ಇದು ಪತಿ ಮತ್ತು ಪತ್ನಿ ನಡುವಿನ ಗಲಾಟೆ ಸಾವಿನಲ್ಲಿ ಅಂತ್ಯವಾಗಿದೆ. ಭಯಾನಕ ವಿಚಾರ ಏನಂದ್ರೆ ಪತಿ,ಪತ್ನಿಗೆ ತನ್ನ ಸಾವನ್ನ ವಿಡಿಯೋ ಕಾಲ್ ಮೂಲಕ ತೋರಿಸುತ್ತ ರೈಲಿಗೆ ತಲೆಗೊಟ್ಟಿದ್ದಾರೆ. ಭಯಾನಕ ಸ್ಟೋರಿಯ ಮಾಹಿತಿ ಇಲ್ಲಿದೆ.
ವಾರಂಗಲ್ (ತೆಲಂಗಾಣ): ತೆಲಂಗಾಣದ ವಾರಂಗಲ್ ಜಿಲ್ಲೆಯಲ್ಲಿ ದಾರುಣ ಘಟನೆ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ರೈಲ್ವೆ ಹಳಿಗಳ ಮೇಲೆ ನಿಂತು, ತನ್ನ ಪತ್ನಿಗೆ ವಿಡಿಯೋ ಕಾಲ್ ಮಾಡುತ್ತಲೇ ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ಏನಿದು ಪ್ರಕರಣ..?
ಹನುಮಕೊಂಡ ಜಿಲ್ಲೆಯ ಕಾಜಿಪೇಟೆ ದರ್ಗಾ ಸಮೀಪದ ನಿವಾಸಿ ಲಾವುಡ್ಯಾ ರಾಜೇಶ್ ನಾಯಕ್ (45) ದುಡುಕಿನ ನಿರ್ಧಾರ ತೆಗೆದುಕೊಂಡವರು. ರಾಜೇಶ್ ನಾಯಕ್ ಅವರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಡಾಕ್ಯುಮೆಂಟ್ ರೈಟರ್ ಆಗಿ ಕೆಲಸ ಮಾಡ್ತಿದ್ದರು. ಕಳೆದ ಕೆಲವು ಸಮಯದಿಂದ ಆಸ್ತಿ ಹಂಚಿಕೆ ವಿಚಾರವಾಗಿ ರಾಜೇಶ್ ಮತ್ತು ಅವರ ಪತ್ನಿಯ ನಡುವೆ ಗಲಾಟೆ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋ ಕಾಲ್‌ನಲ್ಲಿ ಪತ್ನಿಗೆ ಸಾವು ತೋರಿಸಿದ ಪತಿ
ಭಾನುವಾರ ರಾತ್ರಿ ದಂಪತಿ ನಡುವೆ ಆಸ್ತಿ ವಿಚಾರವಾಗಿ ಮತ್ತೆ ಜಗಳ ನಡೆದಿದೆ. ಇದರಿಂದ ಮನನೊಂದ ರಾಜೇಶ್ ರಾತ್ರಿ 10:30ರ ಸುಮಾರಿಗೆ ಮನೆಯಿಂದ ಹೊರಬಂದು ರೈಲ್ವೆ ಹಳಿಗಳ ಬಳಿ ಹೋಗಿದ್ದಾರೆ. ಅಲ್ಲಿಂದ ಪತ್ನಿಗೆ ವಿಡಿಯೋ ಕಾಲ್ ಮಾಡಿದ ರಾಜೇಶ್, ಎದುರುಗಡೆ ಬರುತ್ತಿದ್ದ ರೈಲನ್ನು ತೋರಿಸುತ್ತಾ ನಾನು ಆತ್ಮ*ತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
ಆದರೆ ಪತಿ ಮದ್ಯದ ಅಮಲಿನಲ್ಲಿ ಸುಮ್ಮನೆ ಬೆದರಿಸುತ್ತಿರಬಹುದು ಎಂದು ಭಾವಿಸಿದ ಪತ್ನಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಆದರೆ ರಾತ್ರಿಯಿಡೀ ರಾಜೇಶ್ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಸೋಮವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ರೈಲ್ವೆ ಹಳಿಗಳ ಮೇಲೆ ರಾಜೇಶ್ ಅವರ ಮೃತದೇಹ ಪತ್ತೆಯಾಗಿದೆ. ಇದನ್ನು ಕಂಡು ಪತ್ನಿ ಮತ್ತು ಕುಟುಂಬಸ್ಥರು ಗೋಳಾಡುತ್ತಿದ್ದಾರೆ.
ಸ್ಥಳಕ್ಕೆ ಧಾವಿಸಿದ ರೈಲ್ವೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂಜಿಎಂ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


