Bareilly Gym Scandal: ಉತ್ತರ ಪ್ರದೇಶದ ಬರೇಲಿಯಲ್ಲಿ ಫಿಟ್‌ನೆಸ್ ತರಬೇತಿಯ ಹೆಸರಿನಲ್ಲಿ ಮಹಿಳೆಯರ ಮೇಲೆ ನಡೆಯುತ್ತಿದ್ದ ಭೀಕರ ಲೈಂಗಿಕ ಶೋಷಣೆ ಮತ್ತು ವಸೂಲಿ ದಂಧೆಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಜಿಮ್ ಸಂಚಾಲಕ ಅಕ್ರಮ್ ಬೇಗ್ ಮತ್ತು ಆತನ ಸಹೋದರ ಆಲಂ ಬೇಗ್ ಎಂಬುವವರು ಮಹಿಳಾ ವೈದ್ಯೆಯೊಬ್ಬರಿಗೆ ವ್ಯಾಯಾಮದ ಮೊದಲು ನಶೆಯುಕ್ತ ಪಾನೀಯ ನೀಡಿ, ಅವರು ಪ್ರಜ್ಞೆ ತಪ್ಪಿದಾಗ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು.  

ತ್ತರ ಪ್ರದೇಶದ ಬರೇಲಿಯಿಂದ ಅತ್ಯಂತ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಫಿಟ್‌ನೆಸ್ ಸೆಂಟರ್ ನಡೆಸುತ್ತಿದ್ದ ಇಬ್ಬರು ಸಹೋದರರು ಮಹಿಳಾ ವೈದ್ಯೆಯೊಬ್ಬರನ್ನು ಲೈಂಗಿಕವಾಗಿ ಶೋಷಿಸಿ, ವಿಡಿಯೋ ಬಳಸಿ ಬ್ಲಾಕ್‌ಮೇಲ್ ಮಾಡಿದ ಕೃತ್ಯ ಇಡೀ ನಗರವನ್ನು ಬೆಚ್ಚಿಬೀಳಿಸಿದೆ. ಈ ಸಂಬಂಧ ನಗರದ ಕೊತ್ವಾಲಿ ಪೊಲೀಸರು ಜಿಮ್ ಸಂಚಾಲಕ ಅಕ್ರಮ್ ಬೇಗ್ ಮತ್ತು ಆತನ ಸಹೋದರ ಆಲಂ ಬೇಗ್ ಎಂಬುವವರನ್ನು ಬಂಧಿಸಿದ್ದಾರೆ.

ನಂಬಿಕೆ ದ್ರೋಹ ಮತ್ತು ವ್ಯವಸ್ಥಿತ ಸಂಚು

ಸಂತ್ರಸ್ತ ಮಹಿಳಾ ವೈದ್ಯೆ ಕಳೆದ ಎರಡು ವರ್ಷಗಳಿಂದ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ 'ಅಲ್ಟಿಮೇಟ್ ಫಿಟ್‌ನೆಸ್' ಜಿಮ್‌ನಲ್ಲಿ ತರಬೇತಿ ಪಡೆಯುತ್ತಿದ್ದರು. ಜಿಮ್ ಸಂಚಾಲಕ ಅಕ್ರಮ್ ಬೇಗ್ ವೈದ್ಯೆಯ ವಿಶ್ವಾಸ ಗಳಿಸಿ, ಅವರಿಗೆ "ಪ್ರೀ-ವರ್ಕೌಟ್ ಎನರ್ಜಿ ಡ್ರಿಂಕ್" ನೀಡುತ್ತಿದ್ದನು. ಈ ಪಾನೀಯದಲ್ಲಿ ಆಗಾಗ್ಗೆ ಅಮಲು ಪದಾರ್ಥಗಳನ್ನು ಬೆರೆಸಲಾಗುತ್ತಿತ್ತು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಪಾನೀಯ ಸೇವಿಸಿದ ನಂತರ ವೈದ್ಯೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿದ್ದಾಗ, ಅಕ್ರಮ್ ಅವರನ್ನು ಜಿಮ್‌ನ ಮೂಲೆಯಲ್ಲಿದ್ದ ಖಾಸಗಿ ಕೋಣೆ ಬೆಡ್ ಮೇಲೆ ಮಲಗಿಸಿ ಲೈಂಗಿಕ ಶೋಷಣೆ ಮಾಡುತ್ತಿದ್ದನು. ಈ ಸಮಯದಲ್ಲಿ ಜಿಮ್ ತರಬೇತುದಾರನಾಗಿದ್ದ ಆತನ ಸಹೋದರ ಆಲಂ ಬೇಗ್ ರಹಸ್ಯವಾಗಿ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದನು.

ಭಾರೀ ಮೊತ್ತಕ್ಕೆ ಬ್ಲಾಕ್‌ಮೇಲಿಂಗ್ ಮತ್ತು ಬೆದರಿಕೆ

ಆರೋಪಿಗಳು ಈ ವಿಡಿಯೋಗಳನ್ನು ಮುಂದಿಟ್ಟುಕೊಂಡು ಮಹಿಳೆಯನ್ನು ಬ್ಲಾಕ್‌ಮೇಲ್ ಮಾಡಲು ಆರಂಭಿಸಿದರು. ಮೊದಲು ವೈದ್ಯೆಯ ಕುಟುಂಬಕ್ಕೆ ಮತ್ತು ಮಕ್ಕಳಿಗೆ ತೊಂದರೆ ನೀಡುವುದಾಗಿ ಬೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಮಾನಹಾನಿಯ ಭಯದಿಂದ ಸಂತ್ರಸ್ತೆ ಆರಂಭದಲ್ಲಿ 80 ಸಾವಿರ ರೂಪಾಯಿ ನೀಡಿದ್ದರು. ಆದರೆ ಆರೋಪಿಗಳ ದಾಹ ಅಷ್ಟಕ್ಕೆ ನಿಲ್ಲದೆ, ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕವಾಗಿ ವೈರಲ್ ಮಾಡುವುದಾಗಿ ಬೆದರಿಸಿ ಬರೋಬ್ಬರಿ 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಈ ನಿರಂತರ ಬೆದರಿಕೆಯಿಂದ ಹೈರಾಣಾದ ವೈದ್ಯೆ ಅಂತಿಮವಾಗಿ ಎಸ್‌ಎಸ್‌ಪಿ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.

ಪೊಲೀಸ್ ದಾಳಿ ಮತ್ತು ಬಹಿರಂಗಗೊಂಡ ಸತ್ಯ

ಪೊಲೀಸರು ಜಿಮ್ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದಾಗ, ಅವರ ಬಳಿಯಿದ್ದ ಎರಡು ಪೆನ್ ಡ್ರೈವ್‌ಗಳು, ಎರಡು ಮೊಬೈಲ್ ಫೋನ್‌ಗಳು, ಶಕ್ತಿವರ್ಧಕ ಔಷಧಿಗಳ ಒಂಬತ್ತು ಸೀಸೆಗಳು, ಮೂರು ಮಾತ್ರೆಗಳು ಮತ್ತು ಆರು ಇಂಜೆಕ್ಷನ್‌ಗಳನ್ನು ಹಾಗೂ 10,000 ರೂಪಾಯಿ ಹಣವನ್ನು ವಸೂಲಿ ಮಾಡಲಾಗಿದೆ. ಅಕ್ರಮ್‌ನ ಮೊಬೈಲ್ ಪರಿಶೀಲಿಸಿದಾಗ ಇತರ ಹಲವಾರು ಮಹಿಳೆಯರ ವರ್ಕೌಟ್ ವಿಡಿಯೋಗಳು ಕೂಡ ಪತ್ತೆಯಾಗಿವೆ. ವಿಚಾರಣೆಯ ವೇಳೆ ಆರೋಪಿಗಳು ಮಹಿಳೆಯರನ್ನು ಇಂತಹ ಬಲೆಗೆ ಬೀಳಿಸಿ ಹಣ ವಸೂಲಿ ಮಾಡುವ ಸಂಚನ್ನು ಒಪ್ಪಿಕೊಂಡಿದ್ದಾರೆ.

ಆರೋಪಿ ಆಲಂ ಮೇಲೆ ಈ ಹಿಂದೆಯೇ ಯುವತಿಯರ ಪೀಡನೆ ಮತ್ತು ಇತರ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯು ಜಿಮ್‌ಗಳಿಗೆ ಹೋಗುವ ಮಹಿಳೆಯರ ಸುರಕ್ಷತೆಯ ಬಗ್ಗೆ ಇಡೀ ದೇಶದಲ್ಲಿ ದೊಡ್ಡ ಮಟ್ಟದ ಆತಂಕ ಮತ್ತು ಚರ್ಚೆಯನ್ನು ಮೂಡಿಸಿದ್ದು, ಸಾರ್ವಜನಿಕರು ಅಪರಿಚಿತರು ನೀಡುವ ಆಹಾರ ಅಥವಾ ಪಾನೀಯಗಳ ಬಗ್ಗೆ ತೀವ್ರ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಸದ್ಯ ತನಿಖೆ ಮುಂದುವರಿದಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬರೇಲಿ ಪೊಲೀಸ್ ಇಲಾಖೆ ತಿಳಿಸಿದೆ. ಇದರೊಂದಿಗೆ ಜಿಮ್‌ಗಳಲ್ಲಿ ಸಿಸಿಟಿವಿ ಅಳವಡಿಕೆ ಮತ್ತು ತರಬೇತುದಾರರ ಹಿನ್ನೆಲೆ ಪರಿಶೀಲನೆಯ ಅಗತ್ಯತೆ ಮತ್ತೊಮ್ಮೆ ಎದ್ದುಕಂಡಿದೆ.

Scroll to load tweet…