ಅನಾರೋಗ್ಯಪೀತರಾಗಿದ್ದ ಕೆಲವರು, ಸಾಯುವ ಕೆಲವು ಗಂಟೆಗಳ ಮೊದಲು ಸಂಪೂರ್ಣ ಆರೋಗ್ಯ, ಚೈತನ್ಯವನ್ನು ತೋರಿಸುತ್ತಾರೆ. ಇದನ್ನು 'ಟರ್ಮಿನಲ್ ಲುಸಿಡಿಟಿ' ಎಂದು ಕರೆಯಲಾಗುತ್ತದೆ. ಇದೊಂದು ವಿಚಿತ್ರ ಸಂಗತಿ. ಇದಕ್ಕೆ ಕಾರಣಗಳು ಇಲ್ಲಿವೆ. 

ಇದೊಂದು ಸಾಮಾನ್ಯ ಜನರನ್ನೂ, ವೈದ್ಯರನ್ನೂ, ವಿಜ್ಞಾನಿಗಳನ್ನೂ ಏಕಕಾಲದಲ್ಲಿ ಅಚ್ಚರಿಯಲ್ಲಿ ಕೆಡವಿರುವ ವಿಷಯ. ನಿಮ್ಮ ಪ್ರೀತಿಪಾತ್ರರೋ, ಹಿರಿಯರೋ ತೀರಿಕೊಂಡಿದ್ದರೆ, ನೀವೂ ಇದನ್ನು ಅನುಭವಿಸಿರಬಹುದು. ಅವರು ಕಾಯಿಲೆಪೀಡಿತರಾಗಿದ್ದರೆ, ಸಾಯುವ ಕೆಲವು ಗಂಟೆಗಳ ಮೊದಲು ಅಥವಾ ಕೆಲವು ದಿನಗಳ ಮೊದಲು ʼಇವರು ಈಗ ಸಂಪೂರ್ಣವಾಗಿ ಆರೋಗ್ಯವಂತರಾಗಿದ್ದರೆ, ಇನ್ನು ತೊಂದರೆಯಿಲ್ಲʼ ಎನಿಸುವಂತೆ ಕಾಣುತ್ತಾರೆ. ಆದರೆ ನಿಮ್ಮ ನಿರೀಕ್ಷೆ ಸುಳ್ಳಾಗುತ್ತದೆ. ಅದ್ಯಾಕೆ ಹಾಗೆ?

ಪ್ರೀತಿಪಾತ್ರರು ಕೊನೆಯುಸಿರೆಳೆದದ್ದನ್ನು ನೋಡುವುದು ಆಘಾತಕಾರಿ ಅನುಭವ. ಸಾಯುತ್ತಿರುವ ವ್ಯಕ್ತಿಗೂ ಸಹ ದೈಹಿಕ- ಮಾನಸಿಕ ಸುಂಟರಗಾಳಿ. ದೀರ್ಘ ಅನಾರೋಗ್ಯದ ಸಂದರ್ಭದಲ್ಲಿ ಸಾವು ನಿಧಾನವಾಗಿ ಬರುತ್ತದೆ. ಸಾಯುತ್ತಿರುವ ವ್ಯಕ್ತಿ ಮತ್ತು ಅವರ ಪ್ರೀತಿಪಾತ್ರರಿಗೆ ನೋವು, ಅಸಹಾಯಕತೆ ಮತ್ತು ಭಾವನಾತ್ಮಕ ಯಾತನೆಯನ್ನು ತರುತ್ತದೆ. ಆದರೆ ಕೆಲವೊಮ್ಮೆ, ಸಾವಿಗೆ ಮೊದಲಿನ ಕೊನೆಯ ಗಂಟೆಗಳಲ್ಲಿ ಅಥವಾ ದಿನಗಳಲ್ಲಿ ಅನಿರೀಕ್ಷಿತವಾಗಿ ಪವಾಡ ಸಂಭವಿಸುತ್ತದೆ. ಪ್ರಜ್ಞಾಹೀನ ವ್ಯಕ್ತಿ ಅಥವಾ ಕಷ್ಟದಿಂದ ಬದುಕಿರುವ ವ್ಯಕ್ತಿ ಇದ್ದಕ್ಕಿದ್ದಂತೆ ಎಚ್ಚರವಾಗಿರುತ್ತಾನೆ, ಮಾತನಾಡುತ್ತಾನೆ ಅಥವಾ ಸಂತೋಷದಲ್ಲಿರುತ್ತಾನೆ.

ದುಃಖ ಹಲವು ರೂಪಗಳಲ್ಲಿ ಬರುತ್ತದೆ. ಅದೆಲ್ಲವೂ ಭಾವನಾತ್ಮಕವಾಗಿರುವುದಿಲ್ಲ. ಔಷಧಿ, ಚಿಕಿತ್ಸೆ, ಭಾವನಾತ್ಮಕ ನಿಕಟತೆಯ ಮೂಲಕ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಗುಣಪಡಿಸಲು ಪ್ರಯತ್ನಿಸುವಾಗ ಮೆದುಳು ಕೂಡ ಒಂದು ನಿರ್ದಿಷ್ಟ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಸಾವನ್ನು ತಪ್ಪಿಸಲು ಪ್ರಯತ್ನಿಸುತ್ತದೆ. ಸಾವಿಗೆ ಸಮೀಪಿಸುತ್ತಿರುವ ವ್ಯಕ್ತಿ ಭಯ, ದುಃಖ, ಅವರ ದೇಹ ಮತ್ತು ಮನಸ್ಸಿನಿಂದ ಆಳವಾದ ಬೇರ್ಪಡುವಿಕೆಯ ಭಾವನೆಯನ್ನು ಅನುಭವಿಸುತ್ತಾರೆ. ಈ ಸಂದರ್ಭಗಳಲ್ಲಿ ಉಂಟಾಗುವುದೇ 'ಟರ್ಮಿನಲ್ ಲುಸಿಡಿಟಿ'.

ಟರ್ಮಿನಲ್ ಲುಸಿಡಿಟಿ ಎಂದರೇನು?

ಟರ್ಮಿನಲ್ ಲುಸಿಡಿಟಿ ಎಂದರೆ ತೀವ್ರವಾಗಿ ಅಸ್ವಸ್ಥನಾಗಿದ್ದ ವ್ಯಕ್ತಿಯಲ್ಲಿ ಸಾವಿಗೆ ಸ್ವಲ್ಪ ಮೊದಲು ಉಂಟಾಗುವ ಮಾನಸಿಕ ಸ್ಪಷ್ಟತೆ ಮತ್ತು ಅರಿವಿನ ಹಠಾತ್ ಮರಳುವಿಕೆ. ಇದು ಕೆಲವೊಮ್ಮೆ ಸಾವಿಗೆ ಗಂಟೆಗಳ ಅಥವಾ ದಿನಗಳ ಮೊದಲು ಸಂಭವಿಸುತ್ತದೆ. ರೋಗಪೀಡಿತ ವ್ಯಕ್ತಿ ಅತಿಯಾಗಿ ಸಕ್ರಿಯನಾಗುತ್ತಾನೆ, ಕೆಲಸಗಳನ್ನು ನಿರ್ವಹಿಸುತ್ತಾನೆ, ಸ್ಪಷ್ಟವಾಗಿ ಮಾತನಾಡುತ್ತಾನೆ, ಅವನ ಕುಟುಂಬ ಸದಸ್ಯರನ್ನು ಗುರುತಿಸುತ್ತಾನೆ, ಭೇಟಿಯಾಗುತ್ತಾನೆ, ಅವರೊಂದಿಗೆ ಸಮಯ ಕಳೆಯುತ್ತಾನೆ ಇತ್ಯಾದಿ.

ಯಾಕೆ ಇದು ನಡೆಯುತ್ತದೆ? ಟರ್ಮಿನಲ್ ಲುಸಿಡಿಟಿಗೆ ಪೂರ್ಣ ಮತ್ತು ಅಂತಿಮ ಉತ್ತರವಿಲ್ಲ. ಆದರೆ ಅದು ಹೇಗೆ ಉಂಟಾಗುತ್ತದೆ ಎಂಬುದರ ಕುರಿತು ಹಲವಾರು ಊಹೆಗಳು ಮತ್ತು ವಾದಗಳಿವೆ. ದೇಹವು ಸ್ಥಗಿತಗೊಂಡಾಗ, ಮೆದುಳು ಮತ್ತು ದೇಹದಲ್ಲಿನ ರಾಸಾಯನಿಕಗಳು ಬದಲಾವಣೆಗೆ ಒಳಪಡುಟ್ಟಿರುತ್ತವೆ. ಮೆದುಳಿನ ಕೆಲವು ಭಾಗಗಳನ್ನು ಚುರುಕಾಗಿಸುವ ಸ್ರಾವಗಳಲ್ಲಿ ತಾತ್ಕಾಲಿಕ ಏರಿಕೆ ಆಗುತ್ತದೆ. ಇದು ವ್ಯಕ್ತಿಯನ್ನು ತಮ್ಮ ಸುತ್ತಲಿನ ವಿಷಯಗಳ ಬಗ್ಗೆ ಸಂಪೂರ್ಣ ಸಕ್ರಿಯರನ್ನಾಗಿ ಮಾಡುತ್ತದೆ. ಅಂತಿಮ ಕ್ಷಣಗಳಲ್ಲಿ ದೇಹ ಬದುಕುಳಿಯುವ ವಿಧಾನಕ್ಕೆ ಹೋಗುತ್ತದೆ. ತಾತ್ಕಾಲಿಕ ಎಚ್ಚರವನ್ನು ಸಕ್ರಿಯಗೊಳಿಸುತ್ತದೆ. ಅದು ಇನ್ನು ಮುಂದೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಅರಿತುಕೊಳ್ಳುವ ಕ್ಷಣದಲ್ಲಿ ಅತಿ ಹೆಚ್ಚು ಸಕ್ರಿಯವಾಗಿ ಮಾಡುತ್ತದೆ.

ಈಗಿನ ಮಕ್ಕಳು ಯಾಕೋ ಖುಷಿಯಾಗೇ ಇರೋಲ್ಲ, ಯಾಕೆ ಬೇಜಾರು?

ದೇವರಿಂದ ಬಂದ ಉಡುಗೊರೆ?

ಮೃತ ವ್ಯಕ್ತಿಯ ಸಮೀಪದವರು, ಇದನ್ನು ಅನುಭವಿಸುವ ಜನರು, ಇದು ದೇವರಿಂದ ಬಂದ ಅಂತಿಮ ಕೊಡುಗೆ ಎಂದು ನಂಬುತ್ತಾರೆ. ದಿನಗಳು, ವಾರಗಳು ಅಥವಾ ತಿಂಗಳುಗಳ ಮೌನದ, ಯಾತನೆಯ ನಂತರ ತಮ್ಮ ಪ್ರೀತಿಪಾತ್ರರು ನಗುವುದು, ಮಾತನಾಡುವುದು ಅಥವಾ ವಿದಾಯ ಹೇಳುವುದನ್ನು ನೋಡುವುದು ಅತ್ಯಂತ ಭಾವನಾತ್ಮಕ ಸಂಗತಿ. ಮೃತರಿಗೆ ಸರಿಯಾಗಿ ವಿದಾಯ ಹೇಳಲು ಸಾಧ್ಯವಾಗಲಿಲ್ಲ ಎಂಬ ಅಂತಿಮ ಅಪರಾಧ ಪ್ರಜ್ಞೆ ಅವರಲ್ಲಿ ಉಳಿಯುವುದಿಲ್ಲ. ಆದ್ದರಿಂದ ಇದು ಆತ್ಮವು ಹಾರಿಹೋಗುವ ಮೊದಲು ಬಂಧುಗಳ ಜೊತೆಗೆ ಕೊನೆಯ ಸಂಭಾಷಣೆ ನಡೆಸಲು ದೇವರು ನೀಡಿದ ಮಾರ್ಗವೆಂದು ನೋಡುತ್ತಾರೆ.

ಕೆಲವರು, ಟರ್ಮಿನಲ್ ಲುಸಿಡಿಟಿಯು ದೇಹ ಅಥವಾ ಆತ್ಮವು ಸ್ವಲ್ಪ ಸಮಯದವರೆಗೆ ಬದುಕನ್ನು ಹಿಡಿದಿಟ್ಟುಕೊಳ್ಳುವ ಇಚ್ಛೆಯ ಸಂಕೇತವಾಗಿದೆ ಎಂದು ಹೇಳುತ್ತಾರೆ. ಸಾಯುತ್ತಿರುವ ವ್ಯಕ್ತಿಯು ಜೀವನಕ್ಕೆ ಮರಳಲು ಮತ್ತೊಂದು ಅವಕಾಶವನ್ನು ಪಡೆಯಲು ಪ್ರಯತ್ನ ಮಾಡಲು ಬಯಸುತ್ತಾನೆ. ಹೀಗಾಗಿ ಅವರ ದೇಹ ಮತ್ತು ಮನಸ್ಸು ಅವರಿಗೆ ಕೆಲವು ಸಂತೋಷದ ಕ್ಷಣಗಳನ್ನು ನೀಡುತ್ತದೆ.

ಈ ವಿಟಮಿನ್ ಕೊರತೆಯಾದ್ರೆ ಲಟ ಲಟ ಮೂಳೆಯೇ ಮುರೀಬಹುದು, ಮಾಡಬೇಕಾದ್ದೇನು?