ಮ್ಯಾಂಚೆಸ್ಟರ್[ಜು.09]: ವಿಶ್ವಕಪ್ ಟೂರ್ನಿಯಲ್ಲಿ ಇನ್ನೆರಡು ಪಂದ್ಯಗಳನ್ನು ಗೆದ್ದು ಕಪ್ ಎತ್ತಿ ಹಿಡಿಯುವ ವಿಶ್ವಾಸದಲ್ಲಿರುವ ಟೀಂ ಇಂಡಿಯಾ , ಇದೀಗ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ 2 ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.

ವಿಶ್ವಕಪ್ ಸೆಮಿಫೈನಲ್: ಮಳೆಯಾದರೆ..?

ಈಗಾಗಲೇ ಇಂಗ್ಲೆಂಡ್ ವಿರುದ್ಧ ಹೊರತು ಪಡಿಸಿ ಲೀಗ್ ಹಂತದಲ್ಲಿ ಉಳಿದೆಲ್ಲಾ ಪಂದ್ಯಗಳನ್ನು ಜಯಿಸುವ ಮೂಲಕ ಅಗ್ರಸ್ಥಾನಕ್ಕೇರಿದ್ದ ಟೀಂ ಇಂಡಿಯಾ, ಇದೀಗ ಕಿವೀಸ್ ವಿರುದ್ಧ ಗೆದ್ದು, ಫೈನಲ್ ಪಂದ್ಯಕ್ಕೆ ಟಿಕೆಟ್ ಗಿಟ್ಟಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ 2 ಪ್ರಮುಖ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಸುವರ್ಣನ್ಯೂಸ್.ಕಾಂ ಆಯ್ಕೆ ಮಾಡಿದ ಸಂಭಾವ್ಯ ಟೀಂ ಇಂಡಿಯಾ ಹೀಗಿದೆ ನೋಡಿ...

ವಿಶ್ವಕಪ್‌ 2019: ಭಾರತಕ್ಕೆ ಸಿಗುತ್ತಾ ಫೈನಲ್‌ ಟಿಕೆಟ್‌?

ಆರಂಭಿಕರಾಗಿ: ರೋಹಿತ್-ರಾಹುಲ್
ಶ್ರೀಲಂಕಾ ವಿರುದ್ಧ ಕೊನೆಯ ಲೀಗ್ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ಕೆ.ಎಲ್ ರಾಹುಲ್ ಇಬ್ಬರೂ ಭರ್ಜರಿ ಶತಕ ಸಿಡಿಸುವ ಮೂಲಕ ಉತ್ತಮ ಆರಂಭ ಒದಗಿಸಿದ್ದರು. ಹೀಗಾಗಿ ಇವರಿಬ್ಬರೇ ಮೊದಲ ಸೆಮೀಸ್’ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.

ಮಧ್ಯಮ ಕ್ರಮಾಂಕ: ವಿರಾಟ್, ಪಂತ್, ಧೋನಿ
ಇನ್ನು ಭಾರತದ ಮಧ್ಯಮ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕ ಸಿಡಿಸದಿದ್ದರೂ ಸ್ಥಿರ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ರಿಷಭ್ ಪಂತ್  ಆ ಬಳಿಕ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮಹೇಂದ್ರ ಸಿಂಗ್ ಧೋನಿ ಅವರು ಬಹುತೇಕ ಕಣಕ್ಕಿಳಿಯಲಿದ್ದು, ಈ ಇಬ್ಬರು ಕ್ರಿಕೆಟಿಗರ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ಆಲ್ರೌಂಡರ್: ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ
ಭಾರತದ ಪ್ರಮುಖ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬೌಲಿಂಗ್ ಹಾಗೂ ಬ್ಯಾಟಿಂಗ್’ನಲ್ಲಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುತ್ತಾ ಬಂದಿದ್ದಾರೆ. ಇವರ ಜತೆಗೆ ಕಳೆದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ರವೀಂದ್ರ ಜಡೇಜಾ ಕೂಡಾ ಸೆಮಿಫೈನಲ್ ಪಂದ್ಯದಲ್ಲಿ ಕಾಣಿಸಿಕೊಂಡರೆ ಅಚ್ಚರಿಯಿಲ್ಲ. ಯಾಕೆಂದರೆ ಅಭ್ಯಾಸ ಪಂದ್ಯದಲ್ಲಿ ರವೀಂದ್ರ ಜಡೇಜಾ ಕಿವೀಸ್ ಎದುರು ಅರ್ಧಶತಕ ಸಿಡಿಸಿ ಮಿಂಚಿದ್ದರು.

ಬೌಲರ್‌ಗಳು: ಕುಲ್ದೀಪ್, ಭುವಿ, ಶಮಿ, ಬುಮ್ರಾ
ಟೀಂ ಇಂಡಿಯಾ ಬೌಲರ್’ಗಳು ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ  ತೋರುವಲ್ಲಿ ಯಶಸ್ವಿಯಾಗಿದ್ದಾರೆ. ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಜತೆಗೆ ಮೊಹಮ್ಮದ್ ಶಮಿ ಕೂಡಾ ಮಾರಕ ದಾಳಿ ನಡೆಸುತ್ತಿದ್ದಾರೆ. ಇನ್ನು ನ್ಯೂಜಿಲೆಂಡ್ ಪ್ರವಾಸದ ವೇಳೆ ಮಿಂಚಿದ್ದ ಕುಲ್ದೀಪ್ ಯಾದವ್ ಇಲ್ಲವೇ ಯುಜುವೇಂದ್ರ ಚಹಲ್ ಇಬ್ಬರಲ್ಲಿ ಒಬ್ಬರು ಮಾತ್ರ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಭಾರತ ತಂಡ ಹೀಗಿದೆ ನೋಡಿ...

ರೋಹಿತ್ ಶರ್ಮಾ, ಕೆ.ಎಲ್‌. ರಾಹುಲ್‌, ವಿರಾಟ್‌ ಕೊಹ್ಲಿ (ನಾಯಕ), ರಿಷಭ್‌ ಪಂತ್‌, ಎಂ.ಎಸ್‌.ಧೋನಿ, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಯಜುವೇಂದ್ರ ಚಹಲ್‌/ಕುಲ್ದೀಪ್ ಯಾದವ್, ಮೊಹಮದ್‌ ಶಮಿ, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ.