ವಿಶ್ವಕಪ್ ಟೂರ್ನಿಯ ಪ್ರತಿಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಬರ್ಮಿಂಗ್‌ಹ್ಯಾಮ್‌[ಜು.02]: ಗೆಲುವಿನ ಓಟಕ್ಕೆ ಇಂಗ್ಲೆಂಡ್‌ನಿಂದ ಬ್ರೇಕ್‌ ಬಿದ್ದ ಬಳಿಕ ತುಸು ಹಿನ್ನಡೆ ಅನುಭವಿಸಿರುವ ಭಾರತ ತಂಡ, ಬಾಂಗ್ಲಾದೇಶ ವಿರುದ್ಧ ಮಂಗಳವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದು ಐಸಿಸಿ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ಗೆ ಪ್ರವೇಶಿಸುವ ತವಕದಲ್ಲಿದೆ. ಬಾಕಿ ಇರುವ 2 ಪಂದ್ಯಗಳಲ್ಲಿ 1ರಲ್ಲಿ ಗೆದ್ದರೆ ನಾಕೌಟ್‌ ಹಂತದಲ್ಲಿ ಸ್ಥಾನ ಖಚಿತಗೊಳ್ಳಲಿದೆ. ಒಂದು ಪಂದ್ಯ ಬಾಕಿ ಇರುವಂತೆಯೇ ಸೆಮೀಸ್‌ಗೇರಿ, ಆತಂಕ ದೂರ ಪಡಿಸುವ ಗುರಿ ವಿರಾಟ್‌ ಕೊಹ್ಲಿ ಪಡೆಯದ್ದು.

ಇಲ್ಲಿನ ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೆಲ ಬದಲಾವಣೆಗಳೊಂದಿಗೆ ಭಾರತ ಕಣಕ್ಕಿಳಿಯುವ ಸಾಧ್ಯತೆ ಇದೆ. ಕೇದಾರ್‌ ಜಾಧವ್‌ರನ್ನು ತಜ್ಞ ಬ್ಯಾಟ್ಸ್‌ಮನ್‌ ಆಗಷ್ಟೇ ಆಡಿಸಲಾಗುತ್ತಿದೆ. ಬೌಲಿಂಗ್‌ಗೆ ಅವರನ್ನು ಬಳಸಿಕೊಳ್ಳಲಾಗುತ್ತಿಲ್ಲ. ತಂಡದ ಈ ತಂತ್ರಗಾರಿಕೆ ಗೊಂದಲ ಸೃಷ್ಟಿಸಿದೆ. ಹೀಗಾಗಿ ಅವರ ಬದಲಿಗೆ ರವೀಂದ್ರ ಜಡೇಜಾರನ್ನು ಆಡಿಸುವ ನಿರೀಕ್ಷೆ ಇದೆ. ವೇಗಿ ಭುವನೇಶ್ವರ್‌ ಕುಮಾರ್‌ ಗಾಯದಿಂದ ಚೇತರಿಸಿಕೊಂಡಿದ್ದು, ಆಯ್ಕೆಗೆ ಲಭ್ಯರಿದ್ದಾರೆ. 

ವಿಶ್ವಕಪ್ 2019: ಟೀಂ ಇಂಡಿಯಾ ಸೇರಿಕೊಂಡ ಕನ್ನಡಿಗ ಮಯಾಂಕ್ !

ಆರಂಭಿಕ ಕೆ.ಎಲ್‌.ರಾಹುಲ್‌ ಕಳೆದ ಪಂದ್ಯದಲ್ಲಿ ಗಾಯಗೊಂಡು, ಬ್ಯಾಟ್‌ ಮಾಡುವಾಗ ಸಮಸ್ಯೆ ಎದುರಿಸಿದ್ದರು. ಅವರು ಸಂಪೂರ್ಣ ಫಿಟ್‌ ಆಗಿದ್ದಾರಾ ಎನ್ನುವ ಬಗ್ಗೆ ತಂಡ ಸ್ಪಷ್ಟನೆ ನೀಡಿಲ್ಲ. ಇಂಗ್ಲೆಂಡ್‌ನಷ್ಟು ಬಲಿಷ್ಠ ಬೌಲಿಂಗ್‌ ಪಡೆಯನ್ನು ಬಾಂಗ್ಲಾದೇಶ ಹೊಂದಿಲ್ಲವಾದ್ದರಿಂದ, ಭಾರತೀಯ ಬ್ಯಾಟ್ಸ್‌ಮನ್‌ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ.

ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಹಾರ್ದಿಕ್‌ ಪಾಂಡ್ಯ ತಮ್ಮ ಬ್ಯಾಟಿಂಗ್‌ ಲಯ ಮುಂದುವರಿಸಬೇಕಿದೆ. ಬಾಂಗ್ಲಾದೇಶದ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಮೊಹಮದ್‌ ಶಮಿ, ಜಸ್ಪ್ರೀತ್‌ ಬುಮ್ರಾ ಕಟ್ಟಿಹಾಕಲಿದ್ದಾರೆ ಎನ್ನುವ ವಿಶ್ವಾಸ ತಂಡದ ಆಡಳಿತದಾಗಿದೆ.

ಬಾಂಗ್ಲಾ ಪಂದ್ಯಕ್ಕೆ ಕೇದಾರ್ ಔಟ್- ಮತ್ತೋರ್ವ ಆಲ್ರೌಂಡರ್‌ಗೆ ಚಾನ್ಸ್?

ಶಕೀಬ್‌ ಮೇಲೆ ನಿರೀಕ್ಷೆ: ಬಾಂಗ್ಲಾದೇಶ ಪಾಲಿಗೆ ಕೊನೆ 2 ಪಂದ್ಯವೂ ನಿರ್ಣಾಯಕ. ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿರುವ ಈ ಪಂದ್ಯದಲ್ಲಿ ತಂಡ ಗೆಲ್ಲಲೇಬೇಕಿದೆ. ವಿಶ್ವದ ನಂ.1 ಆಲ್ರೌಂಡರ್‌ ಶಕೀಬ್‌ ಅಲ್‌ ಹಸನ್‌ (476 ರನ್‌, 10 ವಿಕೆಟ್‌) ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದು, ಭಾರತ ವಿರುದ್ಧ ಅವರು ಉತ್ತಮ ದಾಖಲೆ ಹೊಂದಿರುವ ಕಾರಣ ತಂಡ ಅವರ ಮೇಲೆಯೇ ಹೆಚ್ಚು ಅವಲಂಬಿತಗೊಂಡಿದೆ. ತಮೀಮ್‌ ಇಕ್ಬಾಲ್‌, ಮುಷ್ಫಿಕುರ್‌ ರಹೀಂ, ಮಹಮದ್ದುಲ್ಲಾ, ಲಿಟನ್‌ ದಾಸ್‌ರಂತಹ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳನ್ನು ಬಾಂಗ್ಲಾದೇಶ ಹೊಂದಿದೆ. ಆದರೆ ಬೌಲರ್‌ಗಳ ಲಯ ತಂಡದ ತಲೆ ನೋವು ಹೆಚ್ಚಿಸಿದೆ. ಮಶ್ರಫೆ ಮೊರ್ತಜಾ ನಾಯಕ ಎನ್ನುವ ಕಾರಣಕ್ಕೆ ಇನ್ನೂ ತಂಡದಲ್ಲಿ ಉಳಿದುಕೊಂಡಿದ್ದಾರೆ. 6 ಪಂದ್ಯಗಳಲ್ಲಿ ಅವರು ಕೇವಲ 1 ವಿಕೆಟ್‌ ಪಡೆದಿದ್ದಾರೆ. ಮುಸ್ತಾಫಿಜುರ್‌ ರೆಹಮಾನ್‌ ಸಹ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಬೌಲಿಂಗ್‌ನಲ್ಲೂ ಬಾಂಗ್ಲಾ, ಶಕೀಬ್‌ ಮೇಲೆ ಅವಲಂಬಿತಗೊಂಡಿದೆ.

ಪಿಚ್‌ ರಿಪೋರ್ಟ್‌

ಎಡ್ಜ್‌ಬಾಸ್ಟನ್‌ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಭಾನುವಾರ ನಡೆದ ಭಾರತ-ಇಂಗ್ಲೆಂಡ್‌ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ 300ಕ್ಕೂ ಹೆಚ್ಚು ಮೊತ್ತ ದಾಖಲಾಗಿತ್ತು. ಮೊದಲು ಬ್ಯಾಟ್‌ ಮಾಡುವ ತಂಡಕ್ಕೆ ಲಾಭ ಹೆಚ್ಚು. 2ನೇ ಇನ್ನಿಂಗ್ಸ್‌ ವೇಳೆ ಚೆಂಡು ನಿಂತು ಬರಲಿದ್ದು, ರನ್‌ ಗಳಿಸುವುದು ಸ್ವಲ್ಪ ಕಷ್ಟವಾಗಲಿದೆ.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ(ನಾಯಕ), ರಿಷಭ್‌ ಪಂತ್‌, ಎಂ.ಎಸ್‌.ಧೋನಿ, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಮೊಹಮದ್‌ ಶಮಿ, ಜಸ್‌ಪ್ರೀತ್‌ ಬೂಮ್ರಾ.

ಬಾಂಗ್ಲಾದೇಶ: ತಮೀಮ್‌ ಇಕ್ಬಾಲ್‌, ಸೌಮ್ಯ ಸರ್ಕಾರ್‌, ಶಕೀಬ್‌ ಅಲ್‌ ಹಸನ್‌, ಮುಷ್ಫಿಕುರ್‌ ರಹೀಂ, ಮಹಮದ್ದುಲ್ಲಾ, ಲಿಟನ್‌ ದಾಸ್‌, ಮೆಹಿದಿ ಹಸನ್‌, ಮಶ್ರಫೆ ಮೊರ್ತಜಾ(ನಾಯಕ), ಮೊಹಮದ್‌ ಸೈಫುದ್ದೀನ್‌, ಮುಸ್ತಾಫಿಜುರ್‌ ರಹಮಾನ್‌.

ಸ್ಥಳ: ಬರ್ಮಿಂಗ್‌ಹ್ಯಾಮ್‌ 

ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್