ಬೆಂಗಳೂರಿನ ಮತ್ತಿಕೆರೆಯಲ್ಲಿ, ದಂಪತಿಯೊಬ್ಬರು ನಡುರಸ್ತೆಯಲ್ಲಿ ಜಗಳವಾಡಿ ತಮ್ಮ ಮಗುವನ್ನೇ ಬೀದಿಗೆ ಎಸೆದು ಹೋಗಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಈ ಅಮಾನುಷ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸ್ಥಳೀಯರು ಮಗುವನ್ನು ರಕ್ಷಿಸಿ, ಮರಳಿ ಬಂದ ಪೋಷಕರಿಗೆ ಅದನ್ನು ಹಿಂದಿರುಗಿಸಲು ನಿರಾಕರಿಸಿದ್ದಾರೆ.
ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಮಾತನ್ನು ನೀವು ಕೇಳಿರಬಹುದು. ಇಲ್ಲಿ ಈ ಗಾದೆ ಮಾತು ನಿಜವಾಗಿದೆ. ಗಂಡ ಹೆಂಡತಿ ಇಬ್ಬರು ಬೀದಿಯಲ್ಲಿ ಪರಸ್ಪರ ಜಗಳವಾಡಿ ಮಗುವನ್ನು ಬೀದಿಯಲ್ಲಿ ಎಸೆದು ಹೋಗಿದ್ದಾರೆ. ಬೆಂಗಳೂರಿನ ಯಶವಂತಪುರ ಸಮೀಪದ ಮತ್ತಿಕೆರೆಯಲ್ಲಿ ಈ ಅಮಾನುಷ ಘಟನೆ ನಡೆದಿದೆ. ಘಟನೆಯ ವೀಡಿಯೋ ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ನೆಟ್ಟಿಗರು ಗಂಡ ಹೆಂಡತಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಗಂಡ ಹೆಂಡತಿ ಮಗು ಬೈಕೊಂದರಲ್ಲಿ ಆ ಪ್ರದೇಶಕ್ಕೆ ಬಂದಿದ್ದಾರೆ. ಗಂಡ ನಡುರಸ್ತೆಯಲ್ಲಿಯೇ ಬೈಕನ್ನು ನಿಲ್ಲಿಸಿದ್ದು, ಗಂಡ ಹೆಂಡತಿ ನಡುರಸ್ತೆಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಹೊಡೆದಾಟದಲ್ಲಿ ಪತ್ನಿ ಕೆಳಗೆ ಬಿದ್ದಿದ್ದಾಳೆ. ಆದರೆ ಮಗು ಮಾತ್ರ ಬೈಕ್‌ನಲ್ಲೇ ಕುಳಿತಿತ್ತು. ಹೆಂಡತಿ ಕೆಳಗೆ ಬಿದ್ದ ನಂತರ ಗಂಡ ಮಗುವನ್ನು ಬೈಕ್‌ನಿಂದ ಎತ್ತಿ ನೆಲಕ್ಕೆ ಕುಕ್ಕಿದ್ದಾನೆ. ನಂತರ ಮಗು ನೆಲದಲ್ಲಿ ಬಿದ್ದು ಅಳುತ್ತಿದ್ದರೆ, ಇತ್ತ ಗಂಡ ಹೆಂಡತಿ ಕಿತ್ತಾಟ ಮುಂದುವರೆಸಿದ್ದಾರೆ. ಅಷ್ಟರಲ್ಲಿ ಅಲ್ಲಿ ಬೊಬ್ಬೆ ಕೇಳಿ ಅಕ್ಕ ಪಕ್ಕದ ಮನೆಯವರು ಆಗಮಿಸಿದ್ದಾರೆ. ಜಗಳದ ನಂತರ ಗಂಡ ಹೆಂಡತಿ ಮಗುವನ್ನು ಬಿಟ್ಟು ಬೈಕ್ ಏರಿ ಹೊರಟು ಹೋಗಲು ಮುಂದಾಗಿದ್ದಾನೆ. ಆದರೆ ಬಿಡದ ಹೆಂಡತಿ ತಾನು ಕೂಡ ಬೈಕ್ ಏರಿ ಕುಳಿತಿದ್ದು, ಇಬ್ಬರು ಮಗುವನ್ನು ಬೀದಿಯಲ್ಲೇ ಬಿಟ್ಟು ಅಲ್ಲಿಂದ ಹೊರಟು ಹೋಗಿದ್ದಾರೆ. ನಂತರ ಅಲ್ಲಿನ ಸ್ಥಳೀಯ ನಿವಾಸಿಗಳು ಬೀದಿಯಲ್ಲಿ ಬಿದ್ದು ಅಳುತ್ತಿದ್ದ ಮಗುವನ್ನು ಎತ್ತಿಕೊಂಡು ಸಮಾಧಾನಿಸಿದ್ದಾರೆ. ಇಂದು ಮುಂಜಾನೆ ಈ ಘಟನೆ ನಡೆದಿದೆ.
ಇದನ್ನೂ ಓದಿ: ಈ ಪಾಕಿಸ್ತಾನಿ ನಾಯಕನ ಹೆಸರಿನಲ್ಲಿ ಮುಂಬೈನಲ್ಲಿ ಇನ್ನೂ ಇದೆ 2.5 ಎಕರೆಯ ಬೃಹತ್ ಬಂಗ್ಲೆ
ಮಾಹಿತಿಯ ಪ್ರಕಾರ ಮಗುವನ್ನು ಬಿಟ್ಟು ಹೋದ ದಂಪತಿ ಕೆಲ ಹೊತ್ತಿನಲ್ಲಿ ಮಗುವಿಗಾಗಿ ವಾಪಸ್ ಅಲ್ಲಿಗೆ ಆಗಮಿಸಿದ್ದಾರೆ. ಆದರೆ ಮಗುವಿಗೂ ಈ ದಂಪತಿ ಹೊಡೆದಾಟದ ವೇಳೆ ಥಳಿಸಿದ್ದಾರೆ ಎನ್ನಲಾಗಿದ್ದು, ಹೀಗಾಗಿ ಮಗುವನ್ನ ಪೋಷಕರ ಕೈಗೆ ವಾಪಸ್ ನೀಡುವುದಕ್ಕೆ ಅಲ್ಲಿನ ನಿವಾಸಿಗಳು ನಿರಾಕರಿಸಿದ್ದಾರೆ. ನಿಮಗೆ ಮಗು ನೀಡಿದರೆ ನೀವೂ ಮತ್ತೆ ಎಲ್ಲೋ ಬಿಟ್ಟು ಹೋಗ್ತೀರಾ ಎಂದು ಅಲ್ಲಿನ ನಿವಾಸಿಗಳು ದಂಪತಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದ್ದು, ವೀಡಿಯೋ ನೋಡಿದ ಅನೇಕರು ಈ ಗಂಡ ಹೆಂಡತಿಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂಥಾ ದರಿದ್ರ ಕಾಲ ಬಂತು ಎಂದು ಒಬ್ಬರು ಕಾಲಕ್ಕೆ ಬೈದರೆ, ಮತ್ತೊಬ್ಬರು ಇವರೆನು ತಿಳಿದವರೋ ತಿಳಿಯದವರೋ ಇವ್ರೆಲ್ಲಾ ಓದಿದವರು ಎಂಥಾ ಜನಗಳಪ್ಪ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ವಂದೇ ಭಾರತ್ ರೈಲಿನಲ್ಲಿ ರೋಮ್ಯಾನ್ಸ್ ಮಾಡಿ ವೈರಲ್ ಆದ ಜೋಡಿಗೆ ಮದುವೆ ಭಾಗ್ಯ
ಹಾಗೆಯೇ ಮತ್ತೊಬ್ಬರು ಅಲ್ಲಿನ ನಿವಾಸಿಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಬೈಕ್‌ನಲ್ಲಿ ಬಂದವರು ಎಂಥಾ ಜನಗಳಪ್ಪ, ಅವರು ಬಹುಶಃ ಆ ಮಗುವಿನ ನಿಜವಾದ ಪೋಷಕರು ಅಲ್ಲ ಎಂದು ಎನಿಸುತ್ತಿದೆ. ಅಥವಾ ಬಹುಶಃ ಯಾರಾದರೊಬ್ಬರು ಅ ಮಗುವಿನ ನಿಜವಾದ ಪೋಷಕರು ಇರಬಹುದು. ಯಾವ ಪೋಷಕರು ತಮ್ಮ ಸ್ವಂತ ಮಗುವನ್ನು ಹೀಗೆ ಬೀದಿಗೆ ಎತ್ತಿ ಎಸೆಯುತ್ತಾರೆ. ಪಾಪದ ಮಗು, ಅಲ್ಲಿನ ನಿವಾಸಿಗಳು ಈ ಸಮಯದಲ್ಲಿ ತೋರಿದ ಕಾಳಜಿಗೆ ಧನ್ಯವಾದ ಹೇಳಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.


