ಬೆಂಗಳೂರಿನ ಸುದ್ದಗುಂಟೆ ಪಾಳ್ಯದಲ್ಲಿ ಯುವಕನೋರ್ವ ಟೀ ಮತ್ತು ಸಿಗರೇಟ್ ಕೊಡದ್ದಕ್ಕೆ ಬೇಕರಿಯೊಂದರಲ್ಲಿ ದಾಂಧಲೆ ನಡೆಸಿ, ಗಾಜುಗಳನ್ನು ಒಡೆದು ಹಾಕಿದ್ದಾನೆ.
ಬೆಂಗಳೂರು: ಫ್ರಿಯಾಗಿ ಟೀ, ಸಿಗರೇಟ್ ಕೊಟ್ಟಿಲ್ಲ ಅಂತ ಯುವಕನೋರ್ವ ಬೇಕರಿಯಲ್ಲಿ ದಾಂಧಲೆ ನಡೆಸಿದ್ದು, ಅಲ್ಲಿನ ಗಾಜುಗಳನ್ನು ಒಡೆದು ಹಾಕಿ ಕಿರುಕುಳ ನೀಡಿದ್ದಾನೆ. ಬೆಂಗಳೂರಿನ ಸುದ್ದಗುಂಟೆ ಪಾಳ್ಯದ ಕೃಷ್ಣಮೂರ್ತಿ ಲೇಔಟ್‌ನಲ್ಲಿ ಈ ಘಟನೆ ನಡೆದಿದೆ. ಯುವಕರನ ಹಾವಳಿ ತಡೆಯಲಾಗದೇ ಪೊಲೀಸರಿಗೆ ದೂರು ನೀಡುವುದಾಗಿ ಮಾಲೀಕರು ಹೇಳಿದಾಗ ಆ ಯುವಕ ಪೊಲೀಸರಿಗೂ ಅವಾಚ್ಯ ಶಬ್ಧಗಳಿಂದ ನಿಂದಿಸಿ ಪೊಲೀಸರು ಏನು ಮಾಡ್ತಾರೆ, ತಾಕತ್ತಿದ್ದರೆ ತನ್ನ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಪೊಲೀಸರಿಗೂ ಸವಾಲು ಹಾಕಿ ನಿಂದಿಸಿದ್ದಾನೆ ಎಂದು ವರದಿಯಾಗಿದೆ.
ಇದಾದ ನಂತರ ಬೇಕರಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ಸುದ್ದಗುಂಟೆ ಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸುದ್ದಗುಂಟೆ ಪಾಳ್ಯದ ಎಸ್‌ಜಿ ಬೇಕ್ಸ್ & ಜ್ಯೂಸ್‌ನಲ್ಲಿ ಈ ಘಟನೆ ನಡೆದಿದೆ. ಬೇಕರಿ ಮಾಲೀಕ ರಮ್ಸಿದ್ ಸೈಫುಲ್ಲಾ ತಮ್ಮ ದೂರಿನಲ್ಲಿ 20 ವರ್ಷದ ಅಪ್ಪಿ ಎಂಬಾತ ಮಧ್ಯಾಹ್ನ 12.30ರ ಸುಮಾರಿಗೆ ಬೇಕರಿಗೆ ಆಗಮಿಸಿ ಸಿಗರೇಟ್ ಹಾಗೂ ಟೀ ಕೊಡುವಂತೆ ಕೇಳಿದ್ದಾನೆ. ಈ ವೇಳೆ ಮಾಲೀಕ ಹಣ ಕೊಟ್ಟ ನಂತರವೇ ಕೊಡುವುದಾಗಿ ಹೇಳಿದ್ದಾರೆ. ಏಕೆಂದರೆ ಅಪ್ಪಿ ಈ ಹಿಂದೆಯೂ ಈ ಅಂಗಡಿಗೆ ಭೇಟಿ ನೀಡಿ ಸಿಗರೇಟ್ ಹಾಗೂ ಚಹಾ ಪಡೆದು ಹಣ ನೀಡದೇ ಹೊರಟು ಹೋಗುತ್ತಿದ್ದ, ಹೀಗಾಗಿ ಬೇಕರಿ ಮಾಲೀಕ ಆತನಿಗೆ ಸಿಗರೇಟ್ ಹಾಗೂ ಚಹಾ ಕೊಡಲು ನಿರಾಕರಿಸಿದ್ದಾರೆ.
ಇದರಿಂದ್ದ ಸಿಟ್ಟಿಗೆದ್ದ ಅಪ್ಪಿ, ಸೈಫುಲ್ಲಾನನ್ನು ನಿಂದಿಸಲು ಶುರು ಮಾಡಿದ್ದಾನೆ. ಬೆದರಿಕೆಯನ್ನು ಹಾಕಿದ್ದಾನೆ. ಆದರೂ ಆತನಿಗೆ ಬೇಕಾದ ವಸ್ತುವನ್ನು ಕೊಡದೇ ಇದ್ದಾಗ ಆತ ಬೇಕರಿಯಲ್ಲಿ ಆಹಾರವನ್ನು ಸಂಗ್ರಹಿಸುವ ಗ್ಲಾಸ್‌ನ ಕಂಟೈನರ್‌ಗಳನ್ನು ರಸ್ತೆ ಮೇಲೆ ಹಾಕಿ ಒಡೆದು ಹಾಕಿದ್ದಾನೆ. ಕಳೆದ ವಾರವೇ ಈ ಘಟನೆ ನಡೆದಿದೆ. ಆದರೆ ಇವನ ಕೃತ್ಯದಿಂದ ಭಯಗೊಂಡ ಬೇಕರಿ ಮಾಲೀಕ ಆರಂಭದಲ್ಲಿ ದೂರು ನೀಡಿರಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಅವರು ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು. ಇದರ ವೀಡಿಯೋ ನಂತರ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ನಂತರವಷ್ಟೇ ಬೇಕರಿ ಮಾಲೀಕ ಸೈಫುಲ್ಲಾ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಅಪ್ಪಿ, ಮದ್ಯ ಅಥವಾ ಮಾದಕದ್ರವ್ಯದ ಅಮಲಿನಲ್ಲಿದ್ದಿರಬಹುದು ಎಂಬ ಅನುಮಾನವಿದೆ ಎಂದು ಪೊಲೀಸರು ಹೇಳಿದ್ದಾರೆ.
ಸ್ಥಳೀಯರ ಪ್ರಕಾರ, ಈ ಅಪ್ಪಿ ಬಣ್ಣ ಬಳಿಯುವ ಪೇಂಟರ್ ಕೆಲಸ ಮಾಡುತ್ತಿದ್ದು, ಆಗಾಗ ಸ್ಮಶಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಮಯ ಕಳೆಯುತ್ತಿದ್ದ, ಆತನ ಬಂಧನಕ್ಕೆ ಈಗ ಪೊಲೀಸರು ಬಲೆ ಬೀಸಿದ್ದಾರೆ.
