Karaikudi road accident : ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕಾರೈಕುಡಿಯಲ್ಲಿ ಎರಡು ಸರ್ಕಾರಿ ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ 12 ಜನರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಒಂದು ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ಎರಡು ಸರ್ಕಾರಿ ಬಸ್‌ಗಳ ಮಧ್ಯೆ ಅಪಘಾತ: 12 ಜನ ಸಾವು:
ಚೆನ್ನೈ: ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಈ ದುರಂತದಲ್ಲಿ 12 ಜನ ಪ್ರಾಣ ಕಳೆದುಕೊಂಡಿದ್ದಾರೆ. ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕಾರೈಕುಡಿಯಲ್ಲಿ ಎರಡು ಸರ್ಕಾರಿ ಬಸ್‌ಗಳ ನಡುವೆ ಅಪಘಾತವಾಗಿದ್ದು, 12 ಜನರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಎರಡೂ ಬಸ್‌ಗಳಲ್ಲಿದ್ದ ಹಲವು ಜನರು ಸಾವನ್ನಪ್ಪಿದ್ದಾರೆ.
ಅಪಘಾತದ ರಭಸಕ್ಕೆ ನಜ್ಜುಗುಜ್ಜಾದ ಬಸ್‌ಗಳು
ಅಪಘಾತದ ಪರಿಣಾಮ ಒಂದು ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈ ಮಧ್ಯೆ, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೂ ಮೊದಲು ತೆಂಕಸಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಹಿಂದಿನ ದಿನವೂ ಬಸ್‌ಗಳ ನಡುವೆ ಡಿಕ್ಕಿಯಾಗಿ ಎಂಟು ಜನರು ಸಾವನ್ನಪ್ಪಿದ್ದರು. ಬಸ್‌ಗಳ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಬೇರೆ ಜಾತಿ ಎಂದು ಪ್ರೇಮಿಯ ಹೊಡೆದು ಕೊಂದ ಮನೆಯವರು: ಆತನ ಶವವನ್ನೇ ವರಿಸಿದ ಗೆಳತಿ
ತಿರುಪತ್ತೂರು ಪ್ರದೇಶದ ಪಿಳ್ಳೈಯಾರ್ಪಟ್ಟಿಯಿಂದ ಐದು ಕಿಲೋಮೀಟರ್ ದೂರದಲ್ಲಿ ಈ ಅಪಘಾತ ಸಂಭವಿಸಿದೆ. ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಹೇಳಿದ್ದಾರೆ. ನಜ್ಜುಗುಜ್ಜಾದ ವಾಹನಗಳಿಂದ ಹಲವರನ್ನು ರಕ್ಷಿಸಲು ಸ್ಥಳೀಯರು ಕೈ ಜೋಡಿಸಿದ್ದಾರೆ. ಅಪಘಾತಕ್ಕೀಡಾದ ಒಂದು ಬಸ್ ತಿರುಪ್ಪೂರಿನಿಂದ ಕಾರೈಕುಡಿಗೆ ಪ್ರಯಾಣಿಸುತ್ತಿತ್ತು ಇನ್ನೊಂದು ಬಸ್ ಕಾರೈಕುಡಿಯಿಂದ ದಿಂಡಿಗಲ್ ಜಿಲ್ಲೆಯ ಕಡೆಗೆ ಪ್ರಯಾಣಿಸುತ್ತಿತ್ತು. ಅಪಘಾತ ಸ್ಥಳದಿಂದ ಸಿಕ್ಕಿ ಫೋಟೋಗಳಲ್ಲಿ ಒಂದು ಬಸ್ಸಿನ ಚಾಲಕನ ಬದಿ ಸಂಪೂರ್ಣವಾಗಿ ಛಿದ್ರಗೊಂಡಿರುವುದನ್ನು ತೋರಿಸಿವೆ. ಹಾಗೆಯೇ ವಿಡಿಯೋದಲ್ಲಿ ನೆಲದ ಮೇಲೆ ಸಾಲಾಗಿ ಶವಗಳನ್ನು ಮಲಗಿಸಿರುವುದು ಸೆರೆಯಾಗಿದೆ.
ಇದನ್ನೂ ಓದಿ: ಸ್ವಂತ ಕ್ಯೂ ಆರ್ ಕೋಡ್ ಇಟ್ಕೊಂಡು ವಸೂಲಿಗಿಳಿದ ಟ್ರಾಫಿಕ್ ಕಾನ್ಸ್‌ಟೇಬಲ್ ಅಂದರ್: ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ತುರ್ತು ತಂಡಗಳು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಿದ್ದು, ಅಪಘಾತದ ಕಾರಣ ಮತ್ತು ಆಸ್ಪತ್ರೆಗೆ ದಾಖಲಾದವರ ಸ್ಥಿತಿಯ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


