ಸಾಮಾಜಿಕ ಜಾಲತಾಣದ ವದಂತಿಯನ್ನು ನಂಬಿ, ಭೋಪಾಲ್‌ನಲ್ಲಿ ಗ್ಯಾಂಗ್ ಒಂದು 16 ವರ್ಷದ ಬಾಲಕನನ್ನು ಕೊಂದು ಆತನ ವೃಷಣವನ್ನು ಕತ್ತರಿಸಿದೆ. ಖರೀದಿದಾರರು ಸಿಗದಿದ್ದಾಗ ಸಾಕ್ಷ್ಯ ನಾಶಪಡಿಸಲು ಕೆರೆಗೆ ಎಸೆದಿದ್ದು, ಪೊಲೀಸರು ಈಗ ಆ ಅಂಗಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಭೋಪಾಲ್‌ (ಆ.19): ಸಾಮಾಜಿಕ ಜಾಲತಾಣದ ವೈರಲ್ ವಿಡಿಯೋವೊಂದನ್ನು ನೋಡಿ ಹಾದಿತಪ್ಪಿದ ಗ್ಯಾಂಗ್‌ ಒಂದು 16 ವರ್ಷದ ಬಾಲಕನನ್ನು ಭೀಕರವಾಗಿ ಕೊಲೆ ಮಾಡಿ, ಆತನ ಎರಡೂ ವೃಷಣ ಕತ್ತರಿಸಿಕೊಂಡು ಪರಾರಿಯಾಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬೆಳಕಿಗೆ ಬಂದಿದೆ. ಕೊಲೆಯಾದ ಬಾಲಕನ ಖಾಸಗಿ ಅಂಗಗಳನ್ನು ಪತ್ತೆಹಚ್ಚಲು ಪೊಲೀಸರು ಈಗ ಭೋಪಾಲ್‌ನ ಎರಡು ಬೃಹತ್ ಕೆರೆಗಳಲ್ಲಿ ಡೈವರ್ಸ್‌ ಮೂಲಕ ಶೋಧ ಕಾರ್ಯ ಆರಂಭಿಸಿದ್ದಾರೆ.

ಗಲ್ಫ್ ದೇಶಗಳಲ್ಲಿ ಪುರುಷರ ಖಾಸಗಿ ಅಂಗ ವೃಷಣಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯವಿದೆ ಎಂಬ ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಸಾಮಾಜಿಕ ಜಾಲತಾಣದ ಸುಳ್ಳು ವದಂತಿಯನ್ನು ನಂಬಿದ 20 ವರ್ಷದ ಬಿಬಿಎ ವಿದ್ಯಾರ್ಥಿಯೊಬ್ಬ 5 ಜನರ ಗ್ಯಾಂಗ್ ಕಟ್ಟಿಕೊಂಡು ಈ ಕೃತ್ಯ ಎಸಗಿದ್ದಾನೆ.

1.2 ಕೋಟಿ ರೂ.ಗೆ ಮಾರಾಟ ಮಾಡಲು ಹೊಂಚು

ಇಕ್ಬಾಲ್ ಮೈದಾನ ಮತ್ತು ಮೋತಿ ಮಸೀದಿ ಸುತ್ತಮುತ್ತ ಪೆನ್ ಹಾಗೂ ಕೀ ಚೈನ್ ಮಾರಾಟ ಮಾಡುತ್ತಿದ್ದ 16 ವರ್ಷದ ಬಾಲಕನನ್ನು ಗ್ಯಾಂಗ್ ಅಪಹರಿಸಿ ಕೊಲೆ ಮಾಡಿತ್ತು. ಆತನ ವೃಷಣವನ್ನು 1.2 ಕೋಟಿ ರೂಪಾಯಿಗೆ ಮಾರಾಟ ಮಾಡಲು ಯೋಜನೆ ರೂಪಿಸಲಾಗಿತ್ತು.

ಕೊಲೆ ಮಾಡಿ ವೃಷಣವನ್ನು ಕತ್ತರಿಸಿದ ನಂತರ, ಗ್ಯಾಂಗ್ ಅದನ್ನು ಮನೆ ಮೇಲ್ಛಾವಣಿಯ ಮೇಲಿದ್ದ ಐಸ್ ಬಾಕ್ಸ್‌ನಲ್ಲಿ ಇಟ್ಟು ಎರಡು ದಿನಗಳ ಕಾಲ ಖರೀದಿದಾರರಿಗಾಗಿ ಹುಡುಕಾಟ ನಡೆಸಿತ್ತು. ಆದರೆ ಯಾವುದೇ ಖರೀದಿದಾರರು ಸಿಗದಿದ್ದಾಗ, ಪ್ರಮುಖ ಆರೋಪಿ ಜೋಹೆಬ್ (20) ಸೂಚನೆಯಂತೆ ಆ ಅಂಗಗಳನ್ನು ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ನಗರದ ಬಡಾ ತಾಲಾಬ್ (ಅಪ್ಪರ್ ಲೇಕ್) ಮತ್ತು ಚೋಟಾ ತಾಲಾಬ್ (ಲೋವರ್ ಲೇಕ್) ಕೆರೆಗಳಿಗೆ ಪ್ರತ್ಯೇಕವಾಗಿ ಎಸೆಯಲಾಗಿತ್ತು.

ನಕಲಿ ಡಾಕ್ಟರ್ ಅವತಾರ ತಾಳಿದ್ದ ಮಾಸ್ಟರ್ ಮೈಂಡ್

ಪ್ರಮುಖ ಆರೋಪಿ ಜೋಹೆಬ್ ಆನ್‌ಲೈನ್‌ನಲ್ಲಿ ಏಪ್ರಾನ್, ಸ್ಟೆತೊಸ್ಕೋಪ್ ಹಾಗೂ ಥರ್ಮಾಮೀಟರ್ ಖರೀದಿಸಿದ್ದ. ತನ್ನ ಜೊತೆಗಿದ್ದ ಇತರ ಆರೋಪಿಗಳಿಗೆ ತಾನು ಡಾಕ್ಟರ್ ಎಂದು ನಂಬಿಸಿ, ಖಾಸಗಿ ಅಂಗವನ್ನು ಹೇಗೆ ಕತ್ತರಿಸಿ ತೆಗೆಯಬೇಕು ಎಂಬುದಕ್ಕೆ ತರಬೇತಿ ನೀಡಲು ಈ ವಸ್ತುಗಳನ್ನು ಬಳಸಿದ್ದ ಎನ್ನಲಾಗಿದೆ. ಪೊಲೀಸರು ಪ್ರಸ್ತುತ ಈ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸದ್ಯ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ಅವರು ವೃಷಣವನ್ನು ಎಸೆದ ಜಾಗಗಳನ್ನು ಗುರುತಿಸಲಾಗಿದೆ. ಆದರೆ, ಆಳವಾದ ಮತ್ತು ಕೆಸರಿನಿಂದ ಕೂಡಿದ ಕೆರೆಯ ನೀರಿನಲ್ಲಿ ಚಿಕ್ಕ ಅಂಗಾಂಶಗಳನ್ನು ಪತ್ತೆಹಚ್ಚುವುದು ವಿಧಿವಿಜ್ಞಾನ (ಫೊರೆನ್ಸಿಕ್) ತಂಡ ಹಾಗೂ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಸಹಾಯಕ ಪೊಲೀಸ್ ಕಮಿಷನರ್ (ACP) ಸಂತೋಷ್ ಪಟೇಲ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

ಸಂಘಟಿತ ಜಾಲವಲ್ಲ, ವೈರಲ್ ವಿಡಿಯೋ ಪ್ರಭಾವ:

ತನಿಖಾಧಿಕಾರಿಗಳ ಪ್ರಕಾರ, ಇದು ಯಾವುದೇ ಬೃಹತ್ ಸಂಘಟಿತ ಅಂಗಾಂಗ ದಂಧೆಯ ಜಾಲವಲ್ಲ. ಬದಲಾಗಿ ಇನ್‌ಸ್ಟಾಗ್ರಾಮ್ ರೀಲ್ಸ್ ನೋಡಿ ಹಣದ ಆಸೆಗೆ ಬಿದ್ದು ಮಾಡಿದ ಕೃತ್ಯವಾಗಿದೆ. ಆರೋಪಿಗಳು ಈ ಅಂಗಗಳನ್ನು ಮಾರಾಟ ಮಾಡಲು ಸ್ಥಳೀಯವಾಗಿ ಯಾರನ್ನೆಲ್ಲಾ ಸಂಪರ್ಕಿಸಿದ್ದರು ಎಂಬುದರ ಕುರಿತು ವಿಚಾರಣೆ ನಡೆಯುತ್ತಿದೆ. ಖಾಸಗಿ ಅಂಗಗಳು ಪತ್ತೆಯಾದರೆ ಕೊಲೆ ಪ್ರಕರಣಕ್ಕೆ ಪ್ರಬಲ ವೈಜ್ಞಾನಿಕ ಸಾಕ್ಷ್ಯ ಸಿಗಲಿದೆ.