ಉಸಿರಾಟದ ಮೂಲಕ ತೆಗೆದುಕೊಳ್ಳುವ ಮೊದಲ ಕೋವಿಡ್‌ ಲಸಿಕೆಗೆ ಚೀನಾದಲ್ಲಿ ಅನುಮೋದನೆ ನೀಡಲಾಗಿದೆ. ಈ ಮೂಲಕ ಚೀನಾ ಕೋವಿಡ್ -19 ಲಸಿಕೆಯ ಸೂಜಿ ಮುಕ್ತ, ಇನ್ಹೇಲ್ ಆವೃತ್ತಿಯನ್ನು ಅನುಮೋದಿಸಿದ ಮೊದಲ ದೇಶ ಎಂದು ಗುರುತಿಸಿಕೊಂಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಕಳೆದ ಹಲವು ವರ್ಷಗಳಿಂದ ಕೊರೋನಾ ಸೋಂಕು ಬೆಂಬಿಡದೆ ಜನರನ್ನು ಕಾಡುತ್ತಿದೆ. ಮಹಾಮಾರಿ ಸೋಂಕು ತಗುಲಿ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡರು. ಇನ್ನದೆಷ್ಟೋ ಮಂದಿ ದೀರ್ಘಾವಧಿಯ ಕೋವಿಡ್‌ನಿಂದ ಬಳಲುತ್ತಿದ್ದಾರೆ. ಮಾರಕ ವೈರಸ್‌ನ್ನು ಇಲ್ಲವಾಗಿಸಲು ವಿಜ್ಞಾನಿಗಳು ಸತತವಾಗಿ ಪ್ರಯತ್ನಿಸಿದರು. ಕೋವ್ಯಾಕ್ಸಿನ್‌, ಕೋವಿಶೀಲ್ಡ್‌, ಕಾರ್ಬೋವ್ಯಾಕ್ಸ್ ಮೊದಲಾದ ಲಸಿಕೆಗಳನ್ನು ಆವಿಷ್ಕರಿಸಿದರು. ಈ ಮಧ್ಯೆ ಚೀನಾ ಹೊಸ ಬಗೆಯ ಕೊರೋನಾ ಲಸಿಕೆಯೊಂದನ್ನು ಆವಿಷ್ಕರಿಸಿದೆ. ಈ ಲಸಿಕೆ ತೆಗೆದುಕೊಳ್ಳಲು ಇಂಜೆಕ್ಷನ್ ಚುಚ್ಚಿಸಿಕೊಳ್ಳಬೇಕಾಗಿಲ್ಲ. ಬದಲಿಗೆ ಮೂಗಿನ ಮೂಲಕವೇ ಒಳಕ್ಕೆಳೆದುಕೊಳ್ಳಬಹುದು. ಟಿಯಾಂಜಿನ್ ಮೂಲದ ಕ್ಯಾನ್ಸಿನೊ ಬಯೋಲಾಜಿಕ್ಸ್ ಇಂಕ್ ಲಸಿಕೆಯನ್ನು ತಯಾರಿಸಿದೆ. ಈ ವ್ಯಾಕ್ಸಿನ್‌ಗೆ ಅನುಮೋದನೆ ನೀಡಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಚೀನಾ ಪಾತ್ರವಾಗಿದೆ. 

ಸೂಜಿಮುಕ್ತ ಕೊರೋನಾ ಲಸಿಕೆಗೆ ಅನುಮೋದನೆ ನೀಡಿದ ಚೀನಾ 
ಸೂಜಿಮುಕ್ತ ಲಸಿಕೆಯಾಗಿರುವುದು ಈ ವ್ಯಾಕ್ಸಿನ್‌ನ ವಿಶೇಷತೆ. ಇನ್ಹೇಲ್ ಆವೃತ್ತಿಯ ಕೊರೋನಾ ಲಸಿಕೆಯನ್ನು (Vaccine) ಚೀನಾ ಅನುಮೋದಿಸಿದ ಬೆನ್ನಲ್ಲೇ ಹಾಂಗ್‌ಕಾಂಗ್‌ನಲ್ಲಿ ಕಂಪೆನಿಯ ಷೇರು ಮೌಲ್ಯ ಶೇ.14.5ರಷ್ಟು ಹೆಚ್ಚಾಗಿದೆ. ಚೀನಾದ ರಾಷ್ಟ್ರೀಯ ವೈದ್ಯಕೀಯ ಉತ್ಪನ್ನಗಳ ಮಂಡಳಿ. ಕ್ಯಾನ್ಸಿನೋನ ಆಡ್ ಫೈವ್ ಎನ್‌ಕೋವ್‌ ಇದನ್ನು ಬೂಸ್ಟರ್ ಬಳಕೆಯಾಗಿ ತುರ್ತು ಬಳಕೆಗೆ (Emergency use) ಅನುಮೋದಿಸಿದೆ. 

Artificial Coronavirus: ಐಐಎಸ್‌ಸಿಯಲ್ಲಿ ಕೃತಕ ಕೊರೋನಾ ವೈರಸ್‌ ಸೃಷ್ಟಿ..!

ಲಸಿಕೆ ಕ್ಯಾನ್‌ಸಿನೊದ ಒಂದು ಶಾಟ್ ಕೋವಿಡ್ ಡ್ರಗ್‌ನ ಹೊಸ ಅವೃತ್ತಿಯಾಗಿದೆ. ಇದು ಮಾರ್ಚ್‌ 2020ರಲ್ಲಿ ಮಾನವ ಪರೀಕ್ಷೆಗೆ ಒಳಗಾದ ವಿಶ್ವದ ಮೊದಲನೆಯ ವ್ಯಾಕ್ಸಿನ್. ಫೆಬ್ರವರಿ 2021ರಲ್ಲಿ ಚೀನಾ, ಮೆಕ್ಸಿಕೋ, ಪಾಕಿಸ್ತಾನ, ಮಲೇಷ್ಯಾ ಮತ್ತು ಹಂಗೇರಿಯಲ್ಲಿ ಇದನ್ನು ಬಳಸಲಾಗಿದೆ. ಈ ಲಸಿಕೆ ಸೆಲ್ಯುಲಾರ್ ಪ್ರತಿರಕ್ಷೆಯನ್ನು ಉತ್ತೇಜಿಸುತ್ತದೆ. ಇಂಟ್ರಾಮಸ್ಕುಲರ್ ಇಂಜೆಕ್ಷನ್ ಇಲ್ಲದೆ ರಕ್ಷಣೆಯನ್ನು ಹೆಚ್ಚಿಸಲು ಲೋಳೆಪೊರೆಯ ಪ್ರತಿರಕ್ಷೆಯನ್ನು (Protection) ಪ್ರೇರೇಪಿಸುತ್ತದೆ.

ಇನ್ಹೇಲ್ ಮೂಲಕ ತೆಗೆದುಕೊಳ್ಳಬಹುದಾದ ಲಸಿಕೆ
ಕೊರೋನಾ ವಿರುದ್ಧ ರಕ್ಷಣೆಗೆ ಪ್ರತಿಕಾಯಗಳನ್ನು ಉತ್ತೇಜಿಸಲು ಇಂಥದ್ದೇ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಕಂಪೆನಿಗಳು ಮುಂದಾಗಿವೆ. ಈ ವ್ಯಾಕ್ಸಿನ್‌ಗೆ ಸೂಜಿ ಬಳಸಬೇಕಾಗಿಲ್ಲ. ವ್ಯಕ್ತಿ ಸ್ವತಃ ವ್ಯಾಕ್ಸಿನ್ ತೆಗೆದುಕೊಳ್ಳಬಹುದಾದ ಕಾರಣ ಆರೋಗ್ಯ ಇಲಾಖೆಯ (Health Department) ಮೇಲೆ ಹೆಚ್ಚು ಒತ್ತಡ ಬೀಳುವುದಿಲ್ಲ. ಚೀನಾದಲ್ಲಿ ಆವಿಷ್ಕಾರಗೊಂಡಿರುವ ಈ ಲಸಿಕೆ ಕೋವಿಡ್ ಲಕ್ಷಣಗಳನ್ನ ತಡೆಗಟ್ಟುವಲ್ಲಿ ಶೇಕಡಾ 66ರಷ್ಟು ಪರಿಣಾಮಕಾರಿಯಾಗಿದೆ. ತೀವ್ರತರವಾದ ಕಾಯಿಲೆಯ ವಿರುದ್ಧ ಶೇಕಡಾ 91ರಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿದುಬಂದಿದೆ. 

Corona Crisis: ಕೋವಿಡ್‌ ದಾಖಲಿಗೆ ತಾಂತ್ರಿಕ ಸಮಸ್ಯೆ: ಕಡಿಮೆ ಕೇಸ್‌ ಪತ್ತೆ

ಸಿನೋವಾಕ್ ಬಯೋಟೆಕ್ ಲಿಮಿಟೆಡ್ ಮತ್ತು ಸರ್ಕಾರಿ ಸ್ವಾಮ್ಯದ ಸಿನೋಫಾರ್ಮ್ ಗ್ರೂಪ್ ಕಂಪೆನಿಯು ಲಸಿಕೆಗಳನ್ನು ಚೀನಾ ಹೊರತುಪಡಿಸಿ ಬೇರೆಡೆ ಕೂಡಾ ಪ್ರಾಯೋಗಿಕವಾಗಿ ಬಳಸಲಾಗುತ್ತಿದೆ. ಚೀನಾ ಬೇರೆ ರಾಷ್ಟ್ರಗಳಿಗೆ ಕಳುಹಿಸಿದ ಸುಮಾರು 770 ಮಿಲಿಯನ್ ಡೋಸ್‌ಗಳನ್ನು ಈ ಕಂಪೆನಿಗಳೇ ಉತ್ಪಾದಿಸಿವೆ. ಕೊರೊನಾ ವೈರಸ್‌ಗೆ ಪ್ರತಿರಕ್ಷಣಾ ವ್ಯವಸ್ಥೆಯನ್ನು ಒಡ್ಡಲು ಮಾರ್ಪಡಿಸಿದ ಶೀತ-ಕಾರಕ ವೈರಸ್ ಅನ್ನು ಬಳಸುವ ಲಸಿಕೆಯು ಅಸ್ಟ್ರಾಜೆನೆಕಾ ಪಿಎಲ್‌ಸಿ ಮತ್ತು ಜಾನ್ಸನ್ ಮತ್ತು ಜಾನ್ಸನ್ ಅಭಿವೃದ್ಧಿಪಡಿಸಿದಂತೆಯೇ ಇರುತ್ತದೆ.

ಸೆಪ್ಟೆಂಬರ್‌ ಅಂತ್ಯದ ವರೆಗೂ ಕರ್ನಾಟಕದಲ್ಲಿ ಮಾಸ್ಕ್‌ ಕಡ್ಡಾಯ
ಕೊರೋನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಮುಂಬರುವ ಸೆಪ್ಟೆಂಬರ್‌ ಅಂತ್ಯದವರೆಗೆ ವಿವಿಧ ಹಬ್ಬಗಳಲ್ಲಿ ಕೊರೋನಾ ಮುಂಜಾಗ್ರತಾ ಕ್ರಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಆರೋಗ್ಯ ಇಲಾಖೆ ಜಿಲ್ಲಾಡಳಿತಗಳಿಗೆ ಸುತ್ತೋಲೆ ಹೊರಡಿಸಿದೆ. ಸದ್ಯ ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಕಡ್ಡಾಯ ನಿಯಮ ಜಾರಿಯಲ್ಲಿದೆ. 

ಆದರೂ, ಜೂನ್‌ ಆರಂಭದಿಂದ ಸೋಂಕು ಹೆಚ್ಚಳವಾಗುತ್ತಿದ್ದು, ಮುಂಬರುವ ಗೌರಿ-ಗಣೇಶ ಹಬ್ಬ, ಓಣಂ, ಅನಂತ ಪದ್ಮನಾಭ ವ್ರತ, ವಿಶ್ವಕರ್ಮ ಜಯಂತಿ, ಮಹಾಲಯ ಅಮಾವಾಸ್ಯೆ ವೇಳೆ ಮತ್ತಷ್ಟುಹೆಚ್ಚುವ ಸಾಧ್ಯತೆಗಳಿವೆ. ಮುಂಜಾಗ್ರತಾ ಕ್ರಮವಾಗಿ ಸೆಪ್ಟೆಂಬರ್‌ ಅಂತ್ಯದವರೆಗೂ ಸಾರ್ವಜನಿಕ ಸ್ಥಳಗಳು, ಹೋಟೆಲ್‌, ಬಾರ್‌ ರೆಸ್ಟೋರೆಂಟ್‌ಗಳು, ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ, ಪ್ರಯಾಣ ಸಂದರ್ಭದಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಜತೆಗೆ ಗುಂಪು ಸೇರುವುದನ್ನು ನಿರ್ಬಂಧಿಸುವಂತೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ.