Child orphaned despite having parents: ಇಲ್ಲೊಂದು ಕಡೆ ಅಪ್ಪ ಅಮ್ಮ ಇಬ್ಬರಿಗೂ ಬೇಡವಾದ 10 ವರ್ಷದ ಮಗುವೊಂದನ್ನು ಆತನ ತಂದೆಯೇ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಿಟ್ಟು ಎಸ್ಕೇಪ್ ಆದಂತಹ ಘಟನೆ ನಡೆದಿದ್ದು, ಬಾಲಕನನ್ನು ಪೊಲೀಸರು ರಕ್ಷಿಸಿದ್ದಾರೆ.

ಮಗುವನ್ನು ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಿಟ್ಟು ಬಂದ ತಂದೆ

ಕೋಲ್ಕತ್ತಾ:ಪ್ರಪಂಚದಲ್ಲಿ ಎಂತೆಂಥಾ ಜನರಿರ್ತಾರೆ ನೋಡಿ. ಒಂದೆಡೆ ಲಕ್ಷಾಂತರ ರೂಪಾಯಿ ವೈದ್ಯಕೀಯ ವೆಚ್ಚದ ಜೊತೆ ಒಂದೇ ಒಂದು ಮಗು ಕರುಣಿಸು ತಂದೆ ಅಂತ ಗುಡಿ ಗೋಪುರಗಳ್ನು ಸುತ್ತುವ ದಂಪತಿ ಒಂದು ಕಡೆಯಾದರೆ ಮತ್ತೊಂದೆಡೆ ಜನಿಸಿದ ಮಕ್ಕಳನ್ನೇ ಬೇಡ ಎಂದು ಎಸೆದು ಹೋಗುವ ಒಂದು ಕಡೆ. ಹೌದು ಇಲ್ಲೊಂದು ಕಡೆ ಅಪ್ಪ ಅಮ್ಮ ಇಬ್ಬರಿಗೂ ಬೇಡವಾದ 10 ವರ್ಷದ ಮಗುವೊಂದನ್ನು ಆತನ ತಂದೆಯೇ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಬಿಟ್ಟು ಎಸ್ಕೇಪ್ ಆದಂತಹ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. ಮಗುವನ್ನು ಇರಿಸಿಕೊಳ್ಳುವ ವಿಚಾರದಲ್ಲಿ ಗಂಡ ಹೆಂಡತಿ ನಡುವೆ ಜಗಳದ ನಂತರ ಈ ಘಟನೆ ನಡೆದಿದೆ.

ಮಗುವನ್ನು ರಕ್ಷಿಸಿದ ಪೊಲೀಸರು

ಪಶ್ಚಿಮ ಬಂಗಾಳ ಉತ್ತರ 24 ಪರಗಣ ಜಿಲ್ಲೆಯ ಬಸಿರ್ಹತ್ ಸಮೀಪ ಬರುವ ಭಾರತ ಬಾಂಗ್ಲಾ ಗಡಿಯಲ್ಲಿ ಮಂಗಳವಾರ ರಾತ್ರಿ ಈ ಅಮಾನವೀಯ ಘಟನೆ ನಡೆದಿದೆ. ಈ ದಂಪತಿಗಳ ಮನೆಯಿಂದ ಬಹಳ ದೂರ ಇದ್ದ ಈ ಗಡಿ ಭಾಗದಲ್ಲಿ ಮಗನನ್ನು ಒಬ್ಬಂಟಿಯಾಗಿ ಬಿಟ್ಟು ತಂದೆ ಬೈಕ್‌ನಲ್ಲಿ ಎಸ್ಕೇಪ್ ಆಗಿದ್ದಾನೆ. ಇತ್ತ ತಿಳಿದಿರದ ಜಾಗ ಹಾಗೂ ಕತ್ತಲ ರಾತ್ರಿಯಿಂದಾಗಿ ಬಾಲಕ ಜೋರಾಗಿ ಅಳುವುದಕ್ಕೆ ಶುರು ಮಾಡಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಈ ವಿಚಾರವನ್ನು ಪೊಲೀಸರ ಗಮನಕ್ಕೆ ತಂದ ನಂತರ ಘಟನೆ ಬೆಳಕಿಗೆ ಬಂದಿದೆ. ನಂತರ ಸ್ಥಳಕ್ಕೆ ಬಂದ ಬಸಿರ್ಹತ್ ಪೊಲೀಸ್ ಠಾಣೆಯ ಅಧಿಕಾರಿಗಳು ಪುಟ್ಟ ಬಾಲಕನನ್ನು ಜೊತೆಗೆ ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿ ಬಾಲಕ ನೀಡಿದ ಮಾಹಿತಿ ಪಡೆದು ಆತನ ಕುಟುಂಬವನ್ನು ಪೊಲೀಸರು ಸಂಪರ್ಕಿಸಿದ್ದಾರೆ.

ಗಂಡ ಹೆಂಡತಿ ಜಗಳದ ನಂತರ ಕೃತ್ಯ: ಇಬ್ಬರಿಗೂ ಬೇಡವಾದ ಮಗು

10 ವರ್ಷದ ಬಾಲಕನ ಮನೆಯೂ ಉತ್ತರ 24 ಪರಗಣ ಜಿಲ್ಲೆಯ ಅಶೋಕನಗರ ಪೊಲೀಸ್ ಠಾಣೆಯ ಕಠ್ಪೋಲ್ ಪ್ರದೇಶದಲ್ಲಿದೆ. ಈ ಬಾಲಕನ ತಂದೆ ಪಿಂಟು ಘೋಷ್ ಮತ್ತು ತಾಯಿ ಮಾಧವಿ ಘೋಷ್ ನಡುವೆ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಆಗಾಗ ಕಿತ್ತಾಟಗಳಾಗುತ್ತಿದ್ದವು. ಇತ್ತೀಚೆಗೆ ಇಬ್ಬರ ನಡುವಿನ ಜಗಳವೊಂದು ತೀವ್ರ ವಿಕೋಪಕ್ಕೆ ಹೋದ ನಂತರ ತಾಯಿ ಮಾಧವಿ ಘೋಷ್ ಮಗುವನ್ನು ಅತ್ತೆ ಮನೆಯಲ್ಲೇ ಬಿಟ್ಟು ತವರು ಮನೆಗೆ ಬಂದು ಸೇರಿದ್ದಳು. ಅಜ್ಜ ಅಜ್ಜಿ ಜೊತೆ ಮಗು ಇತ್ತು. ಆದರೆ

ಮಂಗಳವಾರ ರಾತ್ರಿ ಮಗುವಿನ ತಂದೆ ಪಿಂಟು ಘೋಷ್ ತನ್ನ ಮಗನನ್ನು ತಾಯಿಯ ಜೊತೆಗೆ ಬಿಡುವುದಕ್ಕಾಗಿ ಕರೆದುಕೊಂಡು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ತಾಯಿ ಮಾಧವಿ ಘೋಷ್ ಮಗನನ್ನು ಜೊತೆಗೆ ಇರಿಸಿಕೊಳ್ಳುವುದಕ್ಕೆ ನಿರಾಕರಿಸಿದ್ದಾಳೆ ಎಂದು ತಿಳಿದು ಬಂದಿದೆ. ಇತ್ತ ತಂದೆಗೂ ಮಗುವನ್ನು ಇರಿಸಿಕೊಳ್ಳುವುದಕ್ಕೆ ಇಷ್ಟವಿಲ್ಲ. ಹೀಗಾಗಿ ಪತ್ನಿಯ ನಿರ್ಧಾರದಿಂದ ಕುಪಿತಗೊಂಡ ಆತ ಮಗನನ್ನು ಭಾರತ ಬಾಂಗ್ಲಾದೇಶ ಗಡಿಯಲ್ಲಿ ಬಿಟ್ಟು ಬರುವ ಅಮಾನವೀಯ ನಿರ್ಧಾರ ಮಾಡಿದ್ದಾನೆ.

ಮಗುವನ್ನು ಗಡಿ ಬಳಿ ಬಿಟ್ಟು ಎಸ್ಕೇಪ್ ಆದ ತಂದೆ

ಮಗುವಿನ ಬಟ್ಟೆ ಇದ್ದ ಚೀಲವನ್ನು ಹಿಡಿದುಕೊಂಡು ಮಗುವನ್ನು ಬೈಕ್‌ನಲ್ಲಿ ತನ್ನ ಹಿಂದೆ ಕೂರಿಸಿಕೊಂಡು ಬಾಂಗ್ಲ ಭಾರತ ಗಡಿಯತ್ತ ಪಯಾಣಿಸಿದ ಆತ ಅಲ್ಲಿ ಮಗುವನ್ನು ಬೈಕ್‌ನಿಂದ ಇಳಿಯುವಂತೆ ಹೇಳಿದ್ದಾನೆ. ಆದರೆ ಅಪ್ಪನ ಉದ್ದೇಶದ ಅರಿವಿಲ್ಲದ ಬಾಲಕ ಬೈಕ್‌ನಿಂದ ಇಳಿಯುತ್ತಿದ್ದಂತೆ ತಂದೆ ಬೈಕ್ ತಿರುಗಿಸಿ ಅಲ್ಲಿಂದ ವೇಗವಾಗಿ ಹೊರಟು ಹೋಗಿದ್ದಾನೆ. ಇತ್ತ ಘಟನೆಯಿಂದ ಮಗು ಆಘಾತಗೊಂಡಿದ್ದು, ಸುತ್ತಲೂ ಕತ್ತಲಿನ ಜೊತೆ ತಂಪಾದ ಶೀತ ಗಾಳಿಯ ನಡುವೆ ಒಬ್ಬಂಟಿಯಾಗಿರುವುದನ್ನು ಅರಿತು ಭಯದಿಂದ ಅಳುವುದಕ್ಕೆ ಶುರು ಮಾಡಿದ್ದಾನೆ.

ಬುದ್ದಿಗೇಡಿ ಪೋಷಕರಿಗೆ ಕೌನ್ಸೆಲಿಂಗ್

ಪುಟ್ಟ ಬಾಲಕನ ಗೋಳಾಟ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಅವನನ್ನು ಸಮಾಧಾನಪಡಿಸಿ ಬಸಿರ್ಹತ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಬಾಲಕನಿಗೆ ತಿನ್ನಲು ಆಹಾರವನ್ನು ಸಹ ನೀಡಿದ್ದಾರೆ. ನಂತರ ಆತ ನಡೆದ ಘಟನೆಯನ್ನು ಪೊಲೀಸರಿಗೆ ತಿಳಿಸಿ ಮನೆಯ ವಿಳಾಸವನ್ನೂ ನೀಡಿದ್ದಾನೆ. ನಂತರ ಪೋಲಿಸರು ಪೋಷಕರನ್ನು ಸಂಪರ್ಕಿಸಿದ್ದು, ಆ ಬಾಲಕನನ್ನು ಮನೆಗೆ ಸೇರಿಸಿ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ. ಜೊತೆಗೆ ಬೇಜವಾಬ್ದಾರಿ ವರ್ತನೆಗಾಗಿ ಇಬ್ಬರಿಗೂ ಕೌನ್ಸೆಲಿಂಗ್ ಮಾಡಲಾಗುತ್ತಿದೆ ಎಂದು ಬಸಿರ್ಹತ್ ಜಿಲ್ಲಾ ಪೊಲೀಸರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇವತ್ತಿನ ಕಾಲದಲ್ಲಿ ಮಕ್ಕಳಾಗೋದೆ ಒಂದು ದೊಡ್ಡ ಪುಣ್ಯ, ಲಕ್ಷ ಲಕ್ಷ ವೆಚ್ಚ ಮಾಡಿದರು ಮಕ್ಕಳಾಗದ ದಂಪತಿಗಳು ಅನೇಕರಿದ್ದಾರೆ. ಮಕ್ಕಳ ಮೌಲ್ಯ ಎಂಥದ್ದು ಎಂಬುದನ್ನು ಮಕ್ಕಳಿಲ್ಲದ ಪೋಷಕರು ಚೆನ್ನಾಗಿಯೇ ಹೇಳುತ್ತಾರೆ. ಇದರ ಜೊತೆಗೆ ಮಕ್ಕಳು ಬೇಡ ಎಂದಾದರೆ ಜನನ ನಿಯಂತ್ರಣಕ್ಕೆ ಬೇಕಾದ ಸವಲತ್ತುಗಳು ಇದ್ದೇ ಇದೆ. ಪರಿಸ್ಥಿತಿ ಹೀಗಿದ್ದು, ಮಕ್ಕಳು ಹುಟ್ಟಿದ ನಂತರ ಹೀಗೆ ನಡುದಾರಿಯಲ್ಲಿ ಬಿಟ್ಟು ಹೋಗುವುದು ಎಷ್ಟು ಸರಿ. ಯಾರಿಗೂ ಬೇಡ ಎನಿಸಿದ ಆ ಪುಟ್ಟ ಕಂದನ ಮನಸ್ಥಿತಿ ಹೇಗಿರಬೇಕು? ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ.

ಇದನ್ನೂ ಓದಿ: ಪ್ರಧಾನಿಯವರಲ್ಲಿ ಫಳ ಫಳ ಹೊಳೆಯುವ ಚರ್ಮದ ರಹಸ್ಯ ಏನು ಎಂದು ಕೇಳಿದ ಕ್ರಿಕೆಟರ್ ಹರ್ಲಿನ್

ಇದನ್ನೂ ಓದಿ: ಟೇಕಾಫ್ ಆಗ್ತಿದ್ದಂತೆ ವಿಮಾನ ಪತನ: ವಿಮಾನದಲ್ಲಿದ್ದ ಎಲ್ಲರೂ ಸಾವು: ಅಹ್ಮದಾಬಾದ್ ಘಟನೆ ನೆನಪಿಸಿದ ಭಯಾನಕ ದೃಶ್ಯ