ಭಾರತದಲ್ಲಿ ಬಿಎ, ಬಿಕಾಂ ಹಾಗೂ ಬಿಎಸ್‌ಸಿ ಪದವಿ ಮಾಡಿದರೆ ಉದ್ಯೋಗ ಸಿಗುತ್ತಾ? ಈಗಾಗಲೇ ಪದವಿ ಮುಗಿಸಿದ ವಿದ್ಯಾರ್ಥಿಗಳ ಪೈಕಿ ಎಷ್ಟು ಮಂದಿಗೆ ಉದ್ಯೋಗ ಸಿಕ್ಕಿದೆ? ಭಾರತದಲ್ಲಿ ಶಿಕ್ಷಣದ ಟ್ರೆಂಡ್ ಬದಲಾಗುತ್ತಿದೆಯಾ? ನೀತಿ ಆಯೋಗದ ವರದಿ ಇಲ್ಲಿದೆ.
ನವದೆಹಲಿ (ಆ.26) ಪಿಯುಸಿ, ಡಿಗ್ರಿ, ಮಾಸ್ಟರ್ ಡಿಗ್ರಿ ಸೇರಿದಂತೆ ಕಾಲೇಜು ಶಿಕ್ಷಣ ಔಟ್‌ಡೇಟೆಡ್ ಆಗುತ್ತಿದೆ ಎಂದು ಹಲವು ಉದ್ಯಮಿಗಳು ಈಗಾಗಲೇ ಹೇಳಿದ್ದಾರೆ. ಕಾಲೇಜು ಪದವಿಯಿಂದ ಉದ್ಯೋಗ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ ಅನ್ನೋದು ಇದೀಗ ನೀತಿ ಆಯೋಗ ತನ್ನ ವರದಿಯಲ್ಲಿ ಹೇಳಿದೆ. ಬಿಎ, ಬಿಕಾಂ, ಬಿಎಸ್‌ಸಿ ಪದವಿ ಮುಗಿಸಿ ಉದ್ಯೋಗ ಗಿಟ್ಟಿಸಿಕೊಳ್ಳುವ ಆಲೋಚನೆ ಇದ್ದರೆ ಬದಲಿ ವ್ಯವಸ್ಥೆ ನೋಡಿಕೊಳ್ಳಬೇಕು. ಬದಲಾಗುತ್ತಿರುವ ಮಾರುಕಟ್ಟೆ, ಅಗತ್ಯತೆಗಳು, ಕಾರ್ಮಿಕ ವಲಯದ ಬೇಡಿಕೆಗಳ ಅನುಗುಣವಾಗಿ ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಆಗಬೇಕಿದೆ ಎಂದು ನೀತಿ ಆಯೋಗ ಹೇಳಿದೆ. ಈ ಪೈಕಿ ಕೇವಲ ಬಿಎ, ಬಿಕಾಂ, ಬಿಎಸ್‌ಸಿ ಪದವಿ ಉದ್ಯೋಗ ಪಡೆಯಲು ಸಾಲುವುದಿಲ್ಲ. ಈ ಪದವಿಗಳಿಗೆ ಉದ್ಯೋಗ ದುರ್ಬಲ ಎಂದು ವರದಿ ಹೇಳಿದೆ.
ಕೇವಲ ಶೇಕಡಾ 8.25ರಷ್ಟು ಮಂದಿಗೆ ಮಾತ್ರ ಉದ್ಯೋಗ
ನೀತಿ ಆಯೋಗ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿ ಈ ಕುರಿತು ಬೆಳಕು ಚೆಲ್ಲಿದೆ. ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ದಿ, ವೃತ್ತಿಪರ ಕೋರ್ಸ್‌ಗಳು ಹೆಚ್ಚು ಬೇಡಿಕೆ ಪಡೆಯುತ್ತಿದೆ. ಆದರೆ ಭಾರತದಲ್ಲಿನ ಬಹುತೇಕ ಡಿಗ್ರಿ, ಡಿಪ್ಲೋಮಾ ಕೋರ್ಸ್ ಕೇವಲ ಸರ್ಟಿಫಿಕೇಟ್ ಪಡೆಯುವ ಕೋರ್ಸ್ ಆಗಿದೆ ಹೊರತು ಉದ್ಯೋಗ ಗಿಟ್ಟಿಸಿಕೊಳ್ಳುವ ಯಾವುದೇ ಕೌಶಲ್ಯ ನೀಡುವುದಿಲ್ಲ ಎಂದು ನೀತಿ ಆಯೋಗ ಹೇಳಿದೆ. 2024-15ರ ಆರ್ಥಿಕ ಸಮೀಕ್ಷೆ ಪ್ರಕಾರ ಪದವಿಧರರಲ್ಲಿ ಕೇವಲ 8.25ರಷ್ಟು ಮಂದಿ ಮಾತ್ರ ಅರ್ಹತೆಗೆ ಅನುಗುಣಾಗಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಎಂದು ವರದಿ ಹೇಳಿದೆ.
ಪದವಿ ಪಡೆದ ಬಳಿಕ ನಿರುದ್ಯೋಗಿಗಳಾಗಿರುವ ಸಂಖ್ಯೆ ಹೆಚ್ಚು. ವರದಿ ಪ್ರಕಾರ ಪದವೀಧರರಲ್ಲಿ ಶೇಕಡಾ 13ರಷ್ಟು ಪುರುಷರು, ಹಾಗೂ ಶೇಕಡಾ 20 ರಷ್ಟು ಮಹಿಳೆಯರು ನಿರುದ್ಯೋಗಿಗಳಾಗಿದ್ದಾರೆ. ದುರ್ಬಲ ಉದ್ಯೋಗ ಅವಕಾಶ ಹಾಗೂ ಸಾಧ್ಯತೆಗಳ ಪೈಕಿ ಬಿಎ, ಬಿಕಾಂ, ಬಿಎಸ್‌ಸಿ ಮುಂಚೂಣಿಯಲ್ಲಿದೆ. ಪಿಯುಸಿಗೆ 3.4 ಕೋಟಿ ವಿದ್ಯಾರ್ಥಿಗಳು ಅಡ್ಮಿಷನ್ ಪಡೆದರೆ, ಬಿಎ, ಬಿಕಾಂ, ಬಿಎಸ್‌ಸಿ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕೇವಲ 1. 13 ಕೋಟಿ ಮಾತ್ರ. ಸರ್ಕಾರ ವಿವಿಧ ಹುದ್ದೆ ಪಡೆಯಲು ಮಾತ್ರ ಹಲವರು ಡಿಗ್ರಿ ಪದವಿ ಪಡೆಯುತ್ತಿದ್ದಾರೆ. 2024 ನವೆಂಬರ್ ಹಾಗೂ 2025ರ ಜುಲೈ ನಡುವೆ 55 ಸಾವಿರ ಸರ್ಕಾರಿ ಉದ್ಯೋಗಿಗಳಿಗೆ 1.86 ಕೋಟಿ ಅರ್ಜಿಗಳು ಬಂದಿದೆ.
ಇದೇ ವೇಳೆ ಕೈಗಾರಿಕಾ ತರಬೇತಿ ಸಂಸ್ಥೆ, ಪಾಲಿಟೆಕ್ನಿಕ್ ಸೇರಿದಂತೆ ಹಲವು ವೃತ್ತಿಪರ ಕೋರ್ಸ್‌ಗಳು ಮಾರುಕಟ್ಟೆ, ಕಂಪನಿ, ಕೈಗಾರಿಕೆಗಳ ನಡುವಿನ ಅಸಮತೋಲನಕ್ಕ ಕಾರಣವಾಗಿದೆ. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವ ಮಾದರಿಗಳನ್ನು ಪರಿಣಾಮಕಾರಿಯಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ತರಬೇಕಿದೆ. ಪಠ್ಯಕ್ರಮಗಳು ಔಟ್‌ಡೇಟೆಡ್ ಆಗಿದೆ. ಎಲ್ಲವೂ ಪಠ್ಯ ಮಾದರಿಯಲ್ಲೇ ಇದೆ. ಇದೀಗ ತಂತ್ರಜ್ಞಾನ ಬಹಳಷ್ಟು ಮುಂದುವರಿದಿದ್ದು, ಪಠ್ಯಗಳು ಪೂರಕವಾಗಿಲ್ಲ ಎಂದು ನೀತಿ ಆಯೋಗ ಅಭಿಪ್ರಾಯಪಟ್ಟಿದೆ.


