ಮಾಫಿಯಾ ಡಾನ್ ಅತೀಕ್ ಅಹ್ಮದ್ ಅವರ ಪುತ್ರ ಅಬಾನ್ ಅಹ್ಮದ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ಕಾರಿನಲ್ಲಿ ಎರಡು ಇಂಗ್ಲಿಷ್ ಕಾದಂಬರಿಗಳು ಪತ್ತೆಯಾಗಿದ್ದು, ಈ ಪುಸ್ತಕಗಳು ಜೈಲಿನಲ್ಲಿರುವ ಸಹೋದರನಿಗಾಗಿ ಇರಬಹುದೇ ಎಂಬ ಅನುಮಾನದೊಂದಿಗೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಮಾಫಿಯಾ ಡಾನ್ ದಿವಂಗತ ಅತೀಕ್ ಅಹ್ಮದ್ ಅವರ ಕಿರಿಯ ಪುತ್ರ 21 ವರ್ಷದ ಅಬಾನ್ ಅಹ್ಮದ್ ರಸ್ತೆ ಅಪಘಾತದಲ್ಲಿ ಮೃತಪಟ್ಟ ಪ್ರಕರಣ ಹೊಸ ಚರ್ಚೆಗೆ ಕಾರಣವಾಗಿದೆ. ಅಪಘಾತದ ನಂತರ ಪೊಲೀಸರು ಮತ್ತು ವಿಧಿವಿಜ್ಞಾನ (ಫೊರೆನ್ಸಿಕ್) ತಂಡ ಕಾರನ್ನು ಪರಿಶೀಲಿಸಿದಾಗ ಎರಡು ಇಂಗ್ಲಿಷ್ ಕಾದಂಬರಿಗಳು ಸೇರಿದಂತೆ ಹಲವು ವೈಯಕ್ತಿಕ ವಸ್ತುಗಳು ಪತ್ತೆಯಾಗಿವೆ. ಈ ಪುಸ್ತಕಗಳು ಯಾವ ಕಾರಣಕ್ಕಾಗಿ ಕಾರಿನಲ್ಲಿದ್ದವು ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.
ಸಹೋದರನ್ನು ನೋಡಲು ಹೊರಟಾಗ ಶಾಕ್!
ಅಬಾನ್ ಅಹ್ಮದ್ ತನ್ನ ಸಹೋದರ ಅಲಿ ಅಹ್ಮದ್ ಅವರನ್ನು ಭೇಟಿ ಮಾಡಲು ಝಾನ್ಸಿ ಜೈಲಿಗೆ ಹುಂಡೈ ಕ್ರೆಟಾ ಎಸ್‌ಯುವಿಯಲ್ಲಿ ತೆರಳುತ್ತಿದ್ದರು. ಅವರೊಂದಿಗೆ ಸ್ನೇಹಿತ ಮೊಹಮ್ಮದ್ ಶಕೀರ್ ಅಲಿಯಾಸ್ ಸೋನು ಹಾಗೂ ಇನ್ನಿತರರು ಇದ್ದರು. ಕಾನ್ಪುರ–ಝಾನ್ಸಿ ಹೆದ್ದಾರಿಯಲ್ಲಿ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಬಾನ್ ಮತ್ತು ಸೋನು ಸ್ಥಳದಲ್ಲೇ ಮೃತಪಟ್ಟರು. ಉಳಿದ ಮೂವರು ಗಾಯಗೊಂಡಿದ್ದಾರೆ. ಅಪಘಾತದ ಬಳಿಕ ಕಾರನ್ನು ಪರಿಶೀಲಿಸಿದ ಪೊಲೀಸರು ಸಿಗ್ನೇಚರ್ ಗುಟ್ಕಾ ಪ್ಯಾಕೆಟ್, ಕ್ಲಾಸಿಕ್ ಸಿಗರೇಟ್ ಪ್ಯಾಕ್, ಶೂಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡರು. ಆದರೆ ಎಲ್ಲರ ಗಮನ ಸೆಳೆದಿದ್ದು ಎರಡು ಇಂಗ್ಲಿಷ್ ಪುಸ್ತಕಗಳು. ಅವು "ದಿ ಸ್ಟೇಷನರಿ ಶಾಪ್ ಆಪ್ ಟೆಹ್ರಾನ್" ಮತ್ತು "ದಿ ಇಡಿಯಟ್". ಎರಡೂ ಪುಸ್ತಕಗಳು ಹೊಸದಾಗಿದ್ದವು.
ಕಾಡುತ್ತಿರುವ ಪ್ರಶ್ನೆ ಏನು?
ಈ ಪುಸ್ತಕಗಳನ್ನು ಅಬಾನ್ ಸ್ವತಃ ಓದುತ್ತಿದ್ದರೋ ಅಥವಾ ಝಾನ್ಸಿ ಜೈಲಿನಲ್ಲಿರುವ ತನ್ನ ಸಹೋದರ ಅಲಿ ಅಹ್ಮದ್‌ಗೆ ನೀಡಲು ತೆಗೆದುಕೊಂಡು ಹೋಗುತ್ತಿದ್ದರೋ ಎಂಬ ಪ್ರಶ್ನೆ ಮೂಡಿದೆ. ಆರಂಭಿಕ ತನಿಖೆಯ ಪ್ರಕಾರ, ಈ ಪುಸ್ತಕಗಳನ್ನು ಅಲಿ ಅಹ್ಮದ್‌ಗಾಗಿ ತರಲಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಇದನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.
'ದಿ ಸ್ಟೇಷನರಿ ಶಾಪ್ ಆಫ್ ಟೆಹ್ರಾನ್' ಪುಸ್ತಕದ ವಿಶೇಷತೆ ಏನು?
ಈ ಕಾದಂಬರಿಯನ್ನು ಇರಾನ್ ಮೂಲದ ಲೇಖಕಿ ಮಾರ್ಜನ್ ಕಮಲಿ ಬರೆದಿದ್ದಾರೆ. ಇದು ಕೇವಲ ಪ್ರೇಮಕಥೆಯಲ್ಲ; ಪ್ರೀತಿ, ನಷ್ಟ, ಕುಟುಂಬ, ರಾಜಕೀಯ ಮತ್ತು ಮಾನವ ಸಂಬಂಧಗಳ ಭಾವನಾತ್ಮಕ ಕಥೆಯಾಗಿದೆ. ಕಥೆ 1953ರ ಇರಾನ್‌ನ ಟೆಹ್ರಾನ್ ನಗರದಲ್ಲಿ ಆರಂಭವಾಗುತ್ತದೆ. ಪುಸ್ತಕಗಳ ಅಂಗಡಿಯಲ್ಲಿ ರೋಯಾ ಎಂಬ ಯುವತಿ ಮತ್ತು ಸಮಾಜದಲ್ಲಿ ಬದಲಾವಣೆ ತರಲು ಕನಸು ಕಾಣುವ ಬಹ್ಮನ್ ಎಂಬ ಯುವಕ ಭೇಟಿಯಾಗುತ್ತಾರೆ. ಇಬ್ಬರೂ ಪರಸ್ಪರ ಪ್ರೀತಿಸುತ್ತಾರೆ. ಆದರೆ ಆ ಸಮಯದಲ್ಲಿ ಇರಾನ್‌ನಲ್ಲಿ ನಡೆದ ರಾಜಕೀಯ ಅಶಾಂತಿಯಿಂದ ಅವರ ಜೀವನವೇ ಬದಲಾಗುತ್ತದೆ. ಇಬ್ಬರೂ ಬೇರ್ಪಡುತ್ತಾರೆ. ಹಲವು ವರ್ಷಗಳ ಬಳಿಕ ಮತ್ತೆ ಭೇಟಿಯಾಗುವಾಗ ಅವರ ಪ್ರೀತಿಯ ಹಿಂದೆ ಅಡಗಿದ್ದ ನಿಜವಾದ ಕಥೆ ಹೊರಬರುತ್ತದೆ. ಈ ಕಾದಂಬರಿ ಮೊದಲ ಪ್ರೀತಿ, ವಿಯೋಗ ಮತ್ತು ಜೀವನದ ಭಾವನೆಗಳನ್ನು ಹೃದಯಸ್ಪರ್ಶಿಯಾಗಿ ಚಿತ್ರಿಸುತ್ತದೆ.
'ದಿ ಈಡಿಯಟ್' ಏಕೆ ವಿಶೇಷ?
ಅಬಾನ್ ಅವರ ಕಾರಿನಲ್ಲಿ ಪತ್ತೆಯಾದ ಮತ್ತೊಂದು ಪುಸ್ತಕ ದಿ ಇಡಿಯಟ್ ಇದನ್ನು ರಷ್ಯಾದ ಖ್ಯಾತ ಲೇಖಕ ಫ್ಯೋಡರ್ ದೋಸ್ಟೋವ್ಸ್ಕಿ ಬರೆದಿದ್ದು, ವಿಶ್ವದ ಶ್ರೇಷ್ಠ ಕ್ಲಾಸಿಕ್ ಕಾದಂಬರಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಕಥೆಯ ನಾಯಕ ಪ್ರಿನ್ಸ್ ಲೆವ್ ಮಿಶ್ಕಿನ್. ಆತ ತುಂಬಾ ಪ್ರಾಮಾಣಿಕ, ದಯಾಳು ಮತ್ತು ಮುಗ್ಧ ವ್ಯಕ್ತಿ. ಆದರೆ ಸಮಾಜ ಅವನ ಒಳ್ಳೆಯತನವನ್ನು ಅರ್ಥಮಾಡಿಕೊಳ್ಳದೆ ಅವನನ್ನು "ಮೂರ್ಖ" ಎಂದು ಕರೆಯುತ್ತದೆ. ಕಥೆ ಮುಂದುವರಿದಂತೆ ಪ್ರೀತಿ, ಅಸೂಯೆ, ಸ್ವಾರ್ಥ, ಮಾನವ ಸಂಬಂಧಗಳು ಮತ್ತು ನೈತಿಕ ಮೌಲ್ಯಗಳ ಬಗ್ಗೆ ಆಳವಾದ ಚರ್ಚೆ ನಡೆಸುತ್ತದೆ. ಒಳ್ಳೆಯ ಮನಸ್ಸಿನ ವ್ಯಕ್ತಿಯನ್ನು ಸಮಾಜ ಹೇಗೆ ತಪ್ಪಾಗಿ ಅರ್ಥಮಾಡಿಕೊಳ್ಳುತ್ತದೆ ಎಂಬುದನ್ನು ಈ ಕಾದಂಬರಿ ಮನಮುಟ್ಟುವ ರೀತಿಯಲ್ಲಿ ಹೇಳುತ್ತದೆ.
ಹೊಸ ಆಯಾಮ ನೀಡಿದ ಪುಸ್ತಕ!
ಅಬಾನ್ ಅಹ್ಮದ್ ಅವರ ಕಾರಿನಲ್ಲಿ ಈ ಎರಡು ಪ್ರಸಿದ್ಧ ಪುಸ್ತಕಗಳು ಪತ್ತೆಯಾಗಿರುವುದು ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ. ಅವುಗಳನ್ನು ಅವರು ಓದಲು ತೆಗೆದುಕೊಂಡಿದ್ದರೋ ಅಥವಾ ತಮ್ಮ ಸಹೋದರನಿಗೆ ನೀಡಲು ಕೊಂಡೊಯ್ಯುತ್ತಿದ್ದರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ತನಿಖೆ ಮುಂದುವರಿದಿದ್ದು, ಅಧಿಕೃತ ಮಾಹಿತಿ ಹೊರಬರುವವರೆಗೆ ಪೊಲೀಸರು ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ.


