Asianet Suvarna News Asianet Suvarna News

ಮಲಗುವ ಭಂಗಿಯಲ್ಲೇ ಅಡಗಿದೆ ನೋವಿನ ಸೀಕ್ರೆಟ್!

ಬೆಳಗ್ಗೆ ಹಾಸಿಗೆಯಿಂದ ಎದ್ದೇಳುತ್ತಿದ್ದಂತೆ ಕುತ್ತಿಗೆಯನ್ನು ಆ ಕಡೆ ಈ ಕಡೆ ತಿರುಗಿಸಲು ಸಾಧ್ಯವಾಗುತ್ತಿಲ್ಲ. ಅರೇ, ರಾತ್ರಿ ಮಲಗುವಾಗ ಸರಿಯಾಗೇ ಇತ್ತಲ್ಲ, ಒಮ್ಮೆಗೆ ಈ ಕುತ್ತಿಗೆ ನೋವು ಎಲ್ಲಿಂದ ಬಂದು ಒಕ್ಕರಿಸಿಕೊಂಡಿತು ಎಂಬ ಯೋಚನೆ ನಿಮ್ಮನ್ನು ಕಾಡಬಹುದು. ಇದಕ್ಕೆ ಕಾರಣ ರಾತ್ರಿ ನೀವು ಮಲಗಿದ ಭಂಗಿ! ಹೌದು, ಕೆಟ್ಟ ಮಲಗುವ ಭಂಗಿಗಳು ಕುತ್ತಿಗೆ, ಬೆನ್ನು ನೋವು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಮುನ್ನುಡಿಯಾಗಬಲ್ಲವು. 

how to improve health with sleep position
Author
Bangalore, First Published Dec 15, 2019, 1:58 PM IST

ರಾತ್ರಿ ನೀವು ಮಲಗುವ ಭಂಗಿ ನಿಮ್ಮ ನಿದ್ರೆಯ ಗುಣಮಟ್ಟವನ್ನು ಮಾತ್ರವಲ್ಲ, ಬದಲಿಗೆ ನಿಮ್ಮ ದೀರ್ಘಕಾಲಿಕಾ ಆರೋಗ್ಯದ ಮೇಲೂ ಪರಿಣಾಮ ಬೀರಬಲ್ಲದು. ಜೀವಿತಾವಧಿಯ ಸರಿ ಸುಮಾರು 25 ವರ್ಷಗಳನ್ನು ನಾವು ನಿದ್ರೆಯಲ್ಲೇ ಕಳೆಯುತ್ತೇವೆ. ಇಡೀ ದಿನದ ಸುಸ್ತು ಕಳೆದು ಮೈ-ಮನಕ್ಕೆ ಹೊಸ ಚೈತನ್ಯ ತುಂಬಲು 7-9 ಗಂಟೆಯ ನಿದ್ರೆ ಅಗತ್ಯ. ಉತ್ತಮ ಆರೋಗ್ಯಕ್ಕೆ ನಿದ್ರೆಯಷ್ಟೇ  ಮಲಗುವ ಭಂಗಿ ಕೂಡ ಮುಖ್ಯ. ಕೆಟ್ಟ ನಿದ್ರಾ ಭಂಗಿಗಳಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಬಹುದು ಅಥವಾ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳಬಹುದು. ಆದಕಾರಣ ಉತ್ತಮ ಆರೋಗ್ಯಕ್ಕೆ ಉತ್ತಮ  ನಿದ್ರಾ ಭಂಗಿಗಳನ್ನು ಅನುಸರಿಸುವುದು ಅತ್ಯಗತ್ಯ.

ಮಲಗೋ ಭಂಗಿ ಬಿಚ್ಚಿಡುತ್ತೆ ದಾಂಪತ್ಯದ ಗುಟ್ಟು!

ಬೆನ್ನುನೋವು ಕಾಡುತ್ತಿದ್ದರೆ ಈ ಭಂಗಿ ಉತ್ತಮ: ನೀವು ರಾತ್ರಿಯಿಡೀ ಮಲಗುವ ಭಂಗಿಯಿಂದಲೇ ನಿಮಗೆ ಬೆನ್ನುನೋವು ಕಾಡಬಹುದು. ಹಾಗೆಯೇ ಬೇರೆ ಕಾರಣಗಳಿಂದ ನಿಮಗೆ ಬೆನ್ನುನೋವು ಕಾಡುತ್ತಿದ್ದರೆ ಸಮರ್ಪಕ ಭಂಗಿಯಲ್ಲಿ ಮಲಗುವ ಮೂಲಕ ಅದರಿಂದ ಮುಕ್ತಿ ಪಡೆಯಬಹುದು. ಬೆನ್ನುನೋವಿರುವಾಗ ಕೆಲವರು ಹೊಟ್ಟೆಯ ಮೇಲೆ ಮಲಗುತ್ತಾರೆ (ಬೆನ್ನು ಮೇಲಿರುವಂತೆ).

ಇದರಿಂದ ಬೆನ್ನಿಗೆ ಆರಾಮ ಸಿಕ್ಕಿ ನೋವು ಕಡಿಮೆಯಾಗುತ್ತದೆ ಎಂಬುದು ಅವರ ಲೆಕ್ಕಾಚಾರ. ಇದು ತಪ್ಪು. ಇದರ ಬದಲು ಬೆನ್ನಿನ ಮೇಲೆಯೇ ಮಲಗಿ ಕಾಲುಗಳಿಗೆ ದಿಂಬಿನ ಆಸರೆ ನೀಡಿ. ಬೇಕಿದ್ದರೆ ಕೆಳಬೆನ್ನಿನ ಅಡಿಯಲ್ಲಿ ಮಡಚಿದ ಬೆಡ್ಶೀಲಟ್ ಅಥವಾ ದಿಂಬುಗಳನ್ನಿಟ್ಟುಕೊಳ್ಳಬಹುದು. ಇದರಿಂದ ಬೆನ್ನಿನ ಮೇಲೆ ಹೆಚ್ಚಿನ ಒತ್ತಡ ಬೀಳುವುದಿಲ್ಲ. ಜೊತೆಗೆ ಬೆನ್ನುಮೂಳೆಗಳಿಗೂ ಸಮರ್ಪಕ ವಿಶ್ರಾಂತಿ ಸಿಗುತ್ತದೆ.

ಭುಜದ ನೋವಿಗೂ ಪರಿಹಾರವಿದೆ:  ಕೈಗಳನ್ನು ತಲೆ ಅಥವಾ ಮುಖದ ಅಡಿಯಲ್ಲಿಟ್ಟುಕೊಂಡು ಒಂದೇ ಮಗ್ಗುಲಲ್ಲಿ ಇಡೀ ರಾತ್ರಿ ಮಲಗುವ ಅಭ್ಯಾಸ ನಿಮಗಿದ್ದರೆ ಕೈಗಳ ನೋವು ಕಾಡುವುದು ಗ್ಯಾರಂಟಿ. ಈ ನೋವಿನಿಂದ ಮುಕ್ತಿ ಪಡೆಯಲು ರಾತ್ರಿ ಮಗ್ಗುಲಲ್ಲಿ ಮಲಗುವಾಗ ಕಾಲುಗಳನ್ನು ಸ್ವಲ್ಪ ಮಡಚಿ. ಎರಡು ಕಾಲುಗಳ ನಡುವೆ ದಿಂಬನ್ನಿಟ್ಟುಕೊಳ್ಳಿ. ಇನ್ನೊಂದು ದಿಂಬನ್ನು ಎದೆಯ ಸಮೀಪದಲ್ಲಿಟ್ಟುಕೊಳ್ಳುವ ಮೂಲಕ ಕೈಗಳಿಗೆ ಆಸರೆ ನೀಡಿ.

ಪುರುಷರಿಗಂತ ಮಹಿಳೆಯರೇ ಹೆಚ್ಚೊತ್ತು ನಿದ್ರಿಸುತ್ತಾರೆ: ಏಕೆಂದು ಇಲ್ಲಿದೆ!

ಹೊಟ್ಟೆ ಮೇಲೆ ಮಲಗಿದರೆ ತಲೆಬೇನೆ ಗ್ಯಾರಂಟಿ: ಬೆಳಗ್ಗೆ ಏಳುವಾಗಲೇ ತಲೆಸಿಡಿಯುತ್ತಿದ್ದರೆ ರಾತ್ರಿ ನೀವು ಯಾವ ಭಂಗಿಯಲ್ಲಿ ಮಲಗಿದ್ರಿ ಎಂಬುದನ್ನು ನೆನಪಿಸಿಕೊಳ್ಳಿ. ಹೊಟ್ಟೆಯ ಮೇಲೆ ಮಲಗುವುದರಿಂದ ಕುತ್ತಿಗೆ ಭಾಗ ತಿರುಚುವ ಸಾಧ್ಯತೆಯಿರುತ್ತದೆ. ಕುತ್ತಿಗೆಯ ನರಗಳು ಮತ್ತು ಸ್ನಾಯುಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ.  ಇದರಿಂದ ತಲೆಯ ಭಾಗಕ್ಕೆ ಸಮರ್ಪಕವಾಗಿ ರಕ್ತ ಪೂರೈಕೆಯಾಗದೆ ನೋವು ಕಾಣಿಸಿಕೊಳ್ಳುತ್ತದೆ. ಕುತ್ತಿಗೆಯಲ್ಲಿ ನೋವು ಕಾಣಿಸಿಕೊಳ್ಳಲು ಕೂಡ ಈ ತಪ್ಪಾದ ಭಂಗಿಯೇ ಕಾರಣ. ಕುತ್ತಿಗೆ ನೋವು ತಗ್ಗಿಸಲು ಬೆನ್ನ ಮೇಲೆ ಮಲಗಿ ತಲೆಯ ಭಾಗ ಎತ್ತರದಲ್ಲಿರುವಂತೆ ನೋಡಿಕೊಳ್ಳಿ. ಮಡಚಿದ ಟವಲ್ಲನ್ನು ಕುತ್ತಿಗೆಯ ಅಡಿಭಾಗಕ್ಕೆ ಆಸರೆ ನೀಡಬಹುದು. ಆದಕಾರಣ ನಿಮಗೆ ಹೊಟ್ಟೆ ಮೇಲೆ ಮಲಗುವ ಅಭ್ಯಾಸವಿದ್ದರೆ ಕೂಡಲೇ ಬದಲಾಯಿಸಿಕೊಳ್ಳಿ. ಬೆನ್ನು ಅಡಿ ಮಾಡಿ ಅಥವಾ ಎಡಮಗ್ಗುಲಲ್ಲಿ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ.

Follow Us:
Download App:
  • android
  • ios