ಕಾರ್ಡಿಫ್‌(ಜೂ.08): 2015ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಗುಂಪು ಹಂತದಲ್ಲೇ ಸೋತು ಹೊರಬಿದ್ದಿತ್ತು. ಇಂಗ್ಲೆಂಡ್‌ ಮೊದಲ ಸುತ್ತಲ್ಲೇ ನಿರ್ಗಮಿಸಲು ಬಾಂಗ್ಲಾದೇಶ ಸಹ ಕಾರಣ. ಅಡಿಲೇಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಬಾಂಗ್ಲಾ, ಇಂಗ್ಲೆಂಡ್‌ಗೆ 15 ರನ್‌ಗಳ ಸೋಲುಣಿಸಿತ್ತು. ಆ ಸೋಲಿನ ಬಳಿಕ ಹಠಕ್ಕೆ ಬಿದ್ದಂತೆ ಹೋರಾಡಿದ ಇಂಗ್ಲೆಂಡ್‌, 2019ರ ಐಸಿಸಿ ಏಕದಿನ ವಿಶ್ವಕಪ್‌ಗೆ ಬಲಿಷ್ಠ ತಂಡ ಸಿದ್ಧಪಡಿಸಿ ಕಣಕ್ಕಿಳಿದಿದೆ. ಬಾಂಗ್ಲಾ ವಿರುದ್ಧ 4 ವರ್ಷಗಳ ಹಿಂದೆ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳಲು ಇಂಗ್ಲೆಂಡ್‌ ಹಾತೊರೆಯುತ್ತಿದೆ.

ಇದನ್ನೂ ಓದಿ: ಧೋನಿಯ ಯಶಸ್ಸಿನ ಮಂತ್ರ ಆಸೀಸ್‌ಗೆ ಹೇಳಲ್ಲ: ಹಸ್ಸಿ

ಒಟ್ಟಾರೆ ಮುಖಾಮುಖಿಯಲ್ಲಿ ಬಾಂಗ್ಲಾದೇಶದ ಮೇಲೆ ಇಂಗ್ಲೆಂಡ್‌ ಪ್ರಾಬಲ್ಯ ಸಾಧಿಸಿದ್ದರೂ, ವಿಶ್ವಕಪ್‌ನಲ್ಲಿ ಮಾತ್ರ ಹಿನ್ನಡೆ ಕಂಡಿದೆ. ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಸೋತಿದೆ. 2011ರ ವಿಶ್ವಕಪ್‌ನಲ್ಲೂ ಬಾಂಗ್ಲಾ ವಿರುದ್ಧ ಇಂಗ್ಲೆಂಡ್‌ ಸೋಲುಂಡಿತ್ತು.

ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಬಗ್ಗುಬಡಿದಿದ್ದ ಇಂಗ್ಲೆಂಡ್‌, 2ನೇ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಶರಣಾಗಿತ್ತು. ಶನಿವಾರ ಇಲ್ಲಿನ ಸೋಫಿಯಾ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಗೆಲುವಿನ ಹಳಿಗೆ ಮರಳುವುದು ಇಯಾನ್‌ ಮಾರ್ಗನ್‌ ಪಡೆಯ ಗುರಿಯಾಗಿದೆ.

ಇದನ್ನೂ ಓದಿ: ಕುಡಿಯುವ ನೀರಿನಲ್ಲಿ ಕಾರು ವಾಶ್- ಕೊಹ್ಲಿಗೆ ದಂಡ!

ಮತ್ತೊಂದೆಡೆ ದ.ಆಫ್ರಿಕಾ ವಿರುದ್ಧ ಗೆದ್ದು ಶುಭಾರಂಭ ಮಾಡಿದ್ದ ಬಾಂಗ್ಲಾದೇಶ, ನ್ಯೂಜಿಲೆಂಡ್‌ ವಿರುದ್ಧ ವೀರೋಚಿತ ಸೋಲು ಕಂಡಿತ್ತು. ಟೂರ್ನಿಯಲ್ಲಿ ಕೆಲ ಅಚ್ಚರಿಯ ಫಲಿತಾಂಶಗಳನ್ನು ನೀಡಿ ಸೆಮಿಫೈನಲ್‌ಗೇರುವ ಮಹದಾಸೆ ಹೊಂದಿರುವ ಬಾಂಗ್ಲಾ ಹುಲಿಗಳು, ಆತಿಥೇಯರನ್ನು ಬೇಟೆಯಾಡುವ ಕನಸು ಕಾಣುತ್ತಿವೆ.

ಒಟ್ಟು ಮುಖಾಮುಖಿ: 20
ಇಂಗ್ಲೆಂಡ್‌: 16
ಬಾಂಗ್ಲಾದೇಶ: 04

ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ vs ಬಾಂಗ್ಲಾ
ಪಂದ್ಯ: 03
ಇಂಗ್ಲೆಂಡ್‌: 01
ಬಾಂಗ್ಲಾದೇಶ: 02

ಸಂಭವನೀಯ ಆಟಗಾರರ ಪಟ್ಟಿ
ಇಂಗ್ಲೆಂಡ್‌: ಜೇಸನ್‌ ರಾಯ್‌, ಬೇರ್‌ಸ್ಟೋವ್‌, ಜೋ ರೂಟ್‌, ಮಾರ್ಗನ್‌(ನಾಯಕ), ಬಟ್ಲರ್‌, ಸ್ಟೋಕ್ಸ್‌, ಮೋಯಿನ್‌ ಅಲಿ, ವೋಕ್ಸ್‌, ಆರ್ಚರ್‌, ರಶೀದ್‌, ವುಡ್‌.

ಬಾಂಗ್ಲಾ: ತಮೀಮ್‌, ಸರ್ಕಾರ್‌, ಶಕೀಬ್‌, ಮುಷ್ಫಿಕುರ್‌, ಮಿಥುನ್‌, ಮಹಮದ್ದುಲ್ಲಾ, ಮೊಸದೆಕ್‌, ಮೆಹಿದಿ, ಮೊರ್ತಜಾ(ನಾಯಕ), ಸೈಫುದ್ದೀನ್‌, ಮುಸ್ತಾಫಿಜುರ್‌.

ಸ್ಥಳ: ಕಾರ್ಡಿಫ್‌, ಆರಂಭ: ಮಧ್ಯಾಹ್ನ 3ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍

ಪಿಚ್‌ ರಿಪೋರ್ಟ್‌
ಈ ವಿಶ್ವಕಪ್‌ನಲ್ಲಿ ಇಲ್ಲಿ ನಡೆದಿರುವ ಎರಡೂ ಪಂದ್ಯಗಳಲ್ಲಿ ಸಾಧಾರಣ ಮೊತ್ತ ದಾಖಲಾಗಿವೆ. ನ್ಯೂಜಿಲೆಂಡ್‌ ವಿರುದ್ಧ ಲಂಕಾ 136 ರನ್‌ಗೆ ಆಲೌಟ್‌ ಆಗಿತ್ತು. ಲಂಕಾ ವಿರುದ್ಧ ಆಷ್ಘಾನಿಸ್ತಾನ 201 ರನ್‌ಗೆ ಸರ್ವಪತನಗೊಂಡಿತ್ತು. ಆತಿಥೇಯ ತಂಡ ಆಡಲಿರುವ ಕಾರಣ, ಪಿಚ್‌ ಬದಲಿಸುವ ಸಾಧ್ಯತೆ ಇದೆ. ಇಂಗ್ಲೆಂಡ್‌ ಆಡಿರುವ ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್‌ ಸ್ನೇಹಿ ಪಿಚ್‌ ಸಿದ್ಧಗೊಳಿಸಲಾಗಿತ್ತು. ಈ ಪಂದ್ಯಕ್ಕೂ ಬ್ಯಾಟ್ಸ್‌ಮನ್‌ಗಳಿಗೆ ಲಾಭವಾಗುವಂತಹ ಪಿಚ್‌ ತಯಾರಿಸಿರುವ ಸಾಧ್ಯತೆ ಇದೆ. ಮೋಡ ಕವಿದ ವಾತಾವರಣದ ನಿರೀಕ್ಷೆ ಇದ್ದು, ವೇಗಿಗಳಿಗೆ ಹೆಚ್ಚಿನ ನೆರವು ದೊರೆಯಲಿದೆ.