ಅಯೋಧ್ಯೆಯ ರಾಮಮಂದಿರ ದರೋಡೆ ಪ್ರಕರಣದಲ್ಲಿ, 15 ಸಾವಿರ ಸಂಬಳ ಪಡೆಯುತ್ತಿದ್ದ ಅವಿನಾಶ್ ಶುಕ್ಲಾ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಕದ್ದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದ ಈತ, ಗ್ಯಾಂಗ್‌ನ ರಹಸ್ಯ ಸಭೆಗಳು ಮತ್ತು ಹಣದ ಬಳಕೆಯ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದು, ಪೊಲೀಸರು ಸಂಪೂರ್ಣ ಜಾಲವನ್ನು ಭೇದಿಸುತ್ತಿದ್ದಾರೆ.
ಅಯೋಧ್ಯೆಯ ರಾಮಮಂದಿರದಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿ ದರೋಡೆ, ಚಿನ್ನಾಭರಣ ಲೂಟಿಯ ಬಗ್ಗೆ ದಿನದಿಂದ ದಿನಕ್ಕೆ ಒಂದೊಂದೇ ಮಾಹಿತಿಗಳು ಹೊರಬರುತ್ತಿವೆ. ಇದಾಗಲೇ ಕೆಲವರನ್ನು ಪೊಲೀಸರು ಅರೆಸ್ಟ್ ಮಾಡಿ ತಮ್ಮದೇ ಆದ ರೀತಿಯಲ್ಲಿ ಬಾಯಿ ಬಿಡಿಸುತ್ತಿದ್ದಾರೆ. ಇದೀಗ ಐಷಾರಾಮಿ ಜೀವನ ನಡೆಸುತ್ತಿದ್ದ 15 ಸಾವಿರ ರೂಪಾಯಿ ಸಂಬಳದ ಅವಿನಾಶ್ ಶುಕ್ಲಾ ಶಾಕಿಂಗ್ ವಿಷ್ಯವನ್ನು ಬಹಿರಂಗಪಡಿಸಿದ್ದಾರೆ. ಇದರಲ್ಲಿ ಭಾಗಿಯಾದವರು ಯಾರು, ಎಲ್ಲರೂ ಸೇರಿ ಹೇಗೆ ಸಭೆ ನಡೆಸುತ್ತಿದ್ದೆವು, ಅವರ ಗುಪ್ತ ಜಾಗ ಯಾವುದಾಗಿತ್ತು ಎಲ್ಲವನ್ನೂ ವಿವರಿಸಿದ್ದಾನೆ.
15 ಸಾವಿರ ಸಂಬಳ: ಐಷಾರಾಮಿ ಜೀವನ
ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ ಮತ್ತು ರಾಮಶಂಕರ್ ಮಿಶ್ರಾ ಸೇರಿದಂತೆ ನಮಗೆಲ್ಲರೂ ಈ ಕಳ್ಳತನದ ಮಾಹಿತಿ ಇತ್ತು. ಕಳ್ಳತನ ಮಾಡಿದ ನಂತರ, ನಾವೆಲ್ಲಾ ರಹಸ್ಯವಾಗಿ ಭೇಟಿಯಾಗಿ ಸಭೆಗಳನ್ನು ನಡೆಸುತ್ತಿದ್ದೆವು. ಸಭೆಗಳಿಗಾಗಿ 14 ಕೋಸಿ ಪರಿಕ್ರಮ ಮಾರ್ಗದಲ್ಲಿರುವ ಏಕಾಂತ ಪ್ರದೇಶವನ್ನು ಆರಿಸಿಕೊಂಡಿದ್ದೆವು ಎಂದು ಆರೋಪಿ ಬಾಯಿ ಬಿಟ್ಟಿದ್ದಾನೆ. ಮಾತ್ರವಲ್ಲದೇ, ಅವಿನಾಶ್ ಶುಕ್ಲಾಗೆ ಬರುತ್ತಿದ್ದುದು 15 ಸಾವಿರ ರೂಪಾಯಿ ಸಂಬಳ, ಆದರೆ ಕದ್ದ ಹಣದಿಂದ ಲಕ್ಷ ಲಕ್ಷ ಹಣವನ್ನು ಗರ್ಲ್‌ಫ್ರೆಂಡ್ ಅಕೌಂಟ್‌ಗೆ ಹಾಕಿದ್ದ. ಅವಳಿಗೆ ದುಬಾರಿ ಬೆಲೆಯ ಐಫೋನ್ ಗಿಫ್ಟ್ ಕೊಟ್ಟಿದ್ದ. ಹೊಸ ಮನೆ ಕಟ್ಟಿಸಿ, ಸ್ವಂತ ಕಾರನ್ನು ಕೂಡ ಖರೀದಿ ಮಾಡಿದ್ದ. ತನ್ನ ಸಹೋದರ ಅಭಿಷೇಕ್ ಹೆಸರಿನಲ್ಲಿ ಕಾರನ್ನು ನೋಂದಣಿ ಮಾಡಿಸಿದ್ದ, ಅವರು ಶಿಕ್ಷಕರಾಗಿರುವ ಕಾರಣ, ಯಾರಿಗೂ ಸಂಶಯ ಬರಲಾರದು ಎನ್ನುವುದು ಆತನ ಪ್ಲ್ಯಾನ್ ಆಗಿತ್ತು ಎನ್ನುವುದು ತಿಳಿದಿದೆ.
ವಿಚಾರಣೆಯ ಸಮಯದಲ್ಲಿ, ಮೊದಲಿಗೆ ಏನನ್ನು ಬಾಯಿ ಬಿಟ್ಟಿರಲಿಲ್ಲ ಅವಿನಾಶ್ ಶುಕ್ಲಾ. ಆಮೇಲೆ ಆತನಿಗೆ ಕಳೆದ 45 ದಿನಗಳ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಲಾಯಿತು. ದೃಶ್ಯಾವಳಿಯಲ್ಲಿ ಕಾಣಿಕೆಗಳಿಂದ ಹಣವನ್ನು ತೆಗೆದಯುತ್ತಿರುವ ದೃಶ್ಯ ನೋಡುತ್ತಿದ್ದಂತೆಯೇ ಬೆವರು ಇಳಿಸಿಕೊಂಡ ಅವಿನಾಶ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಅಯೋಧ್ಯಾ ಪೊಲೀಸ್ ಮೂಲಗಳ ಪ್ರಕಾರ, ರಾಮ ದೇವಾಲಯ ಕಾಣಿಕೆ ಕಳ್ಳತನ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಯ ಭೂಮಿ ಮತ್ತು ಬ್ಯಾಂಕ್ ದಾಖಲೆಗಳನ್ನು ಪಡೆದುಕೊಂಡಿದ್ದಾನೆ ಮತ್ತು ಅಪರಾಧದ ಸಂಭಾವ್ಯ ಆದಾಯವನ್ನು ನಿರ್ಧರಿಸಲು ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ. ಕಂದಾಯ ಇಲಾಖೆಯಿಂದ ಪಡೆದ ಸುಮಾರು 20 ಭೂ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗಳು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸೇರಿದ ನಂತರ ಈ ಆಸ್ತಿಗಳನ್ನು ಖರೀದಿಸಲಾಗಿದೆಯೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ, ಏಕೆಂದರೆ ಇದು ಅಪರಾಧಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಮತ್ತಷ್ಟು ಮಾಹಿತಿ ಸಂಗ್ರಹ
ಕದ್ದ ಹಣದಿಂದ ಬ್ರೆಝಾ ಕಾರನ್ನು ಖರೀದಿಸಲಾಗಿದೆ ಎಂದು ಅವಿನಾಶ್ ಬಹಿರಂಗಪಡಿಸಿದ್ದರಿಂದ ಬ್ರೆಝಾ ಕಾರನ್ನು ಪತ್ತೆಹಚ್ಚಿದ ಪೊಲೀಸರು ತಕ್ಷಣ ಪ್ರತಾಪ್‌ಗಢದಲ್ಲಿರುವ ಅವರ ಸಹೋದರನ ಮನೆಗೆ ಹೋದರು. ಈ ನಿಟ್ಟಿನಲ್ಲಿ ಪೊಲೀಸರು ಆರೋಪಿಯ ಸಹೋದರ ಅಭಿಷೇಕ್ ಅವರನ್ನು ಸಹ ಪ್ರಶ್ನಿಸಿದ್ದಾರೆ. ಕದ್ದ ಹಣದ ಬಳಕೆ ಮತ್ತು ಆಸ್ತಿ ಖರೀದಿಯಲ್ಲಿ ಯಾರು ಪಾತ್ರ ವಹಿಸಿದ್ದಾರೆ ಎಂಬುದರ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದರ ಕಿಂಗ್ಪಿನ್ ರಾಮಶಂಕರ್ ಯಾದವ್ ಉರ್ಫ್ ಟಿನ್ನು ಯಾದವ್ ಅವರ ಸೋದರಳಿಯ ಕೂಡ ಕಳ್ಳತನದ ನಂತರದ ಸಭೆಗಳಿಗೆ ಹಾಜರಾಗುತ್ತಿರುವುದು ತಿಳಿದಿದೆ. ಕಾಣಿಕೆ ಕಳ್ಳತನ ಪ್ರಕರಣ ಬೆಳಕಿಗೆ ಬರುವ ಮೊದಲು, ಮೇ ಕೊನೆಯ ವಾರದಲ್ಲಿ ಆರೋಪಿಗಳ ದೊಡ್ಡ ಸಭೆ ನಡೆದಿತ್ತು ಎಂದು ಪೊಲೀಸ್ ತನಿಖೆಗಳು ಬಹಿರಂಗಪಡಿಸಿವೆ. ಈಗ, ಅಯೋಧ್ಯೆ ಪೊಲೀಸರು ಈ ಸಭೆಗಳ ಉದ್ದೇಶ ಮತ್ತು ಅವರ ಸಂಪೂರ್ಣ ಜಾಲವನ್ನು ಬಹಿರಂಗಪಡಿಸಲು ಪುರಾವೆಗಳನ್ನು ಸಂಗ್ರಹಿಸುತ್ತಿದ್ದಾರೆ.


