ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಹೊಸ ಎಫ್‌ಐಆರ್ ದಾಖಲು. ಇದನ್ನು ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ಖಂಡಿಸಿದ್ದು, ಈ ಬೆಳವಣಿಗೆಯು ಸಂಸತ್ತಿನಲ್ಲಿ ವಿಪಕ್ಷಗಳ ಒಗ್ಗಟ್ಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ನವದೆಹಲಿ(ನ.30): ಸಂಸತ್ತಿನ ಚಳಿಗಾಲದ ಅಧಿವೇಶನ (ಡಿಸೆಂಬರ್ 1 ರಿಂದ 19) ಆರಂಭವಾಗಲು ಕೆಲವೇ ಗಂಟೆಗಳಿರುವಾಗ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (EOW) ಹೊಸ ಎಫ್‌ಐಆರ್ ದಾಖಲಿಸಿರುವುದು ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಇದು ಅಧಿವೇಶನದ ಕಾರ್ಯಸೂಚಿಯನ್ನೇ ಬದಲಿಸುವ ಸಾಧ್ಯತೆ ಇದೆ.

ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ?

ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (AJL) ಅನ್ನು ವಂಚನೆಯಿಂದ ಸ್ವಾಧೀನಪಡಿಸಿಕೊಂಡ ಆರೋಪದಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಸೇರಿದಂತೆ ಒಟ್ಟು ಒಂಬತ್ತು ವ್ಯಕ್ತಿಗಳು ಮತ್ತು ಮೂರು ಕಂಪನಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣವು 2014 ರಲ್ಲಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ನ್ಯಾಷನಲ್ ಹೆರಾಲ್ಡ್ ವ್ಯವಹಾರಗಳಲ್ಲಿ ಅಕ್ರಮ ನಡೆದಿದೆ ಎಂದು ಸಲ್ಲಿಸಿದ ದೂರನ್ನು ಆಧರಿಸಿದೆ. ಸುಮಾರು ₹2,000 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದ AJL ಕಂಪನಿಯ ನಿಯಂತ್ರಣವನ್ನು ರಾಜಕಾರಣಿಗಳು 'ಯಂಗ್ ಇಂಡಿಯನ್' ಮೂಲಕ ಅನುಚಿತವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ ಎಂಬುದು ಆರೋಪ. ಈ 'ಯಂಗ್ ಇಂಡಿಯನ್' ಕಂಪನಿಯಲ್ಲಿ ರಾಹುಲ್ ಮತ್ತು ಸೋನಿಯಾ ಗಾಂಧಿ ಶೇಕಡಾ 76 ರಷ್ಟು ಪಾಲನ್ನು ಹೊಂದಿದ್ದಾರೆ. ಪ್ರಸ್ತುತ ಇಡಿ (ಜಾರಿ ನಿರ್ದೇಶನಾಲಯ) ಹಣ ವರ್ಗಾವಣೆ ತಡೆ ಕಾಯ್ದೆಯ (PMLA) ಅಡಿಯಲ್ಲಿ ತನಿಖೆ ಮುಂದುವರಿಸಲು ಈ ಹೊಸ EOW ಎಫ್‌ಐಆರ್ ದಾಖಲಾಗಿದೆ.

ಎಫ್‌ಐಆರ್ ದಾಖಲು: ಕಾಂಗ್ರೆಸ್ ಆಕ್ರೋಶ

ಕಾಂಗ್ರೆಸ್ ಈ ಎಫ್‌ಐಆರ್ ಅನ್ನು 'ರಾಜಕೀಯ ಪ್ರೇರಿತ' ಎಂದು ಖಂಡಿಸಿದೆ. ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರು, 'ಇದು ಹೊಸ ವೈನ್ ಇಲ್ಲ, ಹೊಸ ಬಾಟಲಿ ಇಲ್ಲ, ಹೊಸ ಗ್ಲಾಸ್ ಇಲ್ಲ. ಯಾವುದೇ ಹಣ ವರ್ಗಾವಣೆಯಾಗದ, ಸ್ಥಿರ ಆಸ್ತಿ ವರ್ಗಾಯಿಸದ ವಿಶಿಷ್ಟ ಪ್ರಕರಣದಲ್ಲಿ ಹಣ ವರ್ಗಾವಣೆ ಪತ್ತೆಯಾಗಿದೆ. ನಾವು ಯಾವುದೇ ವಿಷಯ ಎತ್ತಲು ಹೋದಾಗಲೆಲ್ಲಾ ಇಂತಹ ಹಳೆಯ ಪ್ರಕರಣಗಳನ್ನು ಮತ್ತೆ ತರಲಾಗುತ್ತದೆ' ಎಂದು ವಾಗ್ದಾಳಿ ನಡೆಸಿದ್ದಾರೆ.

ಸಂಸತ್ತಿನಲ್ಲಿ ಮೈತ್ರಿಕೂಟದ ಬೆಂಬಲ ಸಿಗುವುದೇ?

ಒಂದು ಕಡೆ ವಿಪಕ್ಷಗಳು 12 ರಾಜ್ಯಗಳ ಸಮಸ್ಯೆಗಳು, ಚೀನಾ ಗಡಿ ಹಾಗೂ ಕೆಂಪು ಕೋಟೆ ಸ್ಫೋಟದಂತಹ ವಿಷಯಗಳ ಕುರಿತು ಕೇಂದ್ರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ ನಡೆಸಿವೆ. ಆದರೆ, ಅಧಿವೇಶನ ಆರಂಭಕ್ಕೂ ಮುನ್ನವೇ ದಾಖಲಾದ ಈ FIR ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯಾಗಿದೆ. ಡಿಸೆಂಬರ್ 16, 2025 ರಂದು ಹೆರಾಲ್ಡ್ ಪ್ರಕರಣದಲ್ಲಿ ನ್ಯಾಯಾಲಯ ತನ್ನ ತೀರ್ಪನ್ನು ನೀಡಲಿದ್ದು, ಇದು ಗಾಂಧಿ ಕುಟುಂಬದ ಹೋರಾಟವನ್ನು ಇನ್ನಷ್ಟು ದುರ್ಬಲಗೊಳಿಸಬಹುದು. ಇದೀಗ ಪ್ರಶ್ನೆ ಎಂದರೆ, ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವ ಡಿಎಂಕೆ, ಟಿಎಂಸಿ ಮತ್ತು ಆರ್‌ಜೆಡಿಯಂತಹ ವಿಪಕ್ಷ ಮೈತ್ರಿಕೂಟದ ಪಕ್ಷಗಳು ಸಂಸತ್ತಿನಲ್ಲಿ ಕಾಂಗ್ರೆಸ್‌ನ ಈ ವೈಯಕ್ತಿಕ ಹೋರಾಟಕ್ಕೆ ಬೆಂಬಲಿಸುತ್ತವೆಯೇ, ಅಥವಾ ಕಾಂಗ್ರೆಸ್ ಏಕಾಂಗಿಯಾಗುತ್ತದೆಯೇ? ಎಂಬುದು ಕುತೂಹಲ ಮೂಡಿಸಿದೆ.