ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜೇಕಬ್ ಮಾರ್ಟಿನ್, 22 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ವಂಚನೆ ಆರೋಪದಿಂದ ದೋಷಮುಕ್ತರಾಗಿದ್ದಾರೆ. ಪಟಿಯಾಲಾ ಹೈಕೋರ್ಟ್ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಕ್ಲೀನ್‌ಚಿಟ್ ನೀಡಿದ್ದು, ಈ ತೀರ್ಪು ತಮಗೆ 'ಹೊಸ ಜೀವನ' ನೀಡಿದಂತಿದೆ ಎಂದು ಮಾರ್ಟಿನ್ ಭಾವುಕರಾಗಿ ನುಡಿದಿದ್ದಾರೆ.

ಬೆಂಗಳೂರು: ತನ್ನ ಮೇಲೆ ಬಂದಿದ್ದ ಗುರುತರ ಆಪಾದನೆಯ ಬಗ್ಗೆ ಸತತ 22 ವರ್ಷಗಳಿಂದ ಕಾನೂನು ಹೋರಾಟ ಮಾಡಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನಿಗೆ ಕೊನೆಗೂ ಪಟಿಯಾಲಾ ಹೈಕೋರ್ಟ್ ಕ್ಲೀನ್‌ಚಿಟ್ ನೀಡಿದೆ. ಹೌದು, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜೇಕಬ್ ಮಾರ್ಟಿನ್ ಇದೀಗ ಕೊನೆಗೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ವಡೋದರಾ ಮೂಲದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜೇಕಬ್ ಮಾರ್ಟಿನ್, 2004ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆಯಲ್ಲಿ ಭಾರತ ತಂಡದ ಜತೆಗಿದ್ದರು. ಇಂಗ್ಲೆಂಡ್ ಪ್ರವಾಸ ಮುಗಿಸಿದ ಭಾರತ ತಂಡವು ವಾಪಾಸ್ಸಾಗಿತ್ತು. ಆದರೆ ಜೇಕಬ್ ಮಾರ್ಟಿನ್ ಮಾತ್ರ ವಾಪಾಸ್ಸಾಗಿರಲಿಲ್ಲ. ಜೇಕಬ್ ಮಾರ್ಟಿನ್ ಆರು ತಿಂಗಳ ಕಾಲ ಇಂಗ್ಲೆಂಡ್‌ನಲ್ಲಿರಲು ವೀಸಾದಲ್ಲಿ ಅವಕಾಶವಿತ್ತು. ವೀಸಾ ಅವಧಿ ಮುಗಿದ ಬಳಿಕವೂ ಜೇಕಬ್ ಮಾರ್ಟಿನ್, ನಕಲಿ ಸ್ಟಾಂಪ್ ಬಳಸಿ ಇಂಗ್ಲೆಂಡ್‌ನಲ್ಲಿ ಉಳಿದುಕೊಳ್ಳಲು ಬಯಸಿದ್ದರು. ಇದಾದ ಬಳಿಕ ಮತ್ತೆ ನಕಲಿ ಸ್ಟಾಂಪ್ ಬಳಸಿಯೇ ಭಾರತಕ್ಕೆ ವಾಪಾಸ್ಸಾಗಿದ್ದರು. ಇದಾದ ಬಳಿಕ ಪೊಲೀಸ್ ತನಿಖೆ ವೇಳೆಯಲ್ಲಿ ಫ್ರಾಡ್ ಮಾಡಿರುವ ವಿಚಾರ ಸದ್ದು ಮಾಡಿತ್ತು. ಹೀಗಾಗಿ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಇದೀಗ ಸಾಕಷ್ಟು ಕಾನೂನು ಹೋರಾಟ ನಡೆಸಿದ ಬಳಿಕ ಜೇಕಬ್ ಮಾರ್ಟಿನ್ ವಂಚನೆ ನಡೆಸಿರುವುದಕ್ಕೆ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಹಿನ್ನೆಲೆಯಲ್ಲಿ ಅವರಿಗೆ ಪಟಿಯಾಲಾ ಕೋರ್ಟ್ ಕೊನೆಗೂ ದೋಷಮುಕ್ತರನ್ನಾಗಿ ತೀರ್ಪು ನೀಡಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ತನಿಖೆಯ ಸಂದರ್ಭದಲ್ಲಿ ಮಾರ್ಟಿನ್ ಪೊಲೀಸರು ಮತ್ತು ಕ್ರಿಕೆಟ್ ಮಂಡಳಿ ಎರಡರೊಂದಿಗೂ ಸಹಕರಿಸಿದರು. ಅಂತಿಮವಾಗಿ ಆರೋಪಮುಕ್ತರಾದ ನಂತರ, ಭಾರತದ ಮಾಜಿ ಕ್ರಿಕೆಟಿಗರು ಈ ತೀರ್ಪನ್ನು ತಮಗೆ 'ಹೊಸ ಜೀವನ' ನೀಡಿದಂತಿದೆ ಎಂದು ಬಣ್ಣಿಸಿದ್ದಾರೆ

ಆ ಪ್ರಕರಣ ಮುಗಿದ ನಂತರ ಮಾತನಾಡಿದ ಅವರು, 'ಈಗ, 22 ವರ್ಷಗಳ ಬಳಿಕ... ಈ 22 ವರ್ಷಗಳ ಅವಧಿಯಲ್ಲಿ ನನಗೆ ಬಿಸಿಸಿಐನಿಂದಲೂ ಯಾವುದೇ ಉತ್ತರ ಸಿಗಲಿಲ್ಲ; ರೈಲ್ವೆಯಲ್ಲಿದ್ದ ನನ್ನ ಕೆಲಸವನ್ನೂ ನಾನು ಕಳೆದುಕೊಂಡೆ. ಇದರಿಂದಾಗಿ ನನಗೆ ಸಾಕಷ್ಟು ಒತ್ತಡವಿತ್ತು, ಆದರೆ ಈಗ ಬಂದಿರುವ ಈ ತೀರ್ಪು... ನನಗೆ ಕ್ಲೀನ್ ಚಿಟ್ (ದೋಷಮುಕ್ತಿ) ಸಿಕ್ಕಿದೆ; ಇದು ನನ್ನ ಜೀವನದಲ್ಲಿ ಒಂದು ದೊಡ್ಡ ತಿರುವು. 22 ವರ್ಷಗಳ ನಂತರ ಬಂದಿರುವ ಈ ತೀರ್ಪು ನನ್ನ ಜೀವನದಲ್ಲಿ ಅತ್ಯಂತ ಮಹತ್ವದ ಬದಲಾವಣೆಯನ್ನು ತಂದಿದೆ," ಎಂದು ಮಾರ್ಟಿನ್ ಭಾವುಕರಾಗಿ ನುಡಿದಿದ್ದಾರೆ.

ಜೇಕಬ್ ಮಾರ್ಟಿನ್ ಕ್ರಿಕೆಟ್ ಟ್ರ್ಯಾಕ್‌ ರೆಕಾರ್ಡ್:

ವಿದರ್ಭ ಮೂಲದ ಬಲಗೈ ಬ್ಯಾಟರ್ ಜೇಕಬ್ ಮಾರ್ಟಿನ್, 1999ರಿಂದ 2001ರ ಅವಧಿಯಲ್ಲಿ ಟೀಂ ಇಂಡಿಯಾ ಪರ 10 ಏಕದಿನ ಪಂದ್ಯಗಳನ್ನಾಡಿ 22ರ ಬ್ಯಾಟಿಂಗ್ ಸರಾಸರಿಯಲ್ಲಿ 158 ರನ್ ಬಾರಿಸಿದ್ದರು. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗಿಂತ ಜೇಕಬ್ ದೇಶಿ ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಜೇಕಬ್ ಮಾರ್ಟಿನ್ 138 ಪ್ರಥಮ ದರ್ಜೆ ಪಂದ್ಯಗಳಿಂದ 9,192, 101 ಲಿಸ್ಟ್‌ ಎ ಪಂದ್ಯಗಳಿಂದ 2,948 ರನ್ ಹಾಗೂ ಎರಡು ಟಿ20 ಪಂದ್ಯಗಳಿಂದ 14 ರನ್ ಸಿಡಿಸಿದ್ದರು.