ನವದೆಹಲಿ[ಜು.03]: ಐಸಿಸಿ ವಿಶ್ವಕಪ್ 2019, ಮಂಗಳವಾರದಂದು ನಡೆದ ಭಾರತ ವರ್ಸಸ್ ಬಾಂಗ್ಲಾ ನಡುವಿನ ಪಂದ್ಯದಲ್ಲಿ, ಬ್ಲೂ ಬಾಯ್ಸ್ ಬಾಂಗ್ಲಾವನ್ನು ಬಗ್ಗು ಬಡಿದಿದೆ. ಈ ಮೂಲಕ ಬಾಂಗ್ಲಾ ವಿಶ್ವಕಪ್ ಸೆಮಿ ಫೈನಲ್ ರೇಸ್ ನಿಂದ ಹೊರ ಬಿದ್ದಿದೆ. ಆದರೆ ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯದಲ್ಲಿ, ಈ ಬಾರಿ ಮಾತ್ರ ಕ್ರಿಕೆಟಿಗರು ಹಾಗೂ ಅವರ ಆಟಕ್ಕಿಂತ 87 ವರ್ಷದ ಓರ್ವ ಅಜ್ಜಿ.

ಸೋಶಿಯಲ್ ಮೀಡಿಯಾದಿಂದ ಚಹಾ ಅಂಗಡಿಯವರೆಗೆ ಎಲ್ಲೆಲ್ಲೂ ಕೆನ್ನೆ ಮೇಲೆ ತ್ರಿವರ್ಣ ಧ್ವಜದ ಚಿತ್ತಾರ, ಕೈಯ್ಯಲ್ಲೊಂದು ಪೀಪಿ ಹಿಡಿದು ಬಾಂಗ್ಲಾ ವಿರುದ್ಧ ಸೆಣಸಾಡುತ್ತಿದ್ದ ಟೀಂ ಇಂಡಿಯಾ ಆಟಗಾರರನ್ನು ಹುರುದುಂಬಿಸುತ್ತಿದ್ದ ಚಾರುಲತಾ ಪಟೇಲ್ ಸೌಂಡ್ ಮಾಡುತ್ತಿದ್ದಾರೆ. ಈ ಅಜ್ಜಿ ದಿನ ಬೆಳಗಾಗುತ್ತಿದ್ದಂತೆ ಬ್ಲೂ ಬಾಯ್ಸ್ ಸೇರಿದಂತೆ ಭಾರತೀಯರ ಹೃದಯ ಕದ್ದಿದ್ದಾರೆ. ಈ ಅಜ್ಜಿಗೆ ಟೀಂ ಇಂಡಿಯಾ ಮೇಲಿರುವ ಅಭಿಮಾನ ಕಂಡು ಫಿದಾ ಆಗಿರುವ ಆನಂದ್ ಮಹೀಂದ್ರ ಬಹು ದೊಡ್ಡ ಘೋಷಣೆ ಮಾಡಿ ಅಜ್ಜಿಗೆ ಅಚ್ಚರಿಯೊಂದನ್ನು ನೀಡಿದ್ದಾರೆ.

ಇಳಿವಯಸ್ಸಿನಲ್ಲೂ ಬತ್ತದ ಉತ್ಸಾಹ- ಟೀಂ ಇಂಡಿಯಾ ಅಭಿಮಾನಿಗೆ ಟ್ವಿಟರಿಗರು ಜೈ!

ಮ್ಯಾಚ್ ವೇಳೆ ಟೀಂ ಇಂಡಿಯಾದ ಅಭಿಮಾನಿ ಚಾರುಲತಾ ಅದ್ದು ಮಾಡಿದ ಬೆನ್ನಲ್ಲೇ, ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪೆನಿಯ ಮುಖ್ಯಸ್ಥ ಆನಂದ್ ಮಹೀಂದ್ರ ಟ್ವೀಟ್ ಒಂದನ್ನು ಮಾಡಿದ್ದಾರೆ. ಈ ಟ್ವೀಟ್ ನಲ್ಲಿ 'ನನ್ನ ಪರಂಪರೆಯನ್ವಯ ನಾನು ಮ್ಯಾಚ್ ವೀಕ್ಷಿಸುತ್ತಿರಲಿಲ್ಲ. ಆದರೆ ಈಗ ನಾನು ಈ ಅಜ್ಜಿಗಾಗಿ ಟಿವಿ ಆನ್ ಮಾಡಿದ್ದೇನೆ. ಆಕೆ ಓರ್ವ ಮ್ಯಾಚ್ ವಿನ್ನರ್ ನಂತೆ ನನಗೆ ಕಂಡು ಬಂದರು' ಎಂದಿದ್ದಾರೆ.

ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರ 'ಸರಿ, ನಾನು ಕೊನೆಯ ಓವರ್ ವೀಕ್ಷಿಸಿದೆ. ಕೊನೆಯ ಆರು ಎಸೆತಗಳಲ್ಲಿ ನಾನು ಬಯಸಿದ್ದ ಎಲ್ಲಾ ರೋಚಕತೆ ಇತ್ತು. ಆರಂಭದಲ್ಲಿ ನಿಮಗೆ ಬಹಳಷ್ಟು ಉದ್ವೇಗವುಂಟು ಮಾಡಿ, ಕೊನೆಗೆ ಎಲ್ಲವೂ ಅತ್ಯಂತ ಸರಳವಾಗಿಸುವುದೇ ಬಹುದೊಡ್ಡ ಗೆಲುವು. ಟೀಂ ಇಂಡಿಯಾಗೆ ನನ್ನ ಅಭಿನಂದನೆಗಳು. ಈ ಮ್ಯಾಚ್ ವಿನ್ನಿಂಗ್ ಅಜ್ಜಿ ಮುಂದಿನ ಸೆಮಿ ಪೈನಲ್ ಹಾಗೂ ಫೈನಲ್ಸ್ ನಲ್ಲಿರಬೇಕು' ಎಂದಿದ್ದಾರೆ. ಅಲ್ಲದೇ 'ಆಕೆ ಯಾರೆಂದು ಪತ್ತೆ ಹಚ್ಚಿ. ಟೀಂ ಇಂಡಿಯಾದ ಮುಂದಿನ ಎಲ್ಲಾ ಪಂದ್ಯಗಳಿಗೆ ಆಕೆಗೆ ನಾನೇ ಟಿಕೆಟ್ ಒದಗಿಸುತ್ತೇನೆ. ಇದು ನಾನು ಮಾಡುತ್ತಿರುವ ಪ್ರಾಮಿಸ್' ಎಂದಿದ್ದಾರೆ.