ಹೈದರಾಬಾದ್‌ನ ರಾಯದುರ್ಗಂ ಹಿಟ್ ಆಂಡ್ ರನ್ ಪ್ರಕರಣದಲ್ಲಿ ಖ್ಯಾತ ಕಲಾ ನಿರ್ದೇಶಕ ಆನಂದ್ ಸಾಯಿ ಪುತ್ರ ಸಂದೀಪ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಭೀಕರ ರಸ್ತೆ ಅಪಘಾತದಲ್ಲಿ ಬಿಹಾರ ಮೂಲದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಪ್ರಕರಣದ ಡಿಟೈಲ್ಸ್ ಇಲ್ಲಿದೆ.

ಹೈದರಾಬಾದ್‌ನ ರಾಯದುರ್ಗಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಭೀಕರ ಹಿಟ್ ಆಂಡ್ ರನ್ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಈ ಅಪಘಾತಕ್ಕೆ ಕಾರಣವಾದ ಇನ್ನೋವಾ ಕಾರು ಖ್ಯಾತ ಆರ್ಟ್‌ ನಿರ್ದೇಶಕ ಮತ್ತು ಟಿಟಿಡಿ ಮಂಡಳಿ ಸದಸ್ಯ ಆನಂದ್ ಸಾಯಿ ಅವರ ಪುತ್ರ ಸಂದೀಪ್‌ಗೆ ಸೇರಿದ್ದಾಗಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಖಾಜಾಗೂಡ ಮುಖ್ಯರಸ್ತೆಯಲ್ಲಿ ಘಟನೆ ಸಂಭವಿಸಿದೆ. ಬಿಹಾರ ಮೂಲದ ನಂದುಲಾಲ್ ಎಂಬುವವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅತಿ ವೇಗವಾಗಿ ಬಂದ ಇನ್ನೋವಾ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ನಂದುಲಾಲ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ಪ್ರಕರಣಕ್ಕೆ ಟ್ವಿಸ್ಟ್ 

ಈ ವೇಳೆ ಅಲ್ಲಿಗೆ ಬಂದ ಜೈದ್ ಶಾ ಖಾದ್ರಿ ಎಂಬ ವಿದ್ಯಾರ್ಥಿ ಮಾನವೀಯತೆ ಮೆರೆದು ಗಾಯಾಳು ನಂದುಲಾಲ್‌ನನ್ನು ಆಸ್ಪತ್ರೆಗೆ ಸಾಗಿಸಲು ತನ್ನ ವಾಹನಕ್ಕೆ ಹತ್ತಿಸಿಕೊಳ್ಳುತ್ತಿದ್ದರು. ಆದರೆ ಅದೇ ಸಮಯದಲ್ಲಿ ಹಿಂದಿನಿಂದ ಅತಿ ವೇಗವಾಗಿ ಬಂದ ಮತ್ತೊಂದು ಮಹೀಂದ್ರಾ ಕಾರು ಇವರಿಬ್ಬರಿಗೂ ಬಲವಾಗಿ ಡಿಕ್ಕಿ ಹೊಡೆದಿದೆ. ಈ ಎರಡನೇ ಡಿಕ್ಕಿಯಿಂದಾಗಿ ಈಗಾಗಲೇ ಗಂಭೀರವಾಗಿದ್ದ ನಂದುಲಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಹಾಯಕ್ಕೆ ಬಂದ ವಿದ್ಯಾರ್ಥಿ ಜೈದ್ ಶಾ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ನಡೆದ ನಂತರ ಎರಡೂ ಕಾರುಗಳು ನಿಲ್ಲಿಸದೆ ಪರಾರಿಯಾಗಿದ್ದವು. ಪ್ರಕರಣ ದಾಖಲಿಸಿಕೊಂಡ ರಾಯದುರ್ಗಂ ಪೊಲೀಸರು ಸಿಸಿಟಿವಿ ಫುಟೇಜ್‌ಗಳನ್ನು ಪರಿಶೀಲಿಸಿದಾಗ, ಮೊದಲು ಡಿಕ್ಕಿ ಹೊಡೆದ ಇನ್ನೋವಾ ಕಾರು ಆನಂದ್ ಸಾಯಿ ಅವರ ಪುತ್ರ ಸಂದೀಪ್‌ನದ್ದು ಎಂದು ದೃಢಪಟ್ಟಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಸಂದೀಪ್‌ನನ್ನು ಅರೆಸ್ಟ್ ಮಾಡಿ ಕಾರನ್ನು ವಶಪಡಿಸಿಕೊಂಡಿದ್ದಾರೆ.

ನಂದುಲಾಲ್ ಅವರಿಗೆ ಎರಡನೇ ಬಾರಿ ಡಿಕ್ಕಿ ಹೊಡೆದ ಮಹೀಂದ್ರಾ ಕಾರನ್ನು ಕೂಡ ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಪತ್ತೆ ಹಚ್ಚಿದ್ದು, ಆ ವಾಹನವನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಕಲಾ ನಿರ್ದೇಶಕ ಆನಂದ್ ಸಾಯಿ ಅವರು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿರುವ ದೊಡ್ಡ ಹೆಸರು. ಈಗ ಅವರ ಪುತ್ರನೇ ಇಂತಹ ಗಂಭೀರ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವುದು ಟಾಲಿವುಡ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸದ್ಯ ಪೊಲೀಸರು ತನಿಖೆ ಮುಂದುವರಿಸಿದ್ದು, ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ