ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 15 ದಿನಗಳಲ್ಲಿ 807 ಜನರು ನಾಪತ್ತೆಯಾಗಿದ್ದು, ಇವರಲ್ಲಿ ಬಹುಪಾಲು ಮಹಿಳೆಯರು ಮತ್ತು ಹೆಣ್ಣುಮಕ್ಕಳೇ ಸೇರಿದ್ದಾರೆ. ಪ್ರತಿದಿನ ಸರಾಸರಿ 54 ಜನರು ಕಾಣೆಯಾಗುತ್ತಿದ್ದು, ಪೊಲೀಸರು ಇನ್ನೂ 572 ಜನರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ಕಳೆದ 15 ದಿನದಲ್ಲಿ ಒಟ್ಟು 807 ಜನ ನಾಪತ್ತೆ
ನವದೆಹಲಿ: ರಾಷ್ಟ್ರ ರಾಜಧಾನಿಯೊಂದರಲ್ಲೇ ಕಳೆದ 15 ದಿನದಲ್ಲಿ ಒಟ್ಟು 807 ಜನ ನಾಪತ್ತೆಯಾಗಿದ್ದು, ಈ ನಾಪತ್ತೆಯಾದವರಲ್ಲಿ ಬಹುತೇಕ ಹೆಂಗಸರು ಹಾಗೂ ಹೆಣ್ಣು ಮಕ್ಕಳೇ ಆಗಿದ್ದಾರೆ. ಹಾಗೆಯೇ 2026ರ ಮೊದಲ ತಿಂಗಳಲ್ಲಿ 2000 ಜನ ನಾಪತ್ತೆಯಾಗಿದ್ದಾರೆ. ಪಿಟಿಐ ಸುದ್ದಿ ಸಂಸ್ಥೆಗೆ ಸಿಕ್ಕಿರುವ ದೆಹಲಿ ಪೊಲೀಸರ ಅಧಿಕೃತ ಮಾಹಿತಿಯ ಪ್ರಕಾರ, ನಾಪತ್ತೆಯಾದವರಲ್ಲಿ ಸುಮಾರು ಮೂರನೇ ಎರಡರಷ್ಟು ಜನ ಮಹಿಳೆಯರು ಮತ್ತು ಹುಡುಗಿಯರಾಗಿದ್ದಾರೆ.
ಪ್ರತಿದಿನ ಸರಾಸರಿ 54 ಜನರು ನಾಪತ್ತೆ:
ಜನವರಿ 1 ರಿಂದ ಜನವರಿ 15 ರವರೆಗೆ ದೆಹಲಿಯಾದ್ಯಂತ 807 ಜನ ಕಾಣೆಯಾದ ಬಗ್ಗೆ ದೂರುಗಳು ದಾಖಲಾಗಿವೆ. ಅಂದರೆ ಪ್ರತಿದಿನ ಸರಾಸರಿ 54 ಜನರು ಕಾಣೆಯಾಗುತ್ತಿದ್ದಾರೆ. ಇವರಲ್ಲಿ 509 ಮಹಿಳೆಯರು ಮತ್ತು ಹುಡುಗಿಯರಾದರೆ ಪುರುಷರು 298 ಜನ ಎಂಬ ಮಾಹಿತಿ ಇದೆ. ಪೊಲೀಸರು ಇಲ್ಲಿಯವರೆಗೆ 235 ವ್ಯಕ್ತಿಗಳನ್ನು ಪತ್ತೆ ಹಚ್ಚಿದ್ದಾರೆ. ಆದರೆ 572 ಜನರು ಇನ್ನೂ ಪತ್ತೆಯಾಗಿಲ್ಲ, ನಾಪತ್ತೆಯಾದ ತಮ್ಮ ಪ್ರೀತಿ ಪಾತ್ರರಿಗಾಗಿ ನೂರಾರು ಕುಟುಂಬಗಳು ಕಾತರದಿಂದ ಕಾಯುತ್ತಿದ್ದಾರೆ.
ಕಾಣೆಯಾದ ಹದಿಹರೆಯದವರಲ್ಲಿ ಶೇ.71 ಜನರ ಪತ್ತೆಯಾಗಿಲ್ಲ:
ಇವರಲ್ಲಿ ಮಕ್ಕಳು ಹಾಗೂ ಹದಿಹರೆಯದವರೇ ಹೆಚ್ಚಾಗಿದ್ದು, ಜನವರಿ ಮೊದಲಾರ್ಧದಲ್ಲಿ, ದೆಹಲಿಯಲ್ಲಿ 191 ಅಪ್ರಾಪ್ತ ವಯಸ್ಕರು ಕಾಣೆಯಾಗಿದ್ದಾರೆ ಅವರಲ್ಲಿ ಹೆಚ್ಚಿನವರು ಹುಡುಗಿಯರು, ಹಾಗೆಯೇ 45 ಹುಡುಗರು,146 ಹುಡುಗಿಯರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಈ ಗುಂಪಿನಲ್ಲಿ ಹದಿಹರೆಯದವರು ಪಾಲು ಹೆಚ್ಚಿದ್ದು, ಒಟ್ಟು 169 ಹದಿಹರೆಯದವರು ಕಾಣೆಯಾಗಿದ್ದಾರೆ. ಇದರಲ್ಲಿ 138 ಹದಿಹರೆಯದ ಹುಡುಗಿಯರು ಮತ್ತು 31 ಹುಡುಗರು ಸೇರಿದ್ದಾರೆ. ಪೊಲೀಸರು ಕೇವಲ 29 ಹುಡುಗಿಯರು ಮತ್ತು 19 ಹುಡುಗರನ್ನು ಮಾತ್ರ ಪತ್ತೆಹಚ್ಚಲು ಸಾಧ್ಯವಾಗಿದೆ. ಅಂದರೆ ಕಾಣೆಯಾದ ಹದಿಹರೆಯದವರಲ್ಲಿ ಸುಮಾರು 71 ಪ್ರತಿಶತ ಇನ್ನೂ ಪತ್ತೆಯಾಗಿಲ್ಲ.
ನಾಪತ್ತೆಯಾದ 8ರಿಂದ 12 ವರ್ಷದೊಳಗಿನವರು ಎಷ್ಟು?
ಎಂಟರಿಂದ ಹನ್ನೆರಡು ವರ್ಷದೊಳಗಿನವರಲ್ಲಿ, ಎಂಟು ಗಂಡು ಮಕ್ಕಳು ಮತ್ತು ಐದು ಹೆಣ್ಣು ಮಕ್ಕಳು ಸೇರಿದಂತೆ 13 ಮಕ್ಕಳು ಕಾಣೆಯಾಗಿದ್ದಾರೆ. ಕೇವಲ ಮೂವರು ಗಂಡು ಮಕ್ಕಳು ಪತ್ತೆಯಾಗಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ. ಎಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಒಂಬತ್ತು ಪ್ರಕರಣಗಳು ವರದಿಯಾಗಿವೆ. ಅವರಲ್ಲಿ ಪೊಲೀಸರು ಮೂವರು ಗಂಡು ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆರು ಮಕ್ಕಳು ಇನ್ನೂ ಪತ್ತೆಯಾಗಿಲ್ಲ.
ಇದನ್ನೂ ಓದಿ: ಪುರುಷರನ್ನು ಆಕರ್ಷಿಸುವುದು ಹೇಗೆ ಎಂದು ಆನ್‌ಲೈನ್ ಕೋರ್ಸ್ ಮಾಡಿ 30 ಕೋಟಿ ಸಂಪಾದಿಸಿದ ಯುವತಿಗೆ ಸಂಕಷ್ಟ
ಜನವರಿ ತಿಂಗಳ ಮೊದಲ 15 ದಿನಗಳಲ್ಲಿ 363 ಮಹಿಳೆಯರು ಮತ್ತು 253 ಪುರುಷರು ನಾಪತ್ತೆ
ನಗರದಲ್ಲಿ ಕಾಣೆಯಾದವರಲ್ಲಿ ವಯಸ್ಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜನವರಿ ತಿಂಗಳ ಮೊದಲ 15 ದಿನಗಳಲ್ಲಿ 363 ಮಹಿಳೆಯರು ಮತ್ತು 253 ಪುರುಷರು ಸೇರಿದಂತೆ 616 ವಯಸ್ಕರು ಕಾಣೆಯಾಗಿದ್ದಾರೆ. ಪೊಲೀಸರು 91 ಮಹಿಳೆಯರು ಮತ್ತು 90 ಪುರುಷರನ್ನು ಪತ್ತೆಹಚ್ಚಿದ್ದಾರೆ, ಆದರೆ 435 ವಯಸ್ಕರು ಇನ್ನೂ ಪತ್ತೆಯಾಗಿಲ್ಲ.
2025 ರಲ್ಲಿ ದೆಹಲಿಯಲ್ಲಿ 24,508 ನಾಪತ್ತೆ ಪ್ರಕರಣ
2025 ರಲ್ಲಿ ದೆಹಲಿಯಲ್ಲಿ 24,508 ನಾಪತ್ತೆ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ಶೇ. 60 ಕ್ಕಿಂತ ಹೆಚ್ಚು ಮಹಿಳೆಯರ ಪಾಲಾಗಿದ್ದು, 14,870 ಮಹಿಳೆಯರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಇದು ಒಂದೇ ವರ್ಷದಲ್ಲಿ ದಾಖಲಾಗಿರುವ ಅತಿ ಹೆಚ್ಚು ಪ್ರಕರಣಗಳು. ಪುರುಷರ 9,638 ಪ್ರಕರಣಗಳಿವೆ. ಪೊಲೀಸರು 15,421 ವ್ಯಕ್ತಿಗಳನ್ನು ಪತ್ತೆಹಚ್ಚಿದ್ದರೂ, 9,087 ಪ್ರಕರಣಗಳು ಬಗೆಹರಿಯದೆ ಉಳಿದಿವೆ.
ಇದನ್ನೂ ಓದಿ: ಆಕೆಯಿಂದಾಗಿ ನಮ್ಮ ಮಗಳು ಬದುಕಿದ್ದಾಳೆ: ಮಗುವಿನ ಚಿಕಿತ್ಸೆಗೆ ಸಹಾಯ ಮಾಡಿದ ನಟಿ ಶ್ರುತಿ ಹಾಸನ್


