Doctor uses Fevikwik on child: ಮೀರತ್‌ನ ಖಾಸಗಿ ಆಸ್ಪತ್ರೆಯ ವೈದ್ಯರೊಬ್ಬರು ಮಗುವಿನ ತಲೆಯ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಚ್ಚಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಘಟನೆಗೆ ಸಬಂಧಿಸಿದಂತೆ ದೂರು ದಾಖಲಾಗಿದ್ದು, ಇಲ್ಲಿದೆ ಡಿಟೇಲ್ ಸ್ಟೋರಿ…

ಗಾಯಕ್ಕೆ ಸ್ಟಿಚ್ ಹಾಕುವ ಬದಲು ಫೆವಿಕ್ವಿಕ್ ಹಾಕಿದ ವೈದ್ಯ:

ಉತ್ತರ ಪ್ರದೇಶದ ಮೀರತ್‌ನಲ್ಲಿ ವೈದ್ಯರೊಬ್ಬರು ಮಗುವಿನ ಗಾಯಕ್ಕೆ ಹೊಲಿಗೆ ಹಾಕುವ ಬದಲು ಫಾಸ್ಟ್ ಗಮ್ ಆದ ಫೆವಿಕ್ವಿಕ್ ಹಾಕಿದ್ದಾರೆ ಎಂದು ಮಗುವಿನ ಪೋಷಕರು ಆರೋಪಿಸಿದ್ದು ಪ್ರಕರಣ ದಾಖಲಾಗಿದೆ. ಫೆವಿಕ್ವಿಕ್ ಹೆಸರಿನ ಈ ಫಾಸ್ಟ್‌ಗಮ್ ಅನ್ನು ಚಪ್ಪಲಿ ಹೊಲಿಗೆ ಬಿಟ್ಟಾಗ ಅಥವಾ ಇನ್ನಾವುದಾದರು ಒಡೆದ ವಸ್ತುಗಳನ್ನು ಅಂಟಿಸುವುಕ್ಕೆ ಬಳಸುತ್ತಾರೆ. ಆದರೆ ಇಲ್ಲಿ ವೈದ್ಯ ಮಗುವಿನ ತಲೆಯ ಗಾಯಕ್ಕೆ ಫೆವಿಕ್ವಿಕ್ ಹಾಕಿದ್ದು, ಇದರಿಂದ ನೋವು ತಾಳಲಾರದೇ ಮಗು ಮತ್ತಷ್ಟು ಅಳಲು ಶುರು ಮಾಡಿದೆ. ಮೀರತ್‌ನ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು ರಕ್ತಸ್ರಾವದಿಂದ ಬಳಲುತ್ತಿದ್ದ ಮಗುವಿನ ಗಾಯಕ್ಕೆ ಹೊಲಿಗೆ ಹಾಕುವ ಬದಲು ವೈದ್ಯರು ಫೆವಿಕ್ವಿಕ್ ಹಾಕಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಮೇಜು ತಾಗಿ ಗಾಯಗೊಂಡಿದ್ದ ಮಗು:

ಮೀರತ್‌ನ ಜಾಗೃತಿ ವಿಹಾರ್ ಪ್ರದೇಶದ ಐಷಾರಾಮಿ ಅಪಾರ್ಟ್‌ಮೆಂಟ್ ಒಂದರಲ್ಲಿ ಕುಟುಂಬದೊಂದಿಗೆ ವಾಸಿಸುವ ಸರ್ದಾರ್ ಜಸ್ಪಿಂದರ್ ಸಿಂಗ್ ಎಂಬುವವರ ಪುಟ್ಟ ಮಗ ಮನೆಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಮೇಜಿನ ಮೂಲೆಗೆ ಅವರ ತಲೆಗೆ ಬಡಿದು ರಕ್ತಸ್ರಾವವಾಗಲು ಆರಂಭವಾಗಿದೆ. ಹೀಗಾಗಿ ಕೂಡಲೇ ಕುಟುಂಬದವರು ಅವರನ್ನು ಸಮೀಪದ ಭಾಗ್ಯಶ್ರೀ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು ಅಲ್ಲಿ ಮಗುವನ್ನು ಪರೀಕ್ಷಿಸಿದ ವೈದ್ಯರು ಮಗುವಿನ ಗಾಯಕ್ಕೆ ಸ್ಟಿಚ್ ಹಾಕುವ ಬದಲು 5 ರೂ. ಬೆಲೆಯ ಫೆವಿಕ್ವಿಕ್ ಟ್ಯೂಬ್ ಖರೀದಿಸಿ ಗಾಯಕ್ಕೆ ಹಾಕುವಂತೆ ಹೇಳಿದರು ಎಂದು ಪೋಷಕರು ದೂರಿದ್ದಾರೆ.

ಇದಾದ ಬಳಿಕ ಮಗು ರಾತ್ರಿಯೆಲ್ಲಾ ಅಳುತ್ತಲೇ ಇತ್ತು. ಆದರೆ ವೈದ್ಯರು ಮಗು ಜಸ್ಟ್ ನರ್ವಸ್ ಆಗಿದೆ ನೋವು ನಿಧಾನವಾಗಿ ಕಡಿಮೆ ಆಗುತ್ತದೆ ಎಂದು ಹೇಳಿದ್ದಾರೆ. ಈ ಮಧ್ಯೆ ಮಗುವಿನ ಅಳು ಹೆಚ್ಚಾದಾಗ ಪೋಷಕರು ಮಗುವನ್ನು ಮರುದಿನ ಲೋಕಪ್ರಿಯಾ ಹೆಸರಿನ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಈ ಮಗುವಿನ ಗಾಯದ ಮೇಲಿದ್ದ ಫೆವಿಕ್ವಿಕ್ ಗಮ್ ಅನ್ನು ತೆಗೆಯುವುದಕ್ಕೆ ಸುಮಾರು 3 ಗಂಟೆಗಳನ್ನು ತೆಗೆದುಕೊಂಡಿದ್ದಾರೆ. ಗಮ್ ತೆಗೆದು ಗಾಯವನ್ನು ಸ್ವಚ್ಛಗೊಳಿಸಿದ ಬಳಿಕ ಅವರು ಗಾಯಕ್ಕೆ 4 ಸ್ಟಿಚ್‌ಗಳನ್ನು ಹಾಕಿದ್ದಾರೆ.

ಒಂದು ವೇಳೆ ಈ ಫೆವಿಕ್ವಿಕ್ ಮಗುವಿನ ಕಣ್ಣಿಗೇನಾದರೂ ಲೀಕ್ ಆಗಿದ್ದರೆ ಇದು ಮತ್ತಷ್ಟು ಗಂಭೀರ ಸಮಸ್ಯೆಗೆ ತಿರುಗುತ್ತಿತ್ತು ಎಂದು ಮಗುವಿನ ಪೋಷಕರು ಹೇಳಿದ್ದಾರೆ. ಮೀರತ್ ಮುಖ್ಯ ವೈದ್ಯಾಧಿಕಾರಿ ಡಾ. ಅಶೋಕ್ ಕಟಾರಿಯಾ ಅವರು ಈ ವಿಷಯವನ್ನು ತಮ್ಮ ಗಮನಕ್ಕೆ ತರಲಾಗಿದೆ ಎಂದು ದೃಢಪಡಿಸಿದ್ದಾರೆ. ಮಗುವಿನ ಕುಟುಂಬ ದೂರು ದಾಖಲಿಸಿದೆ. ಘಟನೆಗೆ ತನಿಖಾ ಸಮಿತಿಯನ್ನು ರಚಿಸಲಾಗಿದೆ ಮತ್ತು ಪರಿಶೀಲನೆಯ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ವಿಚಾರಣೆಯಲ್ಲಿ ಪ್ರಮಾಣಿತ ವೈದ್ಯಕೀಯ ಶಿಷ್ಟಾಚಾರಗಳನ್ನು ಉಲ್ಲಂಘಿಸಲಾಗಿದೆಯೇ ಮತ್ತು ಭಾಗಿಯಾಗಿರುವ ವೈದ್ಯರ ವಿರುದ್ಧ ಯಾವುದೇ ಶಿಸ್ತು ಅಥವಾ ಕಾನೂನು ಕ್ರಮ ಅಗತ್ಯವೇ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಉತ್ತರ ಪ್ರದೇಶ ಸಿಎಂ ಕಚೇರಿಗೂ ಕುಟುಂಬ ಈ ವೈದ್ಯರ ಅವಾಂತರದ ಬಗ್ಗೆ ತಿಳಿಸಿದೆ.

ಇದನ್ನೂ ಓದಿ: 2ನೇ ಮದುವೆ ಕನಸಿನಲ್ಲಿದ್ದವನಿಗೆ ಆಘಾತ: ಸಾಕ್ಷಿ ಸಮೇತ ವೇದಿಕೆ ಮೇಲೆ ಬಂದ ಮೊದಲ ಪತ್ನಿ

ಇದನ್ನೂ ಓದಿ: ಪಹಲ್ಗಾಂ ದಾಳಿ ನಡೆಸಿದ್ದು ಉಗ್ರರಲ್ಲ ಅದು ಭಾರತದೊಳಗಿನ ಬಂಡಾಯದಿಂದ ಆದದ್ದು ಅಮೆರಿಕಾ ಹೊಸ ಆಟ