ಸೌಥಾಂಪ್ಟನ್‌[ಜೂ.14]: ಇಂಗ್ಲೆಂಡ್‌ ಹಾಗೂ ವೆಸ್ಟ್‌ಇಂಡೀಸ್‌ ತಂಡಗಳ ನಡುವಿನ ಪೈಪೋಟಿ ಶುಕ್ರವಾರ ಕೆರಿಬಿಯನ್‌ನಿಂದ ಇಲ್ಲಿನ ರೋಸ್‌ ಬೌಲ್‌ ಕ್ರೀಡಾಂಗಣಕ್ಕೆ ಸ್ಥಳಾಂತರಗೊಳ್ಳಲಿದೆ. ಇದೇ ವರ್ಷ ಫೆಬ್ರವರಿಯಲ್ಲಿ ಕೆರಿಬಿಯನ್‌ನಲ್ಲಿ ನಡೆದಿದ್ದ 5 ಪಂದ್ಯಗಳ ಏಕದಿನ ಸರಣಿಯನ್ನು ಉಭಯ ತಂಡಗಳು 2-2ರಲ್ಲಿ ಡ್ರಾ ಮಾಡಿಕೊಂಡಿದ್ದವು. ಈ ಸರಣಿಯಲ್ಲಿ ರನ್‌ ಹೊಳೆ ಹರಿದಿತ್ತು. ವಿಂಡೀಸ್‌ನ ಬ್ಯಾಟಿಂಗ್‌ ದೈತ್ಯ ಕ್ರಿಸ್‌ ಗೇಲ್‌ 39 ಸಿಕ್ಸರ್‌ ಸಿಡಿಸಿದ್ದರು. 4 ಇನ್ನಿಂಗ್ಸ್‌ಗಳಲ್ಲಿ 424 ರನ್‌ ಚಚ್ಚಿದ್ದರು.

ಶುಕ್ರವಾರ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಗೇಲ್‌ ಕಟ್ಟಿಹಾಕಲು ಇಂಗ್ಲೆಂಡ್‌ ತನ್ನ ವೇಗದ ಅಸ್ತ್ರ ಜೋಫ್ರಾ ಆರ್ಚರ್‌ರನ್ನು ದಾಳಿಗಿಳಿಸಲಿದೆ. ಆರ್ಚರ್‌ ಮೂಲತಃ ಕೆರಿಬಿಯನ್‌ ದ್ವೀಪ ರಾಷ್ಟ್ರಗಳಲ್ಲಿ ಒಂದಾದ ಬಾರ್ಬೊಡಾಸ್‌ನವರು. ಈ ವರ್ಷ ಏಪ್ರಿಲ್‌ನಲ್ಲಷ್ಟೇ ಅವರು ಇಂಗ್ಲೆಂಡ್‌ ತಂಡದ ಪರ ಆಡಲು ಮಾನ್ಯತೆ ಪಡೆದರು. ಗೇಲ್‌ ಹಾಗೂ ಆರ್ಚರ್‌ ನಡುವಿನ ಪೈಪೋಟಿ ಕ್ರಿಕೆಟ್‌ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಸುರಿವ ಮಳೆ ಜೊತೆಯೊಂದಷ್ಟು ಕ್ರಿಕೆಟ್ ಕೀಟಲೆಗಳು..!

ಈ ವಿಶ್ವಕಪ್‌ನಲ್ಲಿ ಆರ್ಚರ್‌ ದಾಳಿ ಎದುರಿಸುವುದು ಎದುರಾಳಿಗಳಿಗೆ ಬೆಂಕಿಯುಂಡೆಗಳನ್ನು ಎದುರಿಸಿದಂತಾಗಿದೆ. ಪ್ರಚಂಡ ಲಯದಲ್ಲಿರುವ ಆರ್ಚರ್‌ಗೆ ಮಾರ್ಕ್ ವುಡ್‌ ಹಾಗೂ ಲಿಯಾಮ್‌ ಪ್ಲಂಕೆಟ್‌ರಿಂದ ಉತ್ತಮ ಬೆಂಬಲ ಸಿಗಲಿದೆ. ಗೇಲ್‌ ಕಟ್ಟಿಹಾಕಿದರೆ ಪಂದ್ಯ ಗೆದ್ದಂತೆ ಎಂದು ಇಂಗ್ಲೆಂಡ್‌ ಭಾವಿಸಿದರೆ ಸೋಲು ಖಚಿತ. ಯಾಕೆಂದರೆ ಶಾಯ್‌ ಹೋಪ್‌, ಎವಿನ್‌ ಲೆವಿಸ್‌, ಶಿಮ್ರೊನ್‌ ಹೆಟ್ಮೇಯರ್‌, ಜೇಸನ್‌ ಹೋಲ್ಡರ್‌, ನಿಕೋಲಸ್‌ ಪೂರನ್‌ ಪೈಕಿ ಯಾರೊಬ್ಬರು ಕ್ರೀಸ್‌ನಲ್ಲಿ ನೆಲೆಯೂರಿದರೂ ರನ್‌ ಮಳೆ ಸುರಿಸಲಿದ್ದಾರೆ. ಕಳೆದ ಪಂದ್ಯ ಮಳೆಯಿಂದಾಗಿ ರದ್ದಾದ ಕಾರಣ, ವಿಂಡೀಸ್‌ ಮೈದಾನಕ್ಕಿಳಿದು ಆರ್ಭಟಿಸಲು ಕಾತರಿಸುತ್ತಿದೆ. ದ.ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಆಡುವ ಹನ್ನೊಂದರಲ್ಲಿ ಗಾಯಾಳು ಆ್ಯಂಡ್ರೆ ರಸೆಲ್‌ ಸ್ಥಾನ ಪಡೆದಿರಲಿಲ್ಲ. ಈ ಪಂದ್ಯಕ್ಕೆ ಅವರು ಲಭ್ಯರಾಗುವ ಸಾಧ್ಯತೆ ಇದೆ.

ವಿಶ್ವಕಪ್ 2019: ಫಲಿಸಲಿಲ್ಲ ಕೇದಾರ್ ಜಾಧವ್ ಪ್ರಾರ್ಥನೆ!

ಮತ್ತೊಂದೆಡೆ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗಳೇನು ಕಮ್ಮಿಯಿಲ್ಲ. ಜೇನಸ್‌ ರಾಯ್‌, ಜಾನಿ ಬೇರ್‌ಸ್ಟೋವ್‌, ಜೋ ರೂಟ್‌, ಇಯಾನ್‌ ಮಾರ್ಗನ್‌, ಬೆನ್‌ ಸ್ಟೋಕ್ಸ್‌ರಂತಹ ಘಟಾನುಘಟಿಗಳ ಬಲವಿದೆ. ಜೋಸ್‌ ಬಟ್ಲರ್‌ ಗಾಯದಿಂದ ಚೇತರಿಸಿಕೊಂಡಿದ್ದು, ಕಣಕ್ಕಿಳಿಯಲಿದ್ದಾರೆ ಎಂದು ಇಂಗ್ಲೆಂಡ್‌ ತಂಡದ ಕೋಚ್‌ ಸ್ಪಷ್ಟಪಡಿಸಿದ್ದಾರೆ. ವಿಂಡೀಸ್‌ ಸಹ ಪ್ರಚಂಡ ವೇಗಿಗಳನ್ನು ಹೊಂದಿದೆ. ಭಯಾನಕ ಬೌನ್ಸರ್‌ಗಳಿಂದಲೇ ವಿಂಡೀಸ್‌ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸದಿದ್ದರೆ, ಇಂಗ್ಲೆಂಡ್‌ ಹಾಗೂ ವಿಂಡೀಸ್‌ ದಾಂಡಿಗರು ರನ್‌ ಮಳೆ ಸುರಿಸಲಿದ್ದಾರೆ.

ಪಿಚ್‌ ರಿಪೋರ್ಟ್‌

ರೋಸ್‌ ಬೌಲ್‌ ಕ್ರೀಡಾಂಗಣದ ಪಿಚ್‌ ಬ್ಯಾಟ್ಸ್‌ಮನ್‌ ಸ್ನೇಹಿಯಾಗಿರಲಿದೆ. ಇಲ್ಲಿ ನಡೆದಿರುವ ಇತ್ತೀಚಿನ ಪಂದ್ಯಗಳಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಉತ್ತಮ ಮೊತ್ತ ದಾಖಲಾಗಿದೆ. ಸ್ಪಿನ್ನರ್‌ಗಳಿಗೆ ತಕ್ಕಮಟ್ಟಿಗಿನ ನೆರವು ಸಿಗಲಿದ್ದು, ಮೋಡ ಮುಸುಕಿದ ವಾತಾವರಣವಿರುವ ನಿರೀಕ್ಷೆ ಇದ್ದು, ಸ್ವಿಂಗ್‌ ಬೌಲರ್‌ಗಳು ಹೆಚ್ಚಿನ ಲಾಭ ಪಡೆಯಲಿದ್ದಾರೆ.

ಒಟ್ಟು ಮುಖಾಮುಖಿ: 101

ಇಂಗ್ಲೆಂಡ್‌: 51

ವೆಸ್ಟ್‌ಇಂಡೀಸ್‌: 44

ಫಲಿತಾಂಶವಿಲ್ಲ: 06

ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ vs ವಿಂಡೀಸ್‌

ಪಂದ್ಯ: 06

ಇಂಗ್ಲೆಂಡ್‌: 05

ವೆಸ್ಟ್‌ಇಂಡೀಸ್‌: 01

ಸಂಭವನೀಯ ಆಟಗಾರರು

ವಿಂಡೀಸ್‌: ಗೇಲ್‌, ಲೆವಿಸ್‌, ಹೋಪ್‌, ಪೂರನ್‌, ಹೆಟ್ಮೇಯರ್‌, ರಸೆಲ್‌, ಹೋಲ್ಡರ್‌(ನಾಯಕ), ಬ್ರಾಥ್‌ವೇಟ್‌, ನರ್ಸ್‌, ಕಾಟ್ರೆಲ್‌, ಥಾಮಸ್‌.

ಇಂಗ್ಲೆಂಡ್‌: ರಾಯ್‌, ಬೇರ್‌ಸ್ಟೋವ್‌, ರೂಟ್‌, ಮಾರ್ಗನ್‌ (ನಾಯಕ), ಸ್ಟೋಕ್ಸ್‌, ಬಟ್ಲರ್‌, ಅಲಿ, ವೋಕ್ಸ್‌, ಪ್ಲಂಕೆಟ್‌, ಆರ್ಚರ್‌, ವುಡ್‌.

ಸ್ಥಳ: ಸೌಥಾಂಪ್ಟನ್‌ 
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1