ಚೆಸ್ಟ್ ಲೆ ಸ್ಟ್ರೀಟ್(ಜು.03): ಆಸ್ಟ್ರೇಲಿಯಾ ಹಾಗೂ ಭಾರತ ಈಗಾಗಲೇ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದೆ.  ಆದರೆ ಇನ್ನೆರಡು ಸ್ಥಾನಕ್ಕಾಗಿ ಆತಿಥೇಯ ಇಂಗ್ಲೆಂಡ್, ನ್ಯೂಜಿಲೆಂಡ್ ಜೊತೆಗೆ ಪಾಕಿಸ್ತಾನ ಕೂಡ ಹೋರಾಟ ನಡೆಸುತ್ತಿದೆ. ಆಫ್ಘಾನಿಸ್ತಾನ, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್ ಹಾಗೂ ಶ್ರೀಲಂಕಾ ತಂಡದ ಸೆಮಿಫೈನಲ್ ಹೋರಾಟ ಅಂತ್ಯಗೊಂಡಿದೆ. ಸದ್ಯ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದ ಫಲಿತಾಂಶ ಪಾಕಿಸ್ತಾನದ ಹಣೆಬರಹ ನಿರ್ಧರಿಸಲಿದೆ.

ಇದನ್ನೂ ಓದಿ: 1983ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಸಾಕ್ಷಿಯಾಗಿದ್ದ ಚಾರುಲತಾ,2019ರಲ್ಲೂ ಹಾಜರ್!

ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಲೀಗ್ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಸೆಮಿಫೈನಲ್ ಸ್ಥಾನ ಖಚಿತ ಪಡಿಸಲಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲುವು ಸಾಧಿಸಿದರೆ, ಇಂಗ್ಲೆಂಡ್ ತಂಡದ ಸೆಮಿಫೈನಲ್ ಬಾಗಿಲು ಬಹುತೇಕ ಮುಚ್ಚಲಿದೆ. ಇಂಗ್ಲೆಂಡ್ 10  ಅಂಕಕ್ಕೆ ತೃಪ್ತಿ ಪಡಬೇಕಾಗುತ್ತೆ. ಹೀಗಾದಲ್ಲಿ ಪಾಕಿಸ್ತಾನದ ಸೆಮಿಫೈನಲ್ ಬಾಗಿಲು ತೆರಯಲಿದೆ. ಕಾರಣ 9 ಅಂಕ ಸಂಪಾದಿಸಿರುವ ಪಾಕಿಸ್ತಾನ ಅಂತಿಮ ಪಂದ್ಯದಲ್ಲಿ ಬಾಂಗ್ಲಾದೇಶ ಎದುರಿಸಲಿದೆ. ಬಾಂಗ್ಲಾ ಮಣಿಸಿದರೆ ಪಾಕ್ ಅಂಕ 11, ಹೀಗಾದಲ್ಲಿ ಇಂಗ್ಲೆಂಡ್ ಬದಲು ಪಾಕಿಸ್ತಾನ ಸೆಮಿಫೈನಲ್‌ಗೆ ಎಂಟ್ರಿ ಕೊಡಲಿದೆ. ಆದರೆ ಬಾಂಗ್ಲಾ ವಿರುದ್ಧ ಪಾಕಿಸ್ತಾನ ಸೋತರೆ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಲಿದೆ. ಹೀಗಾಗಿಯೇ ನ್ಯೂಜಿಲೆಂಡ್ ಗೆಲುವು ಸಾಧಿಸಲಿ ಅನ್ನೋದು ಪಾಕಿಸ್ತಾನ ಅಭಿಮಾನಿಗಳ ಪ್ರಾರ್ಥನೆ.

ಇದನ್ನೂ ಓದಿ: ವಿಶ್ವಕಪ್‌ನಿಂದ ಕಡೆಗಣನೆ; ಕ್ರಿಕೆಟ್‌ಗೆ ಅಂಬಾಟಿ ರಾಯುಡು ವಿದಾಯ?

ನ್ಯೂಜಿಲೆಂಡ್ ವಿರುದ್ದ ಇಂಗ್ಲೆಂಡ್ ಗೆಲುವು ಸಾಧಿಸಿದರೆ ಪಾಕಿಸ್ತಾನದ ಸೆಮಿಫೈನಲ್ ಹಾದಿ ಕಠಿಣವಾಗಲಿದೆ. ಕಾರಣ ಇಂಗ್ಲೆಂಡ್ 3ನೇ ಸ್ಥಾನಕ್ಕೆ ಲಗ್ಗೆ ಇಟ್ಟರೆ, ಈಗಾಗಲೇ 11 ಅಂಕ ಸಂಪಾದಿಸಿರುವ ನ್ಯೂಜಿಲೆಂಡ್ 4ನೇ ಸ್ಥಾನ ಅಲಂಕರಿಸಲಿದೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದರೂ 11 ಅಂಕದದೊಂದಿಗೆ ಕಡಿಮೆ ನೆಟ್ ರನ್ ರೇಟ್ ಆಧಾರದಲ್ಲಿ 5ನೇ ಸ್ಥಾನಕ್ಕೆ ತೃಪ್ತಿ ಪಡಲಿದೆ. ಆದರೆ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಭಾರಿ ಅಂತರದಿಂದ ಗೆಲ್ಲಬೇಕು. ಹೀಗಾದಲ್ಲಿ11 ಅಂಕ ಸಂಪಾದಿಸಿರುವ ನ್ಯೂಜಿಲೆಂಡ್ ತಂಡದ  + 0.572 ನೆಟ್ ರನ್ ರೇಟ್ ಕಡಿಮೆಯಾಗಲಿದೆ . ಇತ್ತ  ಪಾಕಿಸ್ತಾನ, ಬಾಂಗ್ಲಾದೇಶ ವಿರುದ್ದ ಭಾರಿ ಅಂತರದ ಗೆಲುವು ಸಾಧಿಸಿದರೆ 11 ಅಂಕದ ಜೊತೆಗೆ ರನ್ ರೇಟ್ ಉತ್ತಮವಾಗಲಿದೆ. ಹೀಗಾದಲ್ಲಿ ನ್ಯೂಜಿಲೆಂಡ್ ಬದಲು ಪಾಕಿಸ್ತಾನಕ್ಕೆ ಸೆಮಿಫೈನಲ್ ಅವಕಾಶ ಸಿಗಲಿದೆ. ಆದರೆ ಈ ಸಾಧ್ಯತೆ ಕಷ್ಟ.