ವಿಶ್ವಕಪ್ ಟೂರ್ನಿಯ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಬರ್ಮಿಂಗ್ ಹ್ಯಾಮ್[ಜು.02]: ಸತತ 5 ಪಂದ್ಯಗಳನ್ನು ಗೆದ್ದು ಮುನ್ನುಗ್ಗುತ್ತಿದ್ದ ಟೀಂ ಇಂಡಿಯಾಗೆ ಕಳೆದ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಸೋಲಿನ ಶಾಕ್ ನೀಡಿತ್ತು. ಸೋಲಿನ ಬೆನ್ನಲ್ಲೇ ತಂಡದ ಆಲ್ರೌಂಡರ್ ವಿಜಯ್ ಶಂಕರ್ ಕೂಡಾ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದು ವಿರಾಟ್ ಪಡೆಗೆ ಮತ್ತಷ್ಟು ಹಿನ್ನಡೆಯನ್ನುಂಟು ಮಾಡಿದೆ. ಇದರ ಬೆನ್ನಲ್ಲೇ ಇದೀಗ ಟೀಂ ಇಂಡಿಯಾ ಪ್ರತಿಭಾನ್ವಿತ ಆಟಗಾರರನ್ನೊಳಗೊಂಡ ಬಾಂಗ್ಲಾದೇಶ ತಂಡವನ್ನು ಎದುರಿಸಲು ಸಜ್ಜಾಗಿದೆ. 

ವಿಶ್ವಕಪ್ 2019 ಬಾಂಗ್ಲಾ ಹುಲಿಗಳ ಬೇಟೆಗೆ ಟೀಂ ಇಂಡಿಯಾ ರೆಡಿ

ಸೆಮಿಫೈನಲ್ ಹೊಸ್ತಿಲಲ್ಲಿರುವ ಟೀಂ ಇಂಡಿಯಾ ಇದೀಗ ಬಾಂಗ್ಲಾ ವಿರುದ್ಧ ಕೆಲ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಕಳೆದ ಪಂದ್ಯದಲ್ಲಿ ಮಂದಗತಿಯ ಬ್ಯಾಟಿಂಗ್ ನಡೆಸಿದ ಕೇದಾರ್ ಜಾಧವ್ ಅವರನ್ನು ಹೊರಗಿಟ್ಟು ರವೀಂದ್ರ ಜಡೇಜಾ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ. ಇನ್ನು ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಕುಲ್ದೀಪ್ ಯಾದವ್/ಯುಜುವೇಂದ್ರ ಚಹಲ್ ಬದಲಿಗೆ ಭುವನೇಶ್ವರ್ ಕುಮಾರ್ ಸ್ಥಾನ ಪಡೆಯುವ ಸಾಧ್ಯತೆಯಿದೆ. ಹೀಗಾದಲ್ಲಿ ಮೂವರು ತಜ್ಞ ವೇಗಿಗಳ ಜತೆ ಓರ್ವ ಸ್ಪಿನ್ನರ್’ನೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯಲಿದೆ. ಇವರಿಗೆ ಬೌಲಿಂಗ್’ನಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಕೂಡಾ ಸಾಥ್ ನೀಡಲಿದ್ದಾರೆ.

ಇಂದಿನ ಪಂದ್ಯದಲ್ಲಿ ಸೋಮವಾರವಷ್ಟೇ ತಂಡಕೂಡಿಕೊಂಡಿರುವ ಕನ್ನಡಿಗ ಮಯಾಂಕ್ ಅಗರ್‌ವಾಲ್‌ಗೆ ಸ್ಥಾನ ಸಿಗುವ ಸಾಧ್ಯತೆ ಕಡಿಮೆ. ಒಂದುವೇಳೆ ಇಂದಿನ ಪಂದ್ಯದಲ್ಲೂ ಕೆ.ಎಲ್ ರಾಹುಲ್ ವಿಫಲವಾದರೆ, ಶ್ರೀಲಂಕಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಮಯಾಂಕ್ ಸೀಮಿತ ಓವರ್’ಗಳ ಪಂದ್ಯಕ್ಕೆ ಪದಾರ್ಪಣೆ ಮಾಡಲಿದ್ದಾರೆ.

ಬಾಂಗ್ಲಾದೇಶ ಸೆಮೀಸ್ ರೇಸ್’ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯವನ್ನು ಜಯಿಸಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಹೀಗಾಗಿ ಈ ಪಂದ್ಯ ಸಾಕಷ್ಟು ರೋಚಕ ಹೋರಾಟಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ.

ಈ ಸಂದರ್ಭದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಸುವರ್ಣನ್ಯೂಸ್.ಕಾಂ ಆಯ್ಕೆಮಾಡಿದ ಟೀಂ ಇಂಡಿಯಾ ಹೀಗಿದೆ ನೋಡಿ:

ಭಾರತ: ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ(ನಾಯಕ), ರಿಷಭ್‌ ಪಂತ್‌, ಎಂ.ಎಸ್‌.ಧೋನಿ, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್‌ ಕುಮಾರ್‌,ಯಜುವೇಂದ್ರ ಚಹಲ್, ಮೊಹಮದ್‌ ಶಮಿ, ಜಸ್ಪ್ರೀತ್ ಬುಮ್ರಾ.

ಸ್ಥಳ: ಬರ್ಮಿಂಗ್‌ಹ್ಯಾಮ್‌

ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್