ಗ್ರಾಹಕರನ್ನು ದಾರಿ ತಪ್ಪಿಸುವ '100% ಪ್ಯೂರ್' ಜಾಹೀರಾತುಗಳ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಕಠಿಣ ಕ್ರಮ ಕೈಗೊಂಡಿದೆ. Storia Foods ಮತ್ತು Mrs. Bectors Food ಕಂಪನಿಗಳಿಗೆ ಕಲಬೆರಕೆ ಉತ್ಪನ್ನಗಳ ಮಾರಾಟಕ್ಕಾಗಿ ತಲಾ ₹1 ಲಕ್ಷ ದಂಡ ವಿಧಿಸಲಾಗಿದೆ. ತೆಂಗಿನ ನೀರು, ಜ್ಯೂಸ್, ಗೋಧಿ ಹಿಟ್ಟಿನಂತಹ ಉತ್ಪನ್ನಗಳಲ್ಲಿ ಕಲಬೆರಕೆ ಪತ್ತೆಯಾಗಿದೆ.
ನಮ್ಮ ಪ್ರಾಡಕ್ಟ್ಸ್ಗಳೆಲ್ಲವೂ ಪರಿಶುದ್ಧ, 100 ಪರ್ಸೆಂಟ್ ಪ್ಯೂರ್ ಎಂದೆಲ್ಲಾ ಎಲ್ಲಾ ಕಂಪೆನಿಗಳು ಹೇಳಿಕೊಳ್ಳುವುದು ಮಾಮೂಲೆ. ಆದರೆ 90ಕ್ಕೂ ಅಧಿಕ ಉತ್ಪನ್ನಗಳಲ್ಲಿ ಕಲಬೆರಕೆಯೇ ಆಗುತ್ತಿದೆ. ಇದೇ ಕಾರಣಕ್ಕೆ ಇಂದು ಮಾರಣಾಂತಿಕ ರೋಗಗಳೂ ಬರುತ್ತಿವೆ. ಆದರೆ ಕೆಲವೊಂದು ಉತ್ಪನ್ನಗಳು ಭಾರಿ ಡೇಂಜರ್ ಆದ ಬಳಿಕ ಅವು ಗಮನಕ್ಕೆ ಬರುತ್ತಿವೆ. ಇದಾಗಲೇ ಕೆಲವೊಂದು ಪದಾರ್ಥಗಳು, ಕೃತಕ ಬಣ್ಣಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದರ ಹೊರತಾಗಿಯೂ ಉತ್ಪನ್ನಗಳ ಕಲಬೆರಕೆ ನಿಂತಿಲ್ಲ. ಇವುಗಳನ್ನು ಪ್ರಮೋಟ್ ಮಾಡಲು ಕೋಟಿ ಕೋಟಿ ಹಣ ಕೊಟ್ಟು ಸಿನಿಮಾ ತಾರೆಯರನ್ನು ಜಾಹೀರಾತಿಗೆ ಬಳಸಿಕೊಳ್ಳುವ ಕಾರಣದಿಂದ ಅವರ ಅಂಧ ಅಭಿಮಾನಿಗಳು ಅವರನ್ನೇ ಫಾಲೋ ಮಾಡುವುದು ನಡೆದೇ ಇದೆ.
ಯಾವೆಲ್ಲಾ ಕಂಪೆನಿಗಳಿಗೆ ದಂಡ?
ಇದೀಗ ಕೇಂದ್ರ ಸರ್ಕಾರವು, ಉತ್ಪನ್ನಗಳ ಪ್ಯಾಕೇಜಿಂಗ್ ವೆಬ್‌ಸೈಟ್ ಮತ್ತು ಡಿಜಿಟಲ್ ವೇದಿಕೆಗಳಲ್ಲಿ ʼ100 ಪರ್ಸೆಂಟ್ʼ ಎಂದು ಗ್ರಾಹಕರ ದಾರಿ ತಪ್ಪಿಸುವ ಜಾಹೀರಾತು ಪ್ರಕಟಿಸಿ ವಂಚಿಸುವ ಕಂಪನಿಗಳ ವಿರುದ್ಧ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ₹1 ಲಕ್ಷ ದಂಡ ವಿಧಿಸುವಂಥ ಕಠಿಣ ಕ್ರಮ ಕೈಗೊಳ್ಳುತ್ತಿದೆ. Storia Foods & Beverages ಮತ್ತು Mrs. Bectors Food Specialties Ltd. ಮೇಲೆ CCPA ತಲಾ ₹1 ಲಕ್ಷ ದಂಡ ವಿಧಿಸಲಾಗಿದೆ. ಅಲ್ಲದೇ, ಇಂಥ ಆಕ್ಷೇಪಾರ್ಹ ಜಾಹೀರಾತು, ವಹಿವಾಟು ತಕ್ಷಣವೇ ನಿಲ್ಲಿಸುವಂತೆ ಆದೇಶಿಸಲಾಗಿದೆ. ಈ ಕುರಿತು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಾಹಿತಿ ನೀಡಿದ್ದಾರೆ.
ಎಲ್ಲವೂ ಕಲಬೆರಕೆ
ಸ್ಟೋರಿಯಾ ಫುಡ್ಸ್ ಅಂಡ್ ಬೆವರೇಜಸ್ ಪ್ರೈ.ಲಿಮಿಟೆಡ್ ವಿರುದ್ಧ CCPA ಸ್ವಯಂ ಪ್ರೇರಿತವಾಗಿ ಕ್ರಮ ಕೈಗೊಂಡಿದೆ. ಈ ಕಂಪೆನಿ ಪರಿಶುದ್ಧದತೆ ಹೆಸರಿನಲ್ಲಿ ತೆಂಗಿನ ನೀರು, ದಾಳಿಂಬೆ ಜ್ಯೂಸ್ʼ, ಮಿಕ್ಸ್ಡ್ ಹಣ್ಣು ಜ್ಯೂಸ್ʼ, ಮಾವಿನ ಜ್ಯೂಸ್, ಪೇರಲ ಜ್ಯೂಸ್ ಎಂದೆಲ್ಲಾ ಮಾರಾಟ ಮಾಡುತ್ತಿದೆ. ಇದನ್ನು ನಂಬಿ ಹಲವರು ಇದನ್ನು ಖರೀದಿ ಮಾಡಿದ್ದಾರೆ. ಸ್ಟೋರಿಯಾದ ಅಧಿಕೃತ ವೆಬ್‌ಸೈಟ್ (shop.storiafoods.com), ಉತ್ಪನ್ನ ಪ್ಯಾಕೇಜಿಂಗ್‌ನಲ್ಲಿ ಮತ್ತು Amazon, Flipkart, BigBasket, Blinkit, JioMart ಮತ್ತು Zepto ಸೇರಿದಂತೆ ಇ-ಕಾಮರ್ಸ್ ವೇದಿಕೆಗಳಲ್ಲಿ ಸಹ ಹೀಗೆ ಜಾಹೀರಾತು ಇರುತ್ತಿತ್ತು.
ತೆಂಗಿನ ನೀರನ್ನು ಬೇರೆ ನೀರಿನೊಂದಿಗೆ ಬೆರೆಸಿ ತಯಾರಿಸಿರುತ್ತಿತ್ತು. ಆದರೆ, ಈ ಉತ್ಪನ್ನ ವರ್ಗ II ಸಂರಕ್ಷಕ INS 202 ಅನ್ನು ಸಹ ಒಳಗೊಂಡಿರುವುದು ತಿಳಿದುಬಂದಿದೆ. ಅದೇ ರೀತಿ ನೈಸರ್ಗಿಕ ಜ್ಯೂಸ್ ಎಂದು ಹೇಳಿದ ಉತ್ಪನ್ನಗಳೆಲ್ಲಾ ಕಲಬೆರಕೆಯಿಂದ ಕೂಡಿರುವುದು ಪ್ರಯೋಗಾಲದಲ್ಲಿ ತಿಳಿದು ಬಂದಿರುವ ಹಿನ್ನೆಲೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಇಷ್ಟೇ ಅಲ್ಲದೇ ಗೋಧಿ ಹಿಟ್ಟನ್ನು ಬಳಸುವವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅದನ್ನು ಬಂಡವಾಳ ಮಾಡಿಕೊಂಡಿರುವ ಈ ಕಂಪೆನಿ ಶುದ್ಧ ಗೋಧಿ ಹಿಟ್ಟು ಎಂದು ಹೇಳಿ ಮೋಸ ಮಾಡುತ್ತಿರುವುದು ತಿಳಿದಿದೆ. ಬ್ರೆಡ್ನಲ್ಲಿಯೂ ಕಲಬೆರಕೆ ಕಂಡುಬಂದಿದೆ. ಆದ್ದರಿಂದ ಜನರು ಜಾಹೀರಾತುಗಳಿಗೆ ಮೋಸ ಹೋಗಿ ಖರೀದಿ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.


