ಪಹಲ್ಗಾಮ್ ದಾಳಿಯ ನಂತರ ದೇಶ ವಿರೋಧಿ ಸಾಮಾಜಿಕ ಜಾಲತಾಣ ಪೋಸ್ಟ್‌ಗಳಿಗಾಗಿ 19 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಶಾಸಕ, ಪತ್ರಕರ್ತ, ವಕೀಲ ಮತ್ತು ನಿವೃತ್ತ ಶಿಕ್ಷಕರು ಸೇರಿದ್ದಾರೆ. ಈ ಬಂಧನಗಳು ಅಸ್ಸಾಂ, ಮೇಘಾಲಯ ಮತ್ತು ತ್ರಿಪುರಾದಲ್ಲಿ ನಡೆದಿವೆ.
ಗುವಾಹಟಿ: 26 ಪ್ರವಾಸಿಗರನ್ನು ಬಲಿ ಪಡೆದ ಪಹಲ್ಗಾಮ್ ದಾಳಿಯ ನಂತರ ದಾಳಿಯನ್ನು ಸಮರ್ಥಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ದೇಶ ವಿರೋಧಿ ಪೋಸ್ಟ್ ಮಾಡಿದ ಒಟ್ಟು 19 ಜನರನ್ನು ಇದುವರೆಗೆ ಬಂಧಿಸಲಾಗಿದೆ. ಬಂಧಿತರಲ್ಲಿ ಓರ್ವ ಶಾಸಕ, ಮತ್ತೊರ್ವ ಪತ್ರಕರ್ತ, ವಕೀಲ, ನಿವೃತ್ತ ಶಿಕ್ಷಕ ಕೂಡ ಸೇರಿದ್ದಾರೆ. ಈಶಾನ್ಯ ಭಾರತದ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ತ್ರಿಪುರಾದಲ್ಲಿ ಈ ಬಂಧನ ನಡೆದಿದೆ. ಬರೀ ಅಸ್ಸಾಂವೊಂದರಲ್ಲೇ ಒಟ್ಟು 14 ಜನರನ್ನು ಬಂಧಿಸಲಾಗಿದೆ.
ಅಸ್ಸಾಂನಲ್ಲಿ ಶಾಸಕ ಸೇರಿ 14 ಜನ ಅಂಧರ್
ಅಸ್ಸಾಂನಲ್ಲಿ ಮೊದಲು ಬಂಧನವಾಗಿದ್ದು, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ನ ಶಾಸಕ ಅಮೀನುಲ್ ಇಸ್ಲಾಂ ಬಂಧಿತನಾದ ಮೊದಲ ವ್ಯಕ್ತಿ. ಈತ 2019 ರ ಪುಲ್ವಾಮಾ ದಾಳಿ ಮತ್ತು ಮಂಗಳವಾರದ ನಡೆದ ಪಹಲ್ಗಾಮ್ ದಾಳಿ ಎರಡೂ ಸರ್ಕಾರ ನಡೆಸಿದ ಪಿತೂರಿ ಎಂದು ಆರೋಪಿಸಿದ್ದಾನೆ. ಇದೇ ಕಾರಣಕ್ಕೆ ಗುರುವಾರ ಬಂಧಿಸಲಾಗಿದ್ದು, ಶುಕ್ರವಾರ 4 ದಿನಗಳ ಪೊಲೀಸ್ ಕಸ್ಟಡಿಗೆ ವಸಹಿಸಲಾಗಿದೆ.
ಶುಕ್ರವಾರದವರೆಗೆ ಅಸ್ಸಾಂನಲ್ಲಿ ಬಂಧಿಸಲಾದ ಇತರರ ವಿವರ ಹೀಗಿದೆ. ಹೈಲಕಂಡಿಯ ಮೊಹಮ್ಮದ್ ಜಬೀರ್ ಹುಸೇನ್, ಸಿಲ್ಚಾರ್‌ನ ಮೊಹಮ್ಮದ್ ಎಕೆ ಬಹಾವುದ್ದೀನ್ ಮತ್ತು ಮೊಹಮ್ಮದ್ ಜಾವೇದ್ ಮಜುಂದಾರ್, ಮೋರಿಗಾಂವ್‌ನ ಮೊಹಮ್ಮದ್ ಮಹಾಹರ್ ಮಿಯಾ ಮತ್ತು ಶಿವಸಾಗರ್‌ನ ಮೊಹಮ್ಮದ್ ಸಾಹಿಲ್ ಅಲಿ ಹೀಗೆ ಸೋಶಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿ ಬಂಧಿತರಾದವರು. ಹಾಗೆಯೇ ಕರೀಂಗಂಜ್‌ನ ಎಂಡಿ ಮುಸ್ತಾ ಅಹ್ಮದ್ ಅಲಿಯಾಸ್ ಸಹೇಲ್ ಎಂಬಾತ ಫೇಸ್‌ಬುಕ್‌ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಪೋಸ್ಟ್ ಮಾಡಿದ ನಂಥರ ಆತನನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಜಬೀರ್ ಹುಸೇನ್ ಒಬ್ಬ ಪತ್ರಕರ್ತನಾಗಿದ್ದರೆ, ಬಹಾವುದ್ದೀನ್ ಸಿಲ್ಚಾರ್‌ನ ಅಸ್ಸಾಂ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನ ವಿದ್ಯಾರ್ಥಿಯಾಗಿದ್ದಾನೆ. ಹಾಗೆಯೇ ಎಂಡಿ ಜಾವೇದ್ ಮಜುಂದಾರ್ ವಕೀಲಿಕೆ ವೃತ್ತಿ ಮಾಡುತ್ತಿದ್ದಾನೆ.
ಇದನ್ನೂ ಓದಿ:ಪಾಕಿಸ್ತಾನದ F-16 vs ಭಾರತದ ಸುಖೋಯ್ Su-30 MKI: ಯಾವುದು ಹೆಚ್ಚು ಡೇಂಜರ್?
ಹಾಗೇಯೇ ಶನಿವಾರವೂ ಅಸ್ಸಾಂ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ. ವಿದ್ಯಾರ್ಥಿ ಸಂಘಟನೆಯಾದ ಸತ್ರ ಮುಕ್ತಿ ಸಂಗ್ರಾಮ್ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಬಿಸ್ವಾನಾಥ್‌ದ ನಿವಾಸಿ ಅನಿಲ್ ಬನಿಯಾ ಹಾಗೂ 25 ವರ್ಷದ ಮೊಹಮ್ಮದ್ ಜಾರೀಪ್ ಅಲಿ ಎಂಬಾತನನ್ನು ಬಂಧಿಸಿದ್ದಾರೆ. ಇವರ ಜೊತೆ ಗೆಹೈಲಕಂಡಿಯಲ್ಲಿ ಸುಮೋನ್ ಮಜುಂದಾರ್ ಅಲಿಯಾಸ್ ಬುಲ್ಬುಲ್ ಅಲೋಮ್ ಮಜುಂದಾರ್, ನಾಗಾಂವ್‌ನಲ್ಲಿ ಮಶೂದ್ ಅಜರ್, ಹಾಗೂ ಗುವಾಹಟಿಯ ಹಜೋದಲ್ಲಿ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ದೇಶ ವಿರೋಧಿ ಪೋಸ್ಟ್ ಮಾಡಿದ ಕಾರಣಕ್ಕೆ ಈ ಬಂಧನವಾಗಿದೆ. ಹಾಗೆಯೇ ಕಚಾರ್ ಜಿಲ್ಲೆಯ ಪೊಲೀಸರು ಪಾಕಿಸ್ತಾನ ಪರ ಪೋಸ್ಟ್ ಮಾಡಿದ ಕಾರಣಕ್ಕೆ ಇಬ್ಬರನ್ನು ಬಂಧಿಸಿದ್ದಾರೆ.
ದೇಶ ವಿರೋಧಿಗಳ ವಿರುದ್ಧ ಕಠಿಣ ಕ್ರಮ
ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಗತ್ಯವಿದ್ದರೆ, ನಾವು ಅವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯ ನಿಬಂಧನೆಗಳನ್ನು ಹೇರುತ್ತೇವೆ. ನಾವು ಎಲ್ಲಾ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ದೇಶ ವಿರೋಧಿಗಳು ಎಂದು ನಾವು ಭಾವಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ಹೋಲಿಕೆಗಳಿಲ್ಲ. ಎರಡೂ ದೇಶಗಳು ಶತ್ರು ರಾಷ್ಟ್ರಗಳು ಮತ್ತು ನಾವು ಹಾಗೆಯೇ ಇರಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ:ಭಾರತ ಬಿಡಲು ಇಂದೇ ಕೊನೆ ದಿನ : 3 ದಿನಗಳಲ್ಲಿ ತೆರಳಿದ ಪಾಕಿಗಳ ಸಂಖ್ಯೆ ಕೇವಲ 450
ತ್ರಿಪುರಾದಲ್ಲಿ ನಾಲ್ವರು ಅಂದರ್
ಹಾಗೆಯೇ ತ್ರಿಪುರಾದಲ್ಲಿ, ಇಲ್ಲಿಯವರೆಗೆ ಇಬ್ಬರು ನಿವೃತ್ತ ಶಿಕ್ಷಕರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಧಲೈ ಜಿಲ್ಲೆಯ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ದೇಶ ವಿರೋಧಿ ಕಾಮೆಂಟ್‌ಗಳನ್ನು ಮಾಡಿದ್ದಕ್ಕಾಗಿ ನಿವೃತ್ತ ಶಿಕ್ಷಕ ಜವಾಹರ್ ದೇಬ್‌ನಾಥ್ ಮತ್ತು ಒಬ್ಬ ಕುಲದೀಪ್ ಮಂಡಲ್ ಅವರನ್ನು ಬಂಧಿಸಲಾಗಿದೆ. ಉತ್ತರ ತ್ರಿಪುರ ಜಿಲ್ಲೆಯ ಧರ್ಮನಗರದಲ್ಲಿ ಮತ್ತೊಬ್ಬ ನಿವೃತ್ತ ಶಿಕ್ಷಕ ಸಜಲ್ ಚಕ್ರವರ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ ಸೆಪಹಿಜಲಾ ಜಿಲ್ಲೆಯ ಸೋನಮುರಾದಲ್ಲಿ ಜಹಿರುಲ್ ಇಸ್ಲಾಂ ಎಂಬಾತನನ್ನು ಬಂಧಿಸಲಾಗಿದೆ. ಹೀಗಾಗಿ ತ್ರಿಪುರಾದಲ್ಲಿ ಒಟ್ಟು ಮೂವರನ್ನು ಬಂಧಿಸಲಾಗಿದೆ.
ಮೇಘಾಲಯ
ಹಾಗೆಯೇ ಮೇಘಾಲಯದಲ್ಲಿ, ಗುವಾಹಟಿಯ ಸುದ್ದಿ ವಾಹಿನಿಯೊಂದು ಪ್ರಸಾರ ಮಾಡಿದ ವೀಡಿಯೊಗೆ ದೇಶ ವಿರೋಧಿ ಕಾಮೆಂಟ್ ಪೋಸ್ಟ್ ಮಾಡಿದ ನಂತರ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ 30 ವರ್ಷದ ಸೈಮನ್ ಶಿಲ್ಲಾ ಎಂಬ ವ್ಯಕ್ತಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
