ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಜೂನ್ 05ರಂದು ತನ್ನ ಚೊಚ್ಚಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲು ಸಜ್ಜಾಗಿದೆ. ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ ಟೀಂ ಇಂಡಿಯಾ. ಭಾರತ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯ ಶುಭಾರಂಭ ಮಾಡಿದರೆ, ಬಹುತೇಕ ಮುಂದಿನ ದಾರಿ ಸುಗಮವಾದಂತೆ. 1983 ಹಾಗೂ 2011ರಲ್ಲಿ ಮೊದಲ ಪಂದ್ಯ ಜಯಿಸಿದ್ದ ಟೀಂ ಇಂಡಿಯಾ ಆ ಬಳಿಕ ವಿಶ್ವಕಪ್ ಕೂಡಾ ಗೆದ್ದಿತ್ತು.

ಇದುವರೆಗೂ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಮೊದಲ ಪಂದ್ಯವನ್ನು 6 ಬಾರಿ ಸೋತಿದ್ದರೆ, ಕೇವಲ 5 ಬಾರಿ ಮಾತ್ರ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ. ಇನ್ನು ಇಂಗ್ಲೆಂಡ್ 4 ಬಾರಿ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿತ್ತು. ಅದರಲ್ಲಿ ಕೇವಲ ಒಮ್ಮೆ ಮಾತ್ರ ಭಾರತ ಗೆಲುವಿನೊಂದಿಗೆ ಶುಭಾರಂಭ ಮಾಡಿತ್ತು. ಈ ಸಂದರ್ಭದಲ್ಲಿ ವಿಶ್ವಕಪ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಟೀಂ ಇಂಡಿಯಾ ಹೆಜ್ಜೆಗುರುತು ಹೇಗಿತ್ತು ಎನ್ನುವುದನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

1975: ಲಾರ್ಡ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 202 ರನ್ ಗಳ ಸೋಲು. 60 ಓವರ್ ಗಳ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ 334/4 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಭಾರತ 132/3 ರನ್ ಬಾರಿಸಲಷ್ಟೇ ಶಕ್ತವಾಗಿತ್ತು. ಇದೇ ಪಂದ್ಯದಲ್ಲಿ ಸುನಿಲ್ ಗವಾಸ್ಕರ್ 174 ಎಸೆತಗಳನ್ನು ಎದುರಿಸಿ 36 ರನ್ ಬಾರಿಸಿದ್ದರು. ಭಾರತ ಗ್ರೂಪ್ ಹಂತದಲ್ಲೇ ಹೊರಬಿದ್ದಿತ್ತು.

1979: ವಿಶ್ವಕಪ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಭಾರತ-ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಿದ್ದವು. ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಪಂದ್ಯದಲ್ಲಿ ಭಾರತ 9 ವಿಕೆಟ್ ಗಳ ಹೀನಾಯ ಸೋಲು ಕಂಡಿತ್ತು. ಮೈಕಲ್ ಹೋಲ್ಡಿಂಗ್ಸ್ ಮಾರಕ[33/4]ದಾಳಿ ಹಾಗೂ ಗೋರ್ಡನ್ ಗ್ರೀನೀಡ್ಜ್[106*] ಆಕರ್ಷಕ ಬ್ಯಾಟಿಂಗ್ ಭಾರತಕ್ಕೆ ಸೋಲಿನ ಕಹಿ ಉಣಿಸಿತ್ತು. ಭಾರತ ಈ ಬಾರಿಯೂ ಗ್ರೂಪ್ ಹಂತದಲ್ಲೇ ಹೊರಬಿದ್ದಿತ್ತು.

1983: ವೆಸ್ಟ್ ಇಂಡೀಸ್ ತಂಡವನ್ಬು 34 ರನ್ ಗಳಿಂದ ಮಣಿಸಿ ಶುಭಾರಂಭ ಮಾಡಿತ್ತು. ಓಲ್ಡ್ ಟ್ರಾಫೋರ್ಡ್ ನಲ್ಲಿ ನಡೆದ ಪಂದ್ಯದಲ್ಲಿ ಯಶ್ ಪಾಲ್ ಶರ್ಮಾ ಆಕರ್ಷಕ 89 ರನ್ ಗಳ ನೆರವಿನಿಂದ 262 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಹಾಲಿ ಚಾಂಪಿಯನ್ ವಿಂಡೀಸ್ 228ರನ್ ಗಳಿಗೆ ಆಲೌಟ್ ಆಗಿತ್ತು. ಇದಾದ ನಂತರ ಫೈನಲ್ ನಲ್ಲೂ ಕೆರಿಬಿಯನ್ನರನ್ನು ಮಣಿಸಿ ಭಾರತ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

1987: ಆಸ್ಟ್ರೇಲಿಯಾ ವಿರುದ್ಧ 01 ರನ್ ಗಳ ರೋಚಕ ಸೋಲು. ಮೊದಲ ಬಾರಿಗೆ ಉಪಖಂಡದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 271 ರನ್ ಗಳ ಗುರಿಯನ್ನು ಕೇವಲ ಕೂದಲೆಳೆ ಅಂತರದಲ್ಲಿ ಮಿಸ್ ಮಾಡಿಕೊಂಡಿತ್ತು. ಕೊನೆಯ ಎಸೆತದಲ್ಲಿ ಭಾರತ ಗೆಲ್ಲಲು ಎರಡು ರನ್ ಗಳ ಅವಶ್ಯಕತೆಯಿತ್ತು. ಆದರೆ ಸ್ಟೀವ್ ವಾ ಭಾರತದ ಮಣೀಂದರ್ ಸಿಂಗ್ ವಿಕೆಟ್ ಕಬಳಿಸುವ ಮೂಲಕ ಭಾರತಕ್ಕೆ ಸೋಲಿನ ರುಚಿ ತೋರಿಸಿತ್ತು. ಈ ಟೂರ್ನಿಯಲ್ಲಿ ಭಾರತ ಸೆಮಿ ಫೈನಲ್ ಪ್ರವೇಶಿಸಿತ್ತು.

1992: ಇಂಗ್ಲೆಂಡ್ ವಿರುದ್ಧ 9 ರನ್ ಗಳ ಸೋಲು. ಪರ್ತ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 236 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಭಾರತ, ಆರಂಭಿಕರಾದ ಕೆ. ಶ್ರೀಕಾಂತ್-ರವಿಶಾಸ್ತ್ರಿ 63 ರನ್ ಗಳ ಜತೆಯಾಟದ ಹೊರತಾಗಿಯೂ  9 ರನ್ ಗಳ ಸೋಲು ಕಂಡಿತ್ತು. ಭಾರತ ಗ್ರೂಪ್ ಹಂತದಲ್ಲೇ ಹೊರಬಿದ್ದಿತ್ತು.

1996: ಕೀನ್ಯಾ ವಿರುದ್ಧ 7 ವಿಕೆಟ್ ಗಳ ಜಯ. ಕಟಕ್ ನಲ್ಲಿ ನಡೆದ ಪಂದ್ಯದಲ್ಲಿ ಕ್ರಿಕೆಟ್ ಶಿಶು ಕೀನ್ಯಾ ಮೊದಲು ಬ್ಯಾಟ್ ಮಾಡಿ 6 ವಿಕೆಟ್ ಕಳೆದುಕೊಂಡು 199 ರನ್ ಬಾರಿಸಿತ್ತು. ಸಚಿನ್ ತೆಂಡುಲ್ಕರ್ ವಿಶ್ವಕಪ್ ಟೂರ್ನಿಯಲ್ಲಿ ಬಾರಿಸಿದ ಚೊಚ್ಚಲ ಶತಕ[127]ದ ನೆರವಿನಿಂದ 7 ವಿಕೆಟ್ ಗಳ ಜಯ ಸಾಧಿಸಿತ್ತು. ಭಾರತ ಸೆಮಿಫೈನಲ್ ಪ್ರವೇಶಿಸಿತ್ತು. 

1999: ದಕ್ಷಿಣ ಆಫ್ರಿಕಾ ವಿರುದ್ಧ 4 ವಿಕೆಟ್ ಗಳ ಸೋಲು. ಸಸೆಕ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಸೌರವ್ ಗಂಗೂಲಿ ಶತಕ[97] ವಂಚಿತ ಬ್ಯಾಟಿಂಗ್ ನೆರವಿನಿಂದ 253 ರನ್ ಬಾರಿಸಿತ್ತು. ಇದಕುತ್ತರವಾಗಿ ಜಾಕ್ ಕಾಲಿಸ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಇನ್ನೂ 16 ಎಸೆತಗಳು ಬಾಕಿ ಇರುವಂತೆಯೇ ಆಫ್ರಿಕಾ ಗೆಲುವಿನ ನಗೆ ಬೀರಿತ್ತು. ಭಾರತ ಸೂಪರ್ ಸಿಕ್ಸ್ ಹಂತದಲ್ಲೇ ಹೊರಬಿದ್ದಿತ್ತು.

2003: ನೆದರ್ ಲ್ಯಾಂಡ್ ವಿರುದ್ಧ 68 ರನ್ ಗಳ ಜಯ. ಎರಡನೇ ವಿಶ್ವಕಪ್ ಆಡುತ್ತಿದ್ದ ನೆದರ್ ಲ್ಯಾಂಡ್ ತಂಡದೆದರು ಭಾರತ 204 ರನ್ ಗಳಿಗೆ ಆಲೌಟ್ ಆಗಿತ್ತು. ಆದರೆ ಕನ್ನಡಿಗರಾದ ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಮಿಂಚಿನ ದಾಳಿಯ ನೆರವಿನಿಂದ ಭಾರತ 68 ರನ್ ಗಳ ಗೆಲುವು ದಾಖಲಿಸಿತ್ತು. ಭಾರತ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 

2007: ಬಾಂಗ್ಲಾದೇಶ ವಿರುದ್ಧ 5 ವಿಕೆಟ್ ಗಳ ಸೋಲು. ವೆಸ್ಟ್ ಇಂಡೀಸ್ ಆತಿಥ್ಯ ವಹಿಸಿದ್ದ ಟೂರ್ನಿಯಲ್ಲಿ, ಪೋರ್ಟ್ ಆಫ್ ಸ್ಪೇನ್ ನಲ್ಲಿ ನಡೆದ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಇಂಡಿಯಾ ಮೊದಲು ಬ್ಯಾಟ್ ಮಾಡಿ 191 ರನ್ ಗಳಿಗೆ ಆಲೌಟ್ ಆಗಿತ್ತು. ಬಾಂಗ್ಲಾದೇಶ 9 ಎಸೆತಗಳನ್ನು ಉಳಿಸಿ ಗೆಲುವಿನ ಕೇಕೆ ಹಾಕಿತ್ತು. ಭಾರತ ಗ್ರೂಪ್ ಹಂತದಲ್ಲೇ ಮುಗ್ಗರಿಸಿ ಮುಖಭಂಗ ಅನುಭವಿಸಿತ್ತು.

2011: ಬಾಂಗ್ಲಾದೇಶ 87 ರನ್ ಗಳ ಜಯ. ಢಾಕಾದಲ್ಲಿ ಉದ್ಘಾಟನಾ ಪಂದ್ಯದಲ್ಲಿ  ವಿರೇಂದ್ರ ಸೆಹ್ವಾಗ್ ಹಾಗೂ ವಿರಾಟ್ ಕೊಹ್ಲಿ ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ ಭಾರತ 370 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಬಾಂಗ್ಲಾದೇಶ 283 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

2015: ಪಾಕಿಸ್ತಾನ ವಿರುದ್ಧ 76 ರನ್ ಗಳ ಜಯ. ಅಡಿಲೇಡ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ವಿರಾಟ್ ಕೊಹ್ಲಿ ಬಾರಿಸಿದ ಶತಕದ ನೆರವಿನಿಂದ 300 ರನ್ ಬಾರಿಸಿತ್ತು. ಆ ಬಳಿಕ ಮೊಹಮ್ಮದ್ ಶಮಿ ಮಾರಕ ದಾಳಿಯ ನೆರವಿನಿಂದ ಪಾಕ್ ತಂಡವನ್ನು 224 ರನ್ ಗಳಿಗೆ ಕಟ್ಟಿಹಾಕಿದರು. ಇದರೊಂದಿಗೆ ಭಾರತ 6ನೇ ಬಾರಿಗೆ ಮಣಿಸಿತ್ತು.     

ಆಲ್ ದಿ ಬೆಸ್ಟ್ ಟೀಂ ಇಂಡಿಯಾ

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...