boyfriend killed widow: ಕೆಲ ದಿನಗಳ ಹಿಂದೆ ಕಾಲುವೆಯೊಂದರ ಬಳಿ ಮಹಿಳೆಯೊಬ್ಬರ ತಲೆ ಇಲ್ಲದ ಶವ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಮಹಿಳೆಯ ಬಾಯ್‌ಫ್ರೆಂಡ್ ಹಾಗೂ ಆತನ ಸಂಬಂಧಿಯನ್ನು ಬಂಧಿಸಿದ್ದಾರೆ. ಪ್ರಕರಣದ ಡಿಟೇಲ್ ಸ್ಟೋರಿ ಇಲ್ಲಿದೆ.

ಕಾಲುವೆ ಬಳಿ ಪತ್ತೆಯಾಗಿತ್ತು ಮಹಿಳೆಯ ತಲೆ ಇಲ್ಲದ ಮೃತದೇಹ

ಕೆಲ ದಿನಗಳ ಹಿಂದೆ ಕಾಲುವೆಯೊಂದರ ಬಳಿ ಮಹಿಳೆಯೊಬ್ಬರ ತಲೆ ಇಲ್ಲದ ಶವ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಮಹಿಳೆಯ ಬಾಯ್‌ಫ್ರೆಂಡ್ ಹಾಗೂ ಆತನ ಸಂಬಂಧಿಯನ್ನು ಬಂಧಿಸಿದ್ದಾರೆ. ಆರೋಪಿ ಕೊಲೆಯಾದ ಮಹಿಳೆಯ ಜೊತೆ ವರ್ಷಗಳಿಂದ ಸಹ ಜೀವನ ನಡೆಸುತ್ತಿದ್ದ ಇತ್ತೀಚೆಗೆ ಆತ ಬೇರೆ ಮದುವೆಯಾಗುವುದಕ್ಕೆ ಮುಂದಾಗಿದ್ದು, ಇದನ್ನು ಮಹಿಳೆ ವಿರೋಧಿಸಿದ್ದಾಳೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದು ಮಹಿಳೆಯ ಕೊಲೆಯಾಗಿದೆ. ಕೊಲೆಯಾದ ಮಹಿಳೆಯ ಪತಿ ತೀರಿಕೊಂಡಿದ್ದು, ಮಹಿಳೆಗೆ ಆ ದಾಂಪತ್ಯದಲ್ಲಿ ಮೂವರು ಹೆಣ್ಣು ಮಕ್ಕಳಿದ್ದಾರೆ. ಕೊಲೆ ಮಾಡಿದ ವ್ಯಕ್ತಿಯನ್ನು ವಿಕಾಸ್ ಕುಮಾರ್ ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶದ ಬುಲಂದ್‌ಶಹರ್‌ನ ನರಸೇನಾ ಪ್ರದೇಶದ ಹಳ್ಳಿಯ ಅರಣ್ಯ ಭಾಗದ ಕಾಲುವೆಯ ಬಳಿ ಈ ಕೊಲೆ ನಡೆದಿತ್ತು. ಕೊಲೆಯಾದ ಮಹಿಳೆಯನ್ನು 38 ವರ್ಷದ ಬಬ್ಲಿ ದೇವಿ ಎಂದು ಗುರುತಿಸಲಾಗಿದ್ದು, ಆಕೆ ಮೂಲತಃ ದೆಹಲಿಯ ಕಲ್ಯಾಣಪುರಿ ನಿವಾಸಿ.

Add Asianetnews Kannada as a Preferred SourcegooglePreferred

ಸೋಶಿಯಲ್ ಮೀಡಿಯಾದಿಂದ ಸಿಕ್ತು ಪ್ರಕರಣಕ್ಕೆ ರೋಚಕ ತಿರುವು

ಮಾರ್ಚ್ 15 ರಂದು ಘುಂಘ್ರಾವಲಿ ಗ್ರಾಮದಲ್ಲಿ ಈ ಬಬ್ಲಿದೇವಿಯ ಕೊಳೆತ ಶವ ಪತ್ತೆಯಾಗಿತ್ತು. ಆ ಸಮಯದಲ್ಲಿ ಯಾವುದೇ ತಕ್ಷಣದ ಸುಳಿವು ಸಿಗದ ಕಾರಣ, ಪೊಲೀಸರು ಮಾರ್ಚ್ 18 ರಂದು ಬಬ್ಲಿದೇವಿ ಶವವನ್ನು ಅಪರಿಚಿತ ಶವ ಎಂದು ಅಂತ್ಯಕ್ರಿಯೆ ನಡೆಸಿದ್ದರು. ಜೊತೆಗೆ ಅಕೆಯ ಗುರುತು ಪತ್ತೆಗಾಗಿ ಪೊಲೀಸರು ಸೋಶಿಯಲ್ ಮೀಡಿಯಾದಲ್ಲಿ ಆಕೆಯ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋವನ್ನು ಅವರ ಕುಟುಂಬದವರು ಸೋಶಿಯಲ್ ಮೀಡಿಯಾದಲ್ಲಿ ನೋಡಿ ಮಾರ್ಚ್‌ 22ರಂದು ಪೊಲೀಸರನ್ನು ಸಂಪರ್ಕಿಸಿದ ಬಳಿಕ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.

ಕ್ಯಾನ್ಸರ್‌ನಿಂದ ಸಾವನ್ನಪ್ಪಿದ ಮಹಿಳೆಯ ಪತಿ, ಆತನೊಂದಿಗೆ ಕೆಲಸ ಮಾಡುತ್ತಿದ್ದ ಆರೋಪಿ

ಬುಲಂದ್‌ಶಹರ್ ನಗರ ಎಸ್‌ಪಿ ಶಂಕರ್ ಪ್ರಸಾದ್ ಮಾತನಾಡಿ, ಪ್ರಕರಣದ ಪ್ರಮುಖ ಆರೋಪಿ ಬುಲಂದ್‌ಶಹರ್ ಮೂಲದ ವಿಕಾಸ್ ಕುಮಾರ್ (32) ಈ ಹಿಂದೆ ಬಬ್ಲಿಯವರ ದಿವಂಗತ ಪತಿಯೊಂದಿಗೆ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಕುಟುಂಬಕ್ಕೆ ಪರಿಚಿತನಾಗಿದ್ದನು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಎರಡೂವರೆ ವರ್ಷಗಳ ಹಿಂದೆ ಬಬ್ಲಿಯವರ ಪತಿ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ ನಂತರ ಬಬ್ಲಿ ಜೊತೆ ಸಂಬಂಧ ಬೆಳೆಸಿದ ಈ ವಿಕಾಸ್‌ಕುಮಾರ್ ಆಕೆಯ ಜೊತೆಗೆ ದೆಹಲಿಯಲ್ಲಿ ಜತೆಯಾಗಿ ವಾಸ ಮಾಡುವುದಕ್ಕೆ ಆರಂಭಿಸಿದ್ದನು. ಆದರೆ ಡಿಸೆಂಬರ್ 2025 ರಲ್ಲಿ ವಿಕಾಸ್ ಬೇರೆ ಯುವತಿಯ ಜೊತೆ ಮದುವೆಯಾಗಲು ನಿರ್ಧರಿಸಿದಾಗ ಇಬ್ಬರ ನಡುವಿನ ಸಂಬಂಧವು ಹಳಸಿದ್ದು, ಬಬ್ಲಿ ತನ್ನೊಂದಿಗೆ ಇರುವಂತೆ ವಿಕಾಸ್‌ಗೆ ಒತ್ತಡ ಹೇರುತ್ತಲೇ ಇದ್ದಳು.

ಅಜ್ಜಿ ಜೊತೆ ವಾಸ ಮಾಡ್ತಿದ್ದ ಮೂವರು ಹೆಣ್ಣು ಮಕ್ಕಳು

ಇತ್ತ ಬಾಬ್ಲಿಗೆ ಮೂವರು ಹೆಣ್ಣು ಮಕ್ಕಳಿದ್ದು, ಅವರು ತಮ್ಮ ಅಜ್ಜಿಯ ಜೊತೆ ವಾಸ ಮಾಡುತ್ತಿದ್ದರು. ಮಾರ್ಚ್ 15 ರಂದು, ಆರೊಪಿ ವಿಕಾಸ್ ಕುಮಾರ್ ಬಬ್ಲಿಯನ್ನು ಬುಲಂದ್‌ಶಹರ್‌ನಲ್ಲಿರುವ ತನ್ನ ಹಳ್ಳಿಗೆ ಬರುವಂತೆ ಪುಸಲಾಯಿಸಿದ್ದಾನೆ. ಆತನ ಕರೆಯ ಮೇರೆಗೆ ಬಬ್ಲಿ ಅಲ್ಲಿಗೆ ಹೋಗಿದ್ದಾರೆ.

ಇದನ್ನೂ ಓದಿ: ಮಕ್ಕಳಿಗೆ ದಾರಿ ತೋರಬೇಕಾದ ಶಿಕ್ಷಕಿಯೇ ದಾರಿ ತಪ್ಪಿದಳು: ಪ್ರಿಯಕರನೊಂದಿಗೆ ಸೇರಿ ಗಂಡನ ಮುಗಿಸಿದ ಸರ್ಕಾರಿ ಶಾಲೆ ಟೀಚರ್

ಆಕೆ ಅಲ್ಲಿಗೆ ತಲುಪಿದ ನಂತರ ವಿಕಾಸ್ ತನ್ನ ಸೋದರ ಸಂಬಂಧಿ ಸಚಿನ್ ಮತ್ತು ಸ್ನೇಹಿತ ಅಮನ್ ಕುಮಾರ್‌ಗೆ ಕರೆ ಮಾಡಿ ಅಲ್ಲಿಗೆ ಕರೆಸಿಕೊಂಡಿದ್ದಾನೆ. ನಂತರ ಮೂವರು ಮದ್ಯ ಸೇವಿಸಿದ್ದು, ಬಳಿಕ ಆಕೆಯ ಕೈಕಾಲುಗಳನ್ನು ಕಟ್ಟಿ ಹರಿತವಾದ ಆಯುಧದಿಂದ ಅವಳ ಶಿರಚ್ಛೇದ ಮಾಡಿದ್ದಾರೆ. ಬಳಿಕ ಆಕೆಯ ಗುರುತು ಮರೆಮಾಡಲು ಅವಳ ತಲೆಯನ್ನು ಸುಮಾರು 500 ಮೀಟರ್ ದೂರದಲ್ಲಿ ಎಸೆದಿದ್ದಾರೆ. ಈ ಭೀಕರ ಕೃತ್ಯದ ನಂತರ, ವಿಕಾಸ್ ತನ್ನ ಗ್ರಾಮದಲ್ಲಿ ನಡೆದ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ನಂತರ ಮದುವೆಯೂ ಆಗಿದ್ದು, ನಂತರ ಗಾಜಿಯಾಬಾದ್‌ನ ಮುರಾದ್‌ನಗರಕ್ಕೆ ಮರಳಿದನು. ಪೊಲೀಸರನ್ನು ದಾರಿ ತಪ್ಪಿಸಲು ಆತನೂ ಬಬ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದನು.

ಇದನ್ನೂ ಓದಿ: ಪ್ರಧಾನಿ ಜೊತೆಗೆ ಸೆಲ್ಫಿ ತಗೊಂಡು ವೋಟ್ ಹಾಕಲ್ಲ ಎಂದ ಯುವಕನಿಗೆ ಮೆಲೋನಿ ಕೊಟ್ಟ ಉತ್ತರಕ್ಕೆ ನೆಟ್ಟಿಗರು ಫಿದಾ!

ಸಿಸಿಟಿವಿ ದೃಶ್ಯಾವಳಿಯ ಪರಿಶೀಲನೆ ಬಳಿಕ ಅಪರಾಧ ನಡೆದ ಸ್ಥಳದಲ್ಲಿ ಆತನ ಇರುವಿಕೆಯನ್ನು ನಾವು ಪತ್ತೆ ಮಾಡಿದ್ದೇವೆ. ಆತನನ್ನು ನಂತರ ಮುರಾದ್‌ನಗರದಲ್ಲಿ ಬಂಧಿಸಲಾಯಿತು. ನಂತರ ಬುಲಂದ್‌ಶಹರ್‌ನಲ್ಲಿ ಅಮನ್‌ನನ್ನು ಬಂಧಿಸಲಾಯಿತು. ಬಬ್ಲಿಯನ್ನು ಕೊಲ್ಲಲು ಬಳಸಿದ ಆಯುಧ ಮತ್ತು ಅಕ್ರಮ ಬಂದೂಕುಗಳು ಮತ್ತು ಬೈಕ್‌ನ್ನು ವಶಕ್ಕೆ ಪಡೆಯಲಾಗಿದೆ. ವಿಕಾಸ್ ಮತ್ತು ಅಮನ್ ತಮ್ಮ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾರೆ. ಸಚಿನ್‌ನನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಎಸ್‌ಪಿ ಹೇಳಿದ್ದಾರೆ.