ಬೆಂಗಳೂರು[ಜೂ.05]: ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ತಾವೆಷ್ಟು ಅಪಾಯಕಾರಿ ಬೌಲರ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ತಾವೆಸೆದ ಎರಡನೇ ಓವರ್ ನಲ್ಲೇ ಹಾಶೀಂ ಆಮ್ಲಾ ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು. 

ವಿಶ್ವಕಪ್ 2019: ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್!

ಟೀಂ ಇಂಡಿಯಾದ ಬೌಲಿಂಗ್ ಟ್ರಂಪ್ ಕಾರ್ಡ್ ಬೌಲರ್ ಎನಿಸಿರುವ ಬುಮ್ರಾ ಚೊಚ್ಚಲ ವಿಕೆಟ್ ರೂಪದಲ್ಲಿ ದಿಗ್ಗಜ ಕ್ರಿಕೆಟಿಗರನ್ನೇ ಬಲಿ ಪಡೆಯುವ ಸಂಸ್ಕೃತಿಯನ್ನು ವಿಶ್ವಕಪ್ ಟೂರ್ನಿಯಲ್ಲೂ ಮುಂದುವರೆಸಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್ ವಿಕೆಟ್ ಪಡೆದಿದ್ದ ಬುಮ್ರಾ, ಟೆಸ್ಟ್ ಕ್ರಿಕೆಟ್’ನಲ್ಲಿ ಎಬಿ ಡಿವಿಲಿಯರ್ಸ್ ಅವರನ್ನು ಬಲಿಪಡೆದಿದ್ದರು. ಇನ್ನು ಆಸಿಸ್ ನ ಮತ್ತೋರ್ವ ದಿಗ್ಗಜ ಕ್ರಿಕೆಟಿಗ ಡೇವಿಡ್ ವಾರ್ನರ್ ಟಿ20 ಕ್ರಿಕೆಟ್ ನಲ್ಲಿ ಬುಮ್ರಾ ಅವರ ಚೊಚ್ಚಲ ಬಲಿಯಾಗಿದ್ದರು. ಇನ್ನು ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ವಿಕೆಟ್ ರೂಪದಲ್ಲಿ ಪಡೆದಿದ್ದು ವಿರಾಟ್ ಕೊಹ್ಲಿಯನ್ನು..!

ವಿಶ್ವಕಪ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಟೀಂ ಇಂಡಿಯಾ ಹೆಜ್ಜೆಗುರುತು

ವಿಶ್ವಕಪ್ ಟೂರ್ನಿಯಲ್ಲೂ ಅದೇ ಸಂಪ್ರದಾಯವನ್ನು ಮುಂದುವರೆಸಿರುವ ಬುಮ್ರಾ, ಇದೀಗ ದಕ್ಷಿಣ ಆಫ್ರಿಕಾದ ಸ್ಟಾರ್ ಆರಂಭಿಕ ಬ್ಯಾಟ್ಸ್’ಮನ್ ಹಾಶೀಂ ಆಮ್ಲಾ ಭಾರತದ ವೇಗಿಗೆ ಮೊದಲ ಬಲಿಯಾಗಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ದಕ್ಷಿಣ ಆಫ್ರಿಕಾ 25 ಓವರ್ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 103 ರನ್ ಬಾರಿಸಿದೆ. ಬುಮ್ರಾ, ಚಹಲ್ ತಲಾ 2 ವಿಕೆಟ್ ಪಡೆದರೆ, ಕುಲ್ದೀಪ್ ಒಂದು ವಿಕೆಟ್ ಪಡೆದಿದ್ದಾರೆ.