ಕಾರ್ಡಿಫ್‌: 2019ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಇನ್ನೂ ಗೆಲುವನ್ನೇ ಕಾಣದ ದಕ್ಷಿಣ ಆಫ್ರಿಕಾ ಹಾಗೂ ಆಫ್ಘಾನಿಸ್ತಾನ ಶನಿವಾರ ಇಲ್ಲಿನ ಸೋಫಿಯಾ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಗೆಲುವಿನ ಖಾತೆ ತೆರೆಯಲು ಹಾತೊರೆಯುತ್ತಿವೆ.

ದಕ್ಷಿಣ ಆಫ್ರಿಕಾ ಸೆಮಿಫೈನಲ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಇಂಗ್ಲೆಂಡ್‌, ಬಾಂಗ್ಲಾದೇಶ ಹಾಗೂ ಭಾರತ ವಿರುದ್ಧ ಸೋತಿದ್ದ ದ.ಆಫ್ರಿಕಾ, ವಿಂಡೀಸ್‌ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದ ಕಾರಣ 1 ಅಂಕ ಗಳಿಸಿತ್ತು. ಆಫ್ಘಾನಿಸ್ತಾನದ ಸ್ಥಿತಿ ಕೂಡ ವಿಭಿನ್ನವಾಗೇನೂ ಇಲ್ಲ. ಆಸ್ಪ್ರೇಲಿಯಾ, ಶ್ರೀಲಂಕಾ ಹಾಗೂ ನ್ಯೂಜಿಲೆಂಡ್‌ ವಿರುದ್ಧ ಸೋಲುಂಡು ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ.

ಪಾಕ್‌ ಅಭಿಮಾನಿಗೆ ಅಭಿನಂದನ್ ಮೀಸೆ: #UltimatePunch

ದ.ಆಫ್ರಿಕಾದ ಬ್ಯಾಟಿಂಗ್‌ ಸಮಸ್ಯೆ ಮುಂದುವರಿದಿದೆ. ಆಮ್ಲಾ, ಡಿ ಕಾಕ್‌ ಹಾಗೂ ಫಾಫ್‌ ಡು ಪ್ಲೆಸಿಯಂತಹ ಅನುಭವಿಗಳು ಸಹ ಸತತ ವೈಫಲ್ಯ ಕಾಣುತ್ತಿದ್ದಾರೆ. ಆಫ್ಘಾನಿಸ್ತಾನ ವಿರುದ್ಧ ವೇಗಿ ಕಗಿಸೋ ರಬಾಡ, ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ಮೋಡಿ ಮಾಡಬಹುದು ಎನ್ನುವ ನಿರೀಕ್ಷೆ ಇರಿಸಿಕೊಂಡಿದೆ.

ಮತ್ತೊಂದೆಡೆ ಆಫ್ಘಾನಿಸ್ತಾನ, ತನ್ನ ಬೌಲಿಂಗ್‌ ವಿಭಾಗದ ಮೇಲೆಯೇ ಹೆಚ್ಚು ಭರವಸೆ ಇಟ್ಟುಕೊಂಡಿದೆ. ರಶೀದ್‌ ಖಾನ್‌ ಸ್ಪಿನ್‌ ಜಾದೂ ನಡೆಸಿದರೆ ಆಫ್ರಿಕಾಕ್ಕೆ ಸೋಲು ಎದುರಾಗಬಹುದು. ಆಲ್ರೌಂಡರ್‌ ಮೊಹಮದ್‌ ನಬಿ, ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ಗಳಾದ ಹಶ್ಮತ್ತುಲ್ಲಾ ಶಾಹಿದಿ, ಹಜರತ್ತುಲ್ಲಾ ಜಜಾಯಿ, ರಹಮತ್‌ ಶಾ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ಮಳೆಯಿಂದ ಪಂದ್ಯ ರದ್ದು-ಇಂಗ್ಲೆಂಡ್ ಕಾಲೆಳೆದ ಗಂಗೂಲಿ!

ಆಫ್ಘಾನಿಸ್ತಾನ ವಿರುದ್ಧ ಚೊಚ್ಚಲ ಪಂದ್ಯ!

ದಕ್ಷಿಣ ಆಫ್ರಿಕಾ ತಂಡ ಏಕದಿನ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಆಫ್ಘಾನಿಸ್ತಾನವನ್ನು ಎದುರಿಸಲಿದೆ. ಹೀಗಾಗಿ ಈ ಪಂದ್ಯ ಕುತೂಹಲ ಮೂಡಿಸಿದೆ. ದಕ್ಷಿಣ ಆಫ್ರಿಕಾ ಹಾಗೂ ಆಫ್ಘಾನಿಸ್ತಾನ 2 ಟಿ20 ಪಂದ್ಯಗಳಲ್ಲಿ ಎದುರಾಗಿದ್ದು, ಎರಡೂ ಪಂದ್ಯಗಳಲ್ಲಿ ದ.ಆಫ್ರಿಕಾ ಗೆಲುವು ಸಾಧಿಸಿದೆ.

ಪಿಚ್‌ ರಿಪೋರ್ಟ್‌

ಸೋಫಿಯಾ ಗಾರ್ಡನ್ಸ್‌ ಮೈದಾನದ ಪಿಚ್‌ನಲ್ಲಿ ಬೌಲರ್‌ಗಳಿಗೆ ಹೆಚ್ಚಿನ ನೆರವು ಸಿಗಲಿದೆ. ಚೆಂಡು ನಿಂತು ಬರುವ ಕಾರಣ ರನ್‌ ಗಳಿಸುವುದು ಕಷ್ಟ. ಲಂಕಾ ವಿರುದ್ಧ ಇಲ್ಲಿ ಆಫ್ಘನ್‌ ಸ್ಪಿನ್ನರ್‌ಗಳಾದ ನಬಿ ಹಾಗೂ ರಶೀದ್‌ ಯಶಸ್ಸು ಸಾಧಿಸಿದ್ದರು. ಮೊದಲು ಬ್ಯಾಟ್‌ ಮಾಡುವ ತಂಡಕ್ಕೆ ಹೆಚ್ಚಿನ ಲಾಭ ಸಿಗಲಿದೆ.

ಸಂಭವನೀಯ ಆಟಗಾರರು

ದ.ಆಫ್ರಿಕಾ: ಡಿ ಕಾಕ್‌, ಆಮ್ಲಾ, ಮಾರ್ಕ್ರಮ್‌, ಡು ಪ್ಲೆಸಿ(ನಾಯಕ), ವಾನ್‌ ಡರ್‌ ಡುಸ್ಸೆನ್‌, ಮಿಲ್ಲರ್‌, ಫೆಲುಕ್ವಾಯೋ, ಮೋರಿಸ್‌, ರಬಾಡ, ತಾಹಿರ್‌, ಹೆಂಡ್ರಿಕ್ಸ್‌.

ಆಫ್ಘಾನಿಸ್ತಾನ: ಹಜರತ್ತುಲ್ಲಾ, ನೂರ್‌ ಅಲಿ, ರಹಮತ್‌, ಹಶ್ಮತ್ತುಲ್ಲಾ, ಗುಲ್ಬದಿನ್‌(ನಾಯಕ), ನಬಿ, ನಜೀಬುಲ್ಲಾ, ಇಕ್ರಮ್‌, ರಶೀದ್‌, ಅಫ್ತಾಭ್‌, ಹಮೀದ್‌ ಹಸನ್‌.

ಸ್ಥಳ: ಕಾರ್ಡಿಫ್‌ 

ಪಂದ್ಯ ಆರಂಭ: ಸಂಜೆ 6ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1