬರ್ 5ರಂದು ಈ ಘಟನೆ ನಡೆದಿದ್ದು, ಘಟನೆಯ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ತರಹೇವಾರಿ ಕಾಮೆಂಟ್‌ಗಳಿಗೆ ಕಾರಣವಾಗಿದೆ. ಕುಡಿದ ಮತ್ತಿನಲ್ಲಿದ್ದ ಕಸ್ಪೆರ್ ಲಿಂಕನ್ ಕೆನಡಾದ ವಾಹನ ಸಂದಣಿ ಹೆಚ್ಚಿರುವ ರಸ್ತೆಯಲ್ಲಿ ಪುಟಾಣಿಗಳು ಬಳಸುವ ಪಿಂಕ್ ಬಣ್ಣದ ಆಟಿಕೆಯಾಗಿರುವ ಬಾರ್ಬಿ ಜೀಪ್‌ನಲ್ಲಿ ರೈಡ್ ಹೋಗಿದ್ದಾನೆ.

ಮಕ್ಕಳ ಆಟಿಕೆ ಜೀಪನ್ನು ರಸ್ತೆಯಲ್ಲಿ ಓಡಿಸಿದ ವ್ಯಕ್ತಿ

ಈತ ಕೆನಡಾದ ನಿಕೋಲ್ಸನ್ ಸ್ಟ್ರೀಟ್ ಬಳಿಯ 15 ನೇ ಅವೆನ್ಯೂದಲ್ಲಿ ಏವಿಯೇಟರ್ ಸನ್ ಗ್ಲಾಸ್ ಧರಿಸಿ ಈ ಪುಟ್ಟ ಮಕ್ಕಳ ಬಾರ್ಬಿ ಜೀಪನ್ನು ಚಾಲನೆ ಮಾಡುತ್ತಿದ್ದಾಗ ಅಧಿಕಾರಿಗಳು ಆತನನ್ನು ಬಂಧಿಸಿದ್ದಾರೆ. ಅಲ್ಲಿನ ಸಿಬಿಸಿ ನ್ಯೂಸ್‌ನ ವರದಿಯ ಪ್ರಕಾರ, ಅಧಿಕಾರಿಯೊಬ್ಬರು ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಆರೋಪಿ ಕಸ್ಪೆರ್ ಲಿಂಕನ್ ಮಕ್ಕಳ ಗಾಡಿಯನ್ನು ರಸ್ತೆಯಲ್ಲಿ ಓಡಿಸುವುದನ್ನು ನೋಡಿ ಅವನನ್ನು ಅಡ್ಡಗಟ್ಟಿ ದಂಡ ವಿಧಿಸಿದ್ದಾರೆ. ಬಳಿಕ ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋದಲ್ಲಿ ಕಸ್ಪೆರ್ ಲಿಂಕನ್, ನಿರ್ಮಾಣ ಕಾರ್ಯಕ್ಕಾಗಿ ಮುಚ್ಚಲ್ಪಟ್ಟ ರಸ್ತೆಯ ಪಕ್ಕದಲ್ಲಿ ಚಾಲನೆ ಮಾಡುತ್ತಾ ನಂತರ ತೆರೆದ ರಸ್ತೆಗೆ ತಿರುಗುತ್ತಿರುವುದನ್ನು ಕಾಣಬಹುದು.

ಸ್ನೇಹಿತನ ಮಗುವಿನ ಆಟಿಕೆ ಜೀಪಲ್ಲಿ ಪ್ರಯಾಣಿಸಿದ ವ್ಯಕ್ತಿ:

ಈ ವೇಳೆ ಆತನ ವಿಚಾರಣೆ ನಡೆಸಿದ ಪೊಲೀಸರಿಗೆ ತಾನು ಹೊರಗೆ ಹೋಗಿ ಸ್ವಲ್ಪ ಮದ್ಯ ಸೇವಿಸಲು ಬಯಸಿದ್ದೆ, ಇದಕ್ಕಾಗಿ ತನ್ನ ರೂಮ್‌ಮೇಟ್‌ನ ಮಗುವಿನ ಪುಟ್ಟ ಜೀಪನ್ನು ತೆಗೆದುಕೊಂಡಿದ್ದೆ. ಏಕೆಂದರೆ ನನ್ನ ಸ್ನೇಹಿತ ನನ್ನ ಜೊತೆಯೇ ನಡೆದುಕೊಂಡು ಬರುತ್ತಿದ್ದ ಎಂದು ಆತ ಪೊಲೀಸರಿಗೆ ಹೇಳಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ಪ್ರತಿಕ್ರಿಯಿಸಿದ್ದು, ಸಂಚಾರಕ್ಕೆ ಅಡ್ಡಿಯಾದ ಕಾರಣಕ್ಕೆ ಕಸ್ಪೆರ್ ಲಿಂಕನ್ ಅವರನ್ನು ತಡೆಯಲಾಯ್ತು. ಈ ವೇಳೆ ಆತನ ವಿಚಾರಿಸಿದ ಪೊಲೀಸರಿಗೆ ಆತನ ಲೈಸೆನ್ಸ್ ರದ್ದುಗೊಂಡಿರುವುದು ತಿಳಿದಿದೆ. ಜೊತೆಗೆ ಆತ ಕುಡಿದಿರುವ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಕರೆದು ಅಲ್ಕೋಹಾಲ್ ಟೆಸ್ಟ್‌ ಮಾಡಿದಾಗ ಆತ ಪಾನಮತ್ತನಾಗಿರುವುದು ಕಂಡು ಬಂದಿದೆ. ಹೀಗಾಗಿ ಆತನ ವಿರುದ್ಧ ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡಿದ ಅರೋಪ ಹೊರಿಸಲಾಗಿದೆ. ಆದರೆ ಅವರು ತಮಗೆ ನೀಡಿದ ಈ ಚಲನ್ ಅನ್ನು ಪ್ರಶ್ನಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಇದರ ಜೊತೆಗೆ ಈತನಿಗೆ 90 ದಿನಗಳ ಕಾಲ ವಾಹನ ಚಾಲನೆಗೆ ನಿಷೇಧ ಹೇರಲಾಗಿದೆ.

'ಇದು ಗಮನಕ್ಕೆ ಬಾರದ ವಿಷಯದಂತೆ ತೋರುತ್ತಿದ್ದರೂ, ಇದು ಸರಿಯಲ್ಲ, ಬೆಳಗಿನ ಪ್ರಯಾಣದ ಸಮಯದಲ್ಲಿ ಇದು ಜನನಿಬಿಡ ಪ್ರದೇಶವಾಗಿದ್ದು, ರಸ್ತೆಯಲ್ಲಿರುವ ಇತರ ಚಾಲಕರನ್ನು ಮತ್ತು ಆ ನಿರ್ದಿಷ್ಟ ಚಾಲಕನನ್ನು ಅಪಾಯಕ್ಕೆ ಸಿಲುಕಿಸುತ್ತದೆ' ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಅಧಿಕಾರಿ ಸ್ಟಾಫ್ ಸಾರ್ಜೆಂಟ್ ಕ್ರಿಸ್ ಕ್ಲಾರ್ಕ್ ಹೇಳಿದರು.

ವಾಹನ ಚಾಲಕರು ಆಟಿಕೆ ಕಾರುಗಳೆಂದು ಕರುಣೆಯಿಂದ ನೋಡುವುದಿಲ್ಲ, ಇದು ಸಂಚಾರ ನಿಲ್ಲಿಸುವುದಕ್ಕೆ ಸಾಕಾಗುತ್ತದೆ. ಪೊಲೀಸರ ಪ್ರಕಾರ ಈ ರೀತಿಯ ವಾಹನಗಳಿಗೂ ಪರವಾನಗಿ ಪಡೆದ ವಾಹನದಂತೆಯೇ ವಿಮೆ ಹಾಗೂ ಚಾಲಕ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಅಂದಹಾಗೆ ಮ್ಯಾಟೆಲ್‌ನ ವೆಬ್‌ಸೈಟ್‌ನ ಪ್ರಕಾರ , ಈಗ ರಸ್ತೆಯಲ್ಲಿ ಯುವಕ ಓಡಿಸಿದಂತಹ ಬಾರ್ಬಿ ಜೀಪ್ ರಾಂಗ್ಲರ್ 2021 ರಲ್ಲಿ ಬಿಡುಗಡೆಯಾಗಿದ್ದು, ಗಂಟೆಗೆ ಎಂಟು ಕಿ.ಮೀ ವೇಗದಲ್ಲಿ ಚಲಿಸಬಲ್ಲದು ಮತ್ತು ಪವರ್ ಬ್ರೇಕ್‌ಗಳೊಂದಿಗೆ ಬರುತ್ತದೆ. ಮೂರರಿಂದ ಏಳು ವರ್ಷ ವಯಸ್ಸಿನ ಮಕ್ಕಳಿಗೆ ಗಟ್ಟಿಯಾದ ಮೇಲ್ಮೈಗಳಲ್ಲಿ ಬಳಸಲು ಇದನ್ನು ಶಿಫಾರಸು ಮಾಡಲಾಗಿದೆ.

Scroll to load tweet…

ಇದನ್ನೂ ಓದಿ: ನ್ಯಾನೋ ಬನಾನಾ ಟ್ರೆಂಡ್: ವೈರಲ್ ಆಗ್ತಿದೆ ಗೂಗಲ್ ಜೆಮಿನಿಯ ಹೊಸ ಟ್ರೆಂಡ್

ಇದನ್ನೂ ಓದಿ: ಚಲಿಸುವ ರೈಲಿನಿಂದ ಹಾರಿ ಆಸ್ಪತ್ರೆಗೆ ದಾಖಲಾದ ರಾಗಿಣಿ ಎಂಎಂಎಸ್ ನಟಿ ಕರಿಷ್ಮಾ ಶರ್ಮಾ