ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನ ಪ್ರಜೆಗಳಿಗೆ ತಾಯ್ನಾಡಿಗೆ ಮರಳಲು ನೀಡಿದ್ದ ಗಡುವು ಇಂದು ಅಂತ್ಯಗೊಳ್ಳಲಿದೆ. ಭಾರತ ತೊರೆಯದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದ್ದು, ಪಾಕಿಸ್ತಾನಿ ಹಿಂದೂ ನಿರಾಶ್ರಿತರು ಆತಂಕಕ್ಕೆ ಒಳಗಾಗಿದ್ದಾರೆ.
ನವದೆಹಲಿ: ಪಹಲ್ಗಾಮ್ ದಾಳಿಯ ಹಿನ್ನೆಲೆಯಲ್ಲಿ ತೆಗೆದುಕೊಂಡ ರಾಜತಾಂತ್ರಿಕ ಕ್ರಮಗಳ ಭಾಗವಾಗಿ ಭಾರತದಲ್ಲಿ ನೆಲೆಸಿರುವ ಎಲ್ಲಾ ಪಾಕಿಸ್ತಾನ ಪ್ರಜೆಗಳಿಗೆ ತಾಯ್ಯಾಡಿಗೆ ಮರಳಲು ಕೇಂದ್ರ ಸರ್ಕಾರ ನೀಡಿದ್ದ ಗಡುವು ಏ.27ರಂದು ಅಂದರೆ ಇಂದು ಸಂಜೆಗೆ ಮುಗಿಯಲಿದೆ. ಒಂದು ವೇಳೆ ಭಾನುವಾರ ಸಂಜೆಯೊಳಗೆ ಭಾರತ ತೊರೆಯದ ಪಾಕ್ ಪ್ರಜೆಗಳ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ನಿಮ್ಮ ನಿಮ್ಮ ರಾಜ್ಯ ಗಳಲ್ಲಿರುವ ಪಾಕ್ ಪ್ರಜೆಗಳನ್ನು ಹುಡುಕಿ ಏ.27ರೊಳಗೆ ದೇಶ ಬಿಡುವುದನ್ನು ಖಚಿತಪಡಿಸಿಕೊಳ್ಳಿ ಎಂದು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ, ಎಲ್ಲಾ ರಾಜ್ಯಗಳ ಸಿಎಂಗಳಿಗೆ ಸೂಚಿಸಿದ್ದಾರೆ.
ಇದರ ಭಾಗವಾಗಿ ಕಳೆದ 3 ದಿನ ಗಳಲ್ಲಿ ಕೇವಲ 450 ಪಾಕ್ ಪ್ರಜೆಗಳು ಮಾತ್ರವೇ ವಾಘಾ -ಅಟ್ಟಾರಿ ಗಡಿ ಮೂಲಕ ತಾಯ್ಕಾಡಿಗೆ ತೆರಳಿದ್ದಾರೆ. ಆದರೆ ರಾಜಸ್ಥಾನದಲ್ಲಿ 20000, ಮಹಾರಾಷ್ಟ್ರದಲ್ಲಿ 5000 ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಹೀಗೆ ವೀಸಾ ರದ್ದಾಗಲಿರುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿದೆ. ಅವರೆಲ್ಲಾ ಭಾನುವಾರ ಪಾಕಿಸ್ತಾನಕ್ಕೆ ಮರಳುವ ಸಾಧ್ಯತೆ ತೀರಾ ಕಡಿಮೆಯಿದೆ. ಹೀಗಾಗಿ ಕೇಂದ್ರ ಸೋಮವಾರದ ಬಳಿಕ ಇವರ ವಿರುದ್ಧ ಏನು ಕ್ರಮ ಕೈಗೊಳ್ಳಲಿದೆ ಎಂಬ ಕುತೂಹಲ ಇದೆ.
ಪಾಕಿಸ್ತಾನಕ್ಕೆ ಹೋಗುವುದಕ್ಕಿಂತ ಭಾರತದಲ್ಲಿ ಸಾಯುವುದೇ ಲೇಸು : ಕಣ್ಣೀರು
ಜೈಸಲ್ವೇರ್: ಪಹಲ್ಗಾಮ್ ದಾಳಿಯ ಬಳಿಕ ಭಾರತದಲ್ಲಿನ ಪಾಕಿಸ್ತಾನಿ ಪ್ರಜೆಗಳು ಭಾರತ ಬಿಟ್ಟು ತೆರಳಲು ಗಡುವು ಮುಕ್ತಾಯವಾಗುತ್ತಿದ್ದಂತೆ ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಹಿಂದೂ ನಿರಾಶ್ರಿತರು ಆತಂಕಕ್ಕೆ ಒಳಗಾಗಿದ್ದಾರೆ. 'ಪಾಕಿಸ್ತಾನದಲ್ಲಿ ಹಿಂದೂ ಅಲ್ಪಸಂಖ್ಯಾತರ ಪರಿಸ್ಥಿತಿ ಹದಗೆಡುತ್ತಿದ್ದು, ಪಾಕ್‌ನಂತಹ ನರಕಕ್ಕೆ ನಮ್ಮನ್ನು ಕಳುಹಿಸಬೇಡಿ' ಎಂದು ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ ಸೇನಾ ಮುಖ್ಯಸ್ಥ ಮುನೀರ್ ಪದಚ್ಯುತಿಗೆ ಪಾಕ್ ನಾಗರಿಕರಿಂದಲೇ ಆಗ್ರಹ
ಪಾಕ್‌ನಲ್ಲಿನ ಧಾರ್ಮಿಕ ಕಿರುಕುಳದಿಂದ ಪಲಾಯನಗೈದು ಬಂದಿದ್ದ ಹಿಂದೂ ನಿರಾಶ್ರಿತರು ಭಾರತ ಸರ್ಕಾರದ ನಿರ್ಧಾರದಿಂದ ಮತ್ತೆ ಚಿಂತೆಗೀಡಾಗಿದ್ದಾರೆ. ಮಾಧ್ಯಮಗಳಲ್ಲಿ ಅವರು ತಮ್ಮ ಆತಂಕ ತೋಡಿಕೊಂಡಿದ್ದು, ಗಡೀಪಾರು ಚಿಂತೆಯಲ್ಲಿರುವ ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂ ನಿರಾಶ್ರಿತರು , 'ಪಾಕಿಸ್ತಾನದಂತಹ ನರಕಕ್ಕೆ ಮರಳುವ ಆಲೋಚನೆ ಚಿಂತೆಗೀಡು ಮಾಡಿದೆ. ಅಂತಹ ನರಕಕ್ಕೆ ಹೋಗುವ ಬದಲು ಭಾರತದಲ್ಲಿ ಸಾಯುವುದೇ ಸ್ವೀಕಾರಾರ್ಹ. ನಮ್ಮಲ್ಲಿದ್ದ ಎಲ್ಲವನ್ನು ಬಿಟ್ಟು ಬಂದಿದ್ದೇವೆ. ದಯವಿಟ್ಟು ಪಾಕ್‌ಗೆ ವಾಪಸ್ ಕಳುಹಿಸಬೇಡಿ' ಎಂದು ಮನವಿ ಮಾಡಿದ್ದಾರೆ. ರಾಜಸ್ಥಾನವೊಂದರಲ್ಲೇ ಇಂಥ 20000ಕ್ಕೂ ಹೆಚ್ಚು ಹಿಂದೂ ನಿರಾಶ್ರಿತರು ಇದ್ದಾರೆ. ಹಿಂದೂ ನಿರಾಶ್ರಿತರ ಪೌರತ್ವ ಅರ್ಜಿಗಳು ಇನ್ನೂ ಇತ್ಯರ್ಥವಾಗದ ಹಿನ್ನೆಲೆಯಲ್ಲಿ ಇವರೆಲ್ಲಾ ಸಂಕಷ್ಟದಲ್ಲಿದ್ದಾರೆ.
ಇದನ್ನೂ ಓದಿ: ಲಾಹೋರ್ ಕಸಿಯುತ್ತೀರಾ? ಕೆಲವೇ ಗಂಟೆಗಳಲ್ಲಿ ನೀವೇ ವಾಪಸ್ ಕೊಡ್ತೀರಾ: ಪಾಕಿಗಳಿಂದಲೇ ಪಾಕ್ ಸರ್ಕಾರ ಟ್ರೋಲ್!
ನದಿಯಲ್ಲಿ ನೀರು ಇಲ್ಲವೇ, ಭಾರತೀಯರ ರಕ್ತ ಎಂದ ಬಿಲಾವಲ್‌ಗೆ ಪುರಿ ಟಾಂಗ್
ಇಸ್ಲಾಮಾಬಾದ್: 'ಭಾರತ ಪಾಕಿಸ್ತಾನಕ್ಕೆ ಸಿಂಧೂ ನದಿ ನೀರನ್ನು ನಿಲ್ಲಿಸಿದರೆ ನದಿಗಳಲ್ಲಿ ರಕ್ತ ಹರಿಯುತ್ತದೆ. ಸಿಂಧೂ ನಮ್ಮದು. ಅದು ನಮ್ಮದಾಗಿಯೇ ಉಳಿಯುತ್ತದೆ. ಅದರ ಮೂಲಕ ನಮ್ಮ ನೀರು ಹರಿಯುತ್ತದೆ ಅಥವಾ ಅವರ ರಕ್ತ ಹರಿಯುತ್ತದೆ ಎಂದು ಪಾಕಿಸ್ತಾನ ಪೀಪಲ್ಸ್ ಪಕ್ಷದ ಮುಖ್ಯಸ್ಥ, ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಹೇಳಿದ್ದಾರೆ. ಭುಟ್ಟೋ ಹೇಳಿಕೆಗೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರತಿಕ್ರಿಯಿಸಿದ್ದು, ಅವರಿಗೆ ನೀರಿನಲ್ಲಿ ಹಾರಲು ಹೇಳಿ. ಮಾನಸಿಕ ಪರಿಸ್ಥಿತಿಯನ್ನು ಪರೀಕ್ಷಿಸಿಕೊಳ್ಳಲು ಹೇಳಿ. ಇದು ಕೇವಲ ಆರಂಭ. ಪಾಕಿಸ್ತಾನ ಕೇವಲ ರಾಕ್ಷಸ ರಾಷ್ಟ್ರವಲ್ಲ. ಅಳಿವಿನಂಚಿನಲ್ಲಿರುವ ದೇಶ ಎಂದರು.
