1XBet ಆನ್ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಕ್ರಿಕೆಟಿರ್‌ ರಾಬಿನ್ ಉತ್ತಪ್ಪ, ಯುವರಾಜ್ ಸಿಂಗ್ ಮತ್ತು ನಟ ಸೋನು ಸೂದ್‌ಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ. ಮತ್ತೊಂದೆಡೆ, ಸರ್ಕಾರಿ ಜಾಗ ಅತಿಕ್ರಮಣ ಪ್ರಕರಣದಲ್ಲಿ ಕ್ರಿಕೆಟಿಗ ಯೂಸುಫ್ ಪಠಾಣ್‌ಗೆ ಜಾಗ ತೆರವಿಗೆ ಗುಜರಾತ್ ಹೈಕೋರ್ಟ್ ಆದೇಶಿಸಿದೆ.

ಬೆಟ್ಟಿಂಗ್‌ ಆ್ಯಪ್‌ ಪ್ರಚಾರ: ಉತ್ತಪ್ಪ, ಯುವಿ, ಸೋನು ಸೂದ್‌ಗೆ ಇ.ಡಿ. ಸಮನ್ಸ್‌

ನವದೆಹಲಿ: 1ಎಕ್ಸ್‌ ಬೆಟ್‌ ಆನ್ಲೈನ್‌ ಬೆಟ್ಟಿಂಗ್‌ ಆ್ಯಪ್‌ ಪರ ಪ್ರಚಾರ ಮಾಡಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಕನ್ನಡಿಗ ಕ್ರಿಕೆಟಿಗ ರಾಬಿನ್‌ ಉತ್ತಪ್ಪ, ಯುವರಾಜ್‌ ಸಿಂಗ್‌ ಮತ್ತು ನಟ ಸೋನು ಸೂದ್‌ ಅವರಿಗೆ ಸಮನ್ಸ್‌ ನೀಡಿದೆ. ಸೆ.22ರಂದು ರಾಬಿನ್‌ ಉತ್ತಪ್ಪ, ಸೆ.23ರಂದು ಯುವರಾಜ್‌ ಸಿಂಗ್‌ ಮತ್ತು ಸೆ.24ರಂದು ಸೋನು ಸೂದ್‌ಗೆ ವಿಚಾರಣೆಗೆ ಬರುವಂತೆ ನೋಟಿಸ್‌ ನೀಡಿದೆ. ಇದೇ ಪ್ರಕರಣದಲ್ಲಿ ಮಂಗಳವಾರ ನಟಿ ಊರ್ವಶಿ ರೌಟೇಲಾ ಅವರನ್ನು ವಿಚಾರಣೆ ನಡೆಸಿದ ಇ.ಡಿ., ಕಳೆದ ಬಾರಿ ಕ್ರಿಕೆಟಿಗ ಸುರೇಶ್ ರೈನಾ, ಶಿಖರ್‌ ಧವನ್‌, ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಅವರನ್ನು ವಿಚಾರಣೆ ನಡೆಸಿತ್ತು. ಬೆಟ್ಟಿಂಗ್‌ ಆ್ಯಪ್‌ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪದಡಿ ಇ.ಡಿ. ತನಿಖೆ ನಡೆಸುತ್ತಿದೆ.

ಮಾಜಿ ಕ್ರಿಕೆಟಿಗ, ಸಂಸದ ಪಠಾಣ್‌ ಭೂ ವಂಚಕ: ಕೋರ್ಟ್‌ ಘೋಷಣೆ

ಅಹಮದಾಬಾದ್‌: ಸೆಲೆಬ್ರಿಟಿಗಳಿಗೆ ಪ್ರತ್ಯೇಕ ಕಾನೂನೇನೂ ಇಲ್ಲ ಎಂದು ಮಾಜಿ ಕ್ರಿಕೆಟಿಗ, ತೃಣಮೂಲ ಕಾಂಗ್ರೆಸ್‌ ಸಂಸದ ಯೂಸುಫ್‌ ಪಠಾಣ್‌ ಅವರು ತರಾಟೆಗೆ ತೆಗೆದುಕೊಂಡಿರುವ ಗುಜರಾತ್‌ ಹೈಕೋರ್ಟ್‌, ಅತಿಕ್ರಮಿಸಿರುವ ಸರ್ಕಾರಿ ಜಾಗ ತೆರವುಗೊಳಿಸುವಂತೆ ಸೂಚಿಸಿದೆ. ವಡೋದರಾದ ತಂಡಲ್ಜಾ ಪ್ರದೇಶದಲ್ಲಿರುವ ಬಂಗಲೆಯ ಪಕ್ಕದಲ್ಲಿರುವ ಜಮೀನನ್ನು ಅತಿಕ್ರಮಿಸಿದ್ದ ಪಠಾಣ್‌ ಅದನ್ನು ತಮಗೆ ನೀಡುವಂತೆ ಪಾಲಿಕೆಗೆ ಸೂಚಿಸಿದ್ದರು. ಆದರೆ ಪಾಲಿಕೆ ನಿರಾಕರಿಸಿತ್ತು. ಬಳಿಕ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿ, ಅದು ಪಠಾಣ್‌ಗೆ ಜಾಗ ತೆರವು ಮಾಡುವಂತೆ ತಾಕೀತು ಮಾಡಿದೆ.

ಮೋದಿ ತೆಗಳಿ ರಾಹುಲ್‌ ಮೆಚ್ಚಿದ ಪಾಕ್‌ ಕ್ರಿಕೆಟಿಗ ಆಫ್ರಿದಿ: ಬಿಜೆಪಿ ಗರಂ

ನವದೆಹಲಿ: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್‌ ಅಫ್ರಿದಿ, ‘ರಾಹುಲ್‌ ಗಾಂಧಿ ಸಕಾರಾತ್ಮಕ ಮನಸ್ಥಿತಿ ಹೊಂದಿರುವ ವ್ಯಕ್ತಿ’ ಎಂದು ಕೊಂಡಾಡಿದ್ದಾರೆ. ಏಷ್ಯಾ ಕಪ್‌ನಲ್ಲಿ ಭಾರತ- ಪಾಕ್‌ ಪಂದ್ಯದ ಬಗ್ಗೆ ಟೀವಿ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅಫ್ರಿದಿ, ‘ ಭಾರತದಲ್ಲಿರುವ ಕೇಂದ್ರ ಸರ್ಕಾರ ಯಾವಾಗಲೂ ಅಧಿಕಾರದಲ್ಲಿ ಉಳಿಯಲು ಧರ್ಮ, ಹಿಂದೂ- ಮುಸ್ಲಿಂ ಅಸ್ತ್ರ ಪ್ರಯೋಗಿಸುತ್ತದೆ, ಇದು ತುಂಬಾ ಕೆಟ್ಟ ಮನಸ್ಥಿತಿ. ರಾಹುಲ್‌ ಗಾಂಧಿ ಅವರದ್ದು ಸಕಾರಾತ್ಮಕ ಮನೋಭಾವ. ಅವರು ಮಾತಿನ ಮೇಲೆ ನಂಬಿ ಇಡುತ್ತಾರೆ ಎಂದು ಹಾಡಿ ಹೊಗಳಿದ್ದಾರೆ. ಶಾಹಿದ್‌ ಈ ನಡೆಗೆ ಬಿಜೆಪಿ ಕಿಡಿ ಕಾರಿದ್ದು, ‘ಉಗ್ರ ಹಫೀಜ್‌ ಸಯೀದ್ ಬಳಿಕ ಇದೀಗ ಶಾಹಿದ್‌ ಅಫ್ರಿದಿ ರಾಹುಲ್‌ ಗಾಂಧಿಯವರನ್ನು ಹೊಗಳುತ್ತಿದ್ದಾರೆ, ಇದು ಅಚ್ಚರಿಯ ವಿಷಯವಲ್ಲ. ಭಾರತವನ್ನು ವಿರೋಧಿಸುವ ಪ್ರತಿಯೊಬ್ಬರು ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿಯವರಲ್ಲಿ ಮಿತ್ರತ್ವ ಕಂಡುಕೊಳ್ಳುತ್ತಾರೆ ಎಂದಿದೆ.

ಇದನ್ನೂ ಓದಿ: ದೇಗುಲದ ಹುಂಡಿ ಹಣ ಸತ್ಕಾರ್ಯಕ್ಕೆ ಬಳಸಿ ಮದುವೆ ಹಾಲ್‌ಗೆ ಅಲ್ಲ: ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಚಾಟಿ

ಇದನ್ನೂ ಓದಿ: ಟ್ರಂಪ್‌ ಮಧ್ಯಸ್ಥಿಕೆಗೆ ಭಾರತ ಒಪ್ಪಿರಲಿಲ್ಲ, ಮಿಲಿಟರಿ ಮಾತುಕತೆಯಿಂದಲೇ ಯುದ್ಧ ನಿಂತಿದ್ದು: ಪಾಕ್‌ ಸಚಿವ ದಾರ್‌