ಅಯೋಧ್ಯೆ ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣವು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳ ಪರವಾಗಿ ಯಾವುದೇ ವಕೀಲರು ವಕಾಲತ್ತು ವಹಿಸಬಾರದು ಎಂದು ಫೈಜಾಬಾದ್ ಬಾರ್ ಅಸೋಸಿಯೇಷನ್ ನಿರ್ಧರಿಸಿದೆ. ಈ ನಿರ್ಧಾರವನ್ನು ಉಲ್ಲಂಘಿಸಿದರೆ ಐದು ಲಕ್ಷ ರೂಪಾಯಿ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.

ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣವು ಇದೀಗ ಭಾರತ ಮಾತ್ರವಲ್ಲದೇ ಹಲವು ದೇಶಗಳಲ್ಲಿಯೂ ಚರ್ಚೆಗೆ ಗ್ರಾಸವಾಗಿದೆ. ರಾಮ ಮಂದಿರದಲ್ಲಿನ ಕಳ್ಳತನವನ್ನು ಭಾರತದಲ್ಲಿ ಇರುವವರೇ ಒಂದಿಷ್ಟು ಮಂದಿಗೆ ಆಹಾರವೂ ಆಗಿದ್ದು, ಇಂಥದ್ದೇ ಘಟನೆಯನ್ನು ಕಾಯುತ್ತಿದ್ದರೋ ಎನ್ನುವಂತೆ ವಿಕೃತ ಸಂತೋಷವನ್ನು ಪಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ. ದೇವಾಲಯದ ಕಳ್ಳತನ ಅದರಲ್ಲಿಯೂ ಅಯೋಧ್ಯೆಯ ರಾಮಲಲ್ಲಾನ ವಿರುದ್ಧ ಏನೇ ಆದರೂ ಅದನ್ನು ಹಾಲು ಕುಡಿದಷ್ಟು ಸಂತೋಷ ಪಡುವ ಮನಸ್ಥಿತಿಗಳು ಸಾಕಷ್ಟಿವೆ. ಸೋಷಿಯಲ್​​ ಮೀಡಿಯಾಗಳಲ್ಲಿ ಕೇಕೇ ಹಾಕುತ್ತಾ ಕಮೆಂಟ್ಸ್​ ಮಾಡುತ್ತಿರುವವರನ್ನು ನೋಡಿದರೆ ಒಂದಷ್ಟು ಹಿಂದೂಗಳೂ ಎಷ್ಟು ಸಂತೋಷ ಪಡುತ್ತಿದ್ದಾರೆ ಎನ್ನುವುದು ತಿಳಿಯುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದರ ಮಧ್ಯೆಯೇ, ಅತ್ತ ದೇಣಿಗೆಯ ಕಳ್ಳತನ ಮಾಡಿರುವ ಆರೋಪಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಇನ್ನು ಶ್ರೀರಾಮಚಂದ್ರನೇ ಬಂದು ಅವರನ್ನು ಕಾಪಾಡಬೇಕಿದೆ. ಇದಕ್ಕೆ ಕಾರಣ, ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರೋಪಿಗಳ ಪರವಾಗಿ ಯಾವುದೇ ವಕೀಲರು ವಕಾಲತ್ತು ವಹಿಸದಂತೆ ನಿರ್ಧರಿಸಿದ್ದಾರೆ. ಫೈಜಾಬಾದ್‌ನ ಬಾರ್ ಅಸೋಸಿಯೇಷನ್ ​​ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇಂದು ನಡೆದ ಬಾರ್ ಅಸೋಸಿಯೇಷನ್ ​​ಸಭೆಯಲ್ಲಿ, ವಕೀಲರು ತಮ್ಮ ಸದಸ್ಯರಲ್ಲಿ ಯಾರಾದರೂ ನ್ಯಾಯಾಲಯದಲ್ಲಿ ರಾಮ ಮಂದಿರ ಪ್ರಕರಣದ ಆರೋಪಿಗಳ ಪರವಾಗಿ ಪ್ರತಿನಿಧಿಸಲು ಪ್ರಯತ್ನಿಸಿದರೆ, ಅವರಿಗೆ ಐದು ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು ಎಂದು ನಿರ್ಧರಿಸಿದ್ದರಿಂದ ಯಾರೂ ಈ ಪ್ರಕರಣ ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ.

ಸಿಕ್ಕಿಬಿದ್ದವರ ಗಡಿಪಾರು?

ಇನ್ನು ಆರೋಪಿಗಳು ಬೇರೆ ಊರುಗಳ ವಕೀಲರನ್ನು ಸಂಪರ್ಕಿಸಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ಇವರನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ. ಬಾರ್ ಅಸೋಸಿಯೇಷನ್ ​​ಸಭೆಯಲ್ಲಿ, ದೇವಾಲಯ ನಿರ್ವಹಣೆಯೊಂದಿಗೆ ಸಂಬಂಧ ಹೊಂದಿರುವ ಚಂಪತ್ ರಾಯ್, ಅನಿಲ್ ಮಿಶ್ರಾ ಮತ್ತು ಗೋಪಾಲ್ ರಾವ್ ಅವರು ಅಯೋಧ್ಯೆಯನ್ನು ತೊರೆಯಬೇಕೆಂದು ವಕೀಲರು ಬಲವಾಗಿ ಒತ್ತಾಯಿಸಿದ್ದಾರೆ. ಈ ಮೂವರು ಮೂರು ದಿನಗಳಲ್ಲಿ ನಗರವನ್ನು ತೊರೆಯದಿದ್ದರೆ, ಇಡೀ ಅಯೋಧ್ಯಾ ನಗರವನ್ನು ಸುತ್ತುವರಿಯಲಾಗುವುದು ಮತ್ತು ಯಾರಿಗೂ ಪ್ರವೇಶಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಅವರು ಎಚ್ಚರಿಸಿದರು.

2005 ರಲ್ಲಿ ಇದೇ ರೀತಿ ನಿರ್ಧಾರ

ರಾಮ ಮಂದಿರದಲ್ಲಿ ದೇಣಿಗೆ ದುರುಪಯೋಗ ಆರೋಪದಲ್ಲಿ ಬಂಧಿಸಲ್ಪಟ್ಟ ಆರೋಪಿಗಳ ಪರವಾಗಿ ಪ್ರತಿನಿಧಿಸದಿರಲು ಅಯೋಧ್ಯೆಯ ವಕೀಲರು ತಮ್ಮ ಐತಿಹಾಸಿಕ ನಿರ್ಧಾರವನ್ನು ಪುನರುಚ್ಚರಿಸಿದರು. 2005 ರಲ್ಲಿ ರಾಮ ಜನ್ಮಭೂಮಿ ಸಂಕೀರ್ಣದ ಮೇಲಿನ ಭಯೋತ್ಪಾದಕ ದಾಳಿಯ ಆರೋಪಿಗಳನ್ನು ಫೈಜಾಬಾದ್ ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ಫೈಜಾಬಾದ್ ಬಾರ್ ಅಸೋಸಿಯೇಷನ್ ​​ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿತ್ತು.

"ದೇವಾಲಯದ ಕಾಣಿಕೆಗಳ ಕಳ್ಳತನವು ನಮ್ಮೆಲ್ಲರ ಭಾವನೆಗಳಿಗೆ ನೋವುಂಟು ಮಾಡಿದೆ. ಫೈಜಾಬಾದ್‌ನ ವಕೀಲರು ಬಂಧಿತ ಆರೋಪಿಗಳನ್ನು ಪ್ರತಿನಿಧಿಸದಿರಲು ಒಪ್ಪಿಕೊಂಡಿದ್ದಾರೆ. ಬಾರ್ ಅಸೋಸಿಯೇಷನ್ ​​ಅಧ್ಯಕ್ಷರು ಮತ್ತು ಬಾರ್‌ನ ಸಾಮಾನ್ಯ ಸಭೆ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇದರ ನಂತರ ಮತ್ತಷ್ಟು ಕಾರ್ಯತಂತ್ರವನ್ನು ರೂಪಿಸಲಾಗುವುದು." ಎಂದು ವಕೀಳರು ಹೇಳಿದ್ದಾರೆ.

ಫೈಜಾಬಾದ್ ಬಾರ್ ಅಸೋಸಿಯೇಷನ್ ​​ಅಧ್ಯಕ್ಷೆ ಕಾಳಿಕಾ ಮಿಶ್ರಾ ಭಾನುವಾರ ಮಾತನಾಡಿ, ರಾಮ ಮಂದಿರ ಕಾಣಿಕೆ ಕಳ್ಳತನ ಪ್ರಕರಣದಲ್ಲಿ ಆರೋಪಿಗಳನ್ನು ಪ್ರತಿನಿಧಿಸದಿರುವ ಬಗ್ಗೆ ಸೋಮವಾರ ನಡೆಯಲಿರುವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. 2005 ರಲ್ಲಿ ರಾಮ ಜನ್ಮಭೂಮಿ ಸಂಕೀರ್ಣದ ಮೇಲಿನ ಭಯೋತ್ಪಾದಕ ದಾಳಿಯ ಆರೋಪಿಗಳನ್ನು ಪ್ರತಿನಿಧಿಸದಿರಲು ಅಯೋಧ್ಯೆಯ ವಕೀಲರು ನಿರ್ಧರಿಸಿದಾಗ ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದರು ಎಂದು ಅವರು ವಿವರಿಸಿದರು.