ಕೇಂದ್ರ ಸರ್ಕಾರವು ಪಿಂಚಣಿ ಕಮ್ಯುಟೇಶನ್ ಅವಧಿಯನ್ನು 15 ವರ್ಷಗಳಿಂದ 12 ವರ್ಷಗಳಿಗೆ ಇಳಿಸುವ ಸಾಧ್ಯತೆಯಿದೆ. ಇದರಿಂದ ಲಕ್ಷಾಂತರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಆರ್ಥಿಕ ಪರಿಹಾರ ದೊರೆಯಲಿದೆ. ನೌಕರರ ಸಂಘಗಳು ಈ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಿವೆ.
ನವದೆಹಲಿ (ಜೂ.30): ಕೇಂದ್ರದ ಮೋದಿ ಸರ್ಕಾರವು 8ನೇ ವೇತನ ಆಯೋಗದಡಿ ಲಕ್ಷಾಂತರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ದೊಡ್ಡ ಪರಿಹಾರ ನೀಡುವ ಸಾಧ್ಯತೆಯಿದೆ. ಪಿಂಚಣಿ ಪರಿವರ್ತನೆಗೆ ಸಂಬಂಧಿಸಿದಂತೆ ಸರ್ಕಾರವು ಮಹತ್ವದ ನಿರ್ಧಾರ ಕೈಗೊಳ್ಳಬಹುದು ಎಂದು ಮೂಲಗಳು ತಿಳಿಸಿವೆ.
ಕೇಂದ್ರ ನೌಕರರನ್ನು ಪ್ರತಿನಿಧಿಸುವ ರಾಷ್ಟ್ರೀಯ ಮಂಡಳಿಯು ಈ ಬಗ್ಗೆ ತನ್ನ ಬೇಡಿಕೆಯನ್ನು ಸರ್ಕಾರಕ್ಕೆ ತಿಳಿಸಿದ್ದು, ಪಿಂಚಣಿ ಕಮ್ಯುಟೇಶನ್ ಅವಧಿಯನ್ನು 15 ವರ್ಷಗಳಿಂದ 12 ವರ್ಷಗಳಿಗೆ ಇಳಿಸುವಂತೆ ಒತ್ತಾಯಿಸಿದೆ. ಮುಂದಿನ ವರ್ಷ ಈ ಕುರಿತು ಆಯೋಗವು ತನ್ನ ಶಿಫಾರಸುಗಳನ್ನು ಸಲ್ಲಿಸುವ ಸಾಧ್ಯತೆಯಿದೆ.
ಏನಿದು ಕಮ್ಯೂಟೆಡ್ ಪಿಂಚಣಿ?
ಕಮ್ಯೂಟೆಡ್ ಪಿಂಚಣಿಯು ನಿವೃತ್ತಿಯ ಸಮಯದಲ್ಲಿ ಸರ್ಕಾರಿ ನೌಕರರಿಗೆ ಒಂದು ದೊಡ್ಡ ಮೊತ್ತವನ್ನು ಪಡೆಯಲು ಅವಕಾಶ ನೀಡುವ ಒಂದು ಆಯ್ಕೆಯಾಗಿದೆ. ಈ ಆಯ್ಕೆಯಡಿ, ನೌಕರರು ತಮ್ಮ ಪಿಂಚಣಿಯ ಒಂದು ಭಾಗವನ್ನು ದೊಡ್ಡ ಮೊತ್ತವಾಗಿ ತೆಗೆದುಕೊಳ್ಳಬಹುದು. ಆದರೆ, ಈ ಮೊತ್ತವನ್ನು ಮರುಪಡೆಯಲು ಸರ್ಕಾರವು 15 ವರ್ಷಗಳ ಕಾಲ ಮಾಸಿಕ ಪಿಂಚಣಿಯಿಂದ ಸ್ವಲ್ಪ ಭಾಗವನ್ನು ಕಡಿತಗೊಳಿಸುತ್ತದೆ. 15 ವರ್ಷಗಳ ನಂತರ, ನೌಕರರಿಗೆ ಪೂರ್ಣ ಪಿಂಚಣಿ ಲಭ್ಯವಾಗುತ್ತದೆ. ಈಗ, ಈ ಅವಧಿಯನ್ನು 12 ವರ್ಷಗಳಿಗೆ ಇಳಿಸುವ ಬೇಡಿಕೆ ಜೋರಾಗಿದೆ.
ನೌಕರರ ಬೇಡಿಕೆ ಏಕೆ?
ನೌಕರರ ಸಂಘಗಳು ಮತ್ತು ಪಿಂಚಣಿದಾರರು 15 ವರ್ಷಗಳ ಅವಧಿಯನ್ನು ದೀರ್ಘ ಮತ್ತು ಆರ್ಥಿಕವಾಗಿ ಅನ್ಯಾಯವೆಂದು ಪರಿಗಣಿಸಿದ್ದಾರೆ. ಬಡ್ಡಿದರ ಕಡಿತದಿಂದ ಸರ್ಕಾರದ ವಸೂಲಾತಿಯ ಲೆಕ್ಕಾಚಾರದಲ್ಲಿ ಅಸಮಾನತೆ ಉಂಟಾಗಿದ್ದು, ಇದರಿಂದ ಪಿಂಚಣಿದಾರರು ತಮ್ಮ ಪಿಂಚಣಿಯ ಗಣನೀಯ ಭಾಗವನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ವಾದಿಸಿದ್ದಾರೆ. 12 ವರ್ಷಗಳಿಗೆ ಅವಧಿಯನ್ನು ಕಡಿಮೆಗೊಳಿಸಿದರೆ, ನಿವೃತ್ತರು ಶೀಘ್ರವಾಗಿ ಪೂರ್ಣ ಪಿಂಚಣಿ ಪಡೆಯಲು ಸಾಧ್ಯವಾಗುತ್ತದೆ, ಇದು ಲಕ್ಷಾಂತರ ಜನರಿಗೆ ಆರ್ಥಿಕ ಪರಿಹಾರವನ್ನು ಒದಗಿಸಲಿದೆ.
ಸರ್ಕಾರದ ನಿರ್ಧಾರದಿಂದ ಯಾರಿಗೆ ಪ್ರಯೋಜನ?
ರಾಷ್ಟ್ರೀಯ ಮಂಡಳಿ ಮತ್ತು ಉದ್ಯೋಗಿ ಸಂಘಟನೆಗಳು ಈ ಬೇಡಿಕೆಯನ್ನು ಕ್ಯಾಬಿನೆಟ್ ಕಾರ್ಯದರ್ಶಿಗೆ ಪತ್ರದ ಮೂಲಕ ಸಲ್ಲಿಸಿವೆ. ಸರ್ಕಾರವು ಪಿಂಚಣಿ ಕಡಿತದ ಅವಧಿಯನ್ನು 12 ವರ್ಷಗಳಿಗೆ ಇಳಿಸಿದರೆ, ನಿವೃತ್ತ ನೌಕರರು ಮೂರು ವರ್ಷಗಳ ಮೊದಲೇ ಪೂರ್ಣ ಪಿಂಚಣಿಯ ಪ್ರಯೋಜನವನ್ನು ಪಡೆಯಲಿದ್ದಾರೆ. ಈ ನಿಯಮವನ್ನು ಪೂರ್ವಾನ್ವಯವಾಗಿ ಜಾರಿಗೆ ತಂದರೆ, ಪ್ರಸ್ತುತ ಮತ್ತು ಹಳೆಯ ಪಿಂಚಣಿದಾರರು ಸಹ ಇದರಿಂದ ಲಾಭ ಪಡೆಯಲಿದ್ದಾರೆ. 8ನೇ ವೇತನ ಆಯೋಗದ ಶಿಫಾರಸುಗಳು ಈ ಬೇಡಿಕೆಗೆ ಹಸಿರು ನಿಶಾನೆ ತೋರಿದರೆ, ಲಕ್ಷಾಂತರ ನೌಕರರು ಮತ್ತು ಪಿಂಚಣಿದಾರರಿಗೆ ಇದು ದೊಡ್ಡ ಆರ್ಥಿಕ ಉಪಕಾರವಾಗಲಿದೆ.


