ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯು ಎನ್‌ಟಿಎ ಒಳಗಿನವರೇ ನಡೆಸಿದ ಪೂರ್ವಯೋಜಿತ ಪಿತೂರಿ ಎಂದು ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಹಂತದಲ್ಲೇ ಮೂವರು ತಜ್ಞರು ಪ್ರಶ್ನೆಗಳನ್ನು ಸೋರಿಕೆ ಮಾಡಿ, ಮಧ್ಯವರ್ತಿಗಳ ಮೂಲಕ ಅಭ್ಯರ್ಥಿಗಳಿಗೆ ಭಾರಿ ಮೊತ್ತಕ್ಕೆ ಮಾರಾಟ!

ಲೀಕ್‌ ಆಗಿದ್ದು ಹೇಗೆ?

  • ಪ್ರಶ್ನೆಪತ್ರಿಕೆಯ ಸಿದ್ಧತೆ, ತರ್ಜುಮೆಗಾಗಿ ವಿಷಯ ತಜ್ಞರನ್ನು ಪರೀಕ್ಷಾ ಸಂಸ್ಥೆ ನೇಮಿಸಿಕೊಂಡಿತ್ತು
  • ಈ ತಜ್ಞರ ಅನುಕೂಲಕ್ಕೆ ರಫ್‌ ವರ್ಕ್‌ಗಾಗಿ ಖಾಲಿ ಹಾಳೆಗಳನ್ನು ಸಂಸ್ಥೆಯಿಂದ ಕೊಡಲಾಗಿತ್ತು
  • ಪ್ರಶ್ನೆ ಅಂತಿಮವಾದ ಬಳಿಕ ಅದರ ಚುಟುಕು ಮಾಹಿತಿಯನ್ನು ರಫ್‌ಶೀಟ್‌ನಲ್ಲಿ ಬರೆದುಕೊಳ್ಳುತ್ತಿದ್ದರು
  • ಹೋಟೆಲ್‌ಗೆ ಮರಳಿದ ಬಳಿಕ ಆ ಪ್ರಶ್ನೆಯನ್ನು ವಿಸ್ತರಿಸಿ ಪೂರ್ಣ ಪ್ರಮಾಣದ ಪತ್ರಿಕೆ ತಯಾರಿಸುತ್ತಿದ್ದರು
  • ಮಧ್ಯವರ್ತಿಗಳಿಗೆ ಪೂರ್ಣ ಪ್ರಶ್ನೆಪತ್ರಿಕೆಯನ್ನು ಕೊಟ್ಟು ಭಾರಿ ಮೊತ್ತದ ಹಣಕ್ಕೆ ಮಾರಿಕೊಳ್ಳುತ್ತಿದ್ದರು

--

ಪಿಟಿಐ ನವದೆಹಲಿ (ಆ.8) ದೇಶಾದ್ಯಂತ ಸಂಚಲನ ಮೂಡಿಸಿದ ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್‌ಟಿಎ) ಒಳಗಿನವರೇ ನಡೆಸಿದ ಪೂರ್ವಯೋಜಿತ, ಬಹುರಾಜ್ಯ ಕ್ರಿಮಿನಲ್ ಪಿತೂರಿ ಎಂದು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಚಾರ್ಜ್‌ಶೀಟ್‌ ಸಲ್ಲಿಸಿದೆ.

‘3 ಎನ್‌ಟಿಎ ಅಧಿಕೃತ ತಜ್ಞರು ಪ್ರಶ್ನೆಪತ್ರಿಕೆಯ ಸಿದ್ಧತಾ ಹಂತದಲ್ಲೇ ಪ್ರಶ್ನೆಗಳನ್ನು ತಮಗೆ ರಫ್‌ ವರ್ಕ್‌ಗೆ ಎಂದು ನೀಡಲಾಗಿದ್ದ ಕಾಗದದಲ್ಲಿ ಚುಟುಕಾಗಿ ಬರೆದುಕೊಂಡರು. ಕೆಲಸ ಮುಗಿದ ನಂತರ ಹೋಟೆಲ್ ರೂಂನಲ್ಲಿ ಪೂರ್ಣ ರೂಪದಲ್ಲಿ ನೆನಪು ಮಾಡಿಕೊಂಡು ಪ್ರಶ್ನೆ ಬರೆಯುತ್ತಿದ್ದರು. ಸಿದ್ಧವಾದ ಬಳಿಕ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ, ಮಧ್ಯವರ್ತಿಗಳ ಜಾಲದ ಮೂಲಕ ದೊಡ್ಡ ಮೊತ್ತದ ಹಣಕ್ಕೆ ಅಭ್ಯರ್ಥಿಗಳಿಗೆ ತಲುಪಿಸಿದ್ದರು’ ಎಂದು ಸಿಬಿಐ ಆರೋಪಿಸಿದೆ. 3 ಎನ್‌ಟಿಎ ತಜ್ಞರು ಸೇರಿ 13 ಆರೋಪಿಗಳ ಹೆಸರನ್ನು ಉಲ್ಲೇಖಿಸಿದೆ. ದೆಹಲಿಯ ರೋಸ್ ಅವೆನ್ಯೂ ವಿಶೇಷ ಸಿಬಿಐ ಕೋರ್ಟ್‌ಗೆ ಸಿಬಿಐ, ಈ ಆರೋಪಪಟ್ಟಿ ಸಲ್ಲಿಸಿದೆ.

ಎನ್‌ಟಿಎ ತಜ್ಞರ ಸಂಚು:

ಈ ತನಿಖಾ ವರದಿಯಲ್ಲಿ ಎನ್‌ಟಿಎ ನೇಮಕ ಮಾಡಿದ್ದ ಮೂವರು ವಿವಿಧ ವಿಷಯಗಳ ತಜ್ಞರು ಸೇರಿದಂತೆ ಒಟ್ಟು 13 ಆರೋಪಿಗಳನ್ನು ಹೆಸರಿಸಲಾಗಿದೆ. ಸಸ್ಯಶಾಸ್ತ್ರ ತಜ್ಞೆ ಮನೀಷಾ ಗುರುನಾಥ್ ಮಂಧರೆ, ರಸಾಯನಶಾಸ್ತ್ರ ತಜ್ಞ ಪ್ರಹ್ಲಾದ್ ವಿಠ್ಠಲರಾವ್ ಕುಲಕರ್ಣಿ ಮತ್ತು ಭೌತಶಾಸ್ತ್ರ ತಜ್ಞೆ ಮನೀಷಾ ಸಂಜಯ್ ಹವಾಲ್ದಾರ್ ತಮ್ಮ ಅಧಿಕೃತ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಪರೀಕ್ಷೆಗೂ ಮುನ್ನವೇ ಪ್ರಶ್ನೆಪತ್ರಿಕೆಗಳನ್ನು ಪಡೆದುಕೊಂಡಿದ್ದರು ಎಂದು ಸಿಬಿಐ ಆರೋಪಿಸಿದೆ.

ಅನುವಾದ ಮಾಡುವಾಗಲೇ ಲೀಕ್:

ಪ್ರಶ್ನೆಪತ್ರಿಕೆಗಳ ಅನುವಾದ ಸಂದರ್ಭದಲ್ಲಿ, ಗೌಪ್ಯ ವಿಭಾಗದೊಳಗೆ ಈ ಮೂವರು ತಜ್ಞರಿಗೆ ಕರಡು ಕೆಲಸಕ್ಕಾಗಿ ಖಾಲಿ ಹಾಳೆಗಳನ್ನು ನೀಡಲಾಗಿತ್ತು. ಪ್ರಮುಖ ಆರೋಪಿ ಕುಲಕರ್ಣಿ ಈ ಹಾಳೆಗಳನ್ನು ಬಳಸಿಕೊಂಡು ರಸಾಯನಶಾಸ್ತ್ರದ ಎಲ್ಲಾ 135 ಪ್ರಶ್ನೆಗಳು ಹಾಗೂ ಅವುಗಳ ಉತ್ತರ ಆಯ್ಕೆಗಳನ್ನು ಸಣ್ಣ ಚೀಟಿಗಳಲ್ಲಿ ಸಂಕ್ಷಿಪ್ತವಾಗಿ ಬರೆದುಕೊಂಡಿದ್ದ ಹಾಗೂ ಅವುಗಳನ್ನು ಗುಪ್ತವಾಗಿ ಹೊರಗೆ ಕೊಂಡೊಯ್ದಿದ್ದ.

ಇನ್ನಿಬ್ಬರು ಆರೋಪಿಗಳಾದ ಸಸ್ಯಶಾಸ್ತ್ರ ತಜ್ಞೆ ಮನೀಷಾ ಗುರುನಾಥ್ ಮಂಧರೆ (ಇಂಗ್ಲಿಷ್‌ನಿಂದ ಮರಾಠಿಗೆ ಭಾಷಾಂತರ ಕೆಲಸ) ತಾವು ಸಿದ್ಧತಾ ಹಂತದಲ್ಲಿ ಗಮನಿಸಿದ್ದ ಪ್ರಶ್ನೆಗಳ ಗಮನಿಸುತ್ತಿದ್ದರು. ಬಳಿಕ ಹೋಟೆಲ್‌ ರೂಂಗೆ ಮರಳಿ ಅವನ್ನು ಪಠ್ಯಪುಸ್ತಕದಲ್ಲಿ ಗುರುತು ಹಾಕಿಕೊಳ್ಳುತ್ತಿದ್ದರು. ಇವರಿಗೆ ಸಾಕಷ್ಟು ಕೆಲಸದ ಅನುಭವ ಇದ್ದ ಕಾರಣ ಪ್ರಶ್ನೆ ಹಾಗೂ ಉತ್ತರಗಳನ್ನು ತಾಳೆ ಹಾಕುತ್ತಿದ್ದರು. ಇನ್ನು ಭೌತಶಾಸ್ತ್ರ ತಜ್ಞೆ ಮನೀಷಾ ಸಂಜಯ್ ಹವಾಲ್ದಾರ್ (ಭೌತಶಾಸ್ತ್ರ ಭಾಷಾಂತರ ಕೆಲಸ) ತಮಗೆ ದಿಲ್ಲಿಯಲ್ಲಿ ತಮಗೆ ನೀಡಲಾದ ರೂಂನಲ್ಲಿ ಪ್ರಶ್ನೆಗಳನ್ನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು’ ಎಂದು ಆರೋಪಪಟ್ಟಿ ಹೇಳಿದೆ.

‘ಎನ್‌ಟಿಎಯ ಗೌಪ್ಯ ವಿಭಾಗಕ್ಕೆ ಪ್ರವೇಶಿಸುವಾಗ ಅಥವಾ ಅಲ್ಲಿಂದ ಹೊರಬರುವಾಗ ತಜ್ಞರನ್ನು ಪರಿಶೀಲಿಸುವ ಕಾರ್ಯ ನಡೆಯುತ್ತಿರಲಿಲ್ಲ’ ಎಂದೂ ಅದರಲ್ಲಿ ಉಲ್ಲೇಖಿಸಲಾಗಿದೆ.

ಬೃಹತ್ ಜಾಲ ಬೆಳಕಿಗೆ:

ಪ್ರಶ್ನೆಪತ್ರಿಕೆಯು ಎನ್‌ಟಿಎ ತಜ್ಞರಿಂದ ಹಿಡಿದು ಖಾಸಗಿ ಕೋಚಿಂಗ್‌ ಸೆಂಟರ್‌ ಆಪರೇಟರ್‌ಗಳು, ಬ್ರೋಕರ್‌ಗಳ ಮೂಲಕ ಅಭ್ಯರ್ಥಿಗಳನ್ನು ತಲುಪಿದ ಸಂಪೂರ್ಣ ಜಾಲವನ್ನು ಸಿಬಿಐ ಬಹಿರಂಗಪಡಿಸಿದೆ. ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್‌ಗಳು ಮತ್ತು ಎಲೆಕ್ಟ್ರಾನಿಕ್ ಸಾಧನಗಳ ವಿಧಿವಿಜ್ಞಾನ ಪರೀಕ್ಷೆಯಲ್ಲಿ ವಾಟ್ಸಾಪ್, ಟೆಲಿಗ್ರಾಂ ಹಾಗೂ ಇತರೆ ಮೆಸೇಜಿಂಗ್ ಆ್ಯಪ್‌ಗಳ ಮೂಲಕ ಹಂಚಿಕೊಳ್ಳಲಾದ ಪಿಡಿಎಫ್ ಮತ್ತು ಇಮೇಜ್ ಫೈಲ್‌ಗಳು ಪತ್ತೆಯಾಗಿವೆ. ಮುಂಗಡವಾಗಿ ಹಣ ಹಾಗೂ ಭದ್ರತೆಗಾಗಿ ಮೂಲ 10 ಮತ್ತು 12ನೇ ತರಗತಿಯ ಪ್ರಮಾಣಪತ್ರಗಳು ಹಾಗೂ ಸಹಿ ಮಾಡಿದ ಖಾಲಿ ಚೆಕ್‌ಗಳನ್ನು ಪಡೆದಿರುವುದು ಕೂಡ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾಗಿರುವ ಎಲ್ಲಾ 13 ಆರೋಪಿಗಳು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದು, ಸಿಬಿಐ ತನ್ನ ತನಿಖೆಯನ್ನು ಮುಂದುವರಿಸಿದೆ. ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಆಡಿಯೋ ರೆಕಾರ್ಡಿಂಗ್‌ಗಳಲ್ಲಿ, ಪಿಡಿಎಫ್ ಅಥವಾ ಹಾರ್ಡ್-ಕಾಪಿ ರೂಪದ ಪ್ರಶ್ನೆಪತ್ರಿಕೆ ಬೆಲೆಯನ್ನು 10 ಲಕ್ಷ ರು.ನಿಂದ 12 ಲಕ್ಷ ರು.ಗೆ ಏರಿಸುವ ಕುರಿತು ಮಾತುಕತೆ ನಡೆಸಿರುವುದು ತಿಳಿದುಬಂದಿದೆ.

ಜೀವಾವಧಿ ಶಿಕ್ಷೆ, ₹1 ಕೋಟಿ ದಂಡ!:

ಆರೋಪ ಸಾಬೀತಾದರೆ, ಅಪರಾಧಿಗಳಿಗೆ ಗರಿಷ್ಠ ಜೀವಾವಧಿ ಶಿಕ್ಷೆ ಮತ್ತು 1 ಕೋಟಿ ರು.ವರೆಗೆ ದಂಡ ವಿಧಿಸುವ ಸಾಧ್ಯತೆಯಿದೆ. ಸಾರ್ವಜನಿಕ ಸೇವಕರಾಗಿ ನಂಬಿಕೆದ್ರೋಹ ಎಸಗಿದ ಆರೋಪದಡಿ ಬಿಎನ್‌ಎಸ್‌ ಸೆಕ್ಷನ್ 316(5)ರ ಅಡಿಯಲ್ಲಿ ಗರಿಷ್ಠ ಜೀವಾವಧಿ ಶಿಕ್ಷೆ ಎದುರಾಗಲಿದೆ. ಇದರೊಂದಿಗೆ, ಸಾರ್ವಜನಿಕ ಪರೀಕ್ಷೆಗಳ (ಅನುಚಿತ ವಿಧಾನಗಳ ತಡೆ) ಕಾಯ್ದೆಯಡಿ ಕನಿಷ್ಠ 5ರಿಂದ 10 ವರ್ಷಗಳ ಜೈಲುಶಿಕ್ಷೆ ಹಾಗೂ 1 ಕೋಟಿ ರು.ಗಳಿಗೂ ಕಡಿಮೆ ಇಲ್ಲದ ದಂಡ, ಭ್ರಷ್ಟಾಚಾರ ತಡೆ ಕಾಯ್ದೆಯಡಿ 10 ವರ್ಷಗಳವರೆಗೆ ಜೈಲುಶಿಕ್ಷೆಯಾಗುವ ಸಾಧ್ಯತೆಯೂ ಇದೆ.