ಬೆಂಗಳೂರಿನಲ್ಲಿ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ಯುವತಿಯೊಬ್ಬಳು ಟೆಕ್ಕಿಯನ್ನು ಲೈಂಗಿಕ ಸಂಪರ್ಕದ ಆಮಿಷವೊಡ್ಡಿ ತನ್ನ ರೂಮಿಗೆ ಕರೆದೊಯ್ದು, ಸ್ನೇಹಿತರ ಜೊತೆ ಸೇರಿ 2 ಲಕ್ಷ ರೂ. ದರೋಡೆ ಮಾಡಿದ್ದಾರೆ. ಪೊಲೀಸರಿಂದ 6 ಮಂದಿ ಆರೋಪಿಗಳ ಬಂಧನ. ಬೇಕಿಂಗ್ ಸೋಡಾವನ್ನು ಡ್ರಗ್ಸ್ ಎಂದು ಬಿಂಬಿಸಿ ಹಣ ದೋಚಿದ್ದಾರೆ.
ಬೆಂಗಳೂರು (ಜು.28): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ಡೇಟಿಂಗ್ ಆ್ಯಪ್ ಮೂಲಕ ಪರಿಚಯ ಮಾಡಿಕೊಂಡ ಯುವತಿಯೊಬ್ಬಳು, ಆತನನ್ನು ಲೈಂಗಿಕ ಸಂಪರ್ಕದ ಆಮಿಷವೊಡ್ಡಿ ತನ್ನ ರೂಮಿಗೆ ಕರೆದೊಯ್ದಿದ್ದಾಳೆ. ಆಕೆ ಬ್ಯಾಗ್‌ನಲ್ಲಿ ಅಡುಗೆ ಸೋಡಾದ ಪ್ಯಾಕೆಟ್ ಒಂದನ್ನು ಇಟ್ಟುಕೊಂಡಿದ್ದು, ಅಲ್ಲಿಗೆ ದಾಳಿ ಮಾಡುವ ನೆಪದಲ್ಲಿ ಬಂದ ಯುವಕರ ಗುಂಪೊಂದು ನೀವು ಡ್ರಗ್ಸ್ ಪಾರ್ಟಿ ಮಾಡುತ್ತಿದ್ದೀರಿ ಎಂದು ಆರೋಪ ಮಾಡಿ ಥಳಿಸಿ, ನಿಮ್ಮನ್ನು ಪೊಲೀಸರಿಗೆ ಒಪ್ಪಿಸುವುದಾಗಿ ಬೆದರಿಸಿ ಟೆಕ್ಕಿಯಿಂದ 2 ಲಕ್ಷ ರೂ. ದರೋಡೆ ಮಾಡಿದ್ದಾರೆ. ಈ ಸಂಬಂಧ ಯಲಹಂಕ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರು: ಶರಣಬಸ್ಸಪ್ಪ, ರಾಜು ಮಾನೆ, ಶ್ಯಾಮ್ ಸುಂದರ್, ಅಭಿಶೇಕ್, ಬೀರ್ ಬಲ್ ಮತ್ತು ಸಂಗೀತಾ ಎಂಬುವರನ್ನು ಬಂಧಿಸಲಾಗಿದ್ದು, ಇವರು ಸೇರಿ ಯೋಜಿತವಾಗಿ ದರೋಡೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಟೆಕ್ಕಿ ರಾಕೇಶ್ ರೆಡ್ಡಿ ಎಂಬವರು 'ಪಂಬಲ್' ಎಂಬ ಡೇಟಿಂಗ್ ಆ್ಯಪ್ ಮೂಲಕ ಸಂಗೀತಾ ಎಂಬ ಯುವತಿಗೆ ಪರಿಚಿತರಾಗಿದ್ದರು. ಸಂಗೀತಾ ತನ್ನ ಯಲಹಂಕದ ಮನೆಯಲ್ಲಿಗೆ ಆಹ್ವಾನಿಸಿ, ಲೈಂಗಿಕ ಕ್ರಿಯೆಗೆ ಪ್ರಲೋಭನೆ ನೀಡಿದ್ದಾಳೆ. ಈ ವೇಳೆ, ತನ್ನ ಬ್ಯಾಗ್‌ನಲ್ಲಿ ಬೇಕಿಂಗ್ ಸೋಡಾ ಇಟ್ಟುಕೊಂಡು, ಇದು ಡ್ರಗ್ಸ್ ಎಂದು ಆತನ ಮುಂದೆ ನಾಟಕವಾಡಿದ್ದಾಳೆ. ಇನ್ನೊಂದೆಡೆ, ಆಗಲೇ ತಯಾರಿ ಮಾಡಿಕೊಂಡಿದ್ದ ಆಕೆಯ ಸಹಚರರು ಆ ಮನೆಯೊಳಕ್ಕೆ ನುಗ್ಗಿ ರಾಕೇಶ್ ರೆಡ್ಡಿಗೆ ಹಲ್ಲೆ ಮಾಡಿದ್ದಾರೆ. ನಂತರ, 'ಡ್ರಗ್ ಪಾರ್ಟಿ ಮಾಡ್ತಿದ್ದೀಯ' ಎಂದು ಬೆದರಿಸಿ, ಪೊಲೀಸರಿಗೆ ಹಿಡಿದುಕೊಡುವುದಾಗಿ ಧಮಕಿ ಹಾಕಿದ್ದಾರೆ.
ಹಣ ಕೊಡು ಅಥವಾ ಜೈಲು ಹೋಗು: ಈ ಬೆದರಿಕೆಯ ನಡುವೆ, 6 ಮಂದಿ ಸೇರಿ ಟೆಕ್ಕಿಯಿಂದ 2 ಲಕ್ಷ ರೂಪಾಯಿ ಹಣವನ್ನು ಬಲವಂತವಾಗಿ ಪಡೆದಿದ್ದಾರೆ. ದೂರು ನೀಡಿದ ರಾಕೇಶ್ ರೆಡ್ಡಿಯ ಹೇಳಿಕೆಯಂತೆ ಯಲಹಂಕ ಪೊಲೀಸರು ತನಿಖೆ ಆರಂಭಿಸಿ, ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಯಶಸ್ವಿಯಾಗಿ ಈ ಗ್ಯಾಂಗ್‌ನ ಇಡೀ ಜಾಲವನ್ನು ಬಯಲಾಗಿಸಿ, ಆರು ಮಂದಿಯನ್ನು ಬಂಧಿಸಿರುವ ಯಲಹಂಕ ಪೊಲೀಸರು ಇದೀಗ ಮತ್ತಷ್ಟು ಜನ ಗ್ಯಾಂಗ್ ಸದಸ್ಯರು ಇದ್ದಾರಾ ಎಂಬ ಹಿನ್ನಲೆಯಲ್ಲಿ ತನಿಖೆ ಮುಂದುವರೆಸಿದ್ದಾರೆ.
ಡೇಟಿಂಗ್ ಆ್ಯಪ್ ಬಳಸಿಕೊಂಡು ಈ ರೀತಿಯ ಹನಿಟ್ರ್ಯಾಪ್ ಮೂಲಕ ದರೋಡೆ ಮಾಡಿದ ಈ ಗ್ಯಾಂಗ್ ವಿರುದ್ಧ ಇನ್ನಷ್ಟು ಜನರನ್ನು ಇವರು ವಂಚನೆ ಮಾಡಿ, ಮೋಸ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಸಾರ್ವಜನಿಕರನ್ನು ಎಚ್ಚರಿಕೆ ವಹಿಸಲು ಹಾಗೂ ಇಂತಹ ಪ್ರಕರಣಗಳಲ್ಲಿ ತಕ್ಷಣವೇ ದೂರು ನೀಡಲು ಸಲಹೆ ನೀಡಿದ್ದಾರೆ.
