- Home
- Entertainment
- TV Talk
- ಬಿಗ್ ಬಾಸ್ ಶಾಪಗ್ರಸ್ತ ಮನೆಯೇ? ಸ್ಪರ್ಧಿಗಳ ಸಾಲು ಸಾಲು ಸಾವಿನ ಕೂಪ, ಕನ್ನಡತಿಯನ್ನೂ ಬಿಡಲಿಲ್ಲ ಸಾವು!
ಬಿಗ್ ಬಾಸ್ ಶಾಪಗ್ರಸ್ತ ಮನೆಯೇ? ಸ್ಪರ್ಧಿಗಳ ಸಾಲು ಸಾಲು ಸಾವಿನ ಕೂಪ, ಕನ್ನಡತಿಯನ್ನೂ ಬಿಡಲಿಲ್ಲ ಸಾವು!
ಬಿಗ್ ಬಾಸ್ ಸೀಸನ್ 13ರ ಸ್ಪರ್ಧಿ ಶೆಫಾಲಿ ಜರಿವಾಲಾ ಅವರ ಹಠಾತ್ ನಿಧನ. ಹಲವು ಬಿಗ್ ಬಾಸ್ ಸ್ಪರ್ಧಿಗಳ ಅಕಾಲಿಕ ಮರಣದ ಬೆನ್ನಲ್ಲೇ ಶೆಫಾಲಿ ಸಾವು ನಡೆದಿರುವುದು ಅನುಮಾನಗಳನ್ನು ಹುಟ್ಟುಹಾಕಿದೆ.

ಬಾಲಿವುಡ್ ನಟಿ ಶೆಫಾಲಿ ಜರಿವಾಲಾ ಅಕಾಲಿಕ ಅಗಲಿಕೆ ಎಲ್ಲರಿಗೂ ಆಘಾತ ತಂದಿದೆ. ಅದ್ರಲ್ಲೂ ಹಿಂದಿಯ ಬಿಗ್ ಬಾಸ್ ಸೀಸನ್-13ನಲ್ಲಿ ಭಾಗಿಯಾಗಿದ್ದ ಸ್ಪರ್ಧಿಗಳ ಪೈಕಿ ಅಕಾಲಿಕ ಸಾವನ್ನಪ್ಪಿದ ಎರಡನೇ ಸ್ಪರ್ಧಿ ಇವರು. ಈ ಹಿಂದೆ ಬಿಗ್ ಬಾಸ್ ಸೀಸನ್-13ನ ವಿನ್ನರ್ ಸಿದ್ದಾರ್ಥ್ ಶುಕ್ಲಾ ಕೂಡ ಚಿಕ್ಕವಯಸ್ಸಿನಲ್ಲಿ ಪ್ರಾಣ ತೆತ್ತಿದ್ದ. ಇವರು ಮಾತ್ರ ಅಲ್ಲ ಕನ್ನಡವೂ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಬಿಗ್ ಬಾಸ್ ಮನೆಗೆ ಹೋದ ಅನೇಕ ಸ್ಪರ್ಧಿಗಳು ಚಿಕ್ಕ ವಯಸ್ಸಿನಲ್ಲೇ ಬದುಕು ಮುಗಿಸಿದ್ದಾರೆ.
ಇದೇನು ಕಾಕತಾಳೀಯವೋ. ಅಥವಾ ಬಿಗ್ ಬಾಸ್ ಮನೆಯೇ ಶಾಪಗ್ರಸ್ತವೋ ಗೊತ್ತಿಲ್ಲ. ದೊಡ್ಮನೆಯ ಮತ್ತೊಬ್ಬ ಸ್ಪರ್ಧಿ ಚಿಕ್ಕ ವಯಸ್ಸಿನಲ್ಲಿ ಜೀವ ತೆತ್ತಿದ್ದಾರೆ. ಹಿಂದಿಯ ಬಿಗ್ ಬಾಸ್ ಸೀಸನ್ -13ನಲ್ಲಿ ಸ್ಪರ್ಧಿಯಾಗಿದ್ದ ನಟಿ ಶೆಫಾಲಿ ಜರಿವಾಲಾ 42ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ಪ್ರಾಣ ತೆತ್ತಿದ್ದಾರೆ.
ಅಚ್ಚರಿ ಅಂದ್ರೆ ಶೆಫಾಲಿ ಭಾಗಿಯಾಗಿದ್ದ ಬಿಗ್ ಬಾಸ್ ಸೀಸನ್-13ನಲ್ಲಿ ವಿನ್ನರ್ ಆಗಿದ್ದ ಸಿದ್ದಾರ್ಥ್ ಶುಕ್ಲಾ ಕೂಡ 3 ವರ್ಷಗಳ ಹಿಂದೆ ಹೃದಯಾಘಾತದಿಂದಲೇ ಪ್ರಾಣ ಬಿಟ್ಟಿದ್ದ. ಆಗ ಸಿದ್ದಾರ್ಥ್ಗೆ ಜಸ್ಟ್ 40 ವರ್ಷ ವಯಸ್ಸು. ಬಿಗ್ ಬಾಸ್ ಮನೆಯಲ್ಲಿದ್ದಾಗ ಶೆಫಾಲಿ ಮತ್ತು ಸಿದ್ದಾರ್ಥ್ ನಡುವೆ ಒಳ್ಳೆ ಬಾಂಧವ್ಯ ಇತ್ತು. ಒಂದು ಹಂತದಲ್ಲಿ ಇಬ್ಬರೂ ಬಹಳಾನೇ ಕ್ಲೋಸ್ ಆಗಿದ್ರು. ಸಿದ್ದಾರ್ಥ್ ಸಾವನ್ನಿಪ್ಪಿದಾಗ ಶೆಫಾಲಿ ಸುದೀರ್ಘ ಪೋಸ್ಟ್ ಹಾಕಿ ಕಣ್ಣೀರು ಹಾಕಿದ್ರು. ಈಗ ನೋಡಿದ್ರೆ ಸಿದ್ದಾರ್ಥ್ ನ ಹುಡುಕಿಕೊಂಡು ಶೆಫಾಲಿ ಕೂಡ ಹೊರಟು ಬಿಟ್ಟಿದ್ದಾರೆ.
ಆತ್ಮಹತ್ಯೆಗೆ ಶರಣಾಗಿದ್ದ ಕನ್ನಡ ಬಿಗ್ ಬಾಸ್ ಸ್ಪರ್ಧಿ!
ಹೌದು ಬಿಗ್ ಬಾಸ್ ಮನೆಗೆ ಹೋಗಿ ಚಿಕ್ಕ ವಯಸ್ಸಲ್ಲೇ ಜೀವ ಕಳೆದುಕೊಂಡು ಕನ್ನಡ ಸ್ಪರ್ಧಿ ಕೂಡ ಇದ್ದಾರೆ. ಆಕೆಯೇ ನಟಿ ಜಯಶ್ರೀ ರಾಮಯ್ಯ. ಬಿಗ್ ಬಾಸ್ ಸೀಸನ್-3ನಲ್ಲಿ ಭಾಗಿಯಾಗಿದ್ದ ಜಯಶ್ರೀ 2021ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ರು. ಆಗ ಈಕೆಗೆ ಬರೀ 30 ವರ್ಷ ವಯಸ್ಸು. ಅಸಲಿಗೆ ಜಯಶ್ರೀ ಮಾಡೆಲಿಂಗ್ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ರು. ಆ ಬಳಿಕ ಉಪ್ಪು ಹುಳಿ ಖಾರ, ಕನ್ನಡ್ ಗೊತ್ತಿಲ್ಲ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ರು. ಬಿಗ್ ಬಾಸ್ ಬಳಿಕ ತನ್ನ ಲೈಫ್ ಬದಲಾಗುತ್ತೆ ಅನ್ನೋ ಕನಸು ಕಂಡಿದ್ರು.
ಆದ್ರೆ ಜಯಶ್ರೀ ಬದುಕು ಬದಲಾಗಿಲ್ಲ. ವೈಯಕ್ತಿಕ ಸಮಸ್ಯೆಗಳು. ಮಾನಸಿಕ ಖಿನ್ನತೆಗಳು ಜಯಶ್ರೀಯನ್ನ ಹೈರಾಣು ಮಾಡಿದ್ವು. ಹಿಂದೊಮ್ಮೆ ಆತ್ಮಹತ್ಯೆ ಪ್ರಯತ್ನ ಮಾಡಿದಾಗ ಖುದ್ದು ಸುದೀಪ್ ಜಯಶ್ರೀಗೆ ಧೈರ್ಯ ತುಂಬಿದ್ರು. ಆದ್ರೆ ಕೊನೆಗೂ 2021ರಲ್ಲಿ ಜಯಶ್ರೀ ಆತ್ಮಹತ್ಯೆಗೆ ಶರಣಾಗಿ ಬದುಕನ್ನ ಕೊನೆ ಗೊಳಿಸಿಕೊಂಡರು. ಜಯಶ್ರೀ ರೀತಿಯಲ್ಲೇ ಚಿಕ್ಕ ವಯಸ್ಸಿಗೆ ಆತ್ಮಹತ್ಯೆಗೆ ಶರಣಾದ ಮತ್ತೊಬ್ಬ ಬಿಗ್ ಬಾಸ್ ಸ್ಪರ್ಧಿ ಪ್ರತುಶಾ ಬ್ಯಾನರ್ಜಿ. ಬಿಗ್ ಬಾಸ್ ಹಿಂದಿ ಸೀಸನ್ -7 ಸ್ಪರ್ಧಿಯಾಗಿದ್ದ ಪ್ರತುಶಾ, ಬಾಲಿಕಾ ವಧು ಧಾರಾವಾಹಿಯ ಆನಂದಿ ಪಾತ್ರದ ಮೂಲಕ ಜನ ಮನ ಗೆದ್ದಿದ್ರು. ಕೇವಲ 24 ವರ್ಷದ ಪ್ರತ್ಯೂಷಾ ಬ್ಯಾನರ್ಜಿ 2016ರಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದರು. ಪ್ರತುಶಾ ಸಾವಿನ ಹಿಂದಿನ ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಮರೆಯಾದ ಬಿಗ್ ಬಾಸ್ ದೇವಮಾನವ !
ಸ್ವಾಮಿ ಓಂ. ಹಿಂದಿ ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗವಹಿಸಿದ್ದ ಸ್ವಯಂಘೋಷಿತ ದೇವಮಾನವ. ತನ್ನ ವಿವಾದಿತ ಮಾತುಗಳು, ನಡೆಗಳಿಂದ ಸದ್ದು ಮಾಡಿದ್ದ ಸ್ವಾಮಿ ಓಂ 2021ರಲ್ಲಿ ನಿಧನರಾದರು. ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಸ್ವಾಮಿ ಓಂ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡರೂ ತೀವ್ರವಾಗಿ ಕೃಶರಾಗಿದ್ದ ಸ್ವಾಮಿ ಓಂ ನಡೆದಾಡಲು ಕಷ್ಟಪಡುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ 2021ರಲ್ಲಿ ಬದುಕಿನ ಆಟ ಮುಗಿಸಿದ್ರು.
ಇನ್ನೂ ಮಲಯಾಳಂನ ಜನಪ್ರಿಯ ಗಾಯಕ ಮತ್ತು ಮಲಯಾಳಂ ಬಿಗ್ ಬಾಸ್ ಮೊದಲ ಸೀಸನ್‌ನಲ್ಲಿ ಕಾಣಿಸಿಕೊಂಡಿದ್ದ ಸೋಮದಾಸ್ ಚತ್ತನ್ನೂರ್ ಕೂಡ 2021 ರಲ್ಲಿ ತಮ್ಮ 42ನೇ ವರ್ಷದಲ್ಲಿ ನಿಧನರಾದರು. ಕೊರೊನಾ ಸೋಂಕಿಗೆ ಒಳಗಾಗಿದ್ದ ಸೋಮದಾಸ್ ಆ ನಂತರ ಚೇತರಿಸಿಕೊಂಡಿದ್ದರಾದರೂ ಕೆಲವು ದಿನಗಳ ನಂತರ ಹೃದಯಾಘಾತದಿಂದ ಕೊನೆಯುಸಿರೆಳೆದರು.
ಭಾರತೀಯ ಜನತಾ ಪಕ್ಷದಲ್ಲಿ ನಾಯಕಿಯಾಗಿ ಗುರುತಿಸಿಕೊಂಡಿದ್ದ, ಸೋನಾಲಿ ಪೋಗಟ್ ಕೂಡ ತಮ್ಮ 43ನೇ ವರ್ಷದಲ್ಲಿ ಹೃದಯಾಘಾತದಿಂದ 2022ರಲ್ಲಿ ಗೋವಾದಲ್ಲಿ ಕೊನೆಯುಸಿರೆಳೆದಿದ್ದರು. ಇವರು ಹಿಂದಿಯ ಬಿಗ್ ಬಾಸ್ ಸೀಸನ್ 14ರಲ್ಲಿ ಸೋನಾಲಿ ಭಾಗವಹಿಸಿದ್ದರು. ಅಲ್ಲಿಗೆ ಬೇರೆ ಬೇರೆ ಭಾಷೆಗಳಲ್ಲಿ ಬಿಗ್ ಬಾಸ್ನಲ್ಲಿ ಸ್ಪರ್ಧಿಯಾಗಿದ್ದ ಅನೇಕರು ಚಿಕ್ಕ ವಯಸ್ಸಿನಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನ ನೋಡ್ತಾ ಇದ್ರೆ ಬಿಗ್ ಬಾಸ್ ಮನೆ ಶಾಪಗ್ತಸ್ತ ಜಾಗವಾ ಅನ್ನೋ ಅನುಮಾನ ಕಾಡ್ತಾ ಇದೆ.