ವಿಶ್ವಕಪ್ ಟೂರ್ನಿಯ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ..

ಮ್ಯಾಂಚೆಸ್ಟರ್‌[ಜು.09]: 2019ರ ಐಸಿಸಿ ಏಕದಿನ ವಿಶ್ವಕಪ್‌, ವಿರಾಟ್‌ ಕೊಹ್ಲಿ ಹಾಗೂ ತಂಡದ ಪಾಲಿಗೆ ಕನಸಿನ ಓಟವಾಗಿದ್ದು, ಇತಿಹಾಸ ಬರೆಯಲು ಇನ್ನೆರಡೇ ಹೆಜ್ಜೆ ಬಾಕಿ ಇದೆ. 5 ವಾರಗಳ ರೋಚಕ ಕ್ರಿಕೆಟ್‌ ಸೆಣಸಾಟದ ಬಳಿಕ ಇದೀಗ 4 ಅರ್ಹ ತಂಡಗಳು ಸೆಮಿಫೈನಲ್‌ ಪ್ರವೇಶಿಸಿದ್ದು, ಮಂಗಳವಾರ ನಡೆಯಲಿರುವ ಮೊದಲ ಸೆಮೀಸ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್‌ ಅನ್ನು ಎದುರಿಸಲಿದೆ.

ಭಾರತ, ರೌಂಡ್‌ ರಾಬಿನ್‌ ಹಂತದ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಆತ್ಮವಿಶ್ವಾಸದೊಂದಿಗೆ ಸೆಮೀಸ್‌ಗೆ ಲಗ್ಗೆಯಿಟ್ಟರೆ, ಮತ್ತೊಂದೆಡೆ ಸತತ 3 ಸೋಲುಗಳೊಂದಿಗೆ ಕಿವೀಸ್‌ ಸೆಮೀಸ್‌ ಪ್ರವೇಶಿಸಿದೆ. ದ. ಆಫ್ರಿಕಾ ವಿರುದ್ಧ ಆರಂಭಿಕ ಪಂದ್ಯದಲ್ಲಿ ಆರಂಭವಾದ ಭಾರತದ ಪ್ರಾಬಲ್ಯ ಮುಂದುವರಿಯುತ್ತಲೇ ಇದೆ. ಇಂಗ್ಲೆಂಡ್‌ ವಿರುದ್ಧ ಸೋಲುಂಡಿದ್ದನ್ನು ಹೊರತು ಪಡಿಸಿ, ಭಾರತ ಇನ್ನುಳಿದ ಪಂದ್ಯಗಳಲ್ಲಿ ಅಧಿಕಾರಯುತ ಪ್ರದರ್ಶನ ತೋರಿದೆ. ಇನ್ನೆರಡು ಪಂದ್ಯಗಳಲ್ಲಿ ಕೊಹ್ಲಿ ಪಡೆ ತನ್ನ ಪ್ರದರ್ಶನ ಗುಣಮಟ್ಟ ಕಾಯ್ದುಕೊಂಡರೆ ಟ್ರೋಫಿ ಎತ್ತಿಹಿಡಿಯಬಹುದಾಗಿದೆ.

ಟೂರ್ನಿಯ ಆರಂಭದಲ್ಲೇ ನ್ಯೂಜಿಲೆಂಡ್‌ ಅಬ್ಬರಿಸಿದರೂ, ಬಳಿಕ ಮಂಕಾಯಿತು. ತಂಡದ ಬ್ಯಾಟಿಂಗ್‌ ವಿಭಾಗ ಸತತ ವೈಫಲ್ಯ ಕಾಣುತ್ತಿರುವುದೇ ಸೋಲಿಗೆ ಕಾರಣವಾಗಿದೆ. ಟ್ರೆಂಟ್‌ ಬೌಲ್ಟ್‌ ಮುಂದಾಳತ್ವದ ವೇಗದ ಬೌಲಿಂಗ್‌ ಪಡೆ ಮಿಂಚಿದರಷ್ಟೇ ಕಿವೀಸ್‌ ಸತತ 2ನೇ ಬಾರಿಗೆ ವಿಶ್ವಕಪ್‌ ಫೈನಲ್‌ಗೇರಲು ಸಾಧ್ಯ.

ಭಾರತದ ಅಗ್ರ 3 ಬ್ಯಾಟ್ಸ್‌ಮನ್‌ vs ನ್ಯೂಜಿಲೆಂಡ್‌ ವೇಗಿಗಳು

ಮೊದಲ ಸೆಮಿಫೈನಲ್‌ ಪಂದ್ಯ ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಹಾಗೂ ನ್ಯೂಜಿಲೆಂಡ್‌ನ ವೇಗದ ಬೌಲರ್‌ಗಳ ನಡುವಿನ ಪೈಪೋಟಿಯಿಂದಾಗಿ ಭಾರಿ ರೋಚಕತೆ ಹುಟ್ಟಿಹಾಕಿದೆ. ರೋಹಿತ್‌ ಶರ್ಮಾ (647), ಕೆ.ಎಲ್‌.ರಾಹುಲ್‌ (360) ಹಾಗೂ ವಿರಾಟ್‌ ಕೊಹ್ಲಿ (442) ಈ ಮೂವರು ಸೇರಿ ಒಟ್ಟು 1347 ರನ್‌ ಕಲೆಹಾಕಿದ್ದಾರೆ. ಮತ್ತೊಂದೆಡೆ ಕಿವೀಸ್‌ ವೇಗಿಗಳಾದ ಲ್ಯೂಕಿ ಫಗ್ರ್ಯೂಸನ್‌ (17 ವಿಕೆಟ್‌), ಟ್ರೆಂಟ್‌ ಬೌಲ್ಟ್‌ (15), ಮ್ಯಾಟ್‌ ಹೆನ್ರಿ (10), ಜೇಮ್ಸ್‌ ನೀಶಮ್‌ (11) ಹಾಗೂ ಕಾಲಿನ್‌ ಡಿ ಗ್ರಾಂಡ್‌ಹೋಮ್‌ (05) ಸೇರಿ ಒಟ್ಟು 58 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಅಗ್ರ ಮೂವರು ಬ್ಯಾಟ್ಸ್‌ಮನ್‌ಗಳು ಸಿಡಿದರಷ್ಟೇ ಭಾರತಕ್ಕೆ ಉಳಿಗಾಲ. ತಂಡ ಪ್ಯಾನ್‌ ‘ಬಿ’ ಇಲ್ಲದೇ ಸೆಮೀಸ್‌ವರೆಗೂ ಸಾಗಿ ಬಂದಿದೆ. ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾರತದ ಮಧ್ಯಮ ಕ್ರಮಾಂಕಕ್ಕೆ ಪರೀಕ್ಷೆ ಎದುರಾಗಿತ್ತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನಿರೀಕ್ಷೆ ಉಳಿಸಿಕೊಂಡಿರಲಿಲ್ಲ. ಕಿವೀಸ್‌ ವೇಗಿಗಳು ಭಾರತಕ್ಕೆ ಆರಂಭಿಕ ಆಘಾತ ನೀಡಿದರೆ, ಅರ್ಧ ಪಂದ್ಯ ಗೆದ್ದಂತೆಯೇ ಲೆಕ್ಕ. ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ಭಾರತ ವಿರುದ್ಧ ಕಿವೀಸ್‌ ಗೆಲ್ಲಲು, ವೇಗಿಗಳು ಯಶಸ್ಸು ಕಂಡಿದ್ದೇ ಕಾರಣ.

ಕೇನ್‌, ಟೇಲರ್‌ ಮೇಲೆ ಹೊರೆ!

ಈ ವಿಶ್ವಕಪ್‌ನಲ್ಲಿ ತೀರಾ ಸಾಧಾರಣ ಪ್ರದರ್ಶನ ತೋರಿರುವ ಬ್ಯಾಟಿಂಗ್‌ ಪಡೆ ಎಂದರೆ ಅದು ನ್ಯೂಜಿಲೆಂಡ್‌ ತಂಡದ್ದು. ನಾಯಕ ಕೇನ್‌ ವಿಲಿಯಮ್ಸನ್‌ (481 ರನ್‌) ಹಾಗೂ ರಾಸ್‌ ಟೇಲರ್‌ (261 ರನ್‌) ಹೊರತು ಪಡಿಸಿ ಉಳಿದ್ಯಾವ ಬ್ಯಾಟ್ಸ್‌ಮನ್‌ಗಳು ಸಹ 250 ರನ್‌ ದಾಟಿಲ್ಲ. ಸಾಧಾರಣ ಆಟವಾಡಿರುವ ಎಂ.ಎಸ್‌.ಧೋನಿಯೇ 223 ರನ್‌ ಗಳಿಸಿದ್ದಾರೆ. ಪ್ರಮುಖವಾಗಿ ಕಿವೀಸ್‌ ಆರಂಭಿಕರಾದ ಮಾರ್ಟಿನ್‌ ಗಪ್ಟಿಲ್‌ (166) ಹಾಗೂ ಕಾಲಿನ್‌ ಮನ್ರೊ (125) ಆರಿ ನಿರಾಸೆ ಮೂಡಿಸಿದ್ದಾರೆ.

ಜಸ್ಪ್ರೀತ್‌ ಬುಮ್ರಾ (17 ವಿಕೆಟ್‌) ಹಾಗೂ ಮೊಹಮದ್‌ ಶಮಿ (14) ಉತ್ತಮ ಲಯದಲ್ಲಿದ್ದು, ಕೊಹ್ಲಿ ಈ ಇಬ್ಬರು ವೇಗಿಗಳ ಮೇಲೆ ಹೆಚ್ಚು ವಿಶ್ವಾಸವಿರಿಸಿದ್ದಾರೆ.

ಭಾರತ ತಂಡದಲ್ಲಿ ಬದಲಾವಣೆ?: ನ್ಯೂಜಿಲೆಂಡ್‌ ತಂಡದಲ್ಲಿ ಬಲಗೈ ಬ್ಯಾಟ್ಸ್‌ಮನ್‌ಗಳು ಹೆಚ್ಚಿರುವ ಕಾರಣ, ಇಬ್ಬರು ಮಣಿಕ್ಕಟ್ಟು ಸ್ಪಿನ್ನರ್‌ಗಳ ಪೈಕಿ ಒಬ್ಬರನ್ನು ಕೈಬಿಡುವ ಸಾಧ್ಯತೆ ಇದೆ. ಸಣ್ಣ ಪ್ರಮಾಣದ ಗಾಯದ ಸಮಸ್ಯೆಯಿಂದಾಗಿ ಚಹಲ್‌ ಕಳೆದ ಪಂದ್ಯದಲ್ಲಿ ಆಡಿರಲಿಲ್ಲ. ಈ ಪಂದ್ಯದಲ್ಲೂ ಅವರನ್ನು ಕಣಕ್ಕಿಳಿಸುವ ಬಗ್ಗೆ ಖಚಿತತೆ ಇಲ್ಲ. ಜಡೇಜಾ ತಮ್ಮ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ ಇದ್ದು, ದಿನೇಶ್‌ ಕಾರ್ತಿಕ್‌ ಬದಲಿಗೆ ಕೇದಾರ್‌ ಜಾಧವ್‌ ಆಡುವ ಸಾಧ್ಯತೆ ಇದೆ.

ಪಿಚ್‌ ರಿಪೋರ್ಟ್‌

ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಮೈದಾನದಲ್ಲಿ ಪಂದ್ಯ ಗೆಲ್ಲಬೇಕಿದ್ದರೆ ಮೊದಲು ಬ್ಯಾಟ್‌ ಮಾಡಬೇಕು. ಈ ವಿಶ್ವಕಪ್‌ನಲ್ಲಿ ಇಲ್ಲಿ 5 ಪಂದ್ಯಗಳು ನಡೆದಿದ್ದು, ಎಲ್ಲಾ ಐದೂ ಪಂದ್ಯಗಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್‌ ಮಾಡುವ ತಂಡ 300ಕ್ಕಿಂತ ಹೆಚ್ಚಿನ ಮೊತ್ತ ಕಲೆಹಾಕಿದರೆ ಗೆಲುವು ಸುಲಭವಾಗಲಿದೆ.


ಒಟ್ಟು ಮುಖಾಮುಖಿ: 106

ಭಾರತ: 55

ನ್ಯೂಜಿಲೆಂಡ್‌: 45

ಟೈ: 01

ಫಲಿತಾಂಶವಿಲ್ಲ: 05

ವಿಶ್ವಕಪ್‌ನಲ್ಲಿ ಭಾರತ vs ನ್ಯೂಜಿಲೆಂಡ್‌

ಪಂದ್ಯ: 07

ಭಾರತ: 03

ನ್ಯೂಜಿಲೆಂಡ್‌: 04

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ (ನಾಯಕ), ರಿಷಭ್‌ ಪಂತ್‌, ಎಂ.ಎಸ್‌.ಧೋನಿ, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಯಜುವೇಂದ್ರ ಚಹಲ್‌, ಮೊಹಮದ್‌ ಶಮಿ, ಜಸ್ಪ್ರೀತ್‌ ಬುಮ್ರಾ.

ನ್ಯೂಜಿಲೆಂಡ್‌: ಮಾರ್ಟಿನ್‌ ಗಪ್ಟಿಲ್‌, ಹೆನ್ರಿ ನಿಕೋಲ್ಸ್‌, ಕೇನ್‌ ವಿಲಿಯಮ್ಸನ್‌ (ನಾಯಕ), ರಾಸ್‌ ಟೇಲರ್‌, ಟಾಮ್‌ ಲೇಥಮ್‌, ಜೇಮ್ಸ್‌ ನೀಶಮ್‌, ಡಿ ಗ್ರಾಂಡ್‌ಹೋಮ್‌, ಮಿಚೆಲ್‌ ಸ್ಯಾಂಟ್ನರ್‌, ಟ್ರೆಂಟ್‌ ಬೌಲ್ಟ್‌, ಮ್ಯಾಟ್‌ ಹೆನ್ರಿ, ಲಾಕಿ ಫಗ್ರ್ಯೂಸನ್‌.

ಸ್ಥಳ: ಮ್ಯಾಂಚೆಸ್ಟರ್‌
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1