ರಾಮನಗರದ ತಟ್ಟಗುಪ್ಪೆ ಗ್ರಾಮದ ಬಳಿ ರೌಡಿ ಶೀಟರ್ ನಿಮಾನ್ಸ್ ರಾಜ ಮತ್ತು ಆತನ ಸಹಚರರು ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಅಮಾನವೀಯ ಕೃತ್ಯವನ್ನು ವಿಡಿಯೋ ಮಾಡಿ ವೈರಲ್ ಮಾಡಿದ್ದು, ಇದೀಗ ಕಗ್ಗಲೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮನಗರ (ಫೆ.24): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆಯೇ? ಕ್ರಿಮಿನಲ್‌ಗಳಿಗೆ ಪೊಲೀಸರ ಭಯವೇ ಅನ್ನೋದೇ ಇಲ್ಲವೇ? ಇಂತಹ ಪ್ರಶ್ನೆಗಳು ಈಗ ಕಾಡಲಾರಂಭಿಸಿವೆ. ಕರ್ನಾಟಕವು ಉತ್ತರ ಪ್ರದೇಶ ಅಥವಾ ಬಿಹಾರದಂತಹ 'ಜಂಗಲ್ ರಾಜ್' ಆಗಿ ಬದಲಾಗುತ್ತಿದೆಯೇ ಎಂಬ ಅನುಮಾನ ಮೂಡುವಂತೆ ರಾಮನಗರದಲ್ಲಿ ಒಂದು ಅಮಾನವೀಯ ಕೃತ್ಯ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ನಡೆದ ಮಾರಣಾಂತಿಕ ಹಲ್ಲೆಯ ದೃಶ್ಯಗಳು ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿವೆ.
ಕೆರೆ ಬಳಿ ಕರೆದೊಯ್ದು ಹಲ್ಲೆ, ವಿಡಿಯೋ ಮಾಡಿ ವಿಕೃತಿ!
ರಾಮನಗರ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ತಟ್ಟಗುಪ್ಪೆ ಗ್ರಾಮದ ಕೆರೆ ಬಳಿ ಈ ಘೋರ ಕೃತ್ಯ ನಡೆದಿದೆ. ರೌಡಿ ಶೀಟರ್ ನಿಮಾನ್ಸ್ ರಾಜ ಎಂಬುವವನು ಮತ್ತವನ ಸಹಚರರು ಯುವಕನೊಬ್ಬನನ್ನು ಕೆರೆ ಬಳಿ ಕರೆದೊಯ್ದು ಮನಬಂದಂತೆ ಥಳಿಸಿದ್ದಾರೆ. ರಕ್ತ ಬರುವಂತೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಲ್ಲದೆ, ಆ ಕ್ರೌರ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ. ಇವರ ಅಟ್ಟಹಾಸ ನೋಡಿದರೆ ಇವರು ಮನುಷ್ಯರೋ ಅಥವಾ ರಾಕ್ಷಸರೋ ಎಂಬ ಪ್ರಶ್ನೆ ಮೂಡುತ್ತದೆ.
ಕಾಲು ಹಿಡಿದು ಬೇಡಿಕೊಂಡರೂ ಕರುಣೆ ತೋರದ ಪಾಪಿಗಳು!
ಹಲ್ಲೆಗೊಳಗಾದ ಯುವಕ ಪ್ರಾಣ ಉಳಿಸಿಕೊಳ್ಳಲು ಹಲ್ಲೆಕೋರರ ಕಾಲು ಹಿಡಿದಿದ್ದಾನೆ, ಕೈಮುಗಿದು ಅತ್ತಿದ್ದಾನೆ. ಆದರೆ, ರೌಡಿ ಸಹಚರರಿಗೆ ಮಾತ್ರ ಕಿಂಚಿತ್ತೂ ಕರುಣೆ ಬಂದಿಲ್ಲ. ಯುವಕನ ತಲೆಗೆ ಹೊಡೆದು ಗಾಯಗೊಳಿಸಿ, ಆ ಗಾಯದ ಮೇಲೆ ಮದ್ಯ ಸುರಿದು ಸಂಭ್ರಮಿಸಿದ್ದಾರೆ. ಇಷ್ಟೆಲ್ಲಾ ದೌರ್ಜನ್ಯ ನಡೆಯುತ್ತಿದ್ದರೂ ಯುವಕನನ್ನು ಬಿಡದೆ ಅಮಾನವೀಯವಾಗಿ ಹಿಂಸಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸರ ಭಯವಿಲ್ಲದ ಪುಂಡರು, ಕಗ್ಗಲೀಪುರ ಠಾಣೆಯಲ್ಲಿ ಕೇಸ್
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ರಾಮನಗರ ಪೊಲೀಸರ ಕಾರ್ಯಕ್ಷಮತೆಯ ಮೇಲೆ ಪ್ರಶ್ನೆ ಎದ್ದಿದೆ. ಹಗಲು ದರೋಡೆ, ಕಳ್ಳತನ ಮತ್ತು ಈಗ ಇಂತಹ ಸಾರ್ವಜನಿಕ ಮಾರಣಾಂತಿಕ ಹಲ್ಲೆಗಳು ಹೆಚ್ಚುತ್ತಿರುವುದು ನಾಗರಿಕರ ನಿದ್ದೆಗೆಡಿಸಿದೆ. ಸದ್ಯ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಕೃತಿ ಮೆರೆದ ರೌಡಿ ಶೀಟರ್ ಸಹಚರರಿಗೆ ಪೊಲೀಸ್ ಇಲಾಖೆ ಕಠಿಣ ಕ್ರಮ ಜರುಗಿಸಬೇಕಿದೆ.



