ಮೊಡವೆಗಳು
ನಿಮ್ಮ ತಲೆಯಲ್ಲಿರುವ ಕೊಳೆ ಹಾಗೂ ಎಣ್ಣೆಗಳು ಹಲವು ಸಮಯದಿಂದ ದಿಂಬಿನ ಕವರ್‌ನಲ್ಲಿ ಶೇಖರವಾಗಿರುತ್ತವೆ. ಅದರಲ್ಲೂ ತಲೆಯಲ್ಲಿ ಹೊಟ್ಟಿದ್ದರೆ ಅವೆಲ್ಲ ನೀವು ಮಲಗಿದ್ದಲ್ಲಿ ಉದುರಿರುತ್ತವೆ. ಇದರೊಂದಿಗೆ ನಿದ್ರೆಯಲ್ಲಿ ಬಿದ್ದ ಜೊಲ್ಲು ಕೂಡಾ ಸೇರಿ ಪಿಲ್ಲೋ ಕವರ್ ಬ್ಯಾಕ್ಟೀರಿಯಾಗಳಿಂದ ಕೂಡಿರುತ್ತದೆ. ಮಲಗಿದಾಗ ನೀವು ಮುಖವನ್ನು ಈ ದಿಂಬಿನ ಕವರ್‌ನ ಎಲ್ಲಡೆ ತಾಗಿಸುತ್ತೀರಿ. ಆಗ ಆ ಕೊಳಕು ಮುಖಕ್ಕೆ ಅಂಟಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೊತ್ತು ತರುತ್ತದೆ. ಅದರಲ್ಲೂ ಹೊಟ್ಟು ಮುಖದ ಮೇಲೆ ಬಿದ್ದಾಗ ಗುಳ್ಳೆಗಳಾಗುವುದು ನಿಮಗೂ ಗೊತ್ತಿರಬಹುದು. ಹೀಗಾಗಿ, ಇಂಥ ಕೊಳಕು ದಿಂಬಿನ ಕವರ್ ಮೇಲೆ ಮಲಗಿದಾಗ ಮೊಡವೆಗಳು ಸಾಮಾನ್ಯವಾಗುತ್ತವೆ. ಬ್ಲ್ಯಾಕ್‌ಹೆಡ್ಸ್ ಕೂಡಾ ಇದರಿಂದ ಆಗುತ್ತದೆ. ಹಾಗಾಗಿ, ವಾರಕ್ಕೆ ಕನಿಷ್ಠ 1 ಬಾರಿಯಾದರೂ ದಿಂಬಿನ ಕವರ್ ಬದಲಿಸಿ. ಹಳೆಯದನ್ನು ಒಗೆದು ತೆಗೆದಿಡಿ. 

ಮಲಗೋ ಭಂಗಿಯಲ್ಲಿದೆ ನೋವು

ಕೂದಲಿಗೆ ಹಾನಿ
ನಿಮ್ಮ ದಿಂಬಿನ ಕವರ್‌ನ ಬಟ್ಟೆ ಚೆನ್ನಾಗಿಲ್ಲವೆಂದರೆ ಅದು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಮ್ಮ ದಿಂಬಿನ ಕವರ್ ಕಾಟನ್ ಬಟ್ಟೆಯಿಂದ ಮಾಡಿದುದಾಗಿದ್ದರೆ ಅದರಿಂದ ಸ್ಪ್ಲಿಟ್ ಎಂಡ್ಸ್, ಒರಟಾಗುವುದು, ಕೂದಲು ಉದುರುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಸಮಸ್ಯೆಗಳಿಂದ ದೂರವಿರಲು ಸಿಲ್ಕ್ ಬಟ್ಟೆಯ ಕವರ್ ಬಳಸಿ. 

ತಿಗಣೆ
ದಿಂಬಿನ ಕವರನ್ನು ಆಗಾಗ ಬದಲಿಸದಿದ್ದಲ್ಲಿ ದಿಂಬಿನೊಳಗೆ ಎಣ್ಣೆ, ಬೆವರು, ಕೊಳೆ, ಧೂಳು, ಜೊಲ್ಲು, ಸತ್ತ ಚರ್ಮಕೋಶಗಳು ಸೇರಿ ತಿಗಣೆಗಳಾಗಬಹುದು. ಇವು ಒಮ್ಮೆ ಶುರುವಾದರೆ ತೆಗೆಯುವುದು ಸುಲಭವಲ್ಲ. ಸಣ್ಣ ಪುಟ್ಟ ಔಷಧಿಗಳಿಗೆ ಇವು ಬಗ್ಗುವುದಿಲ್ಲ. ಎಲ್ಲಿ ಕೊಳಕಿರುತ್ತದೋ ಅದೇ ತಮ್ಮ ಆವಾಸಸ್ಥಾನ ಎಂದು ಬಂದು ಸೇರುತ್ತವೆ. ತಿಗಣೆಗಳಲ್ಲದೆ ಬೇರೆ ಬ್ಯಾಕ್ಟೀರಿಯಾಗಳೂ ಹೆಚ್ಚಬಹುದು. ಇಂಥ ಸಮಸ್ಯೆಗಳಾಗದಿರಲು ದಿಂಬು ಹಾಗೂ ದಿಂಬಿನ ಕವರ್ ನಡುವೆ ಪಿಲ್ಲೋ ಪ್ರೊಟೆಕ್ಟರ್ ಬಳಸಿ. ಇದರಿಂದ ಕವರ್‌ಗೆ ಹತ್ತಿದ ಕೊಳೆ ದಿಂಬಿಗಿಳಿಯಲು ಸಾಧ್ಯವಾಗುವುದಿಲ್ಲ. ಹಾಗೂ ಕವರ್ ಬದಲಾಯಿಸುವುದನ್ನು ರೂಢಿಸಿಕೊಳ್ಳಿ.

ಮಹಿಳೆಯರೇ ನಿದ್ರಿಸುವುದು ಹೆಚ್ಚು

ಅಲರ್ಜಿ ಹಾಗೂ ಕಾಯಿಲೆಗಳು
ಅಧ್ಯಯನಗಳ ಪ್ರಕಾರ ಶೇ.99 ಜನರ ಬೆಡ್‌ರೂಂನಲ್ಲಿ ಡಸ್ಟ್ ಮೈಟ್‌ನಂಥ ಅಲರ್ಜಿಕಾರಕಗಳು ಇದ್ದೇ ಇರುತ್ತವೆ. ಶೇ.74ರಷ್ಟು ಜನರ ಮಲಗುವ ಕೋಣೆಯಲ್ಲಿ ನಾಲ್ಕಕ್ಕೂ ಹೆಚ್ಚು ರೀತಿಯ ಅಲರ್ಜಿಕಾರಕಗಳಿರುತ್ತವೆ. ದಿಂಬಿನ ಕವರ್ ಸ್ವಚ್ಛತೆಯ ಕಡೆಗಣನೆಯಿಂದ ಧೂಳು, ಕೊಳಕಿನ ಕಣಗಳು ನೀವು ಮಲಗಿದಾಗ ನಿಮ್ಮ ಉಸಿರಿನ ಜೊತೆ ಉಸಿರಾಟ ವ್ಯವಸ್ಥೆಯನ್ನು ಸೇರಿಕೊಳ್ಳುತ್ತದೆ. ಅಂದರೆ ಪ್ರತಿ ರಾತ್ರಿ ಸುಮಾರು 8 ಗಂಟೆಗಳ ಕಾಲ ನೀವು ಅಲರ್ಜಿಕಾರಕಗಳನ್ನೇ ಉಸಿರಾಡುತ್ತೀರಿ. ಇದು ಇನ್ಫೆಕ್ಷನ್‌ಗೆ ಕಾರಣವಾಗುವುದಷ್ಟೇ ಅಲ್ಲ, ಅಸ್ತಮಾ, ಅಲರ್ಜಿ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ, ವಾರಕ್ಕೊಮ್ಮೆ ಬಿಸಿನೀರಿನಿಂದ ದಿಂಬಿನ ಕವರ್ ತೊಳೆಯಿರಿ. 

ರೋಗ ನಿರೋಧಕ ವ್ಯವಸ್ಥೆ ಅಸ್ತವ್ಯಸ್ಥ
ದಿಂಬಿನ ವಿಷಯದಲ್ಲಿ ಕೇರ್‌ಲೆಸ್ ಆ್ಯಟಿಟ್ಯೂಡ್ ತೋರಿಸಿದರೆ ಅದರಿಂದ ನಿಮ್ಮ ರೋಗ ನಿರೋಧಕ ವ್ಯವಸ್ಥೆಯೇ ಅಸ್ತವ್ಯಸ್ಥವಾಗಬಹುದು. ನಿಮ್ಮ ದಿಂಬು ಹಾಗೂ ಅದರ ಕವರ್‌ನಲ್ಲಿ ಮನೆ ಮಾಡುವ ಬ್ಯಾಕ್ಟೀರಿಯಾಗಳು ನಿಮ್ಮ ದೇಹದೊಳಕ್ಕೆ ನುಗ್ಗಿ ರೋಗ ನಿರೋಧಕ ವ್ಯವಸ್ಥೆಗೆ ಸವಾಲೆಸೆಯಲು ಆರಂಭಿಸಬಹುದು. ಇದರಿಂದ ಆಗಾಗ ಹುಷಾರು ತಪ್ಪುವುದು ಆಗಬಹುದು. ಇದಕ್ಕೆ ಕೂಡಾ ಸಿಲ್ಕ್ ಪಿಲ್ಲೋ ಕವರ್ ಬೆಸ್ಟ್. ಅವುಗಳಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುವುದಿಲ್ಲ. 

ನಿದ್ರೆ ಮಾತ್ರೆಯಿಂದ ಅಡ್ಡ ಪರಿಣಾಮ