ಅಂಬಾಲಾದಲ್ಲಿ, ಮಹಿಳೆಯ ನಕಲಿ ಫೇಸ್‌ಬುಕ್ ಖಾತೆಯ ಮೂಲಕ ಹನಿಟ್ರ್ಯಾಪ್‌ಗೆ ಒಳಗಾದ 31 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈತ ಭಾರತೀಯ ಸೇನೆ ಮತ್ತು ಏರ್‌ಫೋರ್ಸ್‌ಗೆ ಸಂಬಂಧಿಸಿದ ಸೂಕ್ಷ್ಮ ಹಾಗೂ ಗೌಪ್ಯ ಮಾಹಿತಿಗಳನ್ನು ಪಾಕಿಸ್ತಾನದ ಐಎಸ್‌ಐ ಹ್ಯಾಂಡಲರ್‌ಗಳೊಂದಿಗೆ ಹಂಚಿಕೊಂಡಿದ್ದಾನೆ.

ಅಂಬಾಲಾ: ಮಹಿಳೆಯೆಂದು ನಕಲಿ ಫೇಸ್‌ಬುಕ್ ಖಾತೆಯ ಸಹವಾಸಕ್ಕೆ ಬಿದ್ದು, ತನ್ನ ಬಂಡವಾಳವೆಲ್ಲವನ್ನು ತೆರೆದಿಟ್ಟಿದ್ದಲ್ಲದೇ ದೇಶದ ರಹಸ್ಯಗಳನ್ನು ಪಾಕಿಸ್ತಾನ ಐಎಸ್‌ಐ ಜೊತೆ ಹಂಚಿಕೊಂಡ 31 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಭಾರತೀಯ ಸೇನೆ ಹಾಗೂ ಏರ್‌ಫೋರ್ಸ್‌ಗೆ ಸಂಬಂಧಿಸಿದ ರಹಸ್ಯ ವಿಚಾರಗಳನ್ನು ಆರೋಪಿ ಪಾಕಿಸ್ತಾನದ ಹ್ಯಾಂಡಲರ್‌ಗಳ ಜೊತೆ ಹಂಚಿಕೊಂಡಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಸಂಪರ್ಕಕ್ಕೆ ಸಿಲುಕಿ ಹನಿಟ್ರ್ಯಾಪ್‌ಗೆ ಒಳಗಾದ ಆ ಯುವಕ ಬಳಿಕ ದೇಶಕ್ಕೆ ಸಂಬಂಧಿಸಿದ ರಹಸ್ಯಗಳನ್ನು ತೆರೆದಿಟ್ಟಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಯಾಣದ ಅಂಬಾಲಾದ ಸಬ್ಗಾ ಗ್ರಾಮದ ನಿವಾಸಿಯಾಗಿದ್ದಾನೆ. ಆತನನ್ನು ಅಂಬಾಲಾದ ಬಸ್‌ ನಿಲ್ದಾಣದ ಸಮೀಪ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತನಿಖಾಧಿಕಾರಿಗಳ ಪ್ರಕಾರ, ಸುನೀಲ್ ಕಲೆದ ಆರೇಳು ತಿಂಗಳಿನಿಂದ ಸೋಶಿಯಲ್ ಮೀಡಿಯಾದ ಮೂಲಕ ಪಾಕಿಸ್ತಾನಿ ಹ್ಯಾಂಡಲರ್‌ಗಳ ಸಂಪರ್ಕದಲ್ಲಿದ್ದ. ಆತನಿಗೆ ಫೇಸ್‌ಬುಕ್‌ನಲ್ಲಿ ಮಹಿಳೆಯ ಹೆಸರು ಫೋಟೋದ ಜೊತೆಗೆ ಇದ್ದ ನಕಲಿ ಖಾತೆಯ ಮೂಲಕ ಪಾಕಿಸ್ತಾನಿ ಹ್ಯಾಂಡಲರ್‌ಗಳು ಬಲೆ ಬೀಸಿದ್ದರು. ಭಾವನಾತ್ಮಕವಾಗಿ ತಂತ್ರ ಬಳಸಿ ಪ್ರಚೋದನೆ ಮಾಡಿ ನಂತರ ಬ್ಲಾಕ್‌ಮೇಲ್ ಮಾಡಿ ರಹಸ್ಯಗಳನ್ನು ಹೊರಗೆಳೆಯಲಾಗಿತ್ತು. ಆರೋಪಿ ಸುನಿಲ್ ಖಾಸಗಿ ಕಂಟ್ರಾಕ್ಟರ್ ಆಗಿ ಕೆಲಸ ಮಾಡುತ್ತಿದ್ದು, ಆತನಿಗೆ ಏರ್ ಫೋರ್ಸ್ ಸ್ಟೇಷನ್‌ಗೆ ನಿರಂತರ ಪ್ರವೇಶವಿತ್ತು. ಅಲ್ಲಿ ಅವರು ವಿವಿಧ ಮಿಲಿಟರಿ ಘಟಕಗಳಲ್ಲಿ ನಿರ್ಮಾಣ ಯೋಜನೆಗಳಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು.

ತಮಗೆ ಇದ್ದ ಈ ಅವಕಾಶಗಳನ್ನೇ ಬಳಸಿಕೊಂಡು ಅವರು ವಿವಿಧ ಮಿಲಿಟರಿ ಯುನಿಟ್‌ಗಳಿಗೆ ಸೇರಿದ ಅತ್ಯಂತ ಗೌಪ್ಯ ಮಾಹಿತಿಗಳನ್ನು, ಸೇನೆಯ ಚಲನವಲನಗಳಿಗೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಂಡಿದ್ದಾನೆ. ಈತನನ್ನು ಬಂಧಿಸಿರುವ ಪೊಲೀಸರು ಆತನ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದು, ಅದರಲ್ಲಿ ಆತ ಪಾಕಿಸ್ತಾನಿ ಹ್ಯಾಂಡಲರ್‌ಗಳ ಜೊತೆಗೆ ಮಾತನಾಡುತ್ತಿದ್ದ ವಾಯ್ಸ್ ಕಾಲ್ ರೆಕಾರ್ಡ್‌ಗಳು ವಾಟ್ಸಾಪ್ ಚಾಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಆತನ ಬ್ಯಾಂಕ್ ಖಾತೆಯನ್ನು ಕೂಡ ಏನಾದರೂ ಅನುಮಾನಾಸ್ಪದ ಹಣಕಾಸಿನ ವರ್ಗಾವಣೆಯಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಲು ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಮನೆಯಲ್ಲಿ ಜಾಗ ಇಲ್ಲ : ಅಮ್ಮನ ವೃದ್ಧಾಶ್ರಮಕ್ಕೆ ಕರೆತಂದ ಮಗಳು: ಮಗಳ ಮಾತಿಗೆ ಕಣ್ಣೀರಿಟ್ಟ ವೃದ್ಧ ತಾಯಿ

ಹೆಚ್ಚಿನ ವಿಚಾರಣೆಗಾಗಿ ಸುನಿಲ್‌ನನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಅಂಬಾಲಾ ಅಪರಾಧ ಡಿಎಸ್‌ಪಿ ವೀರೇಂದ್ರ ಕುಮಾರ್ ತಿಳಿಸಿದ್ದಾರೆ. ಅವನು ಒಬ್ಬಂಟಿಯಾಗಿ ಈ ಕೆಲಸದಲ್ಲಿ ಭಾಗಿಯಾಗಿದ್ದಾನೋ ಅಥವಾ ಇತರರು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ. ವಿಚಾರಣೆಯ ಸಮಯದಲ್ಲಿ ಆತ ಮತ್ತಷ್ಟು ವಿಚಾರಗಳನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮೊದಲು ನಕಲಿ ಆನ್‌ಲೈನ್ ಖಾತೆಗಳನ್ನು ಸೃಷ್ಟಿಸಿ ನಂತರ ಹಣಕ್ಕಾಗಿ ಸೂಕ್ಷ್ಮ ಮಿಲಿಟರಿ ಮಾಹಿತಿಯನ್ನು ಪಡೆಯುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ದುರಸ್ಥಿ ವೇಳೆ ಒಎನ್‌ಜಿಸಿ ತೈಲ ಬಾವಿಗೆ ಬೆಂಕಿ: ಬಾನ್ನೆತ್ತರಕ್ಕೆ ಅಗ್ನಿ ಜ್ವಾಲೆ: ಸ್ಥಳೀಯರ ಸ್ಥಳಾಂತರ