ಉಡುಪಿ ಜಿಲ್ಲೆಯ ಕಾಪು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿವೇಗದಿಂದ ಬಂದ ಟೆಂಪೋ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಐವರು ಉತ್ತರ ಭಾರತ ಮೂಲದ ವಲಸೆ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಉಡುಪಿ/ಕಾಪು (ನ.30): ಉಡುಪಿ ಜಿಲ್ಲೆಯ ಕಾಪು ತಾಲೂಕು ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ ದುರಂತ ಸಂಭವಿಸಿದೆ. ಮೃತಪಟ್ಟವರೆಲ್ಲರೂ ಉತ್ತರ ಭಾರತ ಮೂಲದ ವಲಸೆ ಕಾರ್ಮಿಕರು ಎಂದು ತಿಳಿದುಬಂದಿದೆ.

ಉಡುಪಿಯಿಂದ ಕಾಪು ಕಡೆಗೆ ಹೋಗುತ್ತಿದ್ದ ಈ ಟೆಂಪೋ ವಾಹನವು ವಿಪರೀತ ವೇಗದಿಂದ ಸಾಗಿಬಂದ ಕಾರಣ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ. ಟೆಂಪೋ ವಾಹನವು ರಸ್ತೆಯ ಡಿವೈಡರ್‌ ಹಾರಿ, ಸರ್ವಿಸ್ ರಸ್ತೆ ಕಡೆಗೆ ಅಪ್ಪಳಿಸಿತು. ಅಪಘಾತದ ಭೀಕರತೆಗೆ ಟೆಂಪೋದಲ್ಲಿ ಸಂಚರಿಸುತ್ತಿದ್ದ ಕಾರ್ಮಿಕರು ಚೆಲ್ಲಾಪಿಲ್ಲಿಯಾಗಿ ರಸ್ತೆಗೆ ಬಿದ್ದಿದ್ದಾರೆ.

ಸ್ಥಳದಲ್ಲೇ ಐವರ ದಾರುಣ ಸಾವು

ಮದುವೆ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದ ಡೆಕೋರೇಟಿಂಗ್‌ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಈ ಟೆಂಪೋದಲ್ಲಿ ಒಟ್ಟು 12 ಮಂದಿ ಕಾರ್ಮಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳದಲ್ಲಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಆದರೆ, ಗಾಯಾಳುಗಳ ಪೈಕಿ ಮತ್ತಷ್ಟು ಜನರು ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದು, ಮೃತರ ಸಂಖ್ಯೆ ಇದೀಗ ಐದಕ್ಕೆ ಏರಿಕೆಯಾಗಿದೆ. ಮೃತರೆಲ್ಲರೂ ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತ ಮೂಲದ ವಲಸೆ ಕಾರ್ಮಿಕರು ಎಂದು ತಿಳಿದುಬಂದಿದೆ.

ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇತರ ಕಾರ್ಮಿಕರನ್ನು ಕೂಡಲೇ ಸ್ಥಳೀಯರು ಮತ್ತು ಪೊಲೀಸರ ಸಹಾಯದಿಂದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಗಣೇಶ್ ಬಹದ್ದೂರ್ ರಾಯ್ (36) ಅಸ್ಸಾಂ ನಿವಾಸಿ, ಪ್ರಬಾಸ್ ರಾಯ್ (26) ಪಶ್ಚಿಮ ಬಂಗಾಳ ನಿವಾಸಿ, ಗೋಪಾಲ್ ಭೌಮಿಕ್ (16) ಪಶ್ಚಿಮ ಬಂಗಾಳ ನಿವಾಸಿ ಹಾಗೂ ರಂಜಿತ್ ಅಮೀನ್ (33) ಕಾಪು ಮಜೂರು ನಿವಾಸಿಯಾಗಿದ್ದಾರೆ.

ಮೃತರ ವಿವರ ಈ ಕೆಳಗಿನಂತಿದೆ:

  • ಪಶ್ಚಿಮ ಬಂಗಾಳದ ಕಮಲ್, ಸಮರೇಶ್,
  • ಅಸ್ಸಾಂನ ಪಪ್ಪು ರವಿ ದಾಸ್, ಹರೀಶ್,
  • ತ್ರಿಪುರ ರಾಜ್ಯದ ಗಪುನಾತ್

ಗಾಯಾಳುಗಳಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟೆಂಪೋ ಚಾಲಕನ ಅತಿವೇಗದ ಚಾಲನೆಯೇ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.