ಹಿಮಾಲಯದಲ್ಲಿ ದೊರೆಯುವ ಅಪರೂಪದ 'ಯಾರ್ಸಾಗುಂಬಾ' (ನೇಪಾಳದ ವಯಾಗ್ರಾ) ಶಿಲೀಂಧ್ರದ ಬೆಲೆ ಮತ್ತು ಬೇಡಿಕೆ ಹವಾಮಾನ ವೈಪರೀತ್ಯದಿಂದಾಗಿ ತೀವ್ರವಾಗಿ ಕುಸಿದಿದೆ. ಗುಣಮಟ್ಟವಿಲ್ಲದ ಕಾರಣ ಲಕ್ಷಾಂತರ ರೂಪಾಯಿಗೆ ಮಾರಾಟವಾಗುತ್ತಿದ್ದ ಈ ಮೂಲಿಕೆ ಈಗ ಅಗ್ಗದ ಬೆಲೆಗೆ ಬಿಕರಿಯಾಗುತ್ತಿದೆ.
ನವದೆಹಲಿ (ಸೆ.30): ನೇಪಾಳದ 'ವಯಾಗ್ರಾ' ಎಂದೇ ಜಗತ್ಪ್ರಸಿದ್ಧವಾಗಿರುವ, ಹಿಮಾಲಯದ ಕಡಿದಾದ ಪರ್ವತ ಪ್ರದೇಶಗಳಲ್ಲಿ ದೊರೆಯುವ ಅಪರೂಪದ ಗಿಡಮೂಲಿಕೆ ಶಿಲೀಂಧ್ರ (Fungus) 'ಯಾರ್ಸಾಗುಂಬಾ' (Yarsagumba) ಮಾರಾಟಗಾರರು ಪ್ರಸ್ತುತ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದಾರೆ. ಒಂದು ಕಾಲದಲ್ಲಿ ಪ್ರತಿ ಕಿಲೋಗ್ರಾಂಗೆ ಭಲೇ 30 ಲಕ್ಷ ರೂಪಾಯಿಗಳವರೆಗೆ ಮಾರಾಟವಾಗುತ್ತಿದ್ದ ಈ ಪ್ರಸಿದ್ದ ಔಷಧೀಯ ಮೂಲಿಕೆ, ಈಗ ಸೂಕ್ತ ಗ್ರಾಹಕರಿಲ್ಲದೆ ಅತ್ಯಂತ ಅಗ್ಗದ ಬೆಲೆಗೆ ಅಂದರೆ ಕಸದ ದರಕ್ಕೆ ಬಿಕರಿಯಾಗುತ್ತಿದೆ.
ಹಿಮಾಲಯದ ದುರ್ಗಮ ಬೆಟ್ಟ-ಗುಡ್ಡಗಳಲ್ಲಿ ಜೀವ ಪಣಕ್ಕಿಟ್ಟು ಈ ಯಾರ್ಸಾಗುಂಬಾವನ್ನು ಹುಡುಕಿ ತಂದು ಮಾರಾಟ ಮಾಡುತ್ತಿದ್ದ ನೇಪಾಳದ ಪಹಾಡಿ ಸಮುದಾಯದ ರೈತರಿಗೆ ಇದು ಚೇತರಿಸಿಕೊಳ್ಳಲಾಗದ ಆಘಾತ ನೀಡಿದೆ. ಸೂಕ್ತ ಆದಾಯವಿಲ್ಲದೆ ಜೀವನ ಸಾಗಿಸುವುದು ಕಷ್ಟಕರವಾಗಿರುವುದರಿಂದ, ಇಲ್ಲಿನ ಸ್ಥಳೀಯ ರೈತರು ಹಾಗೂ ಯುವಕರು ಬದುಕಿನ ಪರ್ಯಾಯ ಹಾದಿ ಹುಡುಕಿಕೊಂಡು ಭಾರತಕ್ಕೆ ವಲಸೆ ಬರಲು ಮುಂದಾಗುತ್ತಿದ್ದಾರೆ.
ಸಂಗ್ರಹಕಾರರಿಗೆ ಎದುರಾದ ಸಂಕಷ್ಟ: 'ದಿ ಕಠ್ಮಂಡು ಪೋಸ್ಟ್' ವರದಿ
'ದಿ ಕಠ್ಮಂಡು ಪೋಸ್ಟ್' ಪ್ರಕಟಿಸಿರುವ ವರದಿಯ ಪ್ರಕಾರ, ಪ್ರಾಣವನ್ನು ಪಣಕ್ಕಿಟ್ಟು ಯಾರ್ಸಾಗುಂಬಾವನ್ನು ಹುಡುಕಿ ಸಂಗ್ರಹಿಸಲು ಅಗತ್ಯವಿರುವ ಉಪಕರಣಗಳು ಹಾಗೂ ಸಾಮಗ್ರಿಗಳಿಗಾಗಿ ಸಂಗ್ರಹಕಾರರು ಸುಮಾರು 60,000 ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಅವರಿಗೆ ಕಷ್ಟಪಟ್ಟು ಸಿಗುತ್ತಿರುವುದು ಬರೀ 1,20,000 ರೂಪಾಯಿಗಳು ಮಾತ್ರ!
ಮಾರುಕಟ್ಟೆಯಲ್ಲಿ ದಿಢೀರನೆ ಇದರ ಬೇಡಿಕೆ ಕುಸಿದಿರುವುದು ಹಾಗೂ ಲಭ್ಯವಾಗುತ್ತಿರುವ ಯಾರ್ಸಾಗುಂಬಾದ ಗುಣಮಟ್ಟ ತೀವ್ರವಾಗಿ ಕ್ಷೀಣಿಸಿರುವುದು ಈ ಬೆಲೆ ಕುಸಿತಕ್ಕೆ ಮೂಲ ಕಾರಣವಾಗಿದೆ. ಜಾಗತಿಕ ತಾಪಮಾನ ಏರಿಕೆ (Global Warming) ಹಾಗೂ ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಹಿಮಾಲಯದಲ್ಲಿ ಯಾರ್ಸಾಗುಂಬಾ ಸಮರ್ಪಕವಾಗಿ ಬೆಳೆಯುತ್ತಿಲ್ಲ. ಸಿಗುತ್ತಿರುವ ಶಿಲೀಂಧ್ರಗಳು ಅರ್ಧಂಬರ್ಧ ಬೆಳೆದಿದ್ದು (Undeveloped), ಅಪಕ್ವವಾಗಿರುವುದರಿಂದ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ.
ನೇಪಾಳದ ಆದಾಯಕ್ಕೂ ಬಿತ್ತು ಹೊಡೆತ: ಮಲ್ಟಿ-ಮಿಲಿಯನ್ ಉದ್ಯಮಕ್ಕೆ ಗ್ರಹಣ
ಕಳೆದ ವರ್ಷ ನೇಪಾಳದ ಮುಗು (Mugu) ಜಿಲ್ಲೆಯಲ್ಲಿ ಉತ್ಪಾದನೆಯಾಗಿದ್ದ ಯಾರ್ಸಾಗುಂಬಾ ಪ್ರತಿ ಕಿಲೋಗ್ರಾಂಗೆ 18 ಲಕ್ಷ ರೂಪಾಯಿಗೆ ಮಾರಾಟವಾಗಿತ್ತು. ಆದರೆ ಈ ವರ್ಷ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ವಿಭಾಗೀಯ ಅರಣ್ಯ ಕಚೇರಿಯು ಈ ವರ್ಷ ಇದುವರೆಗೆ ಕೇವಲ 10 ಕಿಲೋಗ್ರಾಂ ಯಾರ್ಸಾಗುಂಬಾ ಸಾಗಣೆಗೆ (Transit Permit) ಮಾತ್ರ ಅನುಮತಿ ನೀಡಿದೆ. ಕಳೆದ ವರ್ಷ ಇದೇ ಅರಣ್ಯ ಕಚೇರಿಯು 22 ಕಿಲೋಗ್ರಾಂ ಹಾಗೂ ರಾಷ್ಟ್ರೀಯ ಉದ್ಯಾನವನವು 33 ಕಿಲೋಗ್ರಾಂ ಸಾಗಣೆಗೆ ಅನುಮತಿ ನೀಡಿದ್ದವು.
ಮುಗು ಜಿಲ್ಲೆಯ ಮುಗುಮ್ ಕರ್ಮಾರಾಂಗ್ ಗ್ರಾಮೀಣ ಪುರಸಭೆಯ ಕೊಯಿಕಿ, ಥುಲೋ ಕೊಯಿಕಿ, ರಿಮಾರ್, ಟಾಂಕೆ ಸೇರಿದಂತೆ ಮುಂತಾದ ಎತ್ತರದ ಹುಲ್ಲುಗಾವಲು ಪ್ರದೇಶಗಳಲ್ಲಿ ಈ ಯಾರ್ಸಾಗುಂಬಾ ಅಧಿಕವಾಗಿ ಕಂಡುಬರುತ್ತದೆ. ಈ ವರ್ಷ ಸುಮಾರು 4,200 ಸಂಗ್ರಹಕಾರರು ಹಿಮಾಲಯದ ಹುಲ್ಲುಗಾವಲುಗಳಿಂದ ಈ ಶಿಲೀಂಧ್ರವನ್ನು ಸಂಗ್ರಹಿಸಿದ್ದರು. ಇದರಿಂದ ಅಲ್ಲಿನ ಗ್ರಾಮೀಣ ಪುರಸಭೆಗೆ ಸುಮಾರು 28 ಲಕ್ಷ ರೂಪಾಯಿಗಳ ಆದಾಯ ಹರಿದುಬಂದಿತ್ತು. ಆದರೆ ಈಗ ಬೆಲೆ ಹಾಗೂ ಗುಣಮಟ್ಟ ಎರಡೂ ಬಿದ್ದಿರುವುದರಿಂದ ಸ್ಥಳೀಯ ಆಡಳಿತ ಹಾಗೂ ಸಂಗ್ರಹಕಾರರು ಕಂಗಾಲಾಗಿದ್ದಾರೆ.


