ವಿಶ್ವ ಅವಲಕ್ಕಿ ದಿನದ ಅಂಗವಾಗಿ, ಪ್ರಸಿದ್ಧ ಪಾಕತಜ್ಞ ವಿಷ್ಣು ಮನೋಹರ್‌ ಅವರು 3,000 ಕೆಜಿ 'ತರ್ರಿ ಪೋಹಾ' ತಯಾರಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಯತ್ನಿಸಿದ್ದಾರೆ. ನಾಗ್ಪುರದ ಅವಲಕ್ಕಿ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವುದು ಈ ಬೃಹತ್ ಸಾಹಸದ ಮುಖ್ಯ ಉದ್ದೇಶವಾಗಿತ್ತು.

ನಾಗ್ಪುರ: ಭಾನುವಾರ ನಡೆದ ‘ವಿಶ್ವ ಅವಲಕ್ಕಿ ದಿನ’ದ ಅಂಗವಾಗಿ ಪ್ರಸಿದ್ಧ ಪಾಕತಜ್ಞ ವಿಷ್ಣು ಮನೋಹರ್‌ ಅವರು 3,000 ಕೆಜಿಯಷ್ಟು ‘ತರ್ರಿ ಪೋಹಾ’ (ಕುರುಕುರು ಅವಲಕ್ಕಿ) ತಯಾರಿಸುವ ಮೂಲಕ ಭಾನುವಾರ ವಿಶ್ವ ದಾಖಲೆ ನಿರ್ಮಿಸುವ ಯತ್ನ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಪ್ರಸಿದ್ಧವಾಗಿರುವ ಈ ಉಪಾಹಾರವನ್ನು ವಿಶ್ವಾದ್ಯಂತ ಪರಿಚಯಿಸುವ ಮತ್ತು ಅದರ ಸಾಂಸ್ಕೃತಿಕ ಮಹತ್ವವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಪ್ರತಿ ವರ್ಷ ಜೂ.7ರಂದು ವಿಶ್ವ ಅವಲಕ್ಕಿ (ಪೋಹಾ) ದಿನವನ್ನಾಗಿ ಆಚರಿಸಲಾಗುತ್ತದೆ. ಈ ನಿಮಿತ್ತ ವಿಷ್ಣು ಮನೋಹರ್‌ ಈ ಸಾಹಸ ಮಾಡಿದ್ದಾರೆ.

70-75 ಸ್ವಯಂಸೇವಕರು ನೆರವು

ಬೆಳಗಿನ ಜಾವ 2.30ಕ್ಕೆ ಅವಲಕ್ಕಿ ತಯಾರಿ ಆರಂಭಿಸಿದ ಅವರು 6 ಗಂಟೆಗೆ ಮುಗಿಸಿದ್ದಾರೆ. ನಂತರ ಭೇಟಿ ನೀಡಿದವರಿಗೆಲ್ಲ ಅದನ್ನು ಉಚಿತವಾಗಿ ವಿತರಣೆ ಮಾಡಿದ್ದಾರೆ. ಈ ಕೆಲಸಕ್ಕೆ ಅವರಿಗೆ 70-75 ಸ್ವಯಂಸೇವಕರು ನೆರವು ನೀಡಿದ್ದಾರೆ.

‘ಇದಕ್ಕಾಗಿ 600 ಕೆಜಿ ಅವಲಕ್ಕಿ, 400 ಕೆಜಿ. ಪುಠಾಣಿ (ಹುರಿಗಡಲೆ), 500 ಕೆಜಿ ಈರುಳ್ಳಿ, 300 ಕೆಜಿ ಎಣ್ಣೆ ಹಾಗೂ ತಲಾ 100 ಕೆಜಿ ಶುಂಠಿ, ಬೆಳ್ಳುಳ್ಳಿ, ಅರಿಶಿಣ ಪುಡಿ, ಜೀರಿಗೆ ಪುಡಿ ಬಳಸಲಾಗಿದೆ. ಬರೀ ದಾಖಲೆ ನಿರ್ಮಿಸುವುದು ನಮ್ಮ ಗುರಿಯಲ್ಲ. ನಾಗ್ಪುರದ ಅವಲಕ್ಕಿ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವುದು ನಮ್ಮ ಗುರಿ’ ಎಂದು ಮನೋಹರ್‌ ತಿಳಿಸಿದ್ದಾರೆ.

2024ರಲ್ಲಿ ಅಯೋಧ್ಯಾ ರಾಮಮಂದಿರ ಉದ್ಘಾಟನೆ ದಿವಸ 5,000 ಕೆಜಿ ಹಲ್ವಾ ತಯಾರಿಸುವ ಮೂಲಕ ವಿಶ್ವ ದಾಖಲೆ ಬರೆಯಲು ಮನೋಹರ್ ಪ್ರಯತ್ನಿಸಿದ್ದರು.