ಜಲ್ಲಿಕಲ್ಲು ತುಂಬಿದ ಡಂಪರ್ ಟ್ರಕ್ ನಿಯಂತ್ರಣ ತಪ್ಪಿ ಕಾರಿನ ಮೇಲೆ ಉರುಳಿದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಕಾರಿನಲ್ಲಿದ್ದ ಒಂದೇ ಕುಟುಂಬದ ಮಗು ಸೇರಿದಂತೆ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಕಾರಿನ ಮೇಲೆ ಉರುಳಿದ ಜಲ್ಲಿಕಲ್ಲು ಸಾಗಿಸುತ್ತಿದ್ದ ಲಾರಿ: ಒಂದೇ ಕುಟುಂಬದ ಏಳು ಜನ ಸಾವು

ಲಕ್ನೋ: ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಭೀಕರ ರಸ್ತೆ ಅಪಘಾತವೊಂದರಲ್ಲಿ 7 ಜನ ಸಾವನ್ನಪ್ಪಿದ್ದಾರೆ. ಡಂಪರ್ ಟ್ರಕ್ಕೊಂದು ನಿಯಂತ್ರಣ ತಪ್ಪಿ ಕಾರಿನ ಮೇಲೆ ಉರುಳಿದ ಪರಿಣಾಮ ಕಾರು ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ 7 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.. ಅಪಘಾತದಲ್ಲಿ ಒಂದು ಮಗುವೂ ಮೃತಪಟ್ಟಿದೆ. ಈ ಡಂಪರ್‌ ಟ್ರಕ್ ಜಲ್ಲಿಕಲ್ಲು ತುಂಬಿಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ಜಲ್ಲಿಕಲ್ಲು ಹಾಗೂ ಡಂಪರ್ ಬಿದ್ದು ನಜ್ಜುಗುಜ್ಜಾದ ಕಾರು:

ಅತಿ ವೇಗವಾಗಿ ಬರುತ್ತಿದ್ದ, ಡಂಪರ್ ಟ್ರಕ್ ಚಾಲಕನ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿದೆ. ಡಂಪರ್‌ನಲ್ಲಿದ್ದ ಜಲ್ಲಿಕಲ್ಲು ಕೂಡ ಕಾರಿನ ಮೇಲೆ ಬಿದ್ದಿದೆ. ಪರಿಣಾಮ ಡಂಪರ್ ಮತ್ತು ಜಲ್ಲಿಕಲ್ಲುಗಳ ಅಡಿಯಲ್ಲಿ ಸಿಲುಕಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆ ಎಷ್ಟಿತೆಂದರೆ 5 ಅಡಿ ಉದ್ದದ ಕಾರು 2 ಅಡಿಗಳಿಗೆ ಇಳಿದಿದೆ. ಅಲ್ಲದೇ ಈ ಡಂಪರ್ ಅನ್ನು ಪಕ್ಕಕ್ಕೆ ಸರಿಸಲು ಮೂರು ಕ್ರೇನ್‌ಗಳನ್ನು ಬಳಸಬೇಕಾಯಿತು. ಇದರ ನಡುವೆ ಕಾರಿನ ಮೇಲೆ ಬಿದ್ದಿದ್ದ ಜಲ್ಲಿಕಲ್ಲುಗಳನ್ನು ತೆಗೆದುಹಾಕಲು ಅಲ್ಲಿ ಸೇರಿದ ಜನರು ಗಂಟೆಗಟ್ಟಲೆ ಶ್ರಮಿಸಿದ್ದಾರೆ.

ಕಾರಿನ ಛಾವಣಿ ಕತ್ತರಿಸಿ ರಕ್ಷಣಾ ಕಾರ್ಯಾಚರಣೆ:

ಈ ಸಮಯದಲ್ಲಿ ಕಾರಿನಲ್ಲಿದ್ದವರು ಒಳಗೆ ಸಿಲುಕಿಕೊಂಡು ನರಳಾಡುತ್ತಿದ್ದರು. ನಂತರ ಒಳಗೆ ಸಿಲುಕಿದ್ದ ಜನರನ್ನು ರಕ್ಷಿಸಲು ಕಾರಿನ ಛಾವಣಿಯನ್ನೇ ಕತ್ತರಿಸಿ ತೆಗೆಯಲಾಯ್ತು. ಗಗಲ್ಹೆಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ಸ್ಥಳೀಯ ಮಾಹಿತಿಯ ಪ್ರಕಾರ, ಇಂದು ಬೆಳಗ್ಗೆ ಸಹರಾನ್‌ಪುರದ ಸಯ್ಯದ್ ಮಜ್ರಾ ಗ್ರಾಮದ ನಿವಾಸಿಗಳಾದ ಕುಟುಂಬವೊಂದು ತಮ್ಮ ಕಾರಿನಲ್ಲಿ ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣಿಸುತ್ತಿದ್ದರು. ಕಾರು ಗ್ರಾಮದ ಹೊರಗಿನ ಎಕ್ಸ್‌ಪ್ರೆಸ್‌ವೇಯನ್ನು ತಲುಪಿದ್ದಾಗ ಡೆಹ್ರಾಡೂನ್ ಕಡೆಯಿಂದ ವೇಗವಾಗಿ ಬಂದ ಡಂಪರ್ ಚಾಲಕನ ನಿಯಂತ್ರಣ ಕಳೆದುಕೊಂಡು ಅದರ ಮೇಲೆ ಉರುಳಿ ಬಿದ್ದಿದೆ.

ಇದ್ದಕ್ಕಿದ್ದಂತೆ ಡಂಪರ್ ಮುಂದೆ ಬಂದ ಕಾರು:

ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಕಾರು ಇದ್ದಕ್ಕಿದ್ದಂತೆ ಡಂಪರ್ ಮುಂದೆ ಬಂದಿದೆ. ಈ ವೇಳೆ ಡಂಪರ್ ಚಾಲಕ ಬ್ರೇಕ್ ಹಾಕಿದ್ದಾನೆ. ಆದರೆ ಅತಿ ವೇಗದಲ್ಲಿ ಇದ್ದಿದ್ದರಿಂದ ಆತನಿಗೆ ಡಂಪರ್ ಅನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಪರಿಣಾಮ ನಿಯಂತ್ರಣ ತಪ್ಪಿದ ಡಂಪರ್ ಕಾರಿನ ಮೇಲೆ ಉರುಳಿ ಬಿದ್ದಿದೆ. ಈ ಅಪಘಾತ ಎಷ್ಟು ಭೀಕರವಾಗಿತ್ತೆಂದರೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿತ್ತು. ಅದರಲ್ಲಿ ಕುಟುಂಬವು ಒಳಗೆ ಸಿಲುಕಿ ಸಾವನ್ನಪ್ಪಿದ್ದಾರೆ.

ಸಹ್ರಾನ್‌ಪುರದಲ್ಲಿನಡೆದ ಈ ಭೀಕರ ದುರಂತಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸುವಂತೆ ಅವರು ತಿಳಿಸಿದ್ದಾರೆ. ಅಲ್ಲದೇ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಅವರು ಆದೇಶಿಸಿದ್ದಾರೆ.