ಮಾತು ಉಳಿಸಿಕೊಂಡ ಕಿಂಗ್ ಕೊಹ್ಲಿ; ಮ್ಯಾಚ್ ನೊಡಲು ರೆಡಿಯಾದ 87ರ ಅಜ್ಜಿ..!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತಮ್ಮ 87 ವರ್ಷದ ಕ್ರಿಕೆಟ್ ಅಭಿಮಾನಿ ಚಾರುಲತಾ ಪಟೇಲ್‌ಗೆ ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ. ಏನಿದು ಸ್ಟೋರಿ, ನೀವೇ ನೋಡಿ...
ಲೀಡ್ಸ್(ಜು.05): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನುಡಿದಂತೆ ನಡೆದಿದ್ದಾರೆ. 87 ವರ್ಷದ ಅಭಿಮಾನಿ ಚಾರುಲತಾ ಪಟೇಲ್‌ಗೆ ತಂಡ ಆಡುವ ಮುಂದಿನ ಪಂದ್ಯಗಳಿಗೆ ಆಗಮಿಸುವಂತೆ ಆಹ್ವಾನಿಸಿದ್ದ ಕೊಹ್ಲಿ, ಪಂದ್ಯದ ಟಿಕೆಟ್‌ಗಳನ್ನು ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು.
1983ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಸಾಕ್ಷಿಯಾಗಿದ್ದ ಚಾರುಲತಾ,2019ರಲ್ಲೂ ಹಾಜರ್!
ಅದರಂತೆಯೇ ಗುರುವಾರ ಶ್ರೀಲಂಕಾ ವಿರುದ್ಧದ ಪಂದ್ಯ(ಜು.6ಕ್ಕೆ), ಸೆಮಿಫೈನಲ್ (ಎರಡೂ ಸೆಮಿಫೈನಲ್) ಹಾಗೂ ಫೈನಲ್ ಪಂದ್ಯದ ಟಿಕೆಟ್‌ಗಳನ್ನು ಕಳುಹಿಸಿ ಕೊಟ್ಟಿದ್ದಾರೆ. ಚಾರುಲತಾ ಅವರ ಮೊಮ್ಮಗಳು ಅಂಜಲಿ, ಟಿಕೆಟ್ ಗಳನ್ನು ಸ್ವೀಕರಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ‘ನಾವು ಇನ್ನೂ ಕೆಲ ಟಿಕೆಟ್‌ಗಳನ್ನು ಕೊಡಿಸುವಂತೆ ಕೇಳಿಕೊಂಡೆವು, ಆದರೆ ಕೊಹ್ಲಿಯಿಂದ ಸಾಧ್ಯವಾಗಲಿಲ್ಲ’ ಎಂದು ಅಂಜಲಿ ಹೇಳಿದ್ದಾರೆ.
ಬ್ಲೂ ಬಾಯ್ಸ್ ಹಾರೈಸಿದ ಅಜ್ಜಿಗೆ ಆನಂದ್ ಮಹೀಂದ್ರ ಕೊಟ್ರು ಅಚ್ಚರಿಯ ಉಡುಗೊರೆ!
ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ 87 ವರ್ಷದ ಚಾರುಲತಾ ಪಟೇಲ್ ಕ್ರಿಕೆಟ್ ನೋಡಲು ಮೈದಾನಕ್ಕೆ ಬಂದಿದ್ದರು. ಪಂದ್ಯ ಮುಕ್ತಾಯವಾದ ಬಳಿಕ ನಾಯಕ ವಿರಾಟ್ ಕೊಹ್ಲಿ, ಚಾರುಲತಾ ಅವರನ್ನು ಭೇಟಿ ಮಾಡಿದ್ದರು. ಆ ವೇಳೆ ಕೊಹ್ಲಿ ಭಾರತದ ಇನ್ನುಳಿದ ಪಂದ್ಯಗಳನ್ನು ವೀಕ್ಷಿಸಲು ಆಹ್ವಾನಿಸಿದ್ದರಂತೆ. ಆಗ ಚಾರುಲತಾ ಟಿಕೆಟ್ ಇಲ್ಲವೆಂದು ಹೇಳಿದ್ದರಂತೆ. ತಕ್ಷಣ ಅದಕ್ಕೆ ಪ್ರತಿಕ್ರಿಯಿಸಿದ್ದ ಕೊಹ್ಲಿ, ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ನಾನು ಟಿಕೆಟ್ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದ್ದರು. ಇದೀಗ ಕೊಹ್ಲಿ ನುಡಿದಂತೆ ನಡೆದಿದ್ದಾರೆ.